ನಮ್ಮ ಹೆಮ್ಮೆಯ ಭಾರತ (21)

Peacock - National Bird of India

೨೧.ಭಾರತದ ಅದ್ಭುತ ವನ್ಯಜೀವಿಗಳು
ಭಾರತದ ವನ್ಯಜೀವಿ ಸಂಪತ್ತು ಅದರ ವೈವಿಧ್ಯತೆಯಿಂದಾಗಿಯೇ ಅದ್ಭುತ. ಇದಕ್ಕೆ ಕಾರಣ ಭಾರತದ ವೈವಿಧ್ಯಮಯ ಮಣ್ಣು, ಹವಾಮಾನ ಮತ್ತು ಭೂಲಕ್ಷಣಗಳು.

ಗಮನಿಸಿ: ಜಗತ್ತಿನ ಸುಮಾರು ಶೇಕಡಾ ೭೦ರಷ್ಟು ಜೀವವೈವಿಧ್ಯತೆಗೆ ಭಾರತವೇ ತವರೂರು. ಹಾಗೆಯೇ, ಜಗತ್ತಿನ ಸುಮಾರು ಶೇಕಡಾ ೩೩ರಷ್ಟು ಸಸ್ಯ ಪ್ರಭೇದಗಳು (ಸ್ಪಿಷೀಸ್) ಭಾರತದಲ್ಲಿ ಮಾತ್ರ ಇವೆ.

ಭಾರತದಲ್ಲಿ ೩೭೨ ಸಸ್ತನಿಗಳ ಸ್ಪಿಷೀಸ್‌ಗಳಿವೆ. ಆನೆ, ಭಾರತೀಯ ಕಾಡುಕೋಣ, ಖಡ್ಗಮೃಗ, ಹಿಮಾಲಯದ ಕುರಿ ಇವುಗಳಲ್ಲಿ ಸೇರಿವೆ. ದೊಡ್ಡ ಬೆಕ್ಕುಗಳಾದ ಹುಲಿ ಮತ್ತು ಸಿಂಹಗಳೂ ಭಾರತದಲ್ಲಿವೆ.

ಭಾರತದಲ್ಲಿರುವ ೧,೨೨೮ ಹಕ್ಕಿಗಳ ಸ್ಪಿಷೀಸ್‌ಗಳಲ್ಲಿ ನವಿಲುಗಳು, ಗಿಳಿಗಳು,, ಕೊಕ್ಕರೆಗಳು ಮತ್ತು ಮಂಗಟ್ಟೆಹಕ್ಕಿಗಳು ಸೇರಿವೆ. ಹಲವು ಜಾತಿಯ ಮಂಗಗಳಿಗೂ ಭಾರತವೇ ತವರೂರು. ಇಲ್ಲಿವೆ ಸರೀಸೃಪಗಳ ೪೪೬ ಸ್ಪಿಷೀಸ್‌ಗಳು - ಮೊಸಳೆ ಮತ್ತು ಘರಿಯಲ್‌ಗಳ (ಸಪೂರ ಮೂತಿಯ ಮೊಸಳೆಗಳು) ಸಹಿತ.

 ಭಾರತದ ಸಂಪನ್ನ ಮತ್ತು ಮನಮೋಹಕ ವನ್ಯಜೀವಿಗಳನ್ನು ಭಾರತ ಸರಕಾರ ಸ್ಥಾಪಿಸಿರುವ ೮೦ ರಾಷ್ಟ್ರೀಯ ಉದ್ಯಾನಗಳು, ೪೪೦ ವನ್ಯಜೀವಿ ಸಂರಕ್ಷಣಾ ಕಾಡುಗಳು ಮತ್ತು ೨೩ ಹುಲಿ ಸಂರಕ್ಷಣಾ ರಕ್ಷಿತಾರಣ್ಯಗಳಲ್ಲಿ ಕಾಣಬಹುದು.
ಫೋಟೋ: ಭಾರತದ ರಾಷ್ಟ್ರಪಕ್ಷಿ - ನವಿಲು