೮.ಹಲವು ಧರ್ಮಗಳ ಜನ್ಮಸ್ಥಾನ ಭಾರತ
ಭಾರತವನ್ನು “ಧರ್ಮಗಳ ಜನ್ಮಭೂಮಿ” ಎಂದು ಕರೆಯಲಾಗುತ್ತದೆ. ಯಾಕೆಂದರೆ, ಹಿಂದೂ, ಭೌದ್ಧ, ಜೈನ ಮತ್ತು ಸಿಖ್ ಧರ್ಮಗಳ ಜನ್ಮಸ್ಥಾನ ಭಾರತ.
ಭಾರತದ ಶೇಕಡಾ ೮೦ ಜನರು ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವಾದ ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಭೌದ್ಧ ಧರ್ಮ ಹುಟ್ಟಿ ಬೆಳೆದದ್ದೇ ಭಾರತದಲ್ಲಿ. ಅನಂತರ ಅದು ನೇಪಾಳ, ಚೀನಾ, ಜಪಾನ್, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ದೇಶಗಳಿಗೆ ವ್ಯಾಪಿಸಿತು. ಬೌದ್ಧ ಧರ್ಮದ ಅನುಯಾಯಿಗಳು ಗೌತಮ ಬುದ್ಧನ ಉಪದೇಶಗಳನ್ನು ಅನುಸರಿಸುತ್ತಾರೆ.
ಜೈನ ಧರ್ಮದ ಸ್ಥಾಪಕ ಭಗವಾನ್ ಮಹಾವೀರ. ತನ್ನ ಅನುಯಾಯಿಗಳಿಗೆ ಆತ ಉಪದೇಶಿಸಿದ್ದು ಅಹಿಂಸೆ ಮತ್ತು ತ್ಯಾಗದ ಬದುಕನ್ನು. ಜೈನ ಧರ್ಮದ ಜಗಜ್ಜನಿತ ಅನುಯಾಯಿ ಬಾಹುಬಲಿ. ಈತನ ಬೃಹತ್ ಏಕಶಿಲಾ ವಿಗ್ರಹಗಳು ದಕ್ಷಿಣ ಭಾರತದ ಶ್ರವಣಬೆಳಗೊಳ, ಕಾರ್ಕಳ, ವೇಣೂರು, ಧರ್ಮಸ್ಥಳ ಇತ್ಯಾದಿ ಸ್ಥಳಗಳಲ್ಲಿ ಎತ್ತರದ ಗುಡ್ಡಗಳ ತುದಿಯಲ್ಲಿ ಸ್ಥಾಪಿಸಲ್ಪಟ್ಟಿವೆ. ಈ ವಿಗ್ರಹಗಳಿಗೆ ಹನ್ನೆರಡು ವರುಷಗಳಿಗೊಮ್ಮೆ ವಿಜೃಂಭಣೆಯಿಂದ ಮಹಾಮಸ್ತಕಾಭಿಷೇಕ ಜರಗುತ್ತದೆ.
ಪಂಜಾಬಿನಲ್ಲಿ ೧೬ನೆಯ ಶತಮಾನದಲ್ಲಿ ಗುರು ನಾನಕರಿಂದ ಸ್ಥಾಪನೆಯಾಯಿತು ಸಿಖ್ ಧರ್ಮ. ಇದರ ಅನುಯಾಯಿಗಳು ಅವರ ಮತ್ತು ಅವರ ನಂತರದ ಒಂಭತ್ತು ಸಿಖ್ ಗುರುಗಳ ಉಪದೇಶಗಳನ್ನು ಅನುಸರಿಸುತ್ತಾರೆ. ಪವಿತ್ರ ಗ್ರಂಥ “ಗುರು ಗ್ರಂಥ ಸಾಹಿಬ್” ಅನ್ನು ಅವರು ೧೧ನೆಯ ಗುರು ಎಂದು ಪರಿಗಣಿಸುತ್ತಾರೆ. ಅಮೃತಸರದಲ್ಲಿರುವ ಸಿಖ್ "ಚಿನ್ನದ ದೇವಾಲಯ” ವಿಶಾಲ ಸರೋವರದ ಮಧ್ಯೆ ನಿರ್ಮಿಸಲಾಗಿರುವ ವಿಶ್ವವಿಖ್ಯಾತ ದೇವಾಲಯ.
ಫೋಟೋ: ಕಾಶಿ ವಿಶ್ವನಾಥ ದೇವಸ್ಥಾನ; ಕೃಪೆ: ಅಸ್ಟ್ರೋವೇದ್.ಕೋಮ್