ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾದ ಮೆನೇಜಿಂಗ್ ಟ್ರಸ್ಟಿ ಡಾ. ಪಿ.ಕೆ. ವಾರಿಯರ ೧೦ ಜುಲಾಯಿ ೨೦೨೧ರಂದು ನಮ್ಮನ್ನು ಅಗಲಿದ್ದಾರೆ. ನೂರು ವರುಷಗಳ ತುಂಬು ಜೀವನದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಜಗತ್ತಿನಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಹಿರಿಮೆ ಅವರದು.
ಬಡವರು, ಶ್ರೀಮಂತರೆಂಬ ಭೇದವಿಲ್ಲದೆ, ಎಲ್ಲರಿಗೂ ಕಡಿಮೆ ವೆಚ್ಚದಲ್ಲಿ ಆಯುರ್ವೇದದ ಪಾರಂಪರಿಕ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಿಕ್ಕಾಗಿ ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾದ ಚಿಕಿತ್ಸಾಲಯಗಳನ್ನು ಹಲವೆಡೆ ಸ್ಥಾಪಿಸಿದ ಮಹಾನ್ ಚೇತನ ಅವರು.
ಆಯುರ್ವೇದ ಚಿಕಿತ್ಸಾ ಪದ್ಧತಿಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅಪ್ರತಿಮ ಸಾಧನೆ ಅವರದು. ಆಯುರ್ವೇದ ಔಷಧಿಗಳ ಉತ್ಪಾದನೆಯನ್ನು ಅವರು ಯಾಂತ್ರೀಕರಣಗೊಳಿಸಿದ ಕಾರಣ, ಸಾವಿರಾರು ಜನರಿಗೆ ಅವನ್ನು ಸುಲಭವಾಗಿ ಒದಗಿಸಲು ಸಾಧ್ಯವಾಯಿತು. ಕಷಾಯಗಳನ್ನು ಮಾತ್ರೆಗಳಾಗಿ, ತೈಲಗಳನ್ನು ಮುಲಾಮುಗಳಾಗಿ ಪರಿವರ್ತಿಸುವ ಮೂಲಕ ಅವುಗಳ ಬಳಕೆ ಸರಳವಾಗಿಸಿದರು. ಇವು ಅವರ ದೂರದೃಷ್ಟಿಗೆ ಕೆಲವು ಪುರಾವೆಗಳು.
ಡಾ.ಪಿ.ಕೆ. ವಾರಿಯರ್ ಸಹ-ಲೇಖಕರಾಗಿರುವ, ಐದು ಸಂಪುಟಗಳ “ಭಾರತೀಯ ಔಷಧೀಯ ಸಸ್ಯಗಳ ಗ್ರಂಥ” (ಇಂಡಿಯನ್ ಮೆಡಿಸಿನಲ್ ಪ್ಲಾಂಟ್ಸ್ - ಎ ಕಂಪೆಂಡಿಯಮ್ ಆಫ್ ೫೦೦ ಸ್ಪೀಷೀಸ್) ಒಂದು ಅಮೂಲ್ಯ ದಾಖಲಾತಿ. ಇದರಲ್ಲಿದೆ ಭಾರತದ ಐನೂರು ಔಷಧೀಯ ಸಸ್ಯಗಳ ಮಾಹಿತಿ. ಆಯುರ್ವೇದದ ಬಗ್ಗೆ ಹಲವಾರು ಸಂಶೋಧನಾ ಲೇಖನಗಳನ್ನು ಬರೆದು ಪ್ರಕಟಿಸಿದವರು. “ಸ್ಮೃತಿ ಪರ್ವಮ್” ಎಂಬ ಆತ್ಮಕತೆಗಾಗಿ ೨೦೦೮ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಆತ್ಮಕತೆ ಪ್ರಶಸ್ತಿ ಪಡೆದವರು. ೧೯೯೯ರಲ್ಲಿ ಭಾರತ ಸರಕಾರದ "ಪದ್ಮಶ್ರೀ" ಮತ್ತು ೨೦೧೦ರಲ್ಲಿ “ಪದ್ಮವಿಭೂಷಣ" ಪ್ರಶಸ್ತಿ ಪುರಸ್ಕೃತರು. ಕಲ್ಲಿಕೋಟೆ ವಿಶ್ವವಿದ್ಯಾಲಯ ೧೯೯೯ರಲ್ಲಿ ಗೌರವ ಡಾಕ್ಟರೇಟ್ ಮತ್ತು ಕೋಪನ್ ಹೇಗನ್ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಮೆಡಿಸಿನ್ ಉನ್ನತ-ಪದವಿ ನೀಡಿ ಇವರನ್ನು ಗೌರವಿಸಿದವು. ಮಹಾರಾಷ್ಟ್ರದ ರಾಜ್ಯಪಾಲರಿಂದ ‘ಧನ್ವಂತರಿ", ಭಾರತೀಯ ಆಯುರ್ವೇದಿಕ್ ಸಮಾವೇಶದಿಂದ "ಆಯುರ್ವೇದ ಮಹರ್ಷಿ” ಮತ್ತು ಕೇರಳ ಸರಕಾರದಿಂದ ‘ಅಷ್ಟಾಂಗರತ್ನ" ಮನ್ನಣೆಗೆ ಪಾತ್ರರಾಗಿದ್ದರು.
೫ ಜೂನ್ ೧೯೨೧ರಂದು ತಲಪಣತ್ ಶ್ರೀಧರನ್ ನಂಬೂದಿರಿ ಮತ್ತು ಪನ್ನಿಯಂಪಿಲ್ಲಿ ಕುನ್ಹಿ ವಾರಸ್ಯಾರ್ ದಂಪತಿಗೆ ಮಗನಾಗಿ ಜನಿಸಿದವರು ಪನ್ನಿಯಂಪಿಲ್ಲಿ ಕೃಷ್ಣಂಕುಟ್ಟಿ ವಾರಿಯರ್. ಜೂನ್ ೮, ೨೦೨೧ರಂದು ಇವರಿಗೆ ೧೦೦ ವರುಷ ತುಂಬಿದ ಪ್ರಯುಕ್ತ, ಇವರ “ಶತಪೂರ್ಣಿಮ"ವನ್ನು ಆಚರಿಸಲಾಗಿತ್ತು. ಇವರ ಪತ್ನಿ ದಿವಂಗತ ಮಾಧವಿ ಕುಟ್ಟಿ ಕೆ. ವಾರಿಯರ್. ಮಗ ಬಾಲಚಂದ್ರ ವಾರಿಯರ್ ಮತ್ತು ಮಗಳು ಸುಭದ್ರ ರಾಮಚಂದ್ರನ್ ಅವರನ್ನು ಡಾ.ಪಿ.ಕೆ.ವಾರಿಯರ್ ಅಗಲಿದ್ದಾರೆ.
ಅವರು ಶಾಲಾ ಶಿಕ್ಷಣ ಪಡೆದದ್ದು ಕೊಟ್ಟಕ್ಕಲ್ನಲ್ಲಿ. ಅನಂತರ ೨೦ನೇ ವಯಸ್ಸಿನಲ್ಲಿ ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾ ಸೇರಿದರು. ಚಿಕ್ಕಪ್ಪ ವೈದ್ಯರತ್ನಂ ಪಿ.ಎಸ್. ವಾರಿಯರ್ ಆಶ್ರಯದಲ್ಲಿ ಅವರ ಆಯುರ್ವೇದ ಅಧ್ಯಯನ. ಕ್ವಿಟ್ ಇಂಡಿಯಾ ಚಳವಳಿ ನಡೆದಾಗ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತದನಂತರ, ಆಯುರ್ವೇದ ಅಧ್ಯಯನ ಮುಗಿದೊಡನೆ, ೨೪ನೇ ವಯಸ್ಸಿನಲ್ಲೇ ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾದ ಟ್ರಸ್ಟಿಯಾದರು. ಮುಂದೆ, ೧೯೫೪ರಲ್ಲಿ ಅದರ ಮೆನೇಜಿಂಗ್ ಟ್ರಸ್ಟಿ ಆಗಿ ಜವಾಬ್ದಾರಿ ವಹಿಸಿಕೊಂಡರು.
ಇವರ ೬೭ ವರುಷಗಳ ಉಸ್ತುವಾರಿಯಲ್ಲಿ ಸಂಸ್ಥೆಯ ವಾರ್ಷಿಕ ವಹಿವಾಟು ರೂ.೧೦ ಲಕ್ಷದಿಂದ ರೂ.೪೦೦ ಕೋಟಿಗಳಿಗೆ ಏರಿತು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಆಧುನಿಕ ವೈಜ್ನಾನಿಕ ವಿಧಾನಗಳನ್ನು (ಸ್ಕಾನಿಂಗ್, ಇಸಿಜಿ ಇತ್ಯಾದಿ) ಬಳಸಲು ಶುರು ಮಾಡಿದ್ದು ಇವರ ಮುಕ್ತ ಚಿಂತನೆಯ ಉದಾಹರಣೆ.
ಮುಂಜಾನೆ ೪.೩೦ ಗಂಟೆಗೆ ಏಳುವುದು ಡಾ.ಪಿ.ಕೆ. ವಾರಿಯರ್ ಅವರ ಅಭ್ಯಾಸ. ಯೋಗ ಮತ್ತು ಧ್ಯಾನ ಮಾಡಿ, ವಿಶ್ವಂಭರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕರಾರುವಾಕ್ಕಾಗಿ ಬೆಳಗ್ಗೆ ೮ ಗಂಟೆಗೆ ಕನ್ಸಲ್ಟಿಂಗ್ ಕೋಣೆಗೆ ಬಂದು, ಮಧ್ಯಾಹ್ನದ ತನಕ ರೋಗಿಗಳನ್ನು ಪರೀಕ್ಷಿಸುವುದು ಅವರ ಪರಿಪಾಠ. ಅಪರಾಹ್ನದ ಸಮಯ ಕಚೇರಿ ಕೆಲಸಗಳಿಗೆ ಮೀಸಲು. ರಾತ್ರಿ ಒಂದು ಗಂಟೆಯ ನಡಿಗೆಯ ನಂತರ ೯.೩೦ ಗಂಟೆಗೆ ವಿರಮಿಸುತ್ತಿದ್ದರು. ಸಸ್ಯಾಹಾರಿಯಾಗಿದ್ದ ಅವರು ದಿನಕ್ಕೆ ಎರಡೇ ಸಲ ಊಟ ಮಾಡುತ್ತಿದ್ದರು. ಹೀಗಿತ್ತು ಒಂದು ಶತಮಾನ ಕಾಲ ಬಾಳಿದ ಆ ಹಿರಿಯರ ದಿನಚರಿ. ರಾಷ್ಟ್ರ ನಾಯಕರೇ ಆಗಲಿ, ಆಸುಪಾಸಿನ ಕೂಲಿಗಳೇ ಆಗಲಿ, ತಮ್ಮ ಬಳಿ ವೈದ್ಯಕೀಯ ಸಲಹೆಗಾಗಿ ಬಂದ ಯಾರಿಂದಲೂ ಅವರು ಜೀವಮಾನವಿಡೀ "ಕನ್ಸಲ್ಟೇಷನ್ ಶುಲ್ಕ" ಪಡೆಯಲಿಲ್ಲ.
ತನ್ನ ಪೂರ್ವಿಕರು ೧೯೦೨ರಲ್ಲಿ ಸ್ಥಾಪಿಸಿದ್ದ ತಿರುವನಂತಪುರ ಹತ್ತಿರದ ಕೊಟ್ಟಕ್ಕಲ್ನ ಆರ್ಯವೈದ್ಯ ಶಾಲಾ ಮತ್ತು ಅನಂತರ ಶುರು ಮಾಡಿದ ಆಯುರ್ವೇದ ವೈದ್ಯಕೀಯ ಕಾಲೇಜು ಪ್ರವರ್ಧಮಾನಕ್ಕೆ ಬರಲು ಹಲವು ದಶಕಗಳ ನಿಸ್ವಾರ್ಥ ಸೇವೆ ಸಲ್ಲಿಸಿದರು ಡಾ.ಪಿ.ಕೆ. ವಾರಿಯರ್. ಇಷ್ಟೆಲ್ಲ ಸಾಧನೆ ಮಾಡಿದ ಅವರು ವಿನಯದಿಂದ ಹೇಳುತ್ತಿದ್ದದ್ದು, ತನ್ನ ಮಾವ ನೆಟ್ಟ ಮತ್ತು ಅಣ್ಣ ನೀರೆರೆದು ಪೋಷಿಸಿದ ಮಹಾವೃಕ್ಷದ ರಕ್ಷಕ ನಾನು ಎಂದು.
ನಮ್ಮ ದೇಶದ ಹೆಮ್ಮೆಯ, ಸಾವಿರಾರು ವರುಷಗಳ ಇತಿಹಾಸವಿರುವ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಜಾಗತಿಕ ಮನ್ನಣೆ ಸಿಗಲು ಬದುಕಿನುದ್ದಕ್ಕೂ ಶ್ರಮಿಸಿದ ಡಾ.ಪಿ.ಕೆ. ವಾರಿಯರ್ ಅವರಿಗಿದು ನುಡಿನಮನ.