ಈ ಮೆಣಸನ್ನು ಒಮ್ಮೆ ಕಚ್ಚಿದರೆ ಸಾಕು; ಅದರ ಖಾರದಿಂದ ಬಾಯಿ-ಹೊಟ್ಟೆಯಲ್ಲಿ ಉರಿ ಶುರುವಾಗಿ, ಅದನ್ನು ತಿಂದ ವ್ಯಕ್ತಿ ಥಕಥಕ ಕುಣಿಯಬೇಕಾದೀತು. ಹಾಗಾಗಿ ಅದರ ಹೆಸರು ರಾಜಾ ಮೆಣಸು.
ಅಸ್ಸಾಮ್ ಮತ್ತು ಸುತ್ತಲಿನ ರಾಜ್ಯಗಳಲ್ಲಿ ಬೆಳೆಯಲಾಗುವ ಈ ಮೆಣಸನ್ನು ಅಲ್ಲಿನವರು ಗುರುತಿಸುವುದು ಭೂತ್ ಜೊಲೊಕಿಯಾ ಎಂಬ ಹೆಸರಿನಿಂದ. “ಗಿನ್ನೆಸ್ ಜಾಗತಿಕ ದಾಖಲೆಗಳು” ಇದನ್ನು ಜಗತ್ತಿನ ಅತ್ಯಂತ ಖಾರದ ಮೆಣಸು ಎಂದು ಗುರುತಿಸಿದ್ದು ೨೦೦೭ರಲ್ಲಿ. ಅನಂತರ ೨೦೧೧ರ ತನಕ ರಾಜಾ ಮೆಣಸು ಆ ಸ್ಥಾನದಲ್ಲಿ ವಿಶ್ವವಿಖ್ಯಾತವಾಗಿತ್ತು. ಅನಂತರ ಬೇರೆ ಮೆಣಸಿಗೆ ಖಾರದ ಅಗ್ರಸ್ಥಾನ ದಕ್ಕಿತು. ಈಗ ೨೦೧೯ರಲ್ಲಿ, ಜಗತ್ತಿನ ಅತ್ಯಂತ ಖಾರದ ಮೆಣಸಿನ ಹೆಸರು ಕೆರೊಲಿನಾ ರೀಪರ್.
ರಾಜಾ ಮೆಣಸಿನ ಬಣ್ಣ ಕೆಂಪಾಗಿ ಬದಲಾಗುವಾಗಲೇ ಇದನ್ನು ಕೊಯ್ಯಬೇಕು. (ಇದರಲ್ಲಿ ಕೇಸರಿ, ಹಳದಿ, ನೇರಳೆ ಬಣ್ಣದವೂ ಇವೆ.) ಒಂದು ಹಂಗಾಮಿನಲ್ಲಿ ಮೂರು ತಿಂಗಳ ಅವಧಿ ಇದರ ಗಿಡಗಳಲ್ಲಿ ಮೆಣಸು ಬೆಳೆಯುತ್ತದೆ. ಒಂದು ಗಿಡದಿಂದ ಪ್ರತಿ ಹಂಗಾಮಿನಲ್ಲಿ ಸರಾಸರಿ ಮೂರು ಕಿಗ್ರಾ ಫಸಲು ಲಭ್ಯ. “ಒಂದು ಭಿಗಾ (ಸುಮಾರು ೦.೩ ಎಕ್ರೆ) ಜಮೀನಿನಲ್ಲಿ ೧,೫೦೦ – ೧,೬೦೦ ಮೆಣಸಿನ ಗಿಡಗಳನ್ನು ನೆಡಬಹುದು. ಅವುಗಳಿಂದ ಪ್ರತಿ ಹಂಗಾಮಿನಲ್ಲಿ ೧೫,೦೦೦ದಿಂದ ೨೦,೦೦೦ ರೂಪಾಯಿ ಲಾಭ” ಎನ್ನುತ್ತಾರೆ ಅಸ್ಸಾಮಿನ ಸಿಬ್ಸಾಗರ ಜಿಲ್ಲೆಯ ರೈತ ಬಿಪುಲ್ ಗೊಗೊಯ್.
ರಾಜಧಾನಿ ಗೌಹಾತಿಯ ಮಚ್ಖೋವಾದ ರಖಂ ಮಾರುಕಟ್ಟೆಯಲ್ಲಿ ತಾಜಾ ರಾಜಾ ಮೆಣಸು ಲಭ್ಯ. ಖಾರ ಮತ್ತು ಬಣ್ಣ ನೋಡಿ ಗ್ರಾಹಕರಿಂದ ಇದರ ಗುಣಮಟ್ಟ ನಿರ್ಧಾರ. ರಖಂ ವರ್ತಕ ಹಿರೇನ್ ಬರುವಾ ಅವರ ದಿನನಿತ್ಯದ ಸರಾಸರಿ ವ್ಯಾಪಾರ ೫೦ ಕಿಗ್ರಾ – ೧೦೦ ಕಿಗ್ರಾ. ರಾಜಾ ಮೆಣಸಿನ ಬೆಲೆ ಹಂಗಾಮಿನಲ್ಲಿ (ಮಾರ್ಚ್ – ಜುಲಾಯಿ) ಕಿಲೋಕ್ಕೆ ರೂ.೧೫೦ರಿಂದ ರೂ.೩೦೦. ಇಲ್ಲಿಂದ ಖರೀದಿಸಿದ ರಾಜಾ ಮೆಣಸನ್ನು ಸೂರ್ಯನ ಬಿಸಿಲಿನಲ್ಲಿ ಅಥವಾ ಡ್ರೈಯರುಗಳಲ್ಲಿ ಒಣಗಿಸಿ ಪುನಃ ಮಾರಲಾಗುತ್ತದೆ.
ಗೌಹಾತಿಯ ಗಣೇಶ್ಗುರಿಯ ತರಕಾರಿ ವ್ಯಾಪಾರಿ ಭುಪೆನ್ ಬರ್ಮನ್ ಹಂಗಾಮಿನಲ್ಲಿ ಕಿಲೋಕ್ಕೆ ರೂ.೬೦೦ ದರದಲ್ಲಿ ರಾಜಾ ಮೆಣಸು ಖರೀದಿಸಿ, ಅನಂತರ ಮಾರುವುದು ಕಿಲೋಕ್ಕೆ ರೂ.೮೦೦ ದರದಲ್ಲಿ. ಈಶಾನ್ಯ ರಾಜ್ಯಗಳ ವಿಶೇಷ ಉತ್ಪನ್ನಗಳನ್ನು ಮಾರುವ ಆನ್ಲೈನ್ ಪೋರ್ಟಲ್ ಗಿಸ್ಕಾ. ಇದನ್ನು ನಿರ್ವಹಿಸುವ ರಸ್ವೀನ್ ದಾಸ್, ರಾಜಾ ಮೆಣಸಿನ ಉಪ್ಪಿನಕಾಯಿ ಮತ್ತು ಪೇಸ್ಟ್ ಆನ್ಲೈನಿನಲ್ಲಿ ಮಾರುತ್ತಾರೆ. ಅವರ ಮಾರಾಟ ದರ: ರಾಜಾ ಮೆಣಸಿನ ಪಕಳೆಗಳ (ಫ್ಲೇಕ್ಸ್) ೫೦ ಗ್ರಾಮ್ ಪ್ಯಾಕೆಟಿಗೆ ರೂ.೨೯೪ ಮತ್ತು ಉಪ್ಪಿನಕಾಯಿ ೧೫೦ ಗ್ರಾಮ್ ಪ್ಯಾಕೆಟಿಗೆ ರೂ.೨೯೦.
ತಿನ್ಸುಕಿಯಾ ಜಿಲ್ಲೆಯ ಬಾಬಾಧನ್ ಚುಟಿಯಾ ಗ್ರೀನ್ಎಫ್ ಹೈಜೀನ್ ಫುಡ್ ಕಂಪೆನಿಯ ಮಾಲೀಕರು. ೨೦೧೫-೧೬ರಲ್ಲಿ ಶುರುವಾದ ಈ ಕಂಪೆನಿ, ಉಪ್ಪಿನಕಾಯಿ ತಯಾರಿಸಲಿಕ್ಕಾಗಿ ಪ್ರತಿ ವರುಷ ೨೫ ಟನ್ ತಾಜಾ ರಾಜಾ ಮೆಣಸು ಖರೀದಿಸುತ್ತದೆ. ನಮ್ಮ ಜನರು ಈ ಮೆಣಸಿನ ಸ್ವಾದ ಇಷ್ಟ ಪಡುವ ಕಾರಣ ಇದಕ್ಕೆ ಭಾರೀ ಬೇಡಿಕೆಯಿದೆ ಎನ್ನುತ್ತಾರೆ ಚುಟಿಯಾ. ಇವರು ಪನಿಟೊಲಾ, ಕಕೋಪಥರ್ ಮತ್ತು ಅಕ್ಕಪಕ್ಕದ ಪ್ರದೇಶಗಳ ರೈತರಿಂದ ರಾಜಾ ಮೆಣಸು ಖರೀದಿಸುವುದು ಕಿಲೋಕ್ಕೆ ರೂ.೧೫೦ ದರದಲ್ಲಿ. ಹಂಗಾಮು ಮುಗಿದ ಬಳಿಕ ಈ ಖರೀದಿ ದರ ರೂ.೪೦೦ಕ್ಕೆ ಏರುವುದೂ ಇದೆ. ೨೦೦ ಗ್ರಾಮ್ ಉಪ್ಪಿನಕಾಯಿ ಪ್ಯಾಕೆಟನ್ನು ರೂ.೩೫೦ ದರದಲ್ಲಿ ಮಾರುವ ಅವರು ೨೦೧೭-೧೮ರಲ್ಲಿ ಗಳಿಸಿದ ಲಾಭ ರೂ.೮ ಲಕ್ಷ.
ಆದರೆ, ಕೆಲವು ವರ್ತಕರು ರಾಜಾ ಮೆಣಸಿನ ವಹಿವಾಟಿನಲ್ಲಿ ಭಾರೀ ಲಾಭವಿದೆ ಎಂಬುದನ್ನು ಒಪ್ಪುವುದಿಲ್ಲ. ಉದಾಹರಣೆಗೆ, ಗೌಹಾತಿಯ ಪ್ರಮುಖ ಸಾಂಬಾರ ಉತ್ಪನ್ನಗಳ ರಫ್ತು ಕಂಪೆನಿ ಗ್ರೀನ್ಕವರ್ ಓವರ್ಸೀಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ. ಕೃಷ್ಣ ಸೈಕಿಯಾ ತಮ್ಮ ಕಂಪೆನಿ ರಾಜಾ ಮೆಣಸಿನ ವಹಿವಾಟು ಮಾಡುತ್ತಿಲ್ಲ ಎನ್ನುತ್ತಾರೆ. ೨೦೦೭ರಿಂದ ೨೦೧೧ರ ಅವಧಿಯಲ್ಲಿ ಅವರ ಕಂಪೆನಿ ರಾಜಾ ಮೆಣಸನ್ನು ಕಿಲೋಕ್ಕೆ ರೂ.೨,೦೦೦ಕ್ಕಿಂತ ಅಧಿಕ ಬೆಲೆಗೆ ಮಾರುತ್ತಿತ್ತು. ಅನಂತರ ಮೆಣಸಿನ ಬೇಡಿಕೆ ಕುಸಿಯಿತು. ಯಾಕೆಂದರೆ, ರಾಜಾ ಮೆಣಸಿನ ಖಾರ ಹಲವು ಪಟ್ಟು ಕಡಿಮೆಯಾಯಿತು. ಇದನ್ನು ದಿಬ್ರುಘರ್ನ ಕ್ರೋಮಾ ಹೈಡ್ರೊಫೋನಿಕ್ ನರ್ಸರಿಯ ಮಾಲೀಕ ಚಿರನ್ಜೀತ್ ಬರುವಾ ಹೀಗೆ ವಿವರಿಸುತ್ತಾರೆ: ರಾಜಾ ಮೆಣಸಿನ ಬೇಡಿಕೆ ಹೆಚ್ಚಾದಂತೆ ರೈತರು ಅದನ್ನು ಹೆಚ್ಚೆಚ್ಚು ಬೆಳೆಸ ತೊಡಗಿದರು. ಇದರಿಂದಾಗಿ ಪರಕೀಯ ಪರಾಗಸ್ಪರ್ಶ ಜಾಸ್ತಿಯಾಗಿ, ರಾಜಾ ಮೆಣಸಿನ ಖಾರ ಕಡಿಮೆಯಾಯಿತು.
ರಾಜಾ ಮೆಣಸಿನ ಗಿಡಗಳು ೪ – ೫ ವರುಷ ಫಸಲು ನೀಡುತ್ತವೆ. ಆದರೆ, ವರುಷಗಳು ಸರಿದಂತೆ ಆ ಗಿಡಗಳ ರಾಜಾ ಮೆಣಸಿನ ಗಾತ್ರ ಮತ್ತು ಖಾರ ಕಡಿಮೆಯಾಗುತ್ತದೆ. ಗೊಲಾಘಾಟ್ ಜಿಲ್ಲೆಯಲ್ಲಿ ಪಾರಂಪರಿಕವಾಗಿ ರಾಜಾ ಮೆಣಸು ಬೆಳೆಯುತ್ತಾರೆ. ಹಾಗಾಗಿ ರೈತರು ಅಲ್ಲಿಂದಲೇ ಉತ್ತಮ ಗುಣಮಟ್ಟದ ಗಿಡಗಳನ್ನು ತಂದು ಬೆಳೆಸಬೇಕು ಎಂಬುದು ಚಿರನ್ಜೀತ್ ಬರುವಾ ಅವರ ಸಲಹೆ. “ಅಲ್ಲಿಂದ ತಂದ ರಾಜಾ ಮೆಣಸಿನ ಗಿಡಗಳ ಕ್ಲೋನಿಂಗ್ ಮಾಡಿದರೆ ಮದರ್ ಪ್ಲಾಂಟ್ಗಳು ಸಿಗುತ್ತವೆ. ಅಂಗಾಂಶ ಕೃಷಿ ಮೂಲಕ ಪ್ರತಿಯೊಂದು ಮದರ್ ಪ್ಲಾಂಟಿನಿಂದ ೧,೦೦೦ ಸಸಿ ಪಡೆಯಲು ಸಾಧ್ಯ. ಈ ಸಸಿಗಳೇ ನೆಡಲು ಸೂಕ್ತ. ಬೀಜಗಳಿಂದ ಮಾಡಿದ ಸಸಿಗಳ ಫಸಲಿನ ಗುಣಮಟ್ಟ ಹಾಗೂ ಖಾರ ಕಡಿಮೆ ಎಂಬ ಮಾಹಿತಿ ನೀಡುತ್ತಾರೆ ಅವರು. ಉತ್ತಮ ಗುಣಮಟ್ಟದ ಫಸಲು ಬೇಕಾದರೆ, ಪ್ರತಿ ವರುಷ ಹೊಸ ಗಿಡಗಳನ್ನು ನೆಟ್ಟು ಬೆಳೆಸಬೇಕು ಎನ್ನುತ್ತಾರೆ ಬರುವಾ.
ಲೀನಾ ಸೈಕಿಯಾ ರಾಜಾ ಮೆಣಸನ್ನು ವಾಣಿಜ್ಯ ಮಟ್ಟದಲ್ಲಿ ಬೆಳೆಸಿದ ಮೊದಲ ರೈತ ಮಹಿಳೆ. ಅವರು ಹಾಗೂ ಅವರ ಪತಿ ಸ್ಥಾಪಿಸಿದ ಫ್ರಾಂಟಲ್ ಅಗ್ರಿಟೆಕ್ ಕಂಪೆನಿ ೨೦೦೪ರಲ್ಲಿ ರಾಜಾ ಮೆಣಸಿನ ಕೃಷಿ ಆರಂಬಿಸಿತು. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗೆ ರಾಜಾ ಮೆಣಸನ್ನು ಪರಿಚಯಿಸಿದ ಮೊದಲ ಕಂಪೆನಿ. ಈ ಕಂಪೆನಿ ಈಗ ೨೨ ದೇಶಗಳಿಗೆ ರಾಜಾ ಮೆಣಸನ್ನು ರಫ್ತು ಮಾಡುತ್ತಿದೆ. ಈ ಕಂಪೆನಿಯ ವಾರ್ಷಿಕ ರಫ್ತು ೨೦ರಿಂದ ೨೫ ಟನ್ ಒಣಗಿಸಿದ ರಾಜಾ ಮೆಣಸು. ಈಶಾನ್ಯ ಭಾರತದ ಅಗ್ರಮಾನ್ಯ ಸಾಂಬಾರ ಉತ್ಪನ್ನಗಳ ರಫ್ತು ಕಂಪೆನಿ ಎಂದು ಇದನ್ನು ಸಾಂಬಾರ ಮಂಡಳಿ ಆಯ್ಕೆ ಮಾಡಿದೆ.
ಸಾಂಬಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಾಂಬಾರ ಮಂಡಳಿ ಸರ್ಟಿಫಿಕೇಟ್ ನೀಡುತ್ತದೆ. ಇದರ ಆಧಾರದಿಂದ ರಫ್ತು ಬೆಲೆ ನಿರ್ಧಾರ ಎಂಬುದು ಗಮನಾರ್ಹ. ಈಗ ರಾಜಾ ಮೆಣಸಿನ ಸರಾಸರಿ ರಫ್ತು ಬೆಲೆ ಕಿಲೋಕ್ಕೆ ರೂ.೧,೮೦೦.
ರಾಜಾ ಮೆಣಸಿನ ಉತ್ಪಾದನೆಯ ಶೇ.೯೦ರಷ್ಟು ಈಗ ಆಹಾರದ ಉದ್ದೇಶಕ್ಕೆ ಬಳಕೆ. ಅದೇನಿದ್ದರೂ ಇದರ ಹೊಸ ಉಪಯೋಗಗಳು ಬೆಳಕಿಗೆ ಬರುತ್ತಿವೆ. ಉದಾಹರಣೆಗೆ ಡಿಆರ್ಡಿಓ (ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್) ರಾಜಾ ಮೆಣಸಿನ ವಿಶೇಷ ಗುಣಗಳ ಅಧ್ಯಯನ ನಡೆಸಿತು. ಇದರ ತೀವ್ರ ಖಾರದಿಂದಾಗಿ ಇದನ್ನು ಹ್ಯಾಂಡ್ ಗ್ರೆನೇಡುಗಳಲ್ಲಿ ಬಳಸಲಾಗುವುದೆಂದು ೨೦೦೯ರಲ್ಲಿ ಘೋಷಿಸಿತು.
ಮಾತ್ರವಲ್ಲ, ಧಾಳಿಕೋರರಿಂದ ಆತ್ಮರಕ್ಷಣೆಗಾಗಿ ಉಪಯೋಗಿಸುವ ಪೆಪ್ಪರ್ ಸ್ಪ್ರೇ ಮತ್ತು ಗಲಭೆಕೋರರನ್ನು ನಿಯಂತ್ರಿಸಲು ಸಿಡಿಸುವ ಅಶ್ರುವಾಯು ಉತ್ಪಾದನೆಗೂ ಇದು ಬಳಕೆಯಾಗುತ್ತಿದೆ. ಆದ್ದರಿಂದ ರಾಜಾ ಮೆಣಸಿನ ಭವಿಷ್ಯ ಅದರ ಖಾರದಂತೆಯೇ ಜ್ವಲಂತ.