೨೦೧೯ರ ಸಪ್ಟಂಬರಿನಲ್ಲಿ ಬದರಿನಾಥಕ್ಕೆ ಹೋಗಿದ್ದಾಗ, ಅಲ್ಲಿ ಬಾದಾಮಿ ಹಾಲನ್ನು ನಮಗೆ ಕುಡಿಯಲು ಕೊಟ್ಟದ್ದು ಮಣ್ಣಿನ ಲೋಟದಲ್ಲಿ. ಆಗ ನೆನಪಾಯಿತು ಕೊಲ್ಕತಾದ ಮಣ್ಣಿನ ಟೀ ಕಪ್. ಅಲ್ಲಿ ಈಗಲೂ ಟೀ ಷಾಪ್‍ಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಲಭ್ಯ.
ಅದೊಂದು ಕಾಲವಿತ್ತು, ಉತ್ತರ ಭಾರತದಲ್ಲೆಲ್ಲ ಮಣ್ಣಿನ ಕಪ್‍ನಲ್ಲೇ ಟೀ ಕುಡಿಯುತ್ತಿದ್ದ ಕಾಲ. ಆದರೆ ಕಾಲ ಸರಿದಂತೆ ಆ ಅಭ್ಯಾಸ ನಿಂತೇ ಹೋಯಿತು. ಮಣ್ಣಿನ ಕಪ್‍ಗಳ ಸ್ಥಾನವನ್ನು ಬಳಸಿ-ಎಸೆಯುವ ಪ್ಲಾಸ್ಟಿಕ್ ಮತ್ತು ಕಾಗದದ ಕಪ್‍ಗಳು ಆಕ್ರಮಿಸಿಕೊಂಡವು.
ಹದಿನೈದು ವರುಷಗಳ ಮುಂಚೆ, ಆಗಿನ ಕೇಂದ್ರ ರೈಲ್ವೇ ಸಚಿವ ಲಾಲು ಪ್ರಸಾದ ಯಾದವ್, ರೈಲು ನಿಲ್ದಾಣಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಒದಗಿಸುವ ವ್ಯವಸ್ಥೆ ಮಾಡಿದರು – ಗ್ರಾಮೀಣ ಕುಂಬಾರಿಕೆಗೆ ಪ್ರೋತ್ಸಾಹ ನೀಡಲಿಕ್ಕಾಗಿ. ಆದರೆ ಈ ಪ್ರಯೋಗ ಒಂದೇ ವರುಷದಲ್ಲಿ ನಿಂತು ಹೋಯಿತು. ಯಾಕೆಂದರೆ ರೈಲು ಪ್ರಯಾಣಿಕರೂ, ಟೀ ಮಾರಾಟಗಾರರೂ ಅಗ್ಗದ ಪ್ಲಾಸ್ಟಿಕ್ ಮತ್ತು ಪೇಪರ್ ಕಪ್‍ಗಳನ್ನು ಪುನಃ ಬಳಸತೊಡಗಿದರು. ೨೦೧೯ರ ಆರಂಭದಲ್ಲಿ, ಕೇಂದ್ರ ರೈಲ್ವೇ ಸಚಿವ ಪಿಯುಷ್ ಗೋಯಲ್, ವಾರಣಾಸಿ ಮತ್ತು ರಾಯ್‍ಬರೇಲಿ ರೈಲುನಿಲ್ದಾಣಗಳ ಕೆಟರರ್ಸ್ (ಆಹಾರ ಸರಬರಾಜುಗಾರರು) ಮಣ್ಣಿನ ಕಪ್‍ಗಳಲ್ಲಿಯೇ ಪಾನೀಯ ಮಾರಾಟ ಮಾಡಬೇಕೆಂದು ಆದೇಶ ನೀಡಿದರು. ಈ ಪ್ರಯೋಗ ಎಷ್ಟು ಕಾಲ ಸಾಗುತ್ತದೆಂದು ಕಾದು ನೋಡೋಣ.
ಅದೇನಿದ್ದರೂ, ಮಹಾನಗರ ಕೊಲ್ಕತಾದಲ್ಲಿ ಜನರು ಪುಟ್ಟ ಮಣ್ಣಿನ ಕಪ್‍ಗಳಲ್ಲೇ ಇಂದಿಗೂ ಟೀ ಕುಡಿಯುತ್ತಿದ್ದಾರೆ. “ಮಣ್ಣಿನ ಕಪ್‍ನಲ್ಲಿರುವ ಟೀ ಸ್ವಾದವೇ ಬೇರೆ. ಕಪ್‍ನ ಮಣ್ಣಿನ ವಾಸನೆ ಹೀರಿಕೊಳ್ಳುವ ಈ ಟೀಯ ಸ್ವಾದವನ್ನು ಪ್ಲಾಸ್ಟಿಕ್ ಕಪ್‍ನಲ್ಲಿರುವ ಟೀ ಒದಗಿಸಲಾರದು” ಎನ್ನುತ್ತಾರೆ ನಿಯಮಿತವಾಗಿ ಟೀ ಕುಡಿಯುವ ಅಲ್ಲಿನ ಜನರು.
ಈ ಟೀ ಕಪ್‍ಗಳನ್ನು ತಯಾರಿಸುವುದು ಹೂಗ್ಲಿ ನದಿ ದಡದ ಮಣ್ಣಿನಿಂದ. ಅಧಿಕ ಉಷ್ಣತೆಯಲ್ಲಿ ಸುಟ್ಟು ತಯಾರಿಸುವ ಅವನ್ನು ಪಾಲಿಷ್ ಮಾಡುವುದಿಲ್ಲ; ಹಾಗಾಗಿ ಅವುಗಳ ಮೇಲ್ಮೈ ಒರಟುಒರಟು. ಅವನ್ನು ತಯಾರಿಸುವುದೇ ಒಮ್ಮೆ ಬಳಸಿ ಎಸೆಯೋದಕ್ಕೆ. ನದಿ ಮಣ್ಣಿನ ವಾಸನೆ ಹೀರುತ್ತ ಅವುಗಳಲ್ಲಿ ಟೀ ಕುಡಿಯುವುದೇ ಮರೆಯಲಾಗದ ಅನುಭವ.
ಮಹಾನಗರ ಕೊಲ್ಕತಾಕ್ಕೆ ಮಣ್ಣಿನ ಟೀ ಕಪ್ ಸರಬರಾಜು ಮಾಡುವ ಕುಂಬಾರರಲ್ಲಿ ಒಬ್ಬರು ಶಿಬಚರಣ್ ಪಂಡಿತ್. ಕಳೆದ ೪೦ ವರುಷಗಳಲ್ಲಿ ಇವರ ದಿನಚರಿ ಆರಂಭವಾಗುವುದೇ ಮುಂಜಾನೆ ಮೂರು ಗಂಟೆ ಹೊತ್ತಿಗೆ. ಆಗ ತನ್ನ ನೀಲಿಬಣ್ಣದ ಕೈಗಾಡಿಯಲ್ಲಿ ೪,೦೦೦ ಮಣ್ಣಿನ ಟೀ ಕಪ್ ಹೇರಿಕೊಂಡು ಮನೆಯಿಂದ ಹೊರಡುತ್ತಾರೆ. ಬಿಸಿಲೇರುವ ವರೆಗೆ, ಕೊಲ್ಕತಾದ ಚಿತ್ತರಂಜನ್ ಆಸ್ಪತ್ರೆ ಮತ್ತು ಐಷಾರಾಮಿ ಪ್ರದೇಶವಾದ ಪಾರ್ಕ್ ಸ್ಟ್ರೀಟ್ ನಡುವೆ ಹತ್ತಾರು ಟೀ-ಅಡ್ಡಾಗಳಿಗೆ ತಲಾ ನೂರಾರು ಮಣ್ಣಿನ ಟೀ ಕಪ್‍ಗಳ ಬಟವಾಡೆ. ಈ ಅವಧಿಯಲ್ಲಿ ಶಿಬಚರಣ್ ಪಂಡಿತ್ ಹಲವು ಬಾರಿ ಟೀ ಕುಡಿದು, ಆ ಮಣ್ಣಿನ ಕಪ್‍ಗಳನ್ನು ಎಸೆಯುತ್ತಾರೆ – ಅವೆಲ್ಲ ಅವರೇ ರೂಪಿಸಿದ ಮಣ್ಣಿನ ಕಪ್‍ಗಳು!
೧೯೭೬ರಲ್ಲಿ ಮನೆ ಬಿಟ್ಟು, ಬಿಹಾರದ ಛಪ್ರಾದಲ್ಲಿ ರೈಲು ಹತ್ತಿ ಕೊಲ್ಕತಾದ ಹೌರಾ ನಿಲ್ದಾಣದಲ್ಲಿ ಇಳಿದಾಗ ಶಿಬಚರಣ್ ಪಂಡಿತ್‍ಗೆ ೧೨ ವರುಷ ವಯಸ್ಸು. ಅವರು ಅಂದಿನಿಂದ ಇಂದಿನ ವರೆಗೆ ಮಾಡಿದ್ದೇನು? ಎಂಬ ಪ್ರಶ್ನೆಗೆ ಉತ್ತರ: ಲಕ್ಷಗಟ್ಟಲೆ ಮಣ್ಣಿನ ಟೀ ಕಪ್‍ಗಳು. ಇದು ಹೇಗೆ ಶುರುವಾಯಿತೆಂದರೆ, ಇವರು ಕುಂಬಾರ ಸಮುದಾಯದವರು ಎಂದು ತಿಳಿದುಕೊಂಡ ಕೊಲ್ಕತಾದ ಹಿರಿಯರೊಬ್ಬರು ಇವರಿಗೆ ಮಣ್ಣಿನ ಟೀ ಕಪ್ ತಯಾರಿ ವಿಧಾನ ಕಲಿಸಿದರು. ಈಗ ಮಣ್ಣಿನ ಟೀ ಕಪ್ ತಯಾರಿಯಲ್ಲಿ ಇವರಿಗೆ ಸಹಕರಿಸುವವರು ಹಿರಿಯಣ್ಣ ಮತ್ತು ಇವರ ೩೦ ವರುಷದ ಮಗ. ಇವರ ಕುಟುಂಬಗಳು ದೂರದ ಹಳ್ಳಿಯಲ್ಲಿವೆ.
ಶಿಬಚರಣ ಪಂಡಿತರ ವರ್ಕ್ ಷಾಪಿನ ಆಸುಪಾಸಿನಲ್ಲಿ ಬಿಹಾರ ಮತ್ತು ಉತ್ತರಪ್ರದೇಶದ ಹಳ್ಳಿಗಳಿಂದ ಬಂದು, ಮಣ್ಣಿನ ಟೀ ಕಪ್ ತಯಾರಿಸುತ್ತಿರುವ ನೂರು ಕುಟುಂಬಗಳಿವೆ. ಅವರೆಲ್ಲರೂ ಹಸಿಮಣ್ಣಿನಿಂದ ಟೀ ಕಪ್ ತಯಾರಿಸಿ ಬಿಸಿಲಿನಲ್ಲಿ ಒಣಗಿಸುತ್ತಾರೆ. ಅನಂತರ, ಅವನ್ನು ಏಕಕೇಂದ್ರೀಯ ವೃತ್ತಾಕಾರದಲ್ಲಿ ಜೋಡಿಸಿ, ಒಣಹುಲ್ಲಿನ ರಾಶಿಯ ಮೇಲಿಟ್ಟು ಬೆಂಕಿಯಲ್ಲಿ ಹದವಾಗಿ ಸುಟ್ಟಾಗ ಟೀ ಕಪ್‍ಗಳು ತಯಾರು. ಆದರೆ, ಅವರು ವಾಸವಿರುವ ಸ್ಥಳಗಳಲ್ಲಿ ಯಾವಾಗಲೂ ದಟ್ಟ ಹೊಗೆ ಮತ್ತು ದುರ್ವಾಸನೆ. ಯಾಕೆಂದರೆ, ಒಂದಲ್ಲ ಒಂದು ವರ್ಕ್ ಷಾಪಿನಲ್ಲಿ ಮಣ್ಣಿನ ಟೀ ಕಪ್‍ಗಳನ್ನು ಸುಡುತ್ತಲೇ ಇರುತ್ತಾರೆ.
ಐದು ವರುಷಗಳ ಮುಂಚಿನ ವರೆಗೂ ವಿವಿಧ ಅಳತೆಯ ಮಣ್ಣಿನ ಕಪ್ ಹಾಗೂ ಕನ್‍ಟೈನರುಗಳಿಗೆ ಬೇಡಿಕೆಯಿತ್ತು ಎಂಬುದನ್ನು ಶಿಬಚರಣರ ಅಣ್ಣ ಉಪೇಂದ್ರ ಹರಿ ನೆನಪು ಮಾಡಿಕೊಳ್ಳುತ್ತಾರೆ. “ಸಣ್ಣ ಟೀ ಕಪ್, ಬಿಸಿ ಹಾಲಿಗಾಗಿ ದೊಡ್ಡ ಕಪ್, ಮೊಸರಿಗಾಗಿ ೨೫೦ ಗ್ರಾಮ್ ಕಪ್, ರಸಗುಲ್ಲಾದಂತಹ ಬಂಗಾಳಿ ತಿನಿಸುಗಳಿಗಾಗಿ ೫೦೦ ಗ್ರಾಮ್ ಮತ್ತು ಒಂದು ಕಿಲೋ ಅಳತೆಯ ಮಡಿಕೆಗಳು – ಇವೆಲ್ಲದಕ್ಕೆ ಬೇಡಿಕೆಯಿತ್ತು. ಆದರೆ ಈಗ ದೊಡ್ಡ ಅಳತೆಯ ಕನ್‍ಟೈನರುಗಳೆಲ್ಲ ಪ್ಲಾಸ್ಟಿಕಿನವು” ಎನ್ನುತ್ತಾರೆ ಅವರು.
ಟೀ ಕುಡಿಯುವ ಗ್ರಾಹಕರಿಗೆ ಕೊಲ್ಕತಾದ ಟೀ ಷಾಪ್‍ಗಳು ಪ್ಲಾಸ್ಟಿಕ್, ಪೇಪರ್ ಹಾಗೂ ಮಣ್ಣಿನ ಕಪ್‍ಗಳ ಆಯ್ಕೆ ಒದಗಿಸುತ್ತವೆ. ಈ ಟೀ ಷಾಪ್‍ಗಳಿಗೆ ಮಣ್ಣಿನ ಟೀ ಕಪ್ ತಲಾ ೬೦ ಪೈಸೆಗೆ ಲಭ್ಯ. ಆದರೆ ಪ್ಲಾಸ್ಟಿಕ್ ಕಪ್ ತಲಾ ೪೦ ಪೈಸೆಗೆ ಮತ್ತು ಪೇಪರ್ ಕಪ್ ತಲಾ ೫೦ ಪೈಸೆಗೆ ಲಭ್ಯ. ಮಣ್ಣಿನ ಕಪ್‍ನಲ್ಲೇ ಟೀ ಕುಡಿಯುವ ಗ್ರಾಹಕರು ಆ ಟೀಗೆ ಮೂರು ಅಥವಾ ನಾಲ್ಕು ರೂಪಾಯಿ ಹೆಚ್ಚುವರಿ ಪಾವತಿಸ ಬೇಕಾಗುತ್ತದೆ. ಅವರು ಅದನ್ನು ಪಾವತಿಸುತ್ತಿರುವ ಕಾರಣದಿಂದಾಗಿ ಕೊಲ್ಕತಾದಲ್ಲಿ ಇಂದಿಗೂ ಮಣ್ಣೀನ ಕಪ್‍ಗಳಲ್ಲಿ ಟೀ ಸವಿಯಲು ಲಭ್ಯ.
ಆದರೆ, ಕಳೆದ ನಾಲ್ಕು ದಶಕಗಳಲ್ಲಿ ದಿನದಿನವೂ ೧೪ ಗಂಟೆ ದುಡಿದು ದಣಿದಿದ್ದಾರೆ ಶಿಬಚರಣ್ ಪಂಡಿತ್. ಯಾಕೆಂದರೆ ಪ್ರತಿ ದಿನ ಮುಂಜಾನೆ ೧೪ ಕಿಮೀ ನಡೆದು ಮಣ್ಣಿನ ಟೀ ಕಪ್ ಬಟವಾಡೆ ಮಾಡಿದರೆ ಮುಗಿಯೋದಿಲ್ಲ ಅವರ ಕೆಲಸ. ಅವರ ವರ್ಕ್ ಷಾಪಿಗೆ ಮರಳಿದೊಡನೆ ಕುಂಬಾರರ ಚಕ್ರದೆದುರು ಕುಳಿತು, ಟೀ ಕಪ್ ತಯಾರಿಯ ಕೆಲಸ ಶುರು. ಮಧ್ಯಾಹ್ನದ ಊಟದ ನಂತರ ರಾತ್ರಿ ೧೦ ಗಂಟೆ ತನಕ ಪುನಃ ಅದೇ ಕೆಲಸ.
ತನ್ನ ಕಸಬುಗಾರಿಕೆಗೆ ಮಣ್ಣಿನ ಟೀ ಕಪ್ ತಯಾರಿಯಲ್ಲಿ ಅವಕಾಶವಿಲ್ಲ ಎಂಬ ವಿಷಾದವಿದೆ ಅವರಿಗೆ. “ನನಗೆ ಬೇರೆ ಕೆಲಸ ಗೊತ್ತಿದ್ದರೆ, ಈ ಕೆಲಸ ಮಾಡುತ್ತಿರಲಿಲ್ಲ” ಎನ್ನುತ್ತಾರೆ ಶಿಬಚರಣ ಪಂಡಿತ್.
ಅವರ ವಿಷಾದದಿಂದ ಮೂಡಿ ಬರುವ ಪ್ರಶ್ನೆ: ಈ ಕುಲಕಸಬು ಉಳಿಯುತ್ತದೆಯೇ? ಹೊಸ ತಲೆಮಾರಿನ ಯಾರೂ ಮಣ್ಣಿನ ಟೀ ಕಪ್ ತಯಾರಿಯ ಕಲೆಯನ್ನು ಕಲಿಯುತ್ತಿಲ್ಲ. ಹಾಗಾಗಿ, ಈ ಪ್ರಶ್ನೆಯನ್ನು ಕಾಲವೇ ಉತ್ತರಿಸಬೇಕು.
ಪೂರಕ ಮಾಹಿತಿ: ಪೆರ್ಡೂರು ಕುಂಬಾರರ ಗುಡಿ ಕೈಗಾರಿಕೆ ಸಂಘದ ಪರಿಸರಸ್ನೇಹಿ ಯೋಜನೆ
ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕಿನ ನಿಷೇಧದಿಂದಾಗಿ, ಕುಂಬಾರಿಕೆಗೆ ದೊಡ್ಡ ಅವಕಾಶವೊಂದು ಒದಗಿ ಬಂದಿದೆ. ಆ ಪ್ಲಾಸ್ಟಿಕಿನಿಂದ ತಯಾರಿಸುವ ನಿತ್ಯ ಬಲಕೆಯ ವಸ್ತುಗಳನ್ನು ಮಣ್ಣಿನಿಂದ ತಯಾರಿಸಿದರೆ, ಪರಿಸರಸ್ನೇಹಿಯಾದ ಈ ವಸ್ತುಗಳಿಗೆ ಬೇಡಿಕೆ ಇದ್ದೇ ಇರುತ್ತದೆ.
ಈ ಅವಕಾಶ ಬಳಸಿಕೊಳ್ಳಲು ಮುಂದಾಗಿದೆ ಉಡುಪಿ ಹತ್ತಿರದ ಪೆರ್ಡೂರಿನ ಕುಂಬಾರರ ಗುಡಿ ಕೈಗಾರಿಕೆ ಸಂಘ. ಪ್ಲಾಸ್ಟಿಕ್ ಕಪ್‍ಗಳಿಗೆ ಬದಲಿಯಾಗಿ ಮಣ್ಣಿನ ಕಪ್ ತಯಾರಿಸುವುದು ಈ ಸಂಘದ ಸದ್ಯದ ಯೋಜನೆ. ಆದರೆ, ಪ್ಲಾಸ್ಟಿಕ್ ಅಥವಾ ಪೇಪರ್ ಕಪ್‍ನ ಬೆಲೆಯಲ್ಲಿ ಮಣ್ಣಿನ ಕಪ್ ತಯಾರಿಸುವುದು ಸವಾಲಿನ ಕೆಲಸ.
ಪೆರ್ಡೂರು ಸಂಘದ ನಿಯೋಗ, ಉತ್ತರ ಭಾರತದಲ್ಲಿ ಮಣ್ಣಿನ ಕಪ್‍ಗಳಿಗೆ ಬೇಡಿಕೆಯಿರುವ ಕೆಲವು ರಾಜ್ಯಗಳಿಗೆ ಭೇಟಿ ನೀಡಿದೆ. ಅಲ್ಲಿನಂತೆ ಕರ್ನಾಟಕದಲ್ಲಿಯೂ ಮಣ್ಣಿನ ಕಪ್‍ಗಳಿಗೆ ಬೇಡಿಕೆ ಕುದುರಿಸುವ ಬಗ್ಗೆ ಅಧ್ಯಯನ ನಡೆಸುತ್ತಿದೆ. ಸಂಘವು ಉತ್ಪಾದನಾ ವೆಚ್ಚ ತಗ್ಗಿಸಲಿಕ್ಕಾಗಿ ಯಂತ್ರೋಪಕರಣ ಅಳವಡಿಸುವ ಉದ್ದೇಶ ಹೊಂದಿದೆ.
೧೯೫೮ರಲ್ಲಿ ಸ್ಥಾಪನೆಯಾದ ಈ ಸಂಘವು ಕುಂಬಾರರು ತಯಾರಿಸಿದ ಮಡಿಕೆ, ನೀರಿನ ಹೂಜಿ, ಹಂಡೆ, ಬಾಣಲೆ, ಒಲೆ, ಹಣತೆ ಇತ್ಯಾದಿ ಮೂವತ್ತು ವಿವಿಧ ಮಣ್ಣಿನ ವಸ್ತುಗಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ.
ಫೋಟೋ: ಕೊಲ್ಕತಾದಲ್ಲಿ ಗಾಡಿಯ ಟೀ ಷಾಪ್‌ನಲ್ಲಿ ಪೇರಿಸಿಟ್ಟ ಮಣ್ಣಿನ ಟೀ ಕಪ್‌ಗಳು