ಇಪ್ಪತ್ತು ವರುಷಗಳ ಹಿಂದಿನ ಮಾತು. ಧೃತಿಮಾನ್ ಬೋರಾ ತನ್ನ ವಿದ್ಯಾವಂತ ಹೆತ್ತವರಿಗೆ ಹೇಳಿದ ಮಾತು: ಹನ್ನೆರಡನೆಯ ತರಗತಿಯ ನಂತರ ನಾನು ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ.
ವಿದ್ಯಾಲಯದಲ್ಲಿ ಕಲಿಯುವ ಬದಲಾಗಿ, ಧೃತಿಮಾನ್ ಬಿದಿರಿನ ಪೀಠೋಪಕರಣಗಳು ಮತ್ತು ಅಡುಗೆ ಹಾಗೂ ಕೃಷಿ ಸಲಕರಣೆಗಳನ್ನು ತಯಾರಿಸಲು ಶುರು ಮಾಡಿದರು. ಹೀಗೆ ಆರಂಭವಾಯಿತು ಡಿಬಿ ಇಂಡಸ್ಟ್ರೀಸ್ ಎಂಬ ಬಿದಿರಿನ ಸಾಧನಗಳ ಪುಟ್ಟ ತಯಾರಿಕಾ ಘಟಕ.
ಅಸ್ಸಾಂನ ಗೌಹಾತಿ ನಗರದ ಈಶಾನ್ಯದಲ್ಲಿ, ೨೪೦ ಕಿಮೀ ದೂರದಲ್ಲಿ, ಬಿಶ್ವನಾಥ್ ಚರಿಯಾಲಿ ಪಟ್ಟಣದ ನಬಪುರ್ ಪ್ರದೇಶದಲ್ಲಿ ಅವರ ಮನೆಯಲ್ಲಿಯೇ ಇದೆ ಈ ಘಟಕ. ಮನೆಯ ಹಿಂಭಾಗದಲ್ಲಿ ಜತಿ ಮತ್ತು ಬಿಜುಲಿ ಎಂಬ ಎರಡು ಜಾತಿಯ ಬಿದಿರು ಮೆಳೆಗಳಿದ್ದವು. “ಅವು ನಾಜೂಕಿನ ವಸ್ತುಗಳ ತಯಾರಿಗೆ ಸೂಕ್ತವಾದರೂ ಬಾಳ್ವಿಕೆಯ ವಸ್ತುಗಳ ತಯಾರಿಗೆ ಸೂಕ್ತವಲ್ಲ” ಎನ್ನುತ್ತಾರೆ ಧೃತಿಮಾನ್.
ಬಹಳ ಹುಡುಕಾಟದ ನಂತರ, ಬಾಳ್ವಿಕೆಯ ವಸ್ತುಗಳ ತಯಾರಿಗೆ ಸೂಕ್ತವಾದ ದೃಢವಾದ ಬಿದಿರು ತಳಿಯನ್ನು ಗುರುತಿಸಿದರು ಧೃತಿಮಾನ್. ಅದುವೇ ಭಲೂಕ ಎಂಬ ಬಿದಿರು (ಸಸ್ಯಶಾಸ್ತ್ರೀಯ ಹೆಸರು ಬಂಬುಸಾ ಬಲ್ಕೂವ).
ಅದರಿಂದ ಹಲವಾರು ಬಿದಿರಿನ ಉತ್ಪನ್ನಗಳನ್ನು ಡಿಬಿ ಇಂಡಸ್ಟ್ರೀಸ್ ತಯಾರಿಸಿ ಮಾರತೊಡಗಿತು: ಚಾಪೆಗಳು, ಪೀಠೋಪಕರಣಗಳು, ವಿಭಾಜಕಗಳು, ಫಲಕಗಳು, ಹೂದಾನಿಗಳು, ಅಡುಗೆ ಸಾಧನಗಳು ಇತ್ಯಾದಿ. ಆದರೆ ಅದ್ಯಾವುದೂ ಮಾರುಕಟ್ಟೆಯಲ್ಲಿ ಸುದ್ದಿಯಾಗಲೇ ಇಲ್ಲ.
ಕೊನೆಗೂ, ೧೭ ವರುಷಗಳ ಪರಿಶ್ರಮ ಫಲ ನೀಡಿತು; ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಬಿದಿರಿನ ಉತ್ಪನ್ನವೊಂದನ್ನು ರೂಪಿಸಲು ಧೃತಿಮಾನ್ ಯಶಸ್ವಿಯಾದರು. ಅದುವೇ “ಬಿದಿರಿನ ನೀರಿನ ಬಾಟಲಿ.” ಈ ಆವಿಷ್ಕಾರ ಒಂದೇ ವರುಷದಲ್ಲಿ ಭಾರತದ ಮತ್ತು ವಿದೇಶಗಳ ಗ್ರಾಹಕರ ಗಮನ ಸೆಳೆದಿದೆ: ನಿಸರ್ಗ ಮೂಲದ ಸಾವಯವ ಬಾಟಲಿ ಎಂಬ ಕಾರಣಕ್ಕಾಗಿ.
ಒಂದು ವರುಷದ ಮುಂಚೆ ಢೆಲ್ಲಿಯಲ್ಲಿ ಜರಗಿದ ಅಂತರರಾಷ್ಟ್ರೀಯ ಮೇಳದಲ್ಲಿ ಈ ಬಿದಿರಿನ ನೀರಿನ ಬಾಟಲಿಯನ್ನು ಮೊದಲಾಗಿ ಪ್ರದರ್ಶನಕ್ಕೆ ಇಟ್ಟಿದ್ದರು ಧೃತಿಮಾನ್ ಬರುವಾ. ಕೆಲವು ಯುರೋಪಿಯನ್ ಮಾರಾಟಗಾರರು ಅವನ್ನು ಗಮನಿಸಿದರೂ ಈ ಬಾಟಲಿಗಳಿಗೆ ದೊಡ್ಡ ಪ್ರಮಾಣದ ಬೇಡಿಕೆ ಬರಲಿಲ್ಲ. “ಎಂಟು ತಿಂಗಳ ಮುಂಚೆ ಯುನೈಟೆಡ್ ಕಿಂಗ್ಡಮ್(ಯು.ಕೆ.)ನಿಂದ ೨೦೦ ಬಾಟಲಿಗಳಿಗೆ ಬೇಡಿಕೆ ಬಂತು. ಆ ಖರೀದಿದಾರನದು ಒಂದೇ ಷರತ್ತು: ಕಚ್ಚಾ ಬಾಟಲಿಗಳನ್ನೇ ಕಳಿಸಿ. ಅಂದರೆ, ಆ ಬಾಟಲಿಗಳಿಗೆ ಯಾವುದೇ ಬಣ್ಣ ಅಥವಾ ಹೊಳಪಿನ ದ್ರಾವಣ ಲೇಪಿಸಬಾರದು. ಅಲ್ಲಿಯ ವರೆಗೆ ಆ ಬಾಟಲಿಗಳಿಗೆ ಯುಎಸ್ಎ ದೇಶದಲ್ಲಿ ಉತ್ಪಾದಿಸುವ ದುಬಾರಿ ಜಲನಿರೋಧಕ ಎಣ್ಣೆ ಪಾಲಿಷನ್ನು ಲೇಪಿಸುತ್ತಿದ್ದೆ” ಎಂದು ನೆನಪು ಮಾಡಿಕೊಳ್ಳುತ್ತಾರೆ ಧೃತಿಮಾನ್.
ಅಂತೂ ಗ್ರಾಹಕರಿಗೆ ಎಂತಹ ಬಾಟಲಿ ಬೇಕೆಂಬುದು ಧೃತಿಮಾನ್ ಅವರಿಗೆ ಗೊತ್ತಾಯಿತು. ಈಗಲೂ “ಪಾಲಿಷ್ ಇರಲಿ” ಎನ್ನುವ ಗ್ರಾಹಕರಿಗೆ ಅವರು ಮಾರುವುದು ಜಲನಿರೋಧಕ ಪಾಲಿಷ್ ಲೇಪಿಸಿದ ಬಾಟಲಿಗಳನ್ನೇ. ಆದರೆ, “ಸಾವಯವ ಬಾಟಲಿಯೇ ಬೇಕು” ಎನ್ನುವ ಗ್ರಾಹಕರಿಗೆ ಪಾಲಿಷ್ ಲೇಪ ಇಲ್ಲದ ಬಾಟಲಿ ನೀಡುತ್ತಾರೆ; ಈ ಬಾಟಲಿಗಳಿಗೆ ಸಾಗಾಟದಲ್ಲಿ ಹಾನಿಯಾಗಬಾರದು ಎಂಬ ಕಾರಣಕ್ಕಾಗಿ ಕರ್ಪೂರ ಮತ್ತು ಸಾಸಿವೆ ಎಣ್ಣೆ ಲೇಪಿಸುತ್ತಾರೆ.
ಪ್ರತಿಯೊಂದು ಬಿದಿರಿನ ನೀರಿನ ಬಾಟಲಿ ತಯಾರಿಸಲು ಐದು ಗಂಟೆ ತಗಲುತ್ತದೆ; ಭಲೂಕ ಬಿದಿರನ್ನು ಕತ್ತರಿಸಿ, ಕುದಿಸಿ, ಒಣಗಿಸಿ, ಹೊಗೆಯಾಡಿಸಿ, ವಿವಿಧ ಭಾಗಳನ್ನು ಜೋಡಿಸಿ, ಅಂತಿಮ ರೂಪ ನೀಡಲು. ಕಚ್ಚಾ ಬಿದಿರನ್ನು ಕುದಿಸುವುದು ಅಗತ್ಯ: ಶುದ್ಧಗೊಳಿಸಲಿಕ್ಕಾಗಿ ಮತ್ತು ಬಾಟಲಿಯ ಮೈಯನ್ನು ದೃಢಗೊಳಿಸಲಿಕ್ಕಾಗಿ. ಇದರಿಂದಾಗಿ ಈ ಬಾಟಲಿಗಳಿಗೆ ಕನಿಷ್ಠ ೧೮ ತಿಂಗಳು ಬಾಳ್ವಿಕೆ. ಬಾಟಲಿಗಳ ಮಾರಾಟ ಬೆಲೆ ರೂ.೨೫೦ರಿಂದ ರೂ.೪೦೦.
ಡಿಬಿ ಇಂಡಸ್ಟ್ರೀಸ್ ಈಗ ಕುಟುಂಬದ ಉದ್ಯಮವಾಗಿ ಬೆಳೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಅಪರೂಪದ ಉತ್ಪನ್ನದ ಪ್ರಚಾರ ನಿರ್ವಹಣೆ ಧೃತಿಮಾನರ ಸೋದರ ಗೌರವ್ ಅವರಿಂದ. ಯಾಕೆಂದರೆ, ಮಾರಾಟ ಹೆಚ್ಚುತ್ತಿರುವುದು ಈ ಮಾಧ್ಯಮದ ಪ್ರಚಾರದಿಂದಾಗಿ. ಜೊತೆಗೆ, ಕಚ್ಚಾವಸ್ತು ಪೂರೈಕೆ, ಕೆಲಸಗಾರರ ಮೇಲುಸ್ತುವಾರಿ ಮತ್ತು ಗುಣಮಟ್ಟ ನಿರ್ವಹಣೆಯಲ್ಲಿಯೂ ಗೌರವರ ಸಹಕಾರ. ಈ ಘಟಕಕ್ಕೆ ಹಣಕಾಸಿನ ನೆರವು ಅಮ್ಮ ಕುಮುದಿನಿ ಅವರಿಂದ. ಆರಂಭದಲ್ಲಿ ತಮ್ಮ ಉಳಿತಾಯದ ಹಣವನ್ನೇ ಅವರು ನೀಡಿದ್ದರು; ಈಗ ಬೇರೆ ಮೂಲಗಳಿಂದ ಸಾಲ ಪಡೆದು ಘಟಕಕ್ಕೆ ಆರ್ಥಿಕ ನೆರವು ಒದಗಿಸುತ್ತಿದ್ದಾರೆ. ದಶಕದ ಹಿಂದೆ ಪ್ರಾಧ್ಯಾಪಕರಾಗಿ ನಿವೃತ್ತರಾದ ತಂದೆಯ ಬೆಂಬಲ ಇದ್ದೇ ಇದೆ.
ಡಿಬಿ ಇಂಡಸ್ಟ್ರೀಸಿನ ಪ್ರತಿಯೊಂದು ಬಿದಿರಿನ ಉತ್ಪನ್ನವನ್ನು ಕೈಯಿಂದ ತಯಾರಿಸಲಾಗುತ್ತಿದೆ (ಯಂತ್ರಗಳಿಂದಲ್ಲ). “ನನ್ನ ಘಟಕ ಮನೆಯಲ್ಲೇ ಇದೆ. ಇಲ್ಲೇ ಸುತ್ತಮುತ್ತಲಿಂದ ಪ್ರತಿ ತಿಂಗಳೂ ೧೦೦ – ೧೫೦ ಭಲೂಕಾ ಬಿದಿರಿನ ಗಳಗಳನ್ನು ತರುತ್ತೇನೆ. ದೂರದ ಗೌಹಾತಿಯಿಂದ ಪುಟ್ಟ ಯಂತ್ರಗಳನ್ನು ಸಾಧನಗಳನ್ನು ತರುವುದು ಮತ್ತು ಉತ್ಪನ್ನಗಳನ್ನು ರವಾನಿಸುವುದೇ ನಮಗೆ ಸವಾಲಿನ ಕೆಲಸ” ಎನ್ನುತ್ತಾರೆ ಧೃತಿಮಾನ್. “ಈಗ ತಿಂಗಳಿಗೆ ೧,೫೦೦ರಷ್ಟು ಬಿದಿರಿನ ನೀರಿನ ಬಾಟಲಿ ತಯಾರಿಸುತ್ತಿದ್ದೇವೆ. ಇದು ಬೇಡಿಕೆಗಿಂತ ಬಹಳ ಕಡಿಮೆ. ನಮ್ಮ ಬಳಿ ಲೇತ್ ಯಂತ್ರ, ದೊಡ್ಡ ಡ್ರೈಯರ್ ಇತ್ಯಾದಿ ಇದ್ದರೆ ತಿಂಗಳಿಗೆ ೮,೦೦೦ ಬಾಟಲಿ ತಯಾರಿಸ ಬಹುದು. ಆದರೆ ಅದಕ್ಕೆ ದೊಡ್ಡ ಭಂಡವಾಳ ಬೇಕು” ಎಂದು ತಿಳಿಸುತ್ತಾರೆ.
ಈ ಬಿದಿರಿನ ನೀರಿನ ಬಾಟಲಿಗೆ ಪೇಟೆಂಟಿಗೆ ಅರ್ಜಿ ಸಲ್ಲಿಸಿದ್ದಾರೆ ಧೃತಿಮಾನ್. ಇತರರೂ ಇಂತಹ ಬಾಟಲಿ ತಯಾರಿಸಿದ್ದಾರೆ. ಉದಾಹರಣೆಗೆ, ಚೀನಾದವರು ತಯಾರಿಸುವ ಇಂತಹ ಬಾಟಲಿನ ಒಳಗಡೆ ಗಾಜು ಇದೆ ಮತ್ತು ಉಕ್ಕಿನ ಮುಚ್ಚಳವಿದೆ. “ನನ್ನದು ಸಾವಯವ ಬಾಟಲಿ. ಅವರದು ಸಾವಯವ ಬಾಟಲಿಯಲ್ಲ. ಹಾಗಾಗಿ ಅವರು ಸಾವಯವ ಬಾಟಲಿಯೆಂದು ಪೇಟೆಂಟ್ ಮಾಡಲಾಗದು” ಎಂದು ಮಾಹಿತಿ ನೀಡುತ್ತಾರೆ ಧೃತಿಮಾನ್.
ತನ್ನ ಒಳದನಿಗೆ ಓಗೊಟ್ಟು, ಪರಿಸರಸ್ನೇಹಿ ಉತ್ಪನ್ನ ರೂಪಿಸಿ, ಒಳ್ಳೆಯ ಹೆಸರು ಗಳಿಸಿದ್ದಕ್ಕಾಗಿ ಅಮ್ಮನಿಗೆ ಧೃತಿಮಾನ್ ಸಾಧನೆಯ ಬಗ್ಗೆ ತುಂಬು ಅಭಿಮಾನ.