ಆಟ, ಊಟ, ಪಾಠ, ಅಡುಗೆ, ನಡಿಗೆ, ನಡವಳಿಕೆ – ಇವೆಲ್ಲವನ್ನು ನಮಗೆ ಕಲಿಸುವವರು ಹೆತ್ತವರು, ಹಿರಿಯರು ಮತ್ತು ಗುರುಗಳು. ಆದರೆ ಒಂದು ಹಕ್ಕಿಗೆ ಗೂಡು ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇನ್ನೊಣಕ್ಕೆ ಎರಿಗಳಲ್ಲಿ ಷಟ್ಪದಿ ಕೋಶ ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇಡಕ್ಕೆ ಅದ್ಭುತ ಬಲೆ ನೇಯಲು ಯಾರು ಕಲಿಸುತ್ತಾರೆ?
ಅವೆಲ್ಲ ಪ್ರಕೃತಿಯ ವಿಸ್ಮಯ. ಮಾನವನ ಹಲವು ಆವಿಷ್ಕಾರಗಳಿಗೆ ಪ್ರಕೃತಿಯೇ ಸ್ಫೂರ್ತಿ ಎಂದರೆ ನಂಬುವಿರಾ?
ಚಿನ್ನದ ಅನುಪಾತ: ಈ ಹೆಸರಿನ ಸಂಖ್ಯಾಸರಣಿ ಪ್ರಕೃತಿಯ ವಿಸ್ಮಯಗಳಲ್ಲೊಂದು. ಅದು ಹೀಗಿದೆ: ೦,೧, ೧, ೨, ೩, ೫, ೮, ೧೩…. ಅಂದರೆ ಸರಣಿಯ ಪ್ರತಿಯೊಂದು ಸಂಖ್ಯೆಯೂ ಹಿಂದಿನ ಎರಡು ಸಂಖ್ಯೆಗಳ ಮೊತ್ತ. ಪ್ರಕೃತಿಯಲ್ಲಿ ಈ ಅನುಪಾತದಲ್ಲಿರುವ ಹಲವು ರಚನೆಗಳಿವೆ. ಹಲವು ಸಸ್ಯಗಳ ಎಲೆಗಳು ಇದೇ ಅನುಪಾತದಲ್ಲಿವೆ. ಇದರಿಂದಾಗಿ ಪ್ರತಿಯೊಂದು ಎಲೆಗೂ ಸಾಕಷ್ಟು ಸೂರ್ಯ ಪ್ರಕಾಶ ಸಿಗುತ್ತದೆ. ಕೆಲವು ಸಮುದ್ರ ಚಿಪ್ಪುಗಳ ರಚನೆ ಇದೇ ಅನುಪಾತದಲ್ಲಿದೆ. ಅವನ್ನು ಅನುಸರಿಸಿ, ವೃತ್ತಾಕಾರವಾಗಿ ಸುತ್ತಿಸುತ್ತಿ ಮೇಲೇರುವ ಮೆಟ್ಟಲುಗಳನ್ನು ಕೆಲವು ಕಟ್ಟಡಗಳಲ್ಲಿ ನಿರ್ಮಿಸಲಾಗಿದೆ.
ವೆಲ್ ಕ್ರೋ ಅಂಟುಬಂಧ: ಬ್ಯಾಗುಗಳಲ್ಲಿ, ಚಪ್ಪಲಿ ಮತ್ತು ಬೂಟ್ಸುಗಳಲ್ಲಿ ಒತ್ತಿದೊಡನೆ ಬಿಗಿಯಾಗಿ ಅಂಟಿಕೊಳ್ಳುವ ಅಂಟುಬಂಧ (ವೆಲ್ ಕ್ರೋ)ಗಳನ್ನು ನೀವೆಲ್ಲರೂ ಕಂಡಿದ್ದೀರಿ. ಇದರ ಸಂಶೋಧಕ ಸ್ವಿಝರ್-ಲ್ಯಾಂಡಿನ ಇಲೆಕ್ಟ್ರಿಕಲ್ ಇಂಜಿನಿಯರ್ ಜೋರ್ಜ್ ಡಿ ಮೆಸ್-ಟ್ರಾಲ್. ಅವನ ಕೋಟು ಮತ್ತು ನಾಯಿಗೆ ಅಂಟಿಕೊಂಡಿದ್ದ ಬರ್-ಡೊಕ್ ಗಿಡದ ಕಾಯಿಗಳೇ ಈ ಆವಿಷ್ಕಾರಕ್ಕೆ ಸ್ಫೂರ್ತಿ. ಆ ಕಾಯಿಗಳನ್ನು ಆತ ಮನೆಗೊಯ್ದು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದ. ಆಗ ಕಾಣಿಸಿದಂತಹ ಒಂದಕ್ಕೊಂದು ಬೆಸೆಯುವ ಕೊಕ್ಕೆ ಮತ್ತು ಕೊಂಡಿಗಳನ್ನು ರೂಪಿಸಿ ಅಂಟುಬಂಧ ಆವಿಷ್ಕರಿಸಿದ.
ಪ್ರಾಕೃತಿಕ ಹವಾನಿಯಂತ್ರಣ: ಹುತ್ತದೊಳಗೆ ಗೆದ್ದಲುಗಳು ಉಷ್ಣತೆ ನಿಯಂತ್ರಿಸುವ ವಿಧಾನ ಅದ್ಭುತ. ವಾಯುಚಲನೆಯ ರಂಧ್ರಗಳನ್ನು ತೆರೆಯುವ ಮತ್ತು ಮುಚ್ಚುವ ಮೂಲಕ ವಾಯುಪ್ರವಾಹ ಬದಲಾಯಿಸಿ, ಅವು ಉಷ್ಣತೆ ನಿಯಂತ್ರಿಸುತ್ತವೆ. ಇದೇ ವಿಧಾನ ಅನುಸರಿಸಿ, ಜಿಂಬಾಬ್ವೆ ದೇಶದ ಹರಾರೆ ನಗರದಲ್ಲಿ ೧೯೯೬ರಲ್ಲಿ ನಿರ್ಮಿಸಿದ ಈಸ್ಟ್ ಗೇಟ್ ಸೆಂಟರ್ ಕಟ್ಟಡದಲ್ಲಿ ಉಷ್ಣತೆ ನಿಯಂತ್ರಣ ವ್ಯವಸ್ಥೆ ರೂಪಿಸಿದ್ದಾರೆ ಕಟ್ಟಡ ವಿನ್ಯಾಸಗಾರ ಮಿಕ್ ಪಿಯರ್ಸ್. ಅದು ಇಂತಹ ಪ್ರಾಕೃತಿಕ ಹವಾನಿಯಂತ್ರಣ ವ್ಯವಸ್ಥೆಯಿರುವ ಜಗತ್ತಿನ ಮೊತ್ತಮೊದಲ ಕಟ್ಟಡ.
ತಾವರೆಯ ಸ್ವಚ್ಛತೆ: ತಾವರೆಯ ಎಲೆಗಳು ಜಲಪ್ರತಿಬಂಧಕ ಮತ್ತು ಸ್ವಶುದ್ಧಿ ವ್ಯವಸ್ಥೆ ಹೊಂದಿವೆ. ಅವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪುಟ್ಟಪುಟ್ಟ ಏರು ರಚನೆಗಳು ಕಾಣಿಸುತ್ತವೆ. ಇವುಗಳಿಂದಾಗಿ, ತಾವರೆ ಎಲೆಗಳ ಮೇಲ್ಮೈ ಜಾರುಬಂಡಿಯಂತೆ ಇರುತ್ತದೆ. ಎಲೆಗಳ ಮೇಲೆ ಬಿದ್ದ ನೀರಿನ ಬಿಂದುಗಳು ಜಾರಿ ಹೋಗುವಾಗ, ಧೂಳಿನ ಕಣಗಳನ್ನು ಸೆಳೆದುಕೊಂಡು ಎಲೆಗಳ ಮೇಲ್ಮೈ ಸ್ವಚ್ಛಗೊಳಿಸುತ್ತವೆ. ಈಗ ಇದೇ ತಂತ್ರವನ್ನು ಅಳವಡಿಸಿ, ಸ್ವಶುದ್ಧಿ ಗುಣವಿರುವ ಪೈಂಟ್ ಅಭಿವೃದ್ಧಿ ಪಡಿಸಲು ಪೈಂಟ್ ಉತ್ಪಾದಕರು ಪ್ರಯತ್ನಿಸುತ್ತಿದ್ದಾರೆ.
ಮೃದ್ವಂಗಿಗಳ ಮಹಾಅಂಟು: ಸಮುದ್ರ ತೀರಗಳ ಬಂಡೆಗಳಿಗೆ ಅಂಟಿಕೊಂಡಿರುತ್ತವೆ ಮೃದ್ವಂಗಿಗಳು. ಕಪ್ಪುಬಣ್ಣದ ಎರಡು ಚಿಪ್ಪುಗಳೊಳಗೆ ಬದುಕುತ್ತವೆ ಈ ಜೀವಿಗಳು. ಇವು ತಮ್ಮ ಸೂಕ್ಷ್ಮ ರೋಮಗಳನ್ನು ತಾವು ಸ್ರವಿಸುವ ಅಂಟಿನ ಮೂಲಕ ಬಂಡೆಗಳಿಗೆ ಅಂಟಿಸಿಕೊಂಡು, ಸಮುದ್ರದ ರಭಸದ ಅಲೆಗಳ ಹೊಡೆತಕ್ಕೂ ಜಗ್ಗದೆ ಅಲ್ಲೇ ಉಳಿಯುತ್ತವೆ. ಮೃದ್ವಂಗಿಗಳ ಪ್ರಬಲ ಅಂಟು “ಪ್ಯೂರ್-ಬಾಂಡ್” ಎಂಬ ಹೊಸ ಮರದ-ಅಂಟು ತಂತ್ರಜ್ನಾನಕ್ಕೆ ಸ್ಫೂರ್ತಿ. ಈ ವಿಷರಹಿತ ಮರದ-ಅಂಟು ಮರದ ಉತ್ಪನ್ನಗಳ ಕೈಗಾರಿಕೆಯಲ್ಲಿ ಹೊಸ ಆವಿಷ್ಕಾರಗಳಿಗೆ ಕಾರಣವಾಗಿದೆ. ಇದರ ಉತ್ಪಾದನಾ ವೆಚ್ಚ ಸಾಮಾನ್ಯ ಮರದ-ಅಂಟುಗಳ ಉತ್ಪಾದನಾ ವೆಚ್ಚದಷ್ಟೇ. ಆದರೆ ಈ ಹೊಸ ಮರದ-ಅಂಟು ಜಲನಿರೋಧಕ ಮತ್ತು ಉಷ್ಣನಿರೋಧಕ ಪರೀಕ್ಷೆಗಳಲ್ಲಿ ಸಾಮಾನ್ಯ ಮರದ-ಅಂಟುಗಳಿಗಿಂತ ಉತ್ತಮವೆಂದು ಕಂಡುಬಂದಿದೆ.
ಉಕ್ಕಿಗಿಂತ ಶಕ್ತಿಯುತ: ಜೇಡನ ಬಲೆಯ ನೂಲು ಅಷ್ಟೇ ದಪ್ಪದ ಉಕ್ಕಿನ ಎಳೆಗಿಂತಲೂ ಮೂರು ಪಟ್ಟು ಜಾಸ್ತಿ ಶಕ್ತಿಯುತ ಎಂದು ವೈಜ್ನಾನಿಕ ಪರೀಕ್ಷೆಗಳಿಂದ ಸಾಬೀತಾಗಿದೆ. ಜೊತೆಗೆ, ಜೇಡನ ಬಲೆಯ ನೂಲು ಸುಲಭವಾಗಿ ಬಾಗಿಬಳುಕುತ್ತದೆ. ಈ ಗುಣಗಳನ್ನು ಹೊಂದಿರುವ ನೂಲು ಉತ್ಪಾದಿಸಲಿಕ್ಕಾಗಿ ಸಂಶೋಧನೆಗಳು ನಡೆಯುತ್ತಿವೆ.
ಜೇನುಹುಟ್ಟಿನ ಷಟ್ಪದಿ ಕೋಶ ರಚನೆ: ಜೇನುಹುಟ್ಟಿನಲ್ಲಿ ಜೇನ್ನೊಣಗಳ ಷಟ್ಪದಿ ಕೋಶಗಳ ಜೋಡಣೆ ಪ್ರಕೃತಿಯ ಅದ್ಭುತಗಳಲ್ಲೊಂದು. ಇದು ಯುಎಸ್ಎ ದೇಶದ ಕಂಪೆನಿಯೊಂದು ಮಿಲಿಟರಿ ವಾಹನಗಳಿಗಾಗಿ ರೂಪಿಸಿರುವ ಗಾಳಿರಹಿತ ಟಯರುಗಳಿಗೆ ಸ್ಫೂರ್ತಿ. ಅಂತಹ ಟಯರುಗಳಲ್ಲಿ ವೃತ್ತಾಕಾರದ ಒಳರಚನೆಗಳ ಜೋಡಣೆ ನಿರುಪಯುಕ್ತ; ಯಾಕೆಂದರೆ ವೃತ್ತಗಳನ್ನು ಅಕ್ಕಪಕ್ಕದಲ್ಲಿ ಸಾಲಾಗಿ ಜೋಡಿಸಿದಾಗ ನಡುನಡುವೆ ಜಾಗ ಉಳಿಯುತ್ತದೆ. ಹಾಗೆಯೇ ತ್ರಿಕೋನ ಮತ್ತು ಚೌಕಾಕಾರದ ಒಳರಚನೆಗಳ ಜೋಡಣೆಯೂ ನಿರುಪಯುಕ್ತ. ಯಾಕೆಂದರೆ ಸರಳರೇಖಾ ಜೋಡಣೆಗೆ ಇವು ಸೂಕ್ತವಾದರೂ, ವೃತ್ತಾಕಾರದ ಜೋಡಣೆಗೆ ಹೊಂದಿಕೊಳ್ಳುವುದಿಲ್ಲ. ಆದರೆ ಷಟ್ಪದಿ ಕೋಶಗಳನ್ನು ಯಾವುದೇ ಆಕಾರದಲ್ಲಿ ಜೋಡಿಸಿದರೂ ಅವು ಬಲಶಾಲಿ ರಚನೆಗಳು.
ಹಲ್ಲಿಗಳ ಹಿಡಿತ: ಹಲ್ಲಿ(ಗೆಕೊ)ಗಳು ಯಾವುದೇ ಮೇಲ್ಮೈಗೆ ಅಂಟಿಕೊಂಡು, ಗುರುತ್ವಾಕರ್ಷಣಾ ಬಲಕ್ಕೆ ಸಡ್ಡು ಹೊಡೆಯುತ್ತವೆ. ಅವುಗಳ ಪಾದಗಳ ಸೂಕ್ಷ್ಮ ರಚನೆಗಳಿಂದ ಈ ವಿಸ್ಮಯ ಸಾಧ್ಯವಾಗಿದೆ. ಪಾದಗಳಲ್ಲಿರುವ ಲಕ್ಷಗಟ್ಟಲೆ ಸೂಕ್ಷ್ಮ ರೋಮಗಳು ಹಲವು ಅತಿಸೂಕ್ಷ್ಮ ರೋಮಗಳಾಗಿ ಕವಲೊಡೆದಿರುತ್ತವೆ. ಇದರಿಂದಾಗಿ ರೋಮಗಳ ಮೇಲ್ಮೈ ವಿಸ್ತೀರ್ಣ ಹಲವು ಪಟ್ಟು ಹೆಚ್ಚಾಗಿ, ಯಾವುದೇ ತಳದ ಜೊತೆ ಬಿಗಿಯಾದ ಬಂಧ ಉಂಟಾಗುತ್ತದೆ. ಈ ಬಂಧವು ಹಲ್ಲಿಯ ದೇಹತೂಕದ ಹಲವು ಪಟ್ಟು ಜಾಸ್ತಿ ತೂಕವನ್ನು ಆಧರಿಸಬಲ್ಲದು. ಈ ವಿಷೇಷ ಗುಣ ಆಧರಿಸಿ, “ಗೆಕೊ ಟೇಪ್” ಎಂಬ ಬಲವಾಗಿ ಅಂಟಿಕೊಳ್ಳುವ ಟೇಪ್ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಇದನ್ನು ಒಮ್ಮೆ ಮಾತ್ರ ಬಳಸಿ ಎಸೆಯಬೇಕು. ಯಾಕೆಂದರೆ ಹಲ್ಲಿಯ ಪಾದಗಳ ಸೂಕ್ಷ್ಮಾತಿಸೂಕ್ಷ್ಮ ರೋಮಗಳ ಮರುಹುಟ್ಟು ಸಾಧ್ಯ; ಆದರೆ ಕೃತಕ ರೋಮಗಳ ಮರುಹುಟ್ಟು ಅಸಾಧ್ಯ.
ಹಕ್ಕಿ ತಲೆಬುರುಡೆ ಆಕಾರದ ಷೂ: ಡಚ್ ವಿನ್ಯಾಸಕಾರ ಮರಿಕ್ ರಟ್ಸ್ಮಾ ಮತ್ತು ಆರ್ಕಿಟೆಕ್ಟ್ ಕೊಸ್ಟಿಕಾ ಸ್ಪಾಹೊ ವಿನ್ಯಾಸಗೊಳಿಸಿದ ಹೈಹೀಲ್ಡ್ (ಏರುಹಿಮ್ಮಡಿ) ಷೂ ಹಲವರ ಗಮನ ಸೆಳೆದಿದೆ. ಏನಪ್ಪ ಇದರ ವಿಶೇಷ? ಇದು ಬಹಳ ಹಗುರ, ಗಡುಸು ಮತ್ತು ಆಕರ್ಷಕ. ಇದರ ವಿನ್ಯಾಸಕ್ಕೆ ಸ್ಫೂರ್ತಿ ಒಂದು ಹಕ್ಕಿಯ ತಲೆಬುರುಡೆ.
ಗೆರ್ಕಿನ್, ಲಂಡನ್: ಮಹಾನಗರ ಲಂಡನಿನ ಪ್ರಸಿದ್ಧ ವಾಣಿಜ್ಯ ಬಹುಮಹಡಿ ಕಟ್ಟಡ ಸೈಂಟ್ ಮೇರಿ ಏಕ್ಸ್. ಇದರ ಜನಪ್ರಿಯ ಹೆಸರು ಗೆರ್ಕಿನ್. ಇದು ನೊರ್ಮನ್ ಫೋಸ್ಟರ್ ಮತ್ತು ಅರುಪ್ ಗ್ರೂಪ್ ವಿನ್ಯಾಸಗೊಳಿಸಿದ ಕಟ್ಟಡ. ೧೮೦ ಮೀ. ಎತ್ತರದ ಈ ಗಗನಚುಂಬಿ ನಿರ್ಮಾಣವಾದದ್ದು ೨೦೦೪ರಲ್ಲಿ. ಇದರ ಗಾಳಿಯಾಡುವಿಕೆ ವ್ಯವಸ್ಥೆಗೆ ಸ್ಫೂರ್ತಿ ಸಮುದ್ರದ ಸ್ಪಂಜುಗಳು ಮತ್ತು ಅನಿಮೋನುಗಳು. ಅವು ತಮ್ಮ ದೇಹದೊಳಗೆ ಸಮುದ್ರದ ನೀರು ಹರಿದು ಹೋಗಲು ಬಿಡುತ್ತವೆ; ಆಗ ಅದರಲ್ಲಿರುವ ಪೋಷಕಾಂಶ ಸೇವಿಸುತ್ತವೆ. ಗರ್ಕಿನ್ ಗಗನಚುಂಬಿಯ ರಚನೆಯಲ್ಲಿ ಅದೇ ರೀತಿಯಲ್ಲಿ ಗಾಳಿಯಾಡಲು ವ್ಯವಸ್ಥೆ ಮಾಡಿರುವ ಕಾರಣ ಕಟ್ಟಡವು ಯಾವಾಗಲೂ ತಂಪಾಗಿರುತ್ತದೆ.
ಚೀನಾದ ಹಕ್ಕಿಗೂಡು ಆಕಾರದ ಕಟ್ಟಡ: ಚೀನಾದ ರಾಜಧಾನಿ ಬೀಜಿಂಗಿನ ನ್ಯಾಷನಲ್ ಸ್ಟೇಡಿಯಂಗೆ ಇನ್ನೊಂದು ಹೆಸರು ಬರ್ಡ್ಸ್ ನೆಸ್ಟ್. ಯಾಕೆಂದರೆ ಇದರ ಆಕಾರಕ್ಕೆ ಸ್ಫೂರ್ತಿ ಹಕ್ಕಿಗೂಡು. ಜಾಕಸ್ ಹರ್ಜೊಗ್ ಮತ್ತು ಇತರ ನಾಲ್ವರು ಜೊತೆಗೂಡಿ ವಿನ್ಯಾಸಗೊಳಿಸಿದ ಬೃಹತ್ ಕಟ್ಟಡ ಇದು. ಇದರ ನಿರ್ಮಾಣ ವೆಚ್ಚ ೫೦೦ ಮಿಲಿಯ ಡಾಲರ್ (೩,೫೦೦ ಕೋಟಿ ರೂಪಾಯಿ). ಗಮನಿಸಿ, ಪ್ರಕೃತಿಯ ಹಕ್ಕಿಗೂಡಿನ ನಿರ್ಮಾಣಕ್ಕೆ ಚಿಕ್ಕಾಸೂ ವೆಚ್ಚವಿಲ್ಲ.
ಮಿಂಚುಳ್ಳಿ ಕೊಕ್ಕಿನಂತಹ ಬುಲೆಟ್ ರೈಲಿನ ಮೂತಿ: ಜಪಾನಿನ ಬುಲೆಟ್ ರೈಲು ಅದರ ವಾಯುವೇಗಕ್ಕಾಗಿ ಜಗತ್ಪಸಿದ್ಧ. ಇದರ ಮೂತಿಯ ಆಕಾರಕ್ಕೆ ಸ್ಫೂರ್ತಿ ಮಿಂಚುಳ್ಳಿಯ ಕೊಕ್ಕು! ಪಶ್ಚಿಮ ಜಪಾನ್ ರೈಲ್ವೇ ಕಂಪೆನಿಯ ಇಂಜಿನಿಯರ್ ಇಜಿ ನಕಾಟ್ಸು ಒಬ್ಬ ಪಕ್ಷಿಪ್ರೇಮಿ. ಮಿಂಚುಳ್ಳಿ ನೀರನ್ನು ಚಿಮ್ಮಿಸದೆ ನೀರಿನೊಳಗೆ ಧುಮ್ಮಿಕ್ಕುವುದನ್ನು ಅವರು ಗಮನಿಸಿದ್ದರು. ರೈಲುಗಳು ಉಂಟು ಮಾಡುವ ಶಬ್ದ ಕಡಿಮೆ ಮಾಡಲು ಅವರು ಬಳಸಿದ್ದು ಅದೇ ತತ್ವವನ್ನು. ಕಡಿಮೆ ಪ್ರತಿರೋಧದ ಮಾಧ್ಯಮವಾದ ಗಾಳಿಯಿಂದ, ಅಧಿಕ ಪ್ರತಿರೋಧದ ಮಾಧ್ಯಮವಾದ ನೀರಿಗೆ ಮಿಂಚುಳ್ಳಿಗಳು ವೇಗವಾಗಿ ಪ್ರವೇಶಿಸುತ್ತವೆ. ಮಿಂಚುಳ್ಳಿಗಳ ಕೊಕ್ಕಿನ ಚೂಪಾದ ಆಕಾರ ಈ ಪ್ರವೇಶಕ್ಕೆ ಅತ್ಯಂತ ಸೂಕ್ತ. ಬುಲೆಟ್ ರೈಲ್ ಕೂಡ ಕಡಿಮೆ ಪ್ರತಿರೋಧದ ವಾತಾವರಣದ ಗಾಳಿಯಿಂದ ಸುರಂಗದೊಳಗಿನ ಅಧಿಕ ಪ್ರತಿರೋಧದ ಗಾಳಿಯನ್ನು ಪ್ರವೇಶಿಸಿ ಮುನ್ನುಗ್ಗುತ್ತದೆ. ಅದಕ್ಕಾಗಿ ಶಿಂಕಾನ್-ಸೆನ್ ಬುಲೆಟ್ ರೈಲಿನ ಮೂತಿಯನ್ನು ಮಿಂಚುಳ್ಳಿಯ ಕೊಕ್ಕಿನ ಆಕಾರದಲ್ಲಿ ರೂಪಿಸಿದರು ನಕಾಟ್ಸು.
ಹೀಗೆ, ನಮ್ಮ ಹಲವಾರು ಆವಿಷ್ಕಾರಗಳಿಗೆ ಪ್ರಕೃತಿಯೇ ಸ್ಫೂರ್ತಿ. ನಾವಾದರೋ, ಚಿಕ್ಕಪುಟ್ಟ ಆವಿಷ್ಕಾರಗಳಿಗೂ ಪೇಟೆಂಟ್ ಪಡೆದು, ಮುಂದೆ ಹಲವಾರು ವರುಷ ರಾಯಧನ ಗಳಿಸುತ್ತೇವೆ. ಪ್ರಕೃತಿ ಯಾವುದಕ್ಕೂ ಪೇಟೆಂಟ್ ಮಾಡಿಕೊಳ್ಳೋದಿಲ್ಲ; ರಾಯಧನವನ್ನೂ ಕೇಳೋದಿಲ್ಲ. ಹಾಗಂತ, ನಮಗೆ ಕೃತಜ್ನತೆ ಇರಬೇಕಲ್ಲವೇ? ಅದಕ್ಕಾಗಿ ಇಂತಹ ಅದ್ಭುತ ಆವಿಷ್ಕಾರಗಳಿಗೆ ಸ್ಫೂರ್ತಿಯಾದ ಪ್ರಕೃತಿಗೆ ರಾಯಧನ ಪಾವತಿಸೋಣ: ಇಲ್ಲಿಯ ಪ್ರತಿಯೊಂದು ಪ್ರಾಣಿ-ಪಕ್ಷಿ-ಸಸ್ಯಸಹಿತ ಜೀವಸಂಕುಲವನ್ನು ಉಳಿಸುವ ಮೂಲಕ.
ಫೋಟೋ: ಜೇನುಹುಟ್ಟಿನ ಷಟ್ಪದಿ ಕೋಶ ಜೋಡಣೆ ಅನುಕರಿಸಿದ ಗಾಳಿರಹಿತ ಟಯರ್