ಶಶಿಶೇಖರ್ ಪಾಠಕ್ ಮುಂಬೈಯಲ್ಲಿ ತಮ್ಮ ಬೈಸಿಕಲಿನಲ್ಲಿ ಸವಾರಿ ಹೊರಟರೆ, ಪ್ರತಿಯೊಂದು ಟ್ರಾಫಿಕ್ ಲೈಟ್ ಜಂಕ್ಷನಿನಲ್ಲಿ ಜನರು ಕುತೂಹಲದಿಂದ ನೋಡುವುದು ಅವರ ಬೈಸಿಕಲನ್ನು. ಆಗ “ಇದು ಬಿದಿರಿನ ಬೈಸಿಕಲ್” ಎಂದು ಶಶಿಶೇಖರ್ ಹೇಳುತ್ತಿರುವಂತೆ ಅಚ್ಚರಿಯಿಂದ ಕಣ್ಣರಳಿಸುತ್ತಾರೆ ನೋಡುಗರು.
“ಬಿದಿರಿನಿಂದ ಬೈಸಿಕಲ್ ಮಾಡಲಿಕ್ಕಾಗುತ್ತದೆಯೇ?” ಎನ್ನುತ್ತಾ ನೋಡುಗರು ಇವರ ಬೈಸಿಕಲನ್ನು ಕೈಯಿಂದ ತಟ್ಟಿ ನೋಡುತ್ತಾರೆ. ಅದು ನಿಜಕ್ಕೂ ಬಿದಿರಿನ ಬೈಸಿಕಲ್ ಎಂಬುದು ಖಚಿತವಾಗುತ್ತಿದ್ದಂತೆ, ನೋಡುಗರ ಮುಖದಲ್ಲೊಂದು ಸಮಾಧಾನದ ಭಾವ.
ಇದೀಗ ಐದು ವರುಷಗಳಿಂದ ಶಶಿಶೇಖರ್ ಬಿದಿರಿನ ಬೈಸಿಕಲುಗಳನ್ನು ತಯಾರಿಸುತ್ತಿದ್ದಾರೆ. ಈ ಗೃಹ ಉದ್ದಿಮೆಗೆ ಅವರಿಟ್ಟ ಹೆಸರು “ಬಾಂಬೂಚಿ”.
ಇದೆಲ್ಲ ಶುರುವಾದದ್ದು ೨೦೧೩ರಲ್ಲಿ – ಪುಣೆಯ ದಕ್ಷಿಣ ದಿಕ್ಕಿನಲ್ಲಿ ಭೋರ್ ತಾಲೂಕಿನ ಮೂಲೆಯಲ್ಲಿ ಶಶಿಶೇಖರ್ ಒಂದು ತುಂಡು ಜಮೀನು ಖರೀದಿಸಿದಾಗ. ಅಲ್ಲಿ ಎತ್ತಕಂಡರತ್ತ ಬಿದಿರುಮೆಳೆಗಳು. ಶಶಿಶೇಖರ್ ಮತ್ತು ಪತ್ನಿ ದೇವಿಕಾ ಈ ಬಿದಿರನ್ನು ಚೆನ್ನಾಗಿ ಬಳಸಲು ನಿರ್ಧರಿಸಿದರು.
ಬಿದಿರಿನಿಂದ ಮೇಜು – ಕುರ್ಚಿ – ವಸ್ತುಗಳನ್ನಿಡುವ ನಿಲುಗಂಬ ತಯಾರಿಸೋಣ ಎಂಬ ಯೋಚನೆ ಅವರಿಗೆ. ಆದರೆ, ಈಗಾಗಲೇ ಹಲವಾರು ಘಟಕಗಳು ಇವನ್ನು ತಯಾರಿಸುತ್ತಿರುವ ಕಾರಣ ಆ ಯೋಚನೆ ಕೈಬಿಟ್ಟರು. ಅದೊಂದು ದಿನ ಟೆಲಿವಿಷನ್ ಕಾರ್ಯಕ್ರಮ ನೋಡುತ್ತಿದ್ದಾಗ ಒಂದು ಬಿದಿರಿನ ಬೈಸಿಕಲ್ ಕಾಣಿಸಿತು. ತಕ್ಷಣವೇ ಪಾಠಕ್ ದಂಪತಿ ನಿರ್ಧರಿಸಿದರು: ಇದುವೇ ನಮ್ಮ ಮುಂದಿನ ಯೋಜನೆ ಎಂದು.
ಭಾರತೀಯ ವಾಯುದಳದ ಮಾಜಿ ಪೈಲೆಟ್ ಶಶಿಶೇಕರ್, ಈಗಲೂ ಆಗಾಗ ಬೇರೆ ವಿಮಾನಗಳ ಚಾಲನೆ ಮಾಡುತ್ತಿದ್ದಾರೆ; ಅವರ ಬಿಡುವಿನ ಸಮಯವೆಲ್ಲ ಬಿದಿರಿನ ಬೈಸಿಕಲ್ ತಯಾರಿಗೆ ಮೀಸಲು.
“ಮುಂಚಿನಿಂದಲೂ ಮನೆಕಟ್ಟಲಿಕ್ಕಾಗಿ ಬಿದಿರನ್ನು ಬಳಸುತ್ತಿದ್ದಾರೆ. ಯಾಕೆಂದರ ಅದು ಬಾಳಿಕೆ ಬರುತ್ತದೆ. ಬಿದಿರಿನಿಂದ ಬೈಸಿಕಲನ್ನು ಮೊದಲು ತಯಾರಿಸಿದ್ದು ೧೮೯೦ರಲ್ಲಿ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಬಿದಿರಿನ ಸೈಕಲ್ ಚಾಲ್ತಿಯಲ್ಲಿತ್ತು. ಅನಂತರ ಉಕ್ಕು ಮತ್ತು ಅಲ್ಯುಮಿನಿಯಂ ಕಚ್ಚಾವಸ್ತುವಾಗಿ ಜಾಸ್ತಿ ಬಳಕೆಗೆ ಬಂತು; ಬೈಸಿಕಲ್ ಉತ್ಪಾದಕರಿಗೆ ಇದುವೇ ಅನುಕೂಲ ಎನಿಸಿತು. ಇತ್ತೀಚೆಗೆ ಕಾರ್ಬನ್ ಫೈಬರ್ ಮತ್ತು ಅತ್ಯುತ್ತಮ ಅಂಟು ಗ್ಲೂ ಬಳಕೆಗೆ ಬಂದಿವೆ. ಇದರಿಂದಾಗಿ ಬಿದಿರಿನಿಂದ ಗಡುಸಾದ ಸೈಕಲ್ ತಯಾರಿಸಲು ಸಾಧ್ಯವಾಗಿದೆ” ಎಂದು ವಿವರಿಸುತ್ತಾರೆ ಶಶಿಶೇಖರ್.
ತನ್ನ ಜಮೀನಿಗೆ ಆಗಾಗ ಹೋಗಿಬರುತ್ತಿದ್ದ ಶಶಿಶೇಖರ್ಗೆ ಬಿದಿರಿನ ಬೈಸಿಕಲಿನಿಂದ ಆಗುವ ಇನ್ನೊಂದು ಪ್ರಯೋಜನವೂ ಕ್ರಮೇಣ ಅರ್ಥವಾಯಿತು. ಅಲ್ಲಿನ ಜನರು ವರುಷದಲ್ಲಿ ಐದು ತಿಂಗಳ ಅವಧಿ ಭತ್ತದ ಬೇಸಾಯದಲ್ಲಿ ತೊಡಗಿಕೊಳ್ಳುತ್ತಿದ್ದರು. ವರುಷದ ಉಳಿದ ಅವಧಿಯಲ್ಲಿ ಅವರಿಗೆ ಯಾವುದೇ ಕೆಲಸವಿರಲಿಲ್ಲ. ಅವರನ್ನು ಈ ಚಟುವಟಿಕೆಯಲ್ಲಿ ತೊಡಗಿಸುವ ಅವಕಾಶ ಕೂಡಿಬಂದಿತ್ತು. ಯಾಕೆಂದರೆ ಅವರು ಶಶಿಶೇಖರ್ ಬಳಿ ಮತ್ತೆಮತ್ತೆ ಕೇಳುತ್ತಿದ್ದರು, “ಮುಂಬೈ ಅಥವಾ ಪುಣೆಯಲ್ಲಿ ನಮಗೇನಾದರೂ ಸಂಬಳದ ಕೆಲಸ ಕೊಡಿಸಿ” ಎಂದು.
ಅದು ಈಗಲೂ ಮೊಬೈಲ್ ಫೋನಿನ ಸಂಪರ್ಕವಿಲ್ಲದ ಮೂಲೆಯ ಹಳ್ಳಿ. ಅಲ್ಲಿ ಬೆಳೆದ ಬಿದಿರನ್ನು ಕಟ್ಟಡ ಕಂಟ್ರಾಕ್ಟರುಗಳಿಗೆ ಹಳ್ಳಿಗರು ಅಗ್ಗದ ಬೆಲೆಗೆ ಮಾರುತ್ತಿದ್ದರು. ತನಗೆ ಬೇಕಾಗಿದ್ದ ಗುಣಮಟ್ಟದ ಬಿದಿರು ಬೆಳೆದು ಕೊಟ್ಟರೆ ಉತ್ತಮ ಬೆಲೆಗೆ ಖರೀದಿಸುವುದಾಗಿ ಶಶಿಶೇಖರ್ ಹಳ್ಳಿಗರಿಗೆ ತಿಳಿಸಿದರು.
ಬಿದಿರಿನ ಬೈಸಿಕಲ್ ತಯಾರಿಯಲ್ಲಿ ಪಾಠಕ್ ದಂಪತಿಯ ಮೊದಲ ಹೆಜ್ಜೆ: ಒಂದು ಬೈಸಿಕಲ್ ಹೇಗೆ ಚಲಿಸುತ್ತದೆಂದು ಅರ್ಥ ಮಾಡಿಕೊಳುವುದು ಮತ್ತು ಒಂದು ಬೈಸಿಕಲ್ ತಯಾರಿಸಲು ಅಗತ್ಯವಾದ ಬಿಡಿಭಾಗಗಳನ್ನು ಸಿದ್ಧವಾಗಿಡುವುದು. ಕೆಲವು ಬಿಡಿಭಾಗಗಳನ್ನು ಸ್ಥಳೀಯವಾಗಿ ತಯಾರಿಸಬಹುದು ಮತ್ತು ಸೀಟು ಹಾಗೂ ಗೇರುಗಳನ್ನು ಬೇರೆ ಉತ್ಪಾದಕರಿಂದ ಖರೀದಿಸಬಹುದೆಂದು ಶಶಿಶೇಖರ್ ನಿರ್ಧರಿಸಿದರು. ಗುಣಮಟ್ಟದಲ್ಲಿ ತಮ್ಮ ಬೈಸಿಕಲ್ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೈಸಿಕಲುಗಳನ್ನು ಸರಿಗಟ್ಟಬೇಕೆಂಬುದು ಅವರ ಆಶಯ.
ಮೊದಲ ಬಿದಿರಿನ ಬೈಸಿಕಲ್
ಅಂತೂ, ಮೊದಲ ಬಿದಿರಿನ ಬೈಸಿಕಲ್ ತಯಾರಿಸಲು ಶಶಿಶೇಖರ್ ಅವರಿಗೆ ತಗಲಿದ ಅವಧಿ ಒಂದು ವರುಷ. ಅದರಲ್ಲಿ ಒಂದೇ ವೇಗಮಿತಿ ಲಭ್ಯ ಮತ್ತು ಒಂದೇ ಬ್ರೇಕ್ (ಮುಂದಿನ ಚಕ್ರಕ್ಕೆ) ಲಭ್ಯ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಎರಡನೇ ಬಿದಿರಿನ ಬೈಸಿಕಲ್ ಸಿದ್ಧವಾಯಿತು – ಇದಕ್ಕೆ ಗೇರುಗಳು, ಹೈಡ್ರಾಲಿಕ್ ಬ್ರೇಕುಗಳು ಮತ್ತು ಷಾಕ್-ಅಬ್-ಸಾರ್ಬರುಗಳನ್ನು ಜೋಡಿಸಿದ್ದರು. ಇದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂತಹದೇ ಬೈಸಿಕಲುಗಳಿಗೆ ಸರಿಸಮವಾಗಿತ್ತು.
“ಆದರೆ ಇದು ಮಾರುಕಟ್ಟೆಯಲ್ಲಿ ಸಿಗುವ ಇತರ ಬೈಸಿಕಲುಗಳಿಗಿಂತ ಬಹಳ ಹಗುರವಾಗಿತ್ತು. ಜೊತೆಗೆ, ಬಟ್ಟೆಯಲ್ಲಿ ಎಂಬ್ರಾಯಿಡರಿ ಕೆಲಸ ಮಾಡಿದಂತೆ ಇದನ್ನೂ ಬಹಳ ನಾಜೂಕಿನಿಂದ ತಯಾರಿಸಲಾಗಿತ್ತು. ಇಂತಹ ಬೈಸಿಕಲುಗಳನ್ನು ಬಹುಸಂಖ್ಯೆಯಲ್ಲಿ ಉತ್ಪಾದಿಸುವುದು ಅಥವಾ ಲಾಭ ಗಳಿಸುವುದು ನಮ್ಮ ಉದ್ದೇಶವಾಗಿರಲೇ ಇಲ್ಲ. ನಮ್ಮ ಬೈಸಿಕಲಿಗೆ ಮೊದಲನೆಯ ಗ್ರಾಹಕ ಬಂದಾಗ, ನಮ್ಮ ಬೈಸಿಕಲ್ ಮಾರುಕಟ್ಟೆಗೆ ಲಗ್ಗೆಯಿಡಲು ತಯಾರಾಯಿತೆಂದು ತಿಳಿದೆವು” ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಶಶಿಶೇಖರ್.
ಗ್ರಾಹಕರಿಗೆ ಬೇಕಾದಂತಹ ಬಿದಿರಿನ ಬೈಸಿಕಲ್ ತಯಾರಿಸುವುದರಲ್ಲಿ ಶಶಿಶೇಖರ್ ಸಿದ್ಧಹಸ್ತರು. ಆರು ಅಡಿಗಳಿಗಿಂತ ಎತ್ತರದ ಗ್ರಾಹಕ, ಬೆನ್ನು ನೋವಿನಿಂದ ಸಂಕಟ ಪಡುವ ಗ್ರಾಹಕ – ಇಂತಹ ವಿಶೇಷ ಗ್ರಾಹಕರಿಗೆ ಸೂಕ್ತವಾದ ಬೈಸಿಕಲನ್ನು ಸಿದ್ಧಪಡಿಸುತ್ತಾರೆ ಅವರು. ಈಗೀಗ ಒಂದೂವರೆ ತಿಂಗಳಿಗೊಂದು ಬಿದಿರಿನ ಬೈಸಿಕಲ್ ಅಂತಿಮಗೊಳಿಸಿ, “ಮೇಡ್ ಇನ್ ಇಂಡಿಯಾ” ಎಂದು ಅಚ್ಚು ಹಾಕಲು ಸಾಧ್ಯವಾಗುತ್ತಿದೆ ಎಂಬುದು ಅವರ ಅಭಿಮಾನದ ಮಾತು.
ಗುಣಮಟ್ಟದಲ್ಲಿ ರಾಜಿಯಿಲ್ಲ
ಶಶಿಶೇಖರ್ ತಾವು ತಯಾರಿಸುವ ಬಿದಿರಿನ ಬೈಸಿಕಲಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ಅತ್ಯುತ್ತಮ ಗುಣಮಟ್ಟದ ಬಿಡಿಭಾಗಗಳನ್ನೇ ಬೈಸಿಕಲಿಗೆ ಜೋಡಿಸುತ್ತಾರೆ. ಜೊತೆಗೆ, ಬೈಸಿಕಲಿಗೆ ಬೇಕಾದ ಬಿದಿರನ್ನು ಜೋಪಾನವಾಗಿ ಸಂಸ್ಕರಿಸುತ್ತಾರೆ. ಅದಕ್ಕಾಗಿ ಅವರಿಂದ ಸ್ಥಳೀಯ ಹಳ್ಳಿಗರ ಬಿದಿರಿನ ಪಾರಂಪರಿಕ ಜ್ನಾನದ ಸದ್ಬಳಕೆ. ದೀಪಾವಳಿ ಸಮಯದಲ್ಲಿ ಬಿದಿರನ್ನು ಕಡಿದು, ೨ – ೩ ವಾರ ಒಣಗಿಸುವುದು ಮೊದಲ ಹಂತ. ಅನಂತರ ಅದನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ಆಯ್ಕೆ ಮಾಡುತ್ತಾರೆ. ಸೂಕ್ತವಾಗಿ ಮಾಗಿದ ಬಿದಿರು ಕೀಟಗಳ ಧಾಳಿಗೆ ನಿರೋಧ ಗುಣ ಹೊಂದಿರುತ್ತದೆ. ಆದ್ದರಿಂದ ಅದನ್ನು ಬೈಸಿಕಲಿನ ಫ್ರೇಮಿಗೆ ಅಳವಡಿಸುವುದು ಸೂಕ್ತ.
“ಚೀನಾದ ಮಾಲು” ಎಂಬ ರೀತಿಯ ಕಳಪೆ ಗುಣಮಟ್ಟದ ಬಿದಿರಿನ ಬೈಸಿಕಲ್ ತಯಾರಿಸುವುದು ತನಗೆ ಇಷ್ಟವಿಲ್ಲ ಎಂದು ಸ್ಪಷ್ಟ ಪಡಿಸುತ್ತಾರೆ ಶಶಿಶೇಖರ್. ಅವರು ಹಲವು ಗೇರಿನ ಬಿದಿರಿನ ಬೈಸಿಕಲುಗಳು, ವಿದ್ಯುತ್ ಚಾಲಿತ ಬಿದಿರಿನ ಬೈಸಿಕಲ್ ಮತ್ತು ಇಬ್ಬರು-ಚಲಾಯಿಸುವ (ಟಾನ್-ಡೆಮ್) ಬಿದಿರು ಬೈಸಿಕಲ್ ರೂಪಿಸಿದ್ದಾರೆ.
“ನಾವಿಬ್ಬರು ಟಾನ್-ಡೆಮ್ ಬೈಸಿಕಲ್ ಚಲಾಯಿಸಿಕೊಂಡು ಹೋಗುವಾಗ ಜನರು ಮೋಟರುಬೈಕುಗಳಲ್ಲಿ ಹಿಂಬಾಲಿಸುತ್ತಾ ಬಂದು ಫೋಟೋ ತೆಗೆಯುತ್ತಾರೆ. ಅದನ್ನೂ ಬಿದಿರಿನಿಂದ ತಯಾರಿಸಿದ್ದು ಎಂಬುದು ಹಲವರಿಗೆ ಆಶ್ಚರ್ಯದ ಸಂಗತಿ” ಎಂದು ಖುಷಿಯಿಂದ ತಿಳಿಸುತ್ತಾರೆ ಶಶಿಶೇಖರ್.
ಕಳೆದ ಐದು ವರುಷಗಳಲ್ಲಿ ವಿದೇಶಗಳ ಹಲವು ಗ್ರಾಹಕರಿಗೆ ತಮ್ಮ ಬಿದಿರಿನ ಬೈಸಿಕಲುಗಳನ್ನು ರಫ್ತು ಮಾಡಿದ್ದಾರೆ ಶಶಿಶೇಖರ್. ಲಡಕ್ನಂತಹ ವಿಪರೀತ ಹವಾಮಾನದ ಪ್ರದೇಶಗಳಲ್ಲಿಯೂ ಅವು ಸುತ್ತಾಡಿವೆ. ಅವರು ತಯಾರಿಸುವ ಸಿಂಗಲ್-ಸ್ಪೀಡಿನ ಬಿದಿರಿನ ಬೈಸಿಕಲಿನ ಬೆಲೆ ರೂ.೧.೦೫ ಲಕ್ಷ. ಟಾನ್-ಡೆಮ್ ಬಿದಿರಿನ ಬೈಸಿಕಲಿನ ಬೆಲೆ ರೂ.೨.೫ ಲಕ್ಷ. ತಮ್ಮ ಗ್ರಾಹಕರು ತಮ್ಮ ಬೈಸಿಕಲನ್ನು ತಾವೇ ಜೋಡಿಸಲು ಅವರು ಪ್ರೋತ್ಸಾಹಿಸುತ್ತಾರೆ; ಅದಕ್ಕಾಗಿ ಇಂಟರ್-ನೆಟ್ ಮೂಲಕ ಸಲಹೆಸೂಚನೆ, ಮಾರ್ಗದರ್ಶನ ನೀಡುತ್ತಾರೆ.
ಶಶಿಶೇಖರ್-ದೇವಿಕಾ ದಂಪತಿಯ ಐದು ವರುಷಗಳ ಪರಿಶ್ರಮದ ಫಲ: ಗುಣಮಟ್ಟದಲ್ಲಿ ಜಗತ್ತಿನ ಯಾವುದೇ ಬಿದಿರನ ಬೈಸಿಕಲನ್ನು ಸರಿಗಟ್ಟುವ ಬಿದಿರಿನ ಬೈಸಿಕಲಿನ ತಯಾರಿ. ಅವರ ಆತ್ಮವಿಶ್ವಾಸ ಹೇಗಿದೆಯೆಂದರೆ, ತಮ್ಮ ಬೈಸಿಕಲಿನ ಫ್ರೇಮಿಗೆ ಐದು-ವರುಷಗಳ ವಾರಂಟಿ ನೀಡುತ್ತಾರೆ. ಯಾಕೆಂದರೆ, ಅವರೇ ಓಡಿಸುತ್ತಿರುವ ಮೊದಲ ಬಿದಿರಿನ ಬೈಸಿಕಲ್ ಐದು ವರುಷ ಪೂರೈಸಿದೆ. ಆದ್ದರಿಂದಲೇ ಅವರು ವಿಶ್ವಾಸ ತುಂಬಿದ ಧ್ವನಿಯಲ್ಲಿ ಹೇಳುತ್ತಾರೆ, “ನನ್ನ ಮಾತನ್ನು ನಂಬಿ – ಈ ಬಿದಿರಿನ ಬೈಸಿಕಲುಗಳನ್ನು ನಾವು ಮುಂದಿನ ತಲೆಮಾರಿಗೆ ಹಸ್ತಾಂತರಿಸಬಹುದು.”