ಝೆನ್ ಪ್ರಸಂಗ: ಗುರುವಿನ ಶಿಷ್ಯನಾದ ಕಳ್ಳ

ಗುರು ಶಿಚಿರಿ ಸೂತ್ರಗಳನ್ನು ಪಠಿಸುತ್ತಿದ್ದಾಗ, ಕಳ್ಳನೊಬ್ಬ ಒಳ ಬಂದ. ಬಂದವನೇ ಚೂರಿ ತೋರುಸುತ್ತಾ ಹೆದರಿಸಿದ, “ನಿನ್ನಲ್ಲಿರುವ ಹಣವನ್ನೆಲ್ಲಾ ಕೊಡು. ಇಲ್ಲದಿದ್ದರೆ ನಿನ್ನ ಹೆಣ ಬೀಳುತ್ತದೆ.”

“ಅಷ್ಟೇ ತಾನೇ? ಹಣ ಆ ಪೆಟ್ಟಿಗೆಯಲ್ಲಿದೆ, ತೆಗೆದುಕೋ” ಎಂದು ಕೈಯೆತ್ತಿ ಪೆಟ್ಟಿಗೆ ತೋರಿಸಿದ ಶಿಚಿರಿ, ಸೂತ್ರಗಳ ಪಠಣ ಮುಂದುವರಿಸಿದ.

ಕೆಲವು ನಿಮಿಷಗಳು ಸರಿದವು. ಶಿಚಿರಿ ತಲೆಯೆತ್ತಿ ಕಳ್ಳನನ್ನು ಉದ್ದೇಶಿಸಿ ಹೇಳಿದ, “ಎಲ್ಲಾ ಹಣ ತೆಗೆದುಕೊಳ್ಳಬೇಡ. ನಾಳೆ ಕಂದಾಯ ಕಟ್ಟಲಿಕ್ಕಿದೆ. ಸ್ವಲ್ಪ ಹಣ ಇಟ್ಟು ಹೋಗು.”

ಆ ಕಳ್ಳನಿಗೆ ಏನೆನ್ನಿಸಿತೋ! ಸ್ವಲ್ಪ ಹಣ ಪೆಟ್ಟಿಗೆಯಲ್ಲಿ ಉಳಿಸಿ, ಉಳಿದದ್ದನ್ನೆಲ್ಲ ತನ್ನ ಚೀಲಕ್ಕೆ ತುಂಬಿಸಿ ಹೊರಟ. ಆಗ ಶಿಚಿರಿ ಕೇಳಿದ, “ಎಂಥಾ ಮನುಷ್ಯನಯ್ಯಾ! ಉಡುಗೊರೆ ಕೊಟ್ಟವನಿಗೆ ನೀನು ಕೃತಜ್ನತೆ ಸಲ್ಲಿಸಬೇಕಲ್ಲವೇ?”

ಶಿಚಿರಿಯ ಉಡುಗೊರೆಗೆ ಧನ್ಯವಾದ ಹೇಳಿ ಕಳ್ಳ ಹೊರಟು ಹೋದ. ಕೆಲವು ದಿನಗಳ ನಂತರ ಬೇರೊಂದು ಕಡೆ ಕಳ್ಳತನ ಮಾಡುವಾಗ ಆತ ಪೊಲೀಸರಿಗೆ ಸಿಕ್ಕಿಬಿದ್ದ. ಶಿಚಿರಿಯ ಆಶ್ರಮದಲ್ಲಿ ಮಾಡಿದ ಕಳ್ಳತನದ ಸಹಿತ, ತನ್ನೆಲ್ಲ ಕಳ್ಳತನಗಳನ್ನು ತಿಳಿಸಿ, ತಪ್ಪೊಪ್ಪಿಕೊಂಡ. ಆ ಕಳ್ಳನ ವಿಚಾರಣೆಯ ಸಂದರ್ಭದಲ್ಲಿ ಶಿಚಿರಿಯನ್ನು ಸಾಕ್ಷಿಯಾಗಿ ಕರೆಸಲಾಯಿತು. ಕಳ್ಳನನ್ನು ಗುರುತಿಸಿದ ಶಿಚಿರಿ ಹೀಗೆಂದ, “ಈ ಮನುಷ್ಯ ನಮ್ಮ ಆಶ್ರಮದಲ್ಲಿ ಯಾವುದೇ ಕಳ್ಳತನ ಮಾಡಿಲ್ಲ. ಆ ದಿನ ಅವನಿಗೆ ನಾನೇ ಹಣ ಕೊಟ್ಟಿದ್ದೆ. ಅದಕ್ಕಾಗಿ ಅವನು ನನಗೆ ಧನ್ಯವಾದ ಹೇಳಿದ್ದ.”

ಅನಂತರ ಆ ಕಳ್ಳನಿಗೆ ಶಿಕ್ಷೆಯಾಯಿತು. ಜೈಲಿನಲ್ಲಿ ಶಿಕ್ಷೆಯ ಅವಧಿ ಮುಗಿದಾಗ ಕಳ್ಳನಿಗೆ  ಬಿಡುಗಡೆಯಾಯಿತು. ಅವನು ಅಲ್ಲಿಂದ ನೇರವಾಗಿ ಗುರು ಶಿಚಿರಿಯ ಆಶ್ರಮಕ್ಕೆ ಬಂದು ಅವರ ಶಿಷ್ಯನಾದ.