ನಕಲು ಮಾಡುವ ಚಟ

ಭಾರತದಲ್ಲಿ ನಕಲು ಮಾಡುವುದು ಲಾಭಾದಾಯಕ. ಶಿಕ್ಷಣರಂಗದ ಪರಿಣತರು, ವೈಜ್ನಾನಿಕ ಸಂಸ್ಥೆಗಳ ತಜ್ನರು, ಪ್ರಕಾಶನ ಸಂಸ್ಥೆಯವರು, ಕಾನೂನು ತಜ್ನರು – ಇವರ್ಯಾರೂ ನಕಲು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಇತ್ತೀಚೆಗೆ ಕೆಲವು ವಿಶ್ವವಿದ್ಯಾಲಯಗಳ ಉಪಕುಲಪತಿಗಳೂ ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ ಎಂಬುದೇ ಸುದ್ದಿ.
ಪಾಂಡಿಚೇರಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಚಂದ್ರಾ ಕೃಷ್ಣಮೂರ್ತಿಯವರು ಹಗರಣ ಗಮನಿಸಿ. ಇವರ ಪುಸ್ತಕವೊಂದರ ಬಹುಪಾಲು ನಕಲು ಹೊಡೆದದ್ದು ಎಂಬುದು ಆಪಾದನೆ. ಇದರಿಂದಾಗಿ ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯದೊಂದಿಗೆ ಬಿಕ್ಕಟ್ಟು. ಅಂತಿಮವಾಗಿ ಮೇ ೨೦೧೬ರಲ್ಲಿ ಇವರಿಂದ ಹುದ್ದೆಗೆ ರಾಜೀನಾಮೆ. ಈ ಹಗರಣ ಅಲ್ಲಿಗೇ ಮುಗಿಯಲಿಲ್ಲ. ಕೇಂದ್ರ ಮಂತ್ರಾಲಯವು ಈ ಹಗರಣದ ಬೆಮ್ಬತ್ತಿ, ರಾಷ್ಟ್ರಪತಿಗಳ ಒಪ್ಪಿಗೆ ಪಡೆದು, ಆಕೆಯನ್ನು  ಹುದ್ದೆಯಿಂದ ವಜಾ ಮಾಡಿತು. ಇದು ಅಚ್ಚರಿ. ಯಾಕೆಂದರೆ ಇಂತಹದೇ ಬೇರೆ ಹಗರಣಗಳಲ್ಲಿ ಮಂತ್ರಾಲಯವು ಈ ರೀತಿಯ ಉತ್ಸಾಹ ತೋರಿಲ್ಲ.
ಇಂತಹ ಇನ್ನೊಂದು ಹಗರಣ ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾರಾವ್ ಪೊಡೈಲ್ ಅವರಿಗೆ ಸಂಬಂಧಿಸಿದ್ದು. (ರೋಹಿತ್ ವೇಮುಲನ ಆತ್ಮಹತ್ಯೆ ಬಳಿಕ ವಿದ್ಯಾರ್ಥಿ ಪ್ರತಿಭಟನೆ ನಿಯಂತ್ರಿಸಲು ಪೊಲೀಸರನ್ನು ಇವರು ಕರೆಸಿದ್ದು ದೊಡ್ಡ ಸುದ್ದಿಯಾಯಿತು.) ಆದರೆ ಮತ್ತೆಮತ್ತೆ ಇವರು ನಕಲು ಮಾಡಿದ್ದಾರೆಂಬ ಆಪಾದನೆ ಸುದ್ದಿಯಾಗಿಲ್ಲ. ಇತರ ಪ್ರಾಧ್ಯಾಪಕರೊಂದಿಗೆ ಇವರು ಪ್ರಕಟಿಸಿದ ಮೂರು ಸಂಶೋಧನಾ ಪ್ರಬಂಧಗಳಲ್ಲಿ ಬೇರೆಯವರ ಪ್ರಬಂಧಗಳಿಂದ ಪ್ಯಾರಾಪ್ಯಾರಾಗಳನ್ನೇ ನಕಲು ಮಾಡಿದ್ದರು ಎಂಬುದು ಆಪಾದನೆ. “ವೈರ್” ಎಂಬ ಪತ್ರಿಕೆಯ ಪ್ರತಿನಿಧಿ ಈ ಬಗ್ಗೆ ಅಪ್ಪಾರಾಯರನ್ನು ಮಾತನಾಡಿಸಿದಾಗ, ತಾನು ಆ ಪ್ರಬಂಧಗಳನ್ನು ಹಿಂತೆಗೆಯುವುದಾಗಿ ಹೇಳಿದರು. ಅದೇ ಉಸಿರಿನಲ್ಲಿ, ಈ ವಿಚಾರದಲ್ಲಿ ಏನು ಮಾಡಬೇಕೆಂದು ಆ ಪ್ರತಿನಿಧಿಯ ಸಲಹೆ ಕೇಳಿದರು! “ಇಂತಹ ಪ್ರಕರಣಗಳಲ್ಲಿ ಇತರ ಲೇಖಕರು ಏನು ಮಾಡಿದ್ದಾರೆಂದು ದಯವಿಟ್ಟು ಸಲಹೆ ನೀಡಿ. ನಾವೂ ಅದನ್ನೇ ಅನುಸರಿಸುತ್ತೇವೆ….” ಎಂಬುದು ಅಪ್ಪಾರಾಯರ ವಿನಂತಿ.
ಬೇರೆಯವರ ಸಂಶೋಧನಾ ಪ್ರಬಂಧಗಳಿಂದ ಹಾಗೂ ಪುಸ್ತಕಗಳಿಂದ ನಕಲು ಮಾಡಿದವರಲ್ಲಿ ಅನೇಕರು ಉನ್ನತಸ್ಥಾನಗಳಿಗೆ ಹೋಗುತ್ತಿರುವಂತೆ, ಬಹಳ ಜಾಣತನದ ಸಬೂಬುಗಳನ್ನು ಕೊಟ್ಟಿದ್ದಾರೆ. ಸಿ.ಎನ್.ಆರ್.ರಾವ್ ಜಗದ್ವಿಖ್ಯಾತ ವಿಜ್ನಾನಿ. ಅವರಿಗೆ ಭಾರತರತ್ನ ಪ್ರಶಸ್ತಿಯನ್ನೂ ನೀಡಲಾಗಿದೆ. ಅವರ ಮತ್ತೊಂದು ನಕಲು ಪ್ರಕರಣ ಬಹಿರಂಗವಾಗುತ್ತಿದ್ದಂತೆ, ಅವರ ಪ್ರತಿಕ್ರಿಯೆ ಹೀಗಿತ್ತು: “ಅದು ಕಣ್ತಪ್ಪಿನಿಂದಾದ ವಿಷಯ.” ವೈಜ್ನಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿ (ಸಿಎಸ್ಐಆರ್) ಮುಖ್ಯಸ್ಥರೂ, ಕೇಂದ್ರ ಸರಕಾರದ ಕಾರ್ಯದರ್ಶಿಯೂ ಆಗಿದ್ದ ಅರ್.ಎ. ಮಶೇಲ್ಕರ್ ಅವರೂ ನಕಲು ಮಾಡಿದ್ದರು! “ಭಾರತದಲ್ಲಿ ಪೇಟೆಂಟ್” ಬಗ್ಗೆ ಅವರು ಬರೆದ ಒಂದು ವರದಿಯಲ್ಲಿ, ವಕೀಲರೊಬ್ಬರ ವರದಿಯಿಂದ ಪ್ಯಾರಾಗ್ರಾಫುಗಳನ್ನೇ ನಕಲು ಮಾಡಿದ್ದರು. “ಇವೆಲ್ಲ ತಾಂತ್ರಿಕ ದೋಷಗಳು” ಮತ್ತು “ಉದ್ದೇಶರಹಿತವಾಗಿ ನುಸುಳುವಂಥವು” ಎಂಬುದು ಅವರ ಪ್ರತಿಕ್ರಿಯೆ; ಇದಕ್ಕಾಗಿ “ಕರಡು ವರದಿ ತಯಾರಿಸಿದ ಉಪಸಮಿತಿ”ಯನ್ನು ಅವರು ದೂಷಿಸಿದರು.
ಜುಲಾಯಿ ೨೦೧೬ರಲ್ಲಿ “ಅನ್ವಯಿಕ ಸೂಕ್ಷ್ಮ ಜೀವಶಾಸ್ತ್ರ ಮತ್ತು ಜೈವಿಕ ತಾಂತ್ರಿಕತೆ” ಎಂಬ ವಿಜ್ನಾನಿಕ ಪತ್ರಿಕೆಯು (ಪ್ರಕಾಶಕರು “ಸ್ಪ್ರಿಂಗರ್”) ಮೂವರು ಭಾರತೀಯ ವಿಜ್ನಾನಿಗಳು ಬರೆದ ಪ್ರಬಂಧವೊಂದನ್ನು ಹಿಂದೆಗೆಯಿತು. ಯಾಕೆಂದರೆ, ಅವರು ಆ ಪ್ರಬಂಧದ ಕೆಲವು ಭಾಗಗಳನ್ನು ನಕಲು ಮಾಡಿದ್ದರು. ಸ್ಪ್ರಿಂಗರಿಗೆ ಆ ಪ್ರಬಂದ ಹಿಂದೆಗೆದು, ಈ ಬಗ್ಗೆ ಅದರ ವೆಬ್-ಸೈಟಿನಲ್ಲಿ ೭ ಜುಲಾಯಿ ೨೦೧೬ರಂದು ಪ್ರಕಟಿಸಲು ತಗಲಿದ ಸಮಯ ೧೪ ವರುಷಗಳು ಎಂಬುದು ಅಚ್ಚರಿ!
“ರಿಟ್ರಾಕ್ಷನ್ ವಾಚ್” ಎಂಬ ವೆಬ್-ಸೈಟ್ ಸಂಶೋಧನಾ ಮೋಸಗಳನ್ನು ಬೆಂಬತ್ತುತ್ತಿದೆ. ಇದರ ಪ್ರತಿನಿಧಿಗಳು, ಆ ಪ್ರಬಂಧದ ಮೂವರು ಲೇಖಕರಲ್ಲಿ ಒಬ್ಬರಾದ ಯು.ಸಿ. ಬ್ಯಾನರ್ಜಿ ಅವರನ್ನು ಪ್ರಶ್ನಿಸಿದಾಗ ಅವರ ಜಾಣ ಉತ್ತರ ಹೀಗಿತ್ತು: “ವಿವಿಧ ಜರ್ನಲುಗಳಿಂದ ಮಾಹಿತಿ ಸಂಗ್ರಹಿಸಿ, ನಮ್ಮ ಪ್ರಬಂಧ ಉತ್ತಮ ಪಡಿಸಲಿಕ್ಕಾಗಿ ಅದನ್ನು ಸೇರಿಸಿದೆವು. ಹೀಗೆ ಮಾಡುವಾಗ ಕೆಲವದರ ಮೂಲವನ್ನು ನಮ್ಮ ಪ್ರಬಂಧದಲ್ಲಿ ದಾಖಲಿಸುವುದು ಕಣ್ತಪ್ಪಿನಿಂದಾಗಿ ಬಿಟ್ಟು ಹೋಯಿತು. ಇದು ಕೇವಲ ಉದ್ದೇಶರಹಿತ.”
ರಾಜೀವ್ ಮಲ್ಹೋತ್ರಾ ಇಂಡಿಯನ್-ಅಮೆರಿಕನ್ ಉದ್ಯಮಶೀಲರು. ಇತ್ತೀಚೆಗೆ ಬರಹಗಾರರಾಗಿ ಸುದ್ದಿ ಮಾಡಿದ್ದಾರೆ. ಹಿಂದುತ್ವದ ಬಗ್ಗೆ ಪಾಶ್ಚಾತ್ಯ ಪಂಡಿತರ ಅಭಿಪ್ರಾಯಗಳನ್ನು ವಿರೋಧಿಸಲಿಕ್ಕಾಗಿ ಸರಣಿ ಪುಸ್ತಕಗಳನ್ನು ಬರೆದವರು. ವಿಚಿತ್ರವೆಂದರೆ, ರಾಜೀವ್ ಮಲ್ಹೋತ್ರಾ ಯಾರನ್ನು ಖಂಡಿಸುತ್ತಿದ್ದಾರೆಯೋ ಆ ಲೇಖಕರೇ ಇವರ ವಿರುದ್ಧ ಆಪಾದನೆ ಮಾಡಿದ್ದಾರೆ – ತಮ್ಮ ಪುಸ್ತಕಗಳಿಂದ ಪ್ಯಾರಾಗ್ರಾಫುಗಳನ್ನು ನಕಲು ಮಾಡಿ, ಅವುಗಳ ಅರ್ಥ ತಿರುಚಿದ್ದಾರೆಂದು. ತನ್ನ ಪುಸ್ತಕದಲ್ಲಿ ಮೂಲವನ್ನು ಯಾಕೆ ಉದ್ಧರಿಸಿಲ್ಲ ಎಂಬುದಕ್ಕೆ ಮಲ್ಹೋತ್ರಾ ಅವರ ಉತ್ತರ: “ಸಂಸ್ಕೃತ ಭಾಷೆಯಲ್ಲಿ ಉದ್ಧರಣಾ ಚಿಹ್ನೆಗಳಿಲ್ಲ.”
ಕಾಪಿರೈಟ್ ಉಲ್ಲಂಘನೆಯು ಕಾನೂನಿನ ಪ್ರಕಾರ ಒಂದು ಅಪರಾಧ. ನಕಲು ಮಾಡುವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಆದರೂ ನೈತಿಕವಾಗಿ ಇದು ತಪ್ಪು. ಮೂಲಗ್ರಂಥವನ್ನು, ಮೂಲ ಲೇಖಕರನ್ನು ಮತ್ತು ಕಾಪಿರೈಟ್ ಹೊಂದಿರುವವರನ್ನು ಉಲ್ಲೇಖಿಸಿಯೂ “ನಕಲು” ಮಾಡಿರುವ ಸಾಧ್ಯತೆಯಿದೆ. ನಕಲು ಮಾಡಿದ್ದಾರೆಯೇ ಇಲ್ಲವೇ ಎಂಬುದು ಹೇಗೆ ನಕಲು ಮಾಡಿದ್ದಾರೆ ಎಂಬುದನ್ನು ಅವಲಂಬಿರುತ್ತದೆ, ಅಲ್ಲವೇ?