ದೈವಸಂಭೂತನೆಂದು ತಾನೇ ಹೇಳಿಕೊಂಡು, ತನ್ನ ಭಕ್ತರನ್ನು ವಂಚಿಸಿದ ವ್ಯಕ್ತಿ ಈಗ ರಾಜಸ್ಥಾನದ ಅಜ್ಮೀರದ ಸೆರೆಮನೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಆತ ೭೩ ವರುಷ ವಯಸ್ಸಿನ ಜಗಧೀಸ್ ಪ್ರಸಾದ್ ದಧೀಚ. ಆತ ಹೇಳಿಕೊಂಡದ್ದು ಕೆಟ್ಟ ಶಕ್ತಿಗಳನ್ನು ನಿವಾರಿಸುತ್ತೇನೆಂದು; ಆದರೆ ಮಾಡಿದ್ದು ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ನಂಬಿದವರಿಗೆ ಮೋಸ.
ತಾನು ಭೂತಗಳ ಜೊತೆ ಮಾತನಾಡಬಲ್ಲೆ ಎನ್ನುತ್ತಿದ್ದ ಜಗಧೀಶ. ಆದರೆ, ಬೆಂಕಿಕಡ್ಡಿ ಪೊಟ್ಟಣದಲ್ಲಿ ಸಣ್ಣ ಧ್ವನಿಮುದ್ರಕವನ್ನು ಅಡಗಿಸಿಟ್ಟು, ಅದರಿಂದ ಕೆಲವು ಗುಸುಗುಸು ಮಾತುಗಳನ್ನು ಹೊರಡಿಸುತ್ತಿದ್ದ. ಕತ್ತಲು ತುಂಬಿದ ಕಾಡುಗಳಿಗೆ ಭಕ್ತರನ್ನು ಕರೆದೊಯ್ದು, ಲೇಸರ್ ಪಾಯಿಂಟರ್ ಮತ್ತು ಪುಟ್ಟ ಪ್ರೊಜೆಕ್ಟರುಗಳ ಮೂಲಕ ಎತ್ತರದ ಮರಗಳಲ್ಲಿ ಬೆಳಕಿನ ವಿನ್ಯಾಸಗಳನ್ನು ಮೂಡಿಸಿ, ಅವು ಚಲಿಸುವ ದೆವ್ವಗಳೆಂದು ಅವರನ್ನು ನಂಬಿಸುತ್ತಿದ್ದ. ಮೈಸೂರಿನ ದಸರಾದಲ್ಲಿ ಬನ್ನಿ ಮಂಟಪದ ಬಯಲಿನ ಆಕಾಶದಲ್ಲಿ (ಪಂಜಿನ ಕವಾಯತಿನ ಮುಂಚೆ) ಪ್ರದರ್ಶಿಸಿದ ಲೇಸರ್ ಬೆಳಕಿನ ಬಿಂಬಗಳನ್ನು ನೋಡಿದವರಿಗೆ ಲೇಸರ್ ಕಿರಣಗಳ ಮೂಲಕ ಕತ್ತಲಿನಲ್ಲಿ ಬೆಳಕಿನ ಯಾವುದೇ ವಿನ್ಯಾಸ ಮೂಡಿಸ ಬಹುದೆಂಬುದು ಅರ್ಥವಾಗುತ್ತದೆ.
ಅವನಿಂದ ವಂಚನೆಗೊಳಗಾದ ಮೂವರು ದೂರು ನೀಡಿದ ಬಳಿಕ ೨೭ ಆಗಸ್ಟ್ ೨೦೧೨ರಂದು ಜಗಧೀಶನನ್ನು ಪೊಲೀಸರು ಬಂಧಿಸಿದರು. ಅಜ್ಮೀರದ ವರ್ತಕ ಮಹೇಂದ್ರ ಕುಮಾರ್ (ವಯಸ್ಸು ೫೦) ಕೆಟ್ಟಶಕ್ತಿಗಳು ತನಗೆ ತೊಂದರೆ ನೀಡುತ್ತಿವೆ ಎಂದು ಭಾವಿಸಿದ್ದರು; ಅವನ್ನು ನಿವಾರಿಸಲಿಕ್ಕಾಗಿ ಜಗಧೀಶ ತನ್ನಿಂದ ರೂ.೧.೮ ಲಕ್ಷ ಪಡೆದು ವಂಚಿಸಿದ್ದಾನೆಂದು ದೂರು ನೀಡಿದ್ದಾರೆ.
ಇದೇ ಉದ್ದೇಶಕ್ಕಾಗಿ ಜಗಧೀಶ ತನ್ನಿಂದ ರೂ.೧೬,೦೦೦ ಕಿತ್ತುಕೊಂಡಿದ್ದಾನೆ ಎಂಬುದು ಇನ್ನೊಬ್ಬರ ದೂರು. "ಜಗಧೀಶ ಏನೇನೋ ಪೂಜಾವಿಧಿಗಳನ್ನು ಮಾಡಿದ. ದೆವ್ವಗಳ ಜೊತೆ ಮಾತಾಡಿದ್ದೇನೆಂದು ಮತ್ತೆಮತ್ತೆ ಹೇಳಿದ. ಆದರೆ ನನಗೇನೂ ಒಳ್ಳೆಯದಾಗಲಿಲ್ಲ" ಎಂಬುದು ಅವರ ಅಳಲು. ಮೂರನೆಯ ದೂರುದಾರ ಮುಖೇಶ್, ನಿಧಿ ಶೋಧನೆಗೆ ಸಹಾಯ ಮಾಡಲಿಕ್ಕಾಗಿ ಜಗಧೀಶ ತನ್ನಿಂದ ರೂ.೧೧,೦೦೦ ಪಡೆದು ಮೋಸ ಮಾಡಿದ್ದಾನೆಂದು ದೂರಿತ್ತಿದ್ದಾರೆ.
ಜಗಧೀಶ ಪ್ರಸಾದ್ ದಧೀಚನ ಇಬ್ಬರು ಜೊತೆಗಾರರನ್ನೂ ಪೊಲೀಸರು ಬಂಧಿಸಿದ್ದಾರೆ. ಅವರಿಬ್ಬರೂ ರಮೇಶ್ ಎಂಬ ಹೆಸರಿನವರು. ಇಲೆಕ್ಟ್ರಾನಿಕ್ ಸಾಧನಗಳನ್ನು ಚಲಾಯಿಸುವ ಮೂಲಕ, ದೆವ್ವಗಳೊಡನೆ ಜಗಧೀಶ ಮಾತಾಡುತ್ತಾನೆಂಬ ಭ್ರಮೆ ಹುಟ್ಟಿಸಲು ಅವರು ಸಹಾಯ ಮಾಡುತ್ತಿದ್ದರು.
ಮೋಸಕ್ಕೆ ಬಲಿಯಾಗುವವರು ಇದ್ದರೆ ಮೋಸ ಮಾಡುವವರು ಇದ್ದೇ ಇರುತ್ತಾರೆ.