ದಾಸವಾಳ ಹೂವಿನ ಬಣ್ಣಗಳು ವಿಧವಿಧ; ಆಕಾರಗಳು ತರತರ; ತಳಿಗಳು ೨೦೦ಕ್ಕಿಂತ ಅಧಿಕ; ಬಳಕೆಗಳು ಹತ್ತಾರು.
ಆರಾಧನೆಗೆ ದಾಸವಾಳ: ದಾಸವಾಳದ ತಳಿಗಳನ್ನು ಸುಲಭವಾಗಿ ಕಸಿಕಟ್ಟಿ, ಹೊಸ ಸಂಕರ ತಳಿಗಳನ್ನು ಸೃಷ್ಟಿಸಬಹುದು. ಕೆಂಪು, ಹಳದಿ, ಮರೂನ್, ಬಿಳಿ, ಗುಲಾಲಿ ಮತ್ತು ಈ ಬಣ್ಣಗಳ ಸಂಯೋಜನೆಯಿಂದ ನಳನಳಿಸುವ ದಾಸವಾಳಗಳು ಲಭ್ಯ. ಗಾಢ ಕೆಂಪು ಬಣ್ಣದ ದಾಸವಾಳದ ಬಳಕೆ ದೇವತಾರಾಧನೆಗೆ ಜಾಸ್ತಿ. ದುರ್ಗೆ ಹಾಗೂ ಕಾಳಿಯ ಪೂಜೆಗೆ ಕೆಂಪು ದಾಸವಾಳ ಬೇಕೇಬೇಕು. ಕರ್ನಾಟಕದಲ್ಲಿ ತುಲಸಿಕಟ್ಟೆಯಲ್ಲಿ ತುಳಸಿ ಬೆಳೆಸಿ ಪೂಜೆ ಮಾಡುವ ಬಹುಪಾಲು ಕುಟುಂಬಗಳು ದಾಸವಾಳ ಗಿಡಗಳನ್ನೂ ಬೆಳೆಸಿರುವುದು ವಾಡಿಕೆ.
ಅಲಂಕಾರಕ್ಕಾಗಿ ದಾಸವಾಳ: ಅಲಂಕಾರ ಪರಿಣತರು ಸಮಾರಂಭಗಳಲ್ಲಿ ದಾಸವಾಳವನ್ನು ಹೊಸ ರೀತಿಯಲ್ಲಿ ಬಳಸಲು ಶುರು ಮಾಡಿದ್ದಾರೆ. ಉದಾಹರಣೆಗೆ, ಮದುವೆಗಳಲ್ಲಿ ಅಲಂಕಾರದ ಕೆಲಸ ವಹಿಸಿಕೊಳ್ಳುವ ಹರ್ಕಿರತ್ ಚೌಧರಿ ಭೋಜನದ ಮೇಜಿನ ಅಲಂಕಾರಕ್ಕಾಗಿ ವಿವಿಧ ಹೂಗಳ ಜೊತೆಗೆ ದಾಸವಾಳವನ್ನು ಬಳಸುವ ನಮೂನೆ ವಿನೂತನ. “ದಾಸವಾಳ ಹೂಗಳು ಬೆಳಗ್ಗೆ ಅರಳಿ ಸಂಜೆ ಬಾಡುತ್ತವೆ. ಇದರ ಮೊಗ್ಗುಗಳನ್ನು ಮುಂಜಾನೆ ಕೊಯ್ಯಬೇಕು. ಅವನ್ನು ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ, ಫ್ರಿಜ್ನಲ್ಲಿ ಇಡಬೇಕು. ರಾತ್ರಿ ಭೋಜನ ಬಡಿಸುವ ಮುನ್ನ, ಈ ಮೊಗ್ಗುಗಳನ್ನು ಹೂಗಳ ಜೋಡಣೆಯಲ್ಲಿ ಇಡಬೇಕು. ಅತಿಥಿಗಳು ಊಟ ಮಾಡುತ್ತಿರುವಾಗ, ಈ ಮೊಗ್ಗುಗಳು ಅರಳುವುದನ್ನು ಕಾಣಬಹುದು. ಅದೊಂದು ಆಹ್ಲಾದದಾಯಕ ಅನುಭವ” ಎಂದು ಹರ್ಕಿರತ್ ತಮ್ಮ ವಿನೂತನ ಬಳಕೆಯ ಗುಟ್ಟನ್ನು ಹಂಚಿಕೊಳ್ಳುತ್ತಾರೆ.
ನಮ್ಮ ದೇಶದಲ್ಲೇ ದಾಸವಾಳದ ಸುಮಾರು ೭೦ ತಳಿಗಳಿವೆ. ಅವುಗಳಲ್ಲಿ ಹಲವು ತಳಿಗಳ ಹೂಗಳು ತಿನ್ನಲು ಯೋಗ್ಯ. ಹೈಬಿಸ್ಕಸ್ ರೋಸಾ – ಸೈನೆನ್ಸಿಸ್ ತಳಿ ಜನಪ್ರಿಯ. ಇದರ ಮೂಲ ಚೀನಾ ದೇಶವಾದ್ದರಿಂದ ಇದನ್ನು ಚೈನಾ ರೋಸ್ ಎಂದೂ ಕರೆಯುತ್ತಾರೆ. ಹಿಂದಿ ಭಾಷೆಯಲ್ಲಿ ಇದರ ಹೆಸರು ಗುಧಾಲ್. ಇದು ಮಲೇಷ್ಯಾದ ರಾಷ್ಟ್ರೀಯ ಹೂ.
ತಲೆಗೂದಲಿನ ಮತ್ತು ಚರ್ಮದ ರಕ್ಷಣೆ: ದಕ್ಷಿಣ ಭಾರತದಲ್ಲಿ ತಲೆಗೂದಲಿನ ಆರೋಗ್ಯಕ್ಕಾಗಿ ದಾಸವಾಳದ ಬಳಕೆ ಸರ್ವೇಸಾಮಾನ್ಯ. ತೆಂಗಿನೆಣ್ಣೆಗೆ ಸಮಪ್ರಮಾಣದ ಹೂವಿನ ರಸ ಹಾಕಿ ಕಾಯಿಸಿ, ಬಾಟಲಿಗಳಲ್ಲಿ ತುಂಬಿಡಬೇಕು. ಈ ಎಣ್ಣೆಯನ್ನು ಪ್ರತಿದಿನ ತಲೆಗೆ ಹಚ್ಚಿಕೊಳ್ಳುತ್ತಿದ್ದರೆ, ಕೂದಲನ್ನು ಕಪ್ಪಾಗಿಸಲು ಸಹಕಾರಿ; ಕೂದಲು ಉದುರುವುದನ್ನು ಮತ್ತು ಕಂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಈ ಎಣ್ಣೆ ಮೈಗೆ ಹಚ್ಚಿಕೊಂಡರೆ ಮೈಕಾಂತಿಗೆ ಒಳ್ಳೆಯದು. ದಾಸವಾಳ ಹೂ, ಮೊಗ್ಗು ಮತ್ತು ಎಲೆಗಳು ಶಾಂಪೂವಿನಂತೆ ಉಪಯುಕ್ತ. ಇವನ್ನು ಅರೆದು ತಲೆಗೆ ಹಚ್ಚಿಕೊಂಡು, ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಬೇಕು. ಇದು ತಲೆಗೂದಲು ಮೃದುವಾಗಲು ಮತ್ತು ಹೊಳಪಾಗಲು ಸಹಕಾರಿ. ಜೊತೆಗೆ ತಲೆ ಹೊಟ್ಟು (ಡೆಂಡ್ರಪ್) ನಿವಾರಣೆಗೆ ಪರಿಣಾಮಕಾರಿ. ಇದರ ಮೊಗ್ಗು ಮತ್ತು ಎಲೆ ಅರೆದು, ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮದ ಕಾಂತಿ ಸುಧಾರಣೆ.
ಔಷಧಿಯಾಗಿ ದಾಸವಾಳ: ಜರ್ನಲ್ ಆಫ್ ಫಂಕ್ಷನಲ್ ಫುಡ್ಸ್ ನಿಯತಕಾಲಿಕದ ಜನವರಿ ೨೦೧೬ರ ಸಂಚಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದಾಸವಾಳದ ಒಟ್ಟಾರೆ ಡಯಬಿಟಿಸ್ ಶಮನಕಾರಿ ಪರಿಣಾಮವನ್ನು ಸ್ಟಾಂಡರ್ಡ್ ಆಂಟಿ-ಡಯಬಿಟಿಕ್ ಔಷಧಿ ಮೆಟ್ಫಾರ್ಮಿನ್ನಿನ ಪರಿಣಾಮಕ್ಕೆ ಹೋಲಿಸಬಹುದು. ಏಷಿಯನ್ ಫೆಸಿಫಿಕ್ ಜರ್ನಲ್ ಆಫ್ ಟ್ರೋಪಿಕ್ ಮೆಡಿಸಿನ್ ನಿಯತಕಾಲಿಕದ ನವಂಬರ್ ೨೦೧೧ರ ಸಂಚಿಕೆಯಲ್ಲಿರುವ ಅಧ್ಯಯನ ವರದಿಯ ಅನುಸಾರ ದಾಸವಾಳದ ಸಾರವನ್ನು ಪೆಪ್ಟಿಕ್ ಅಲ್ಸರಿನ ಚಿಕಿತ್ಸೆಗೆ ಬಳಸಬಹುದು. ಜರ್ನಲ್ ಆಫ್ ಟ್ರಿಡಿಷನಲ್ ಆಂಡ್ ಕಾಂಪ್ಲಿಮೆಂಟರಿ ಮೆಡಿಸಿನ್ ನಿಯತಕಾಲಿಕದ ಜನವರಿ ೨೦೧೭ರ ಸಂಚಿಕೆಯಲ್ಲಿರುವ ಅಧ್ಯಯನ ವರದಿ ಪ್ರಕಾರ, ದಾಸವಾಳದ ದಳಗಳ ನೀರಿನ-ಸಾರವು ಚರ್ಮದ ಕ್ಯಾನ್ಸರಿನ ಚಿಕಿತ್ಸೆಗೆ ಸಹಕಾರಿ.
ಆಯುರ್ವೇದದ ಅನುಸಾರ, ದಾಸವಾಳದ ಹೂ, ಎಲೆ ಮತ್ತು ಬೇರಿಗೆ ವಿವಿಧ ಔಷಧೀಯ ಉಪಯೋಗಗಳಿವೆ. ಜನಪದದಲ್ಲಿ ಮನೆಮದ್ದಿಗೆ ದಾಸವಾಳದ ಬಳಕೆ ವ್ಯಾಪಕ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರರಿಂದ ಆರು ದಾಸವಾಳದ ಮೊಗ್ಗು ತಿಂದರೆ ಸಕ್ಕರೆ ಕಾಯಿಲೆ, ಮೊಡವೆ, ಉರಿಮೂತ್ರ ಶಮನಕ್ಕೆ ಸಹಾಯ. ಬಿಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರೆಸಿ ಸೇವಿಸುವುದು ಉರಿಮೂತ್ರ ಗುಣವಾಗಲು ಪರಿಣಾಮಕಾರಿ. ಅಧಿಕ ರಕ್ತಸ್ರಾವ ಕಡಿಮೆಯಾಗಲು ಮಹಿಳೆಯರು ದಾಸವಾಳದ ಹೂವಿನ ರಸವನ್ನು ಹಾಲಿನೊಂದಿಗೆ ಕುಡಿಯುವುದು ಉಪಯುಕ್ತ. ಮನೆಮದ್ದಿಗೆ ಬಿಳಿದಾಸವಾಳ ಉತ್ತಮ. ಅದಿಲ್ಲದಿದ್ದರೆ ಕೆಂಪುದಾಸವಾಳ ಬಳಸಬಹುದು.
ಅದೇನಿದ್ದರೂ, ದಾಸವಾಳದ ಸಾರವು ಮಹಿಳೆಯರು ಗರ್ಭಿಣಿಯರಾಗುವುದನ್ನು ತಡೆಯಲು ಕಾರಣವಾದೀತು ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಪ್ಲಾಂಟಾ ಮೆಡಿಕಾ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಅನುಸಾರ ದಾಸವಾಳಕ್ಕೆ ವಂಶೋತ್ಪಾದನಾ-ವಿರೋಧಿ ಗುಣಗಳಿವೆ. ಆದ್ದರಿಂದ, ಮಹಿಳೆಯರು ದಾಸವಾಳದ ಹೂ ಸೇವಿಸುವಾಗ ಜಾಗೃತೆ ವಹಿಸಬೇಕು ಮತ್ತು ಗರ್ಭವತಿಯರು ಇವನ್ನು ಸೇವಿಸಬಾರದು.
ಆಹಾರವಾಗಿ ದಾಸವಾಳ: ಆಹಾರವಾಗಿ ಇದರ ಬಳಕೆ ಹಲವು ಸಮುದಾಯಗಳಲ್ಲಿ ಪಾರಂಪರಿಕ. ದಾಸವಾಳ ಹೂದಳಗಳನ್ನು ಸಲಾಡಿಗೆ ಸೇರಿಸಿದರೆ ರುಚಿಕರ. ಇದರ ಹೂವಿನ ದಳಗಳನ್ನು ತುಂಡು ಮಾಡಿ, ಒಂದೆರಡು ಹಸಿಮೆಣಸು, ಚಿಟಿಕೆ ಉಪ್ಪಿನೊಂದಿಗೆ ಮಜ್ಜಿಗೆಗೆ ಹಾಕಿ, ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು. ಇತರ ಹೂಗಳ ದಳಗಳು, ನೀರುಳ್ಳಿ ಮತ್ತು ಧಾನ್ಯದ ಹುಡಿ ಜೊತೆ ಬೆರಸಿ, ಉಪ್ಪು, ಮೆಣಸು ಸೇರಿಸಿ ಹುರಿದರೆ ಸವಿಯಾದ ಖಾದ್ಯ. ಅಕ್ಕಿ, ಗೋಧಿ ಅಥವಾ ಜೋಳದ ಹಿಟ್ಟಿನಿಂದ ರೊಟ್ಟಿ ತಟ್ಟುವಾಗ ದಾಸವಾಳ ಹೂವಿನ ಚೂರುಗಳನ್ನು ಸೇರಿಸಬಹುದು. ಬಿಳಿ ದಾಸವಾಳದ ಹತ್ತಾರು ಎಲೆಗಳನ್ನು ತೊಳೆದು, ಅಕ್ಕಿಯೊಂದಿಗೆ ರುಬ್ಬಿ ದೋಸೆ ಮಾಡುವುದು ವಾಡಿಕೆ. ಇದರ ಎಲೆಗಳು ನರಗಳಿಗೆ ಶಕ್ತಿದಾಯಕವೆಂಬ ನಂಬಿಕೆ. ಮಕರ ಮಾಸದಲ್ಲಿ ದಾಸವಾಳದ ಎಲೆ ಹಾಕಿ ಮಾಡಿದ ಇಡ್ಲಿ ಸೇವಿಸುವುದು ಜನಪದ ಆಚರಣೆ. ಸೊಂಟ ನೋವಿನ ಶಮನಕ್ಕೆ ಈ ಇಡ್ಲಿ ಸೇವನೆ ಸಹಕಾರಿ ಎಂಬ ನಂಬಿಕೆ. ಚೀನಾದಲ್ಲಿ ಉಪ್ಪಿನಕಾಯಿಗೂ ಇದರ ಹೂಗಳ ಬಳಕೆ.
ಪಾನೀಯವಾಗಿ ದಾಸವಾಳ: ದಾಸವಾಳದ ಹೂವಿನ ಆರೋಗ್ಯದಾಯಕ ಮತ್ತು ಉಲ್ಲಾಸದಾಯಕ ಗುಣಗಳಿಂದಾಗಿಯೇ ಜಗತ್ತಿನ ಹಲವೆಡೆ ಪಾನೀಯವಾಗಿ ಇದರ ಬಳಕೆ. ಇದರ ಬಿಸಿಚಹಾ ಅಥವಾ ಐಸ್-ಚಹಾ ಜನಪ್ರಿಯ. ಬಿಸಿಚಹಾ ತಯಾರಿ ವಿಧಾನ: ಹೂವಿನ ದಳಗಳನ್ನು ಸಣ್ಣಸಣ್ಣ ಚೂರು ಮಾಡಿ, ನೀರಿಗೆ ಹಾಕಿ, ಐದು ನಿಮಿಷ ಕುದಿಸಬೇಕು. ಒಂದೆರಡು ತುಳಸಿ ಎಲೆ ಅಥವಾ ಚಿಟಿಕೆ ಏಲಕ್ಕಿ ಸೇರಿಸಿದರೆ ಈ ಚಹಾಕ್ಕೆ ಘಮಘಮ ಪರಿಮಳ. ಅದರ ಬದಲಾಗಿ, ಹೂದಳದ ಚೂರುಗಳನ್ನು ಕುದಿಸಿದ ನೀರಿಗೆ ಲಿಂಬೆರಸ ಮತ್ತು ಸಕ್ಕರೆ ಸೇರಿಸಿದರೆ ಪಾನಕ ತಯಾರು. ಅಥವಾ, ಆ ನೀರಿಗೆ ಹಾಲು ಮತ್ತು ಸಕ್ಕರೆ ಬೆರೆಸಿದರೆ ಗುಲಾಬಿ ಬಣ್ಣದ ಪೇಯ ಸಿದ್ಧ. ಈ ಎಲ್ಲ ಪೇಯಗಳು ಆರೋಗ್ಯವರ್ಧನೆಗೆ ಪೂರಕ; ದಣಿವು, ಬಾಯಾರಿಕೆ ಶಮನಕ್ಕೆ ಉಪಯುಕ್ತ. ಮೂಲಿಕಾಚಹಾ (ಹರ್ಬಲ್-ಟೀ)ಕ್ಕೆ ಈಗ ಎಲ್ಲೆಡೆ ಭಾರೀ ಬೇಡಿಕೆ. ಜನಪ್ರಿಯ ಮೂಲಿಕಾಚಹಾ ಬ್ರಾಂಡ್ಗಳಿಗೆ ಪ್ರಬಲ ಪ್ರತಿಸ್ಪರ್ಧಿ ಆಗಬಲ್ಲದು ದಾಸವಾಳ-ಚಹಾ.
ನೈಸರ್ಗಿಕ ನೇರಳೆ ಮತ್ತು ಕೆನ್ನೀಲಿ ಬಣ್ಣ ತಯಾರಿಗಾಗಿಯೂ ದಾಸವಾಳದ ಹೂವಿನ ಬಳಕೆ ಜನಜನಿತ. ಅಂತೂ ಬಣ್ಣಬಣ್ಣದ ದಾಸವಾಳದ ಬಳಕೆಗಳು ವಿಭಿನ್ನ.
(ಅಡಿಕೆ ಪತ್ರಿಕೆ, ಮೇ ೨೦೧೮)