ಸುಪ್ರೀಂ ಕೋರ್ಟ್ ತೀರ್ಪು: ಎಂಡೋಸಲ್ಫಾನ್ ಪೀಡಿತರಿಗೆ ತಲಾ ರೂ.೫ ಲಕ್ಷ ಪರಿಹಾರ


ಹದಿನಾರು ವರುಷಗಳ ಮುಂಚೆ, ಫೆಬ್ರವರಿ ೨೦೦೧ರಲ್ಲಿ ಢೆಲ್ಲಿಯ “ಡೌನ್ ಟು ಅರ್ತ್” ಪಾಕ್ಷಿಕ ಪತ್ರಿಕೆ ಪ್ರಕಟಿಸಿದ ಕೇರಳದ ಕಾಸರಗೋಡಿನ ಪಡ್ರೆಯಲ್ಲಿ ಎಂಡೋಸಲ್ಫಾನಿನ ಮಾರಕ ವಿಷದಿಂದಾಗಿ ಜನರು ಸಾಯುತ್ತಿರುವ ಹಗರಣದ ವರದಿ ದೊಡ್ಡ ಸುದ್ದಿಯಾಯಿತು.

ಯಾಕೆಂದರೆ, ಎಲ್ಲ ಸುರಕ್ಷಿತಾ ನಿಯಮಗಳನ್ನು ಗಾಳಿಗೆ ತೂರಿ, ಮರಣಾಂತಿಕ ಕೀಟನಾಶಕ ಎಂಡೋಸಲ್ಫಾನನ್ನು ಹೆಲಿಕಾಪ್ಟರಿನ ಮೂಲಕ ಕೇರಳದ ಗೇರು ಅಭಿವೃದ್ಧಿ ನಿಗಮದ ಗೇರು ತೋಟಗಳ ಮೇಲೆ ಇಪ್ಪತ್ತು ವರುಷಗಳ ಅವಧಿಯುದ್ದಕ್ಕೂ ಸಿಂಪಡಿಸಲಾಗಿತ್ತು. ಅದರಿಂದಾಗಿ, ಸೆರೆಬ್ರಲ್ ಪಾಲ್ಸಿ, ಎಪಿಲೆಪ್ಸಿ, ಹುಟ್ಟುವಾಗಲೇ ಅಂಗವಿಕಲತೆ, ಮಾನಸಿಕ ಮತ್ತು ದೈಹಿಕ ವಿಕಲತೆ, ಬಂಜೆತನ, ಪಿತ್ತಕೋಶದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಅಸ್ತಮಾ ಇಂತಹ ಭೀಕರ ರೋಗಗಳಿಂದ ಪಡ್ರೆ ಪ್ರದೇಶದ ಹಲವಾರು ಜನರು ನರಳುತ್ತಿದ್ದಾರೆ. ಹೆಲಿಕಾಪ್ಟರಿನಿಂದ ಎಂಡೋಸಲ್ಫಾನ್ ಸಿಂಪಡಣೆ ಆರಂಭಿಸಿದಾಗ ಆದ ಅನಾಹುತಗಳನ್ನು ಗಮನಿಸಿದ್ದ ಅಭಿವೃದ್ಧಿ ಪತ್ರಕರ್ತ ಶ್ರೀಪಡ್ರೆಯವರು “ಮನುಷ್ಯ ಜೀವ ಗೇರುಬೀಜಗಳಿಗಿಂತ ಅಗ್ಗ” ಎಂಬ ಇಂಗ್ಲಿಷ್ ಲೇಖನ ಬರೆದು ಎಲ್ಲರನ್ನೂ ಎಚ್ಚರಿಸಿದ್ದರು.

ಎಂಡೋಸಲ್ಫಾನಿನ ಅವಿವೇಕದ ಹಾಗೂ ಬೇಜವಾಬ್ದಾರಿಯ ಸಿಂಪಡಣೆಯಿಂದಾಗಿ ಭೀಕರ ದುಷ್ಪರಿಣಾಮಗಳು ಆದದ್ದು ಮನುಷ್ಯರ ಮೇಲೆ ಮಾತ್ರವಲ್ಲ; ಅಲ್ಲಿನ ಪರಿಸರವೂ ವಿಷಮಯವಾಗಿ ಜೇನ್ನೊಣಗಳು, ಕಪ್ಪೆಗಳು ಮತ್ತು ಮೀನುಗಳು ನಿರ್ನಾಮವಾದವು. ಢೆಲ್ಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವೈರೊನ್ಮೆಂಟ್ (ಸಿ.ಎಸ್.ಇ.)ಯ ಮಾಲಿನ್ಯ ಕಣ್ಗಾವಲು ಪ್ರಯೋಗಾಲಯವು, ಈ ಎಲ್ಲ ದುಷ್ಪರಿಣಾಮಗಳಿಗೆ ಎಂಡೋಸಲ್ಫಾನ್ ಸಿಂಪಡಣೆ ಕಾರಣವೆಂದು ಪುರಾವೆಗಳನ್ನು ಒದಗಿಸಿತು.

ಅನಂತರ ನಡೆದದ್ದು ಜನಸಮುದಾಯ ಮತ್ತು ಪೀಡೆನಾಶಕ ಉತ್ಪಾದಕ ಕಂಪೆನಿಗಳ ನಡುವೆ ೧೬ ವರುಷಗಳ ದೀರ್ಘ ಕಾನೂನಿನ ಸಮರ. ಇದರ ಪರಿಣಾಮವಾಗಿ, ೨೦೧೧ರಲ್ಲಿ ಸುಪ್ರೀಂ ಕೋರ್ಟ್ ಎಂಡೋಸಲ್ಫಾನನ್ನು ನಿಷೇಧಿಸಿದ್ದು ಈಗ ಚರಿತ್ರೆ.

ಅದೇನಿದ್ದರೂ, ತಮ್ಮದಲ್ಲದ ತಪ್ಪಿಗೆ ದಾರುಣ ಸಂಕಟ ಅನುಭವಿಸುತ್ತಿರುವ ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರವಾದರೂ ಸಿಗಬೇಕು ತಾನೇ? ಇದೀಗ, ೧೦ ಜನವರಿ ೨೦೧೭ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪು ನೀಡಿದೆ. ಆ ತೀರ್ಪಿನಲ್ಲಿ, ೪,೦೦೦ಕ್ಕಿಂತ ಅಧಿಕ ಎಂಡೋಸಲ್ಫಾನ್ ಪೀಡಿತರಿಗೆ ತಲಾ ರೂಪಾಯಿ ೫ ಲಕ್ಷ ಪರಿಹಾರವನ್ನು ಮೂರು ತಿಂಗಳೊಳಗೆ ಪಾವತಿಸಬೇಕೆಂದು ಕೇರಳ ಸರಕಾರಕ್ಕೆ ಆದೇಶಿಸಲಾಗಿದೆ.

ಈ ಪರಿಹಾರದ ಹಣವನ್ನು ಎಂಡೋಸಲ್ಫಾನ್ ಉತ್ಪಾದಕ ಕಂಪೆನಿಗಳಿಂದ ಅಥವಾ ಕೇಂದ್ರ ಸರಕಾರದಿಂದ ವಸೂಲಿ ಮಾಡಬೇಕೆಂದು ಕೇರಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಮುಖ್ಯ ನ್ಯಾಯಾಧೀಶ ಜೆ.ಎಸ್. ಖೇಹರ್ ಮುಖ್ಯಸ್ಥರಾಗಿದ್ದ ಮೂವರು ನ್ಯಾಯಾಧೀಶರ ಬೆಂಚ್, ಕೇರಳ ಸರಕಾರಕ್ಕೆ ನೀಡಿರುವ ಇನ್ನೊಂದು ನಿರ್ದೇಶನ: ಜೀವಮಾನವಿಡೀ ಸತಾಯಿಸುವ ಅನಾರೋಗ್ಯದ ಸಮಸ್ಯೆ ಇರುವವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಬೇಕು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ೨೦೧೦ರಲ್ಲೇ ಹೀಗೆ ಶಿಫಾರಸ್ ಮಾಡಿತ್ತು: ಎಂಡೋಸಲ್ಫಾನ್ ವಿಷದಿಂದ ಮೃತರಾದವರ ಆಲಂಬಿತರಿಗೆ ಮತ್ತು ಇನ್ನೊಬ್ಬರ ಸಹಾಯವಿಲ್ಲದೆ ಸಂಚರಿಸಲಾಗದವರಿಗೆ ಮತ್ತು ಮಾನಸಿಕ ವಿಕಲಚೇತನರಿಗೆ ಕನಿಷ್ಠ ರೂ.೫ ಲಕ್ಷ ಪರಿಹಾರವನ್ನು ಹಾಗೂ ಇತರ ವಿಕಲಚೇತನರಿಗೆ ರೂ.೩ ಲಕ್ಷ ಪರಿಹಾರವನ್ನು ಕೇರಳ ಸರಕಾರ ಪಾವತಿಸಬೇಕು. ಆ ಶಿಫಾರಸಿಗೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್ ಇದೀಗ ಚಾರಿತ್ರಿಕ ತೀರ್ಪು ನೀಡಿದೆ.

ಎಂಡೋಸಲ್ಫಾನ್ ಉತ್ಪಾದಕ ಕಂಪೆನಿಗಳನ್ನು ಪರಿಹಾರ ಪಾವತಿಗಾಗಿ ಕೇರಳ ಸರಕಾರ ಸಂಪರ್ಕಿಸುವುದೇ? ಹಾಗಿದ್ದಲ್ಲಿ, ಆ ಕಂಪೆನಿಗಳು ಪರಿಹಾರ ಪಾವತಿಸಲಿವೆಯೇ? ಎಂಬ ವಿಚಾರ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪ್ರದೀಪ್ ದಾವೆ, ಅಧ್ಯಕ್ಷ, ಪೀಡೆನಾಶಕ ಉತ್ಪಾದಕರು ಮತ್ತು ಫಾರ್ಮುಲೇಟರ್ಸ್ ಎಸೋಸಿಯೇಷನ್ ಅವರ ಪ್ರತಿಕ್ರಿಯೆ, "ಕಾದು ನೋಡಿ”.

ಈ ತೀರ್ಪನ್ನು ಸ್ವಾಗತಿಸಿರುವ ಕೇರಳದ ಲಾಭರಹಿತ ಸಂಘಟನೆ “ತನಾಲ್"ನ ಟ್ರಸ್ಟಿ ಜಯಕುಮಾರ ಸಿ. ಹೀಗೆಂದಿದ್ದಾರೆ, “ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯಂತರ ಪರಿಹಾರ ಘೋಷಿಸಿದಾಗ, ಅದನ್ನು ಪಾವತಿಸಲಿಲ್ಲ. ಈ ತೀರ್ಪಿನಲ್ಲಿ ಮೂರು ತಿಂಗಳೊಳಗೆ ಪರಿಹಾರ ಪಾವತಿಸ ಬೇಕೆಂದಿರುವುದು ಸರಿಯಾದ ಆದೇಶ.” ಈ ಬಗ್ಗೆ ಪಾಲಕ್ಕಾಡಿನ ಇಂಟೆಗ್ರೇಟೆಡ್ ಗ್ರಾಮೀಣ ತಂತ್ರಜ್ನಾನ ಕೇಂದ್ರದ ಡಿ.ವಿ.ಆರ್. ರಘುನಂದನ್ ಅವರ ಅಭಿಪ್ರಾಯ, "ಎಂಡೋಸಲ್ಫಾನ್ ಪೀಡಿತರ ಸಾಮಾಜಿಕ ಪುನರ್ವಸತಿಗೆ ಈ ಪರಿಹಾರದ ಹಣ ಸಾಕಾಗುವುದಿಲ್ಲ. ಕೇರಳ ಸರಕಾರವು ವಿವಿಧ ಆರ್ಥಿಕ ಚಟುವಟಿಕೆಗಳನ್ನು ಅವರ ಪುನರ್ವಸತಿಗಾಗಿ ಆರಂಭಿಸಬೇಕಾಗಿದೆ.”

ಪ್ರಜ್ನಾವಂತ ನಾಗರಿಕರ ಸಂಘಟನೆಗಳು ಸುಪ್ರೀಂ ಕೋರ್ಟಿನ ಈ ತೀರ್ಪನ್ನು ಸ್ವಾಗತಿಸಿವೆ. ಆದರೆ, ನಮ್ಮ ದೇಶವು ಮನುಷ್ಯರು ಹಾಗೂ ಪರಿಸರದ ಮೇಲೆ ಪೀಡೆನಾಶಕಗಳ ದುಷ್ಪರಿಣಾಮಗಳ ಬಗ್ಗೆ ಸೂಕ್ತ ಕಣ್ಗಾವಲಿಟ್ಟು ನಿಯಂತ್ರಿಸಲು ಇಂದಿಗೂ ಅಸಮರ್ಥವಾಗಿದೆ. ಸಿ.ಎಸ್.ಇ.ಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಚಂದ್ರಭೂಷಣ್, “ಜಗತ್ತಿನ ಹಲವಾರು ದೇಶಗಳು ನಿಷೇಧಿಸಿರುವ ಹಾನಿಕಾರಕ ಪೀಡೆನಾಶಕಗಳನ್ನು ಭಾರತದಲ್ಲಿ ಈಗಲೂ ಬಳಸಲಾಗುತ್ತಿದೆ” ಎಂಬುದನ್ನು ಬೆರಳೆತ್ತಿ ತೋರಿಸುತ್ತಾರೆ.

ಕೇಂದ್ರ ಸರಕಾರವು ೨೦೧೩ರಲ್ಲಿ ಅನುಪಮ್ ವರ್ಮ ಮುಖ್ಯಸ್ಥರಾಗಿದ್ದ ಸಮಿತಿಯೊಂದನ್ನು ನೇಮಿಸಿತು. ಆ ಸಮಿತಿಯ ಮುಖ್ಯ ಉದ್ದೇಶ: ಜಗತ್ತಿನ ಬಹುಪಾಲು ದೇಶಗಳಲ್ಲಿ ನಿಷೇಧಿಸಿರುವ ಅಥವಾ ಬಳಕೆಯ ಮೇಲೆ ನಿರ್ಬಂಧ ಹೇರಿರುವ, ಆದರೆ ಭಾರತದಲ್ಲಿ ಬಳಸುತ್ತಿರುವ ೬೬ ಪೀಡೆನಾಶಕಗಳನ್ನು ಪರಿಶೀಲಿಸುವುದು. ಈ ಸಮಿತಿ ಕೇಂದ್ರ ಸರಕಾರಕ್ಕೆ ತನ್ನ ವರದಿ ಸಲ್ಲಿಸಿತು. ತದನಂತರ, ಡಿಸೆಂಬರ್ ೨೦೧೬ರಲ್ಲಿ, ಆ ಸಮಿತಿಯ ವರದಿ ಆಧರಿಸಿ, ಕೃಷಿ ಮತ್ತು ಕೃಷಿಕರ ಕಲ್ಯಾಣ ಮಂತ್ರಾಲಯವು ಈ ಕಾರ್ಯಸೂಚಿ ಘೋಷಿಸಿತು: ಆ ೬೬ ಪೀಡೆನಾಶಕಗಳಲ್ಲಿ ೧೮ನ್ನು ೨೦೧೮ರಿಂದ ಕೆಲವು ಉದ್ದೇಶಗಳಿಗೆ ನಿಷೇಧಿಸುವುದು; ಅವನ್ನು ೨೦೨೧ರಿಂದ ಇತರ ಉದ್ದೇಶಗಳಿಗೂ ನಿಷೇಧಿಸುವುದು. ಇವನ್ನು ನಿಷೇಧಿಸಿದರೂ, ಇನ್ನುಳಿದ ೪೮ ವಿನಾಶಕಾರಿ ಪೀಡೆನಾಶಕಗಳ ಬಳಕೆ ನಮ್ಮ ದೇಶದಲ್ಲಿ ಮುಂದುವರಿಯುತ್ತದೆ ಎಂಬುದನ್ನು ಗಮನಿಸಿರಿ.

ಪೀಡೆನಾಶಕಗಳ ಬಳಕೆಯ ನಿಯಂತ್ರಣದ ದುರವಸ್ಥೆ

ಅನುಪಮ್ ವರ್ಮ ಸಮಿತಿ ಮೌಲ್ಯಮಾಪನ ಮಾಡಿದ್ದ ಕೆಲವು ಪೀಡೆನಾಶಕಗಳನ್ನು ೨೦೧೩ರಲ್ಲಿ ನಡೆಸಿದ ಅಧ್ಯಯನದಲ್ಲಿ ಸಿ.ಎಸ್.ಇ. ಪರಿಶೀಲಿಸಿತ್ತು. ನಮ್ಮ ದೇಶದಲ್ಲಿ “ಪೀಡೆನಾಶಕಗಳ ಬಳಕೆಯ ನಿಯಂತ್ರಣದ ಅವಸ್ಥೆ” ಹೇಗಿದೆಯೆಂದು ಅದರಿಂದ ಬಹಿರಂಗವಾಗಿತ್ತು. ಉದಾಹರಣೆಗೆ, ನೋಂದಾಯಿತವಾದ ೨೩೪ ಪೀಡೆನಾಶಕಗಳಲ್ಲಿ ೫೯ಕ್ಕೆ “ಗರಿಷ್ಠ ಉಳಿಕೆ ಮಿತಿ” (ಎಂ.ಆರ್.ಎಲ್.) ನಿಗದಿ ಪಡಿಸಿರಲೇ ಇಲ್ಲ. (ಅಂದರೆ, ಆಹಾರದಲ್ಲಿ ಕಾನೂನಿನ ಪ್ರಕಾರ ಇರಬಹುದಾದ ಪೀಡೆನಾಶಕಗಳ ಉಳಿಕೆಯ ಗರಿಷ್ಠ ಮಿತಿ). ಭಾರತದ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರವು (ಎಫ್ ಎಸ್ ಎಸ್ ಎ ಐ) ಈ ಮಿತಿಗಳನ್ನು ನಿಗದಿ ಪಡಿಸಬೇಕಾಗಿದೆ. ಅದಲ್ಲದೆ, ಭಾರೀ ಬಳಕೆಯ ೨೦ ಪೀಡೆನಾಶಕಗಳಲ್ಲಿ, ಎರಡು ಪೀಡೆನಾಶಕಗಳಿಗೆ ಮಾತ್ರ ಆಯಾ ಪೀಡೆನಾಶಕವು ಬಳಕೆಗಾಗಿ ನೋಂದಾಯಿಸಲ್ಪಟ್ಟ ಎಲ್ಲ ಬೆಳೆಗಳಿಗೂ ಎಂ.ಆರ್.ಎಲ್. ನಿಗದಿ ಪಡಿಸಲಾಗಿತ್ತು. ಹಲವು ಪೀಡೆನಾಶಕಗಳನ್ನು ಅನೇಕ ಬೆಳೆಗಳಿಗೆ ನೋಂದಾಯಿಸಿದ್ದರೂ, ಅವಕ್ಕೆ ಎಂ.ಆರ್.ಎಲ್. ನಿಗದಿ ಪಡಿಸಿರಲಿಲ್ಲ.

ಪೀಡೆನಾಶಕಗಳ ಬಳಕೆಗೆ ಕಠಿಣ ನಿಯಂತ್ರಣ ಜ್ಯಾರಿ ಮಾಡಬೇಕೆಂದು ಹತ್ತು ವರುಷಗಳ ಮುಂಚೆಯೇ ಜಂಟಿ ಸಂಸತ್ ಸಮಿತಿ ಆಗ್ರಹಿಸಿತ್ತು. ನೆನಪು ಮಾಡಿಕೊಳ್ಳಿರಿ: ಕೋಲಾ ಇತ್ಯಾದಿ ಲಘು ಪಾನೀಯಗಳಲ್ಲಿ ಎಂ.ಆರ್.ಎಲ್.ಗಿಂತ ಅಧಿಕ ಪ್ರಮಾಣದ ಪೀಡೆನಾಶಕಗಳ ಉಳಿಕೆ ಇದೆಯೆಂದು ಸಿ.ಎಸ್.ಇ. ಬಹಿರಂಗ ಪಡಿಸಿದ ಬಳಿಕ ಜಂಟಿ ಸಂಸತ್ ಸಮಿತಿ ನೇಮಕವಾಗಿತ್ತು. ಪೀಡೆನಾಶಕಗಳ ಸುರಕ್ಷಿತ ಬಳಕೆ ಖಾತರಿ ಪಡಿಸಲಿಕ್ಕಾಗಿ, ಆ ಸಮಿತಿ ಮಾರ್ಗಸೂಚಿಗಳನ್ನು ನೀಡಿತ್ತು: ಪೀಡೆನಾಶಕಗಳನ್ನು ನೋಂದಾಯಿಸುವ ಮುಂಚೆಯೇ ಎಂ.ಆರ್.ಎಲ್. ನಿಗದಿ ಪಡಿಸುವುದು ಕಡ್ಡಾಯ; ಎಂ.ಆರ್.ಎಲ್.ಗಳನ್ನು ಪೀಡೆನಾಶಕಗಳ “ದೈನಿಕ ಸಹನೀಯ ಸೇವನಾ ಮಿತಿ” (ಎಕ್ಸೆಪ್ಟಬಲ್ ಡೈಲಿ ಇನ್ ಟೇಕ್ -ಎಡಿಐಎಸ್) ಜೊತೆ ಹೋಲಿಸಿ, ಮಿತಿಯ ಪಾಲನೆ ಆಗುತ್ತಿದೆಯೇ ಎಂಬ ಪರಿಶೀಲನೆ ಮತ್ತು ಪೀಡೆನಾಶಕಗಳ ಉಳಿಕೆಗಳನ್ನು ನಿಯಮಿತ ಅವಧಿಗೊಮ್ಮೆ ಪರಿಶೀಲಿಸುವುದು. "ಸಮಿತಿ ಈ ಶಿಫಾರಸುಗಳನ್ನು ಮಾಡಿದ್ದರೂ, ಅದ್ಯಾವುದೂ ಸರಿಯಾಗಿ ಪಾಲನೆಯಾಗಿಲ್ಲ” ಎನ್ನುತ್ತಾರೆ ಭೂಷಣ್.

ಸುಪ್ರೀಂ ಕೋರ್ಟಿನ ಜನವರಿ ೨೦೧೭ರ ತೀರ್ಪಿನಿಂದಾಗಿ ಕೇರಳದ ಎಂಡೋಸಲ್ಫಾನ್ ಪೀಡಿತರಿಗೆ ಸ್ವಲ್ಪ ಸಾಂತ್ವನ ಸಿಕ್ಕೀತು. ಆದರೆ, ಪೀಡೆನಾಶಕಗಳ ಬಳಕೆಯ ಕಟ್ಟುನಿಟ್ಟಾದ ನಿಯಂತ್ರಣ ಜ್ಯಾರಿಯಾಗದಿದ್ದರೆ, ದೇಶದ ಉದ್ದಗಲದಲ್ಲಿ ಜನಸಾಮಾನ್ಯರಿಗೆ ಅಪಾಯ ತಪ್ಪಿದ್ದಲ್ಲ. ಅದೇನಿದ್ದರೂ, ನಿಯಂತ್ರಣಾ ಸಂಸ್ಥೆಗಳಲ್ಲಿ, ಸರಕಾರಗಳಲ್ಲಿ ಮತ್ತು ಉತ್ಪಾದಕ ಕಂಪೆನಿಗಳಲ್ಲಿ ವಿನಾಶಕಾರಿ ಪೀಡೆನಾಶಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳಿಗೆ ಅವರು ಖಂಡಿತವಾಗಿ ಹೊಣೆಗಾರರು ಎಂಬ ಎಚ್ಚರದ ಬಿಸಿ ಮೂಡಲು ಸುಪ್ರೀಂ ಕೋರ್ಟಿನ ತೀರ್ಪು ಕಾರಣವಾಗಿದೆ, ಅಲ್ಲವೇ?
(ಅಡಿಕೆ ಪತ್ರಿಕೆ, ಎಪ್ರಿಲ್ ೨೦೧೭)