ಮಂಗೋಲಿಯಾದಿಂದ ಗಗನಕ್ಕೇರಿ ಸಾಗುವ ಅಮುರ್ ಗಿಡುಗಗಳ ಆಕಾಶಯಾನ ಕೊನೆಗೊಳ್ಳುವುದು ೨೨,೦೦೦ ಕಿಮೀ ದೂರದ ದಕ್ಷಿಣ ಆಫ್ರಿಕಾದಲ್ಲಿ. ತಮ್ಮ ದೀರ್ಘ ಪ್ರಯಾಣದ ನಡುವೆ ಅವು ನಾಗಾಲ್ಯಾಂಡಿನಲ್ಲಿ ಸಾವಿರಸಾವಿರ ಸಂಖ್ಯೆಯಲ್ಲಿ ಕೆಳಕ್ಕೆ ಇಳಿಯುತ್ತಿದ್ದವು – ಒಂದು ತಿಂಗಳು ಕೀಟಗಳನ್ನು ತಿಂದು ಮತ್ತೆ ಆಕಾಶಯಾನಕ್ಕೆ ಸಜ್ಜಾಗಲಿಕ್ಕಾಗಿ.
ಆದರೆ, ಅಲ್ಲಿ ವರುಷವರುಷವೂ ಅವುಗಳ ಮಾರಣಹೋಮ. ಲೊತಾ ಮತ್ತು ಇತರ ಬುಡಕಟ್ಟು ಜನರಿಂದ ಪ್ರತಿ ವರುಷ ೧೨,೦೦೦ – ೧೪,೦೦೦ ಅಮುರ್ ಗಿಡುಗಗಳ ಕೊಲೆ – ಬುಲೆಟ್ ಮತ್ತು ಬಾಣಗಳಿಂದ – ಆಹಾರಕ್ಕಾಗಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ.
ಅಮಾಯಕ ಅಮುರ್ ಗಿಡುಗಗಳನ್ನು ಉಳಿಸಲು ಏನಾದರೂ ಮಾಡಲೇ ಬೇಕಾಗಿತ್ತು. ನಾಗಾಲ್ಯಾಂಡ್ ಸರಕಾರ ಮತ್ತು ಆಶಾ ಹಾಗೂ ಪಾನ್ಗ್ಟಿ ಗ್ರಾಮಗಳ ಮುಖ್ಯಸ್ಥರು ಇದಕ್ಕಾಗಿ ಕೈಜೋಡಿಸಿದರು. “ಅಮುರ್ ಗಿಡುಗಗಳ ರಕ್ಷಣಾ ಸಂಘಟನೆ” ಸ್ಥಾಪಿಸಿ, ಅವುಗಳ ಬೇಟೆ ನಿಷೇಧಿಸಿದರು. ಇದನ್ನು ಉಲ್ಲಂಘಿಸಿದವರನ್ನು ಬಂಧಿಸಿ ಶಿಕ್ಷೆ ನೀಡಲಾಯಿತು.
ಈ ಆಂದೋಲನದಿಂದಾಗಿ ಕ್ರಮೇಣ ಅಮುರ್ ಗಿಡುಗಗಳ ಕೊಲೆಗಡುಕರೇ ಅವನ್ನು ರಕ್ಷಿಸುವ ಯೋಧರಾದರು. ಇದೆಷ್ಟು ಯಶಸ್ವಿಯಾಯಿತೆಂದರೆ, ಮುಂದಿನ ವರುಷ ನಾಗಾಲ್ಯಾಂಡಿನಲ್ಲಿ ಒಂದೇ ಒಂದು ಅಮುರ್ ಗಿಡುಗವನ್ನೂ ಕೊಲ್ಲಲಿಲ್ಲ.
ಈ ಅಪ್ರತಿಮ ಸಾಧನೆಗಾಗಿ ಇಡೀ ಜಗತ್ತು ನಾಗಾಲ್ಯಾಂಡಿನ ಜನತೆಯನ್ನು ಅಭಿನಂದಿಸಿತು. ಈಗ ನಾಗಾಲ್ಯಾಂಡಿಗೆ “ಜಗತ್ತಿನ ಗಿಡುಗಗಳ ರಾಜಧಾನಿ” ಎಂಬ ಹೆಸರು. ಇದರಿಂದಾಗಿ ಲಾಭವಾಗಿರುವುದು ಪಾನ್ಗ್ಟಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ – ಅಲ್ಲೀಗ ಪ್ರವಾಸೋದ್ಯಮದ ಪ್ರಗತಿ. ಇದರಿಂದಾಗಿ ಹೆಚ್ಚೆಚ್ಚು ಭಂಡವಾಳ ಹೂಡಿಕೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ. ಪರಿಸರ ಹಾಗೂ ಜೀವಸಂಕುಲದ ಸಂರಕ್ಷಣೆ ಹೇಗೆ ಲಾಭದಾಯಕವಾಗ ಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಈ ಸಂರಕ್ಷಣೆಯ ಕಾಯಕಕ್ಕೆ ಒಬ್ಬನೇ ಒಬ್ಬ ಕಂಕಣಬದ್ಧ ವ್ಯಕ್ತಿ ಸಂಕಲ್ಪ ಮಾಡಿದರೂ ಸಾಕು. ಅಂತಹ ಒಬ್ಬ ವ್ಯಕ್ತಿ ೧ ಜೂನ್ ೨೦೧೬ರಂದು ನಿಧನರಾದ ಕೇರಳದ ನೀಲಂಬೂರಿನ ಟಿ.ಎನ್. ಗೋದವರ್ಮನ್ ತಿರುಮುಲಪಾದ್ (೮೬). ಅವರ ಪತ್ರವೊಂದು ೧೯೯೫ರಲ್ಲಿ ಅಗಾಧ ಪರಿಣಾಮಕ್ಕೆ ಕಾರಣವಾಯಿತು. ನೀಲಗಿರಿಯಲ್ಲಿ ತನ್ನ ಪೂರ್ವಜರ ನೆಲದಲ್ಲಿ ಕಾನೂನುಬಾಹಿರವಾಗಿ ಮರಗಳನ್ನು ಕಡಿಯುತ್ತಿದ್ದುದನ್ನು ತಿರುಮುಲಪಾದರಿಗೆ ಸಹಿಸಲಾಗಲಿಲ್ಲ. ಇದನ್ನು ನಿಷೇಧಿಸಬೇಕೆಂದು ಅವರು ಸುಪ್ರೀಂ ಕೋರ್ಟಿಗೆ ಒಂದು ಅಂಚೆಕಾರ್ಡಿನಲ್ಲಿ ವಿನಂತಿಸಿದರು. ಅವರ ವಿನಂತಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ನೀಲಗಿರಿಯಲ್ಲಿ ಮರಗಳ ಮಾರಣಹೋಮವನ್ನು ಆ ವರುಷವೇ ನಿಷೇಧಿಸಿದ್ದಲ್ಲದೆ, ಮುಂದಿನ ವರುಷ (೧೯೯೬ರಲ್ಲಿ) ಇಡೀ ದೇಶದಲ್ಲಿ ಮರಗಳ ಮಾರಣಹೋಮ ನಿಷೇಧಿಸಿ ತೀರ್ಪು ನೀಡಿತು.
ತನ್ನ ಅಂಚೆಕಾರ್ಡಿನಿಂದಾಗಿ ಇಂತಹ ಅಗಾಧ ಪರಿಣಾಮ ಉಂಟಾದೀತು ಎಂಬುದರ ಕಲ್ಪನೆಯೂ ತಿರುಮುಲಪಾದರಿಗೆ ಇರಲಿಲ್ಲ. “ಸುಪ್ರೀಂ ಕೋರ್ಟಿನ ಆದೇಶ ನನಗೂ ಅನಿರೀಕ್ಷಿತ. ಇದೊಂದು ದೊಡ್ಡ ಸುದ್ದಿಯಾಯಿತು. ಸಣ್ಣ ಬೆಳೆಗಾರರು, ಟೀ ತೋಟಗಾರರು, ಕಾರ್ಖಾನೆಗಳ ಮಾಲೀಕರು ಮತ್ತು ಜನಸಾಮಾನ್ಯರು ಈ ನಿಷೇಧದ ವಿರುದ್ಧ ಅರ್ಜಿ ಸಲ್ಲಿಸಿದರು. ನನ್ನ ಸಾಮರ್ಥ್ಯ ಮೀರಿದ ಕೆಲಸಕ್ಕೆ ಕೈಹಾಕಿದೆನೋ ಎಂದು ನನಗೆ ಆತಂಕವಾಗಿತ್ತು” ಎಂದು ೨೦೦೨ರ ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದಾರೆ.
ತಮಿಳ್ನಾಡು ಸರಕಾರ, ನೀಲಗಿರಿ ಜಿಲ್ಲಾಧಿಕಾರಿ, ಗುಡಲೂರಿನ ಜಿಲ್ಲಾ ಅರಣ್ಯ ಅಧಿಕಾರಿ ಮತ್ತು ನೀಲಗಿರಿಯ ಮೋಪು ಸಮಿತಿ – ಇವರು ಪಶ್ಚಿಮಘಟ್ಟಗಳ ಕಾಡಿನ ಮರ ಕಡಿಯುತ್ತಿದ್ದುದರ ಕಾನೂನುಬದ್ಧತೆಯನ್ನು ತಿರುಮುಲಪಾದರು ತಮ್ಮ ಅಂಚೆಕಾರ್ಡಿನಲ್ಲಿ ಪ್ರಶ್ನಿಸಿದ್ದರು. ಸರಕಾರ, ಸಮಿತಿ ಮತ್ತು ಅಧಿಕಾರಿಗಳು ಅಲ್ಲಿ ಮರ ಕಡಿಯುತ್ತಿದ್ದದ್ದು ಈ ನಾಲ್ಕು ಕಾಯಿದೆಗಳ ಉಲ್ಲಂಘನೆಯಾಗಿತ್ತು: ಭಾರತೀಯ ಅರಣ್ಯ ಕಾಯಿದೆ, ೧೯೨೭; ಅರಣ್ಯ (ಸಂರಕ್ಷಣಾ) ಕಾಯಿದೆ, ೧೯೮೦; ತಮಿಳುನಾಡು ಗುಡ್ಡಪ್ರದೇಶಗಳ ಮರಗಳ ಸಂರಕ್ಷಣಾ ಕಾಯಿದೆ ಮತ್ತು ಪರಿಸರ (ಸಂರಕ್ಷಣಾ) ಕಾಯಿದೆ, ೧೯೮೬. ಇದರಿಂದಾಗಿ ಪಶ್ಚಿಮಘಟ್ಟಗಳ ಉಷ್ಣವಲಯದ ಮಳೆಕಾಡುಗಳ ವಿನಾಶ.
ಅದಾದ ನಂತರ, ಪರಿಸರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆಗೂ ಈ ತೀರ್ಪು ತಳಪಾಯ ಒದಗಿಸಿದೆ. ತಿರುಮುಲಪಾದರ ಅರ್ಜಿಯ ಆದೇಶವನ್ನು “ನಿರಂತರ ಮಾಂಡಮಸ್” (ಕನ್ಟಿನ್ಯುಯಿಂಗ್ ಮಾಂಡಮಸ್) ಆಗಿ ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಅಂದರೆ, ಅಗತ್ಯವಿದ್ದಾಗೆಲ್ಲ ಸುಪ್ರೀಂ ಕೋರ್ಟ್ ಅಲ್ಲಿನ ಪರಿಸ್ಥಿತಿಯ ಪರಿಶೀಲನೆ ನಡೆಸಿ, ಆದೇಶ ನೀಡುತ್ತದೆ. ಭಾರತದ ಕಾನೂನುಶಾಸ್ತ್ರದ ಇತಿಹಾಸದಲ್ಲಿಯೇ ಇದೊಂದು ಚಾರಿತ್ರಿಕ ತೀರ್ಪು.
ಭಾರತದ ಅರಣ್ಯಗಳ ನಿರ್ವಹಣೆಯಲ್ಲಿದ್ದ ಕುಂದುಕೊರತೆ ನಿವಾರಿಸಲು ಮತ್ತು ಅರಣ್ಯಗಳ ಆರ್ಥಿಕ ಮೌಲ್ಯದ ಲೆಕ್ಕಾಚಾರ ಮಾಡುವ ಸೂತ್ರವನ್ನು ರೂಪಿಸಲು ಸುಪ್ರೀಂ ಕೋರ್ಟಿಗೆ ಈ ಪ್ರಕರಣ ಅವಕಾಶ ಒದಗಿಸಿತು. ಅರಣ್ಯ ಜಮೀನನ್ನು ಅರಣ್ಯೇತರ ಉದ್ದೇಶಕ್ಕಾಗಿ ಬಳಸಬೇಕಾದಾಗ, ಕೈಗಾರಿಕೆ ಮತ್ತು ಇತರ ಬಳಕೆ ಏಜೆನ್ಸಿಗಳು ಸರಕಾರಕ್ಕೆ ಪಾವತಿಸಬೇಕಾದ ಮೊತ್ತವೇ ಅರಣ್ಯಗಳ ಆರ್ಥಿಕ ಮೌಲ್ಯ.
ಈ ರೀತಿಯಲ್ಲಿ ತಿರುಮುಲಪಾದರ ಅಂಚೆಕಾರ್ಡಿನ ವಿನಂತಿ, ಆ ಚಾರಿತ್ರಿಕ ತೀರ್ಪಿನ ಮೂಲಕ ೨೦೦೬ರ ಅರಣ್ಯ ಹಕ್ಕುಗಳ ಕಾಯಿದೆಗೆ ಬುನಾದಿಯಾಯಿತು. ಇದು, ಅವರಂತೆ ಸದ್ದುಗದ್ದಲವಿಲ್ಲದೆ ಪರಿಸರ ಸಂರಕ್ಷಣೆಯ ಕಾಯಕದಲ್ಲಿ ತೊಡಗಿರುವ ಎಲ್ಲ ಕಾರ್ಯಕರ್ತರಿಗೆ ನಿರಂತರ ಪ್ರೇರಣೆ.
(ಅಡಿಕೆ ಪತ್ರಿಕೆ, ಫೆಬ್ರವರಿ ೨೦೧೭ ಸಂಚಿಕೆಯಲ್ಲಿ ಪ್ರಕಟ)