ಮಕ್ಕಳ ಆಸಕ್ತಿ ಏನೆಂದು ತಿಳಿದರೆ, ಮಕ್ಕಳಿಗೆ ಶಾಲಾ ಪಾಠಗಳಲ್ಲಿ ಆಸಕ್ತಿ ಕುದುರಿಸಲು ಸಾಧ್ಯ - ಚಿಟ್ಟೆಗಳ ಕುರಿತು ಮಾತಾಡುತ್ತಾ ಶಿಕ್ಷಕಿಯೊಬ್ಬರು ಬಾಲಕಿಗೆ ಗಣಿತ ಕಲಿಸಿದಂತೆ.
ಆಕೆ ಮಕ್ಕಳ ಅಚ್ಚುಮೆಚ್ಚಿನ ಗಣಿತ ಟೀಚರ್. ಒಬ್ಬ ತಾಯಿ ಗಣಿತದಲ್ಲಿ ಫೇಲಾದ ತನ್ನ ಮಗಳನ್ನು ಇವರ ಬಳಿ ಕರೆ ತರುತ್ತಾಳೆ. "ಹೇಗಾದರು ಮಾಡಿ ಇವಳಿಗೆ ಗಣಿತ ಕಲಿಸಿ" ಎಂದು ವಿನಂತಿಸುತ್ತಾಳೆ.
ಕೂಡಲೇ ಏಳನೇ ಕ್ಲಾಸಿನ ಆ ಬಾಲಕಿಯೊಂದಿಗೆ ಗಣಿತ ಟೀಚರ್ ಮತುಕತೆ ಶುರುವಿಟ್ಟರು. ಒಂದು ತಾಸು ಮಾತಾಡಿದಾಗ ಟೀಚರ್ಗೆ ಅರ್ಥವಾಗಿತ್ತು, ಆ ಬಾಲಕಿಗೆ ಚಿಟ್ಟೆಗಳೆಂದರೆ ಪಂಚಪ್ರಾಣ; ಚಿಟ್ಟಿಗಳ ಬಗ್ಗೆ ಸಾಕಷ್ಟು ತಿಳಿದಿದ್ದಾಳೆ ಬಾಲಕಿ. "ನಾಳೆ ಬಾ, ಚಿಟ್ಟೆಗಳ ವಿಷಯ ಇನ್ನಷ್ಟು ಹೇಳು ನಂಗೆ" ಎನ್ನುತ್ತಾ ಗಣಿತ ಟೀಚರ್ ಪ್ರಥಮ ದಿನದ ಕ್ಲಾಸ್ ಮುಗಿಸಿದಾಗ ಬಾಲಕಿಗೆ ಅಚ್ಚರಿ. ಯಾಕೆಂದರೆ ಅವರು ಗಣಿತದ ಬಗ್ಗೆ ಏನೂ ಮಾತಾಡಿರಲಿಲ್ಲ!
ಎರಡನೇ ದಿನವೂ ಅದೇ ಕತೆ. ಗಣಿತ ಟೀಚರ್ ಚಿಟ್ಟಿಗಳ ವಿಷಯವನ್ನೇ ಕೇಳಿದರು ವಿನಃ ಗಣಿತದ ಬಗ್ಗೆ ಚಕಾರ ಎತ್ತಲಿಲ್ಲ. ನಿಧಾನವಾಗಿ ಬಾಲಕಿಯ ಆತ್ಮವಿಶ್ವಾಸ ಹೆಚ್ಚುತ್ತಿತ್ತು. "ನಾನೂ ಕಲಿತಿದ್ದೇನೆ, ಚಿಟ್ಟೆಗಳ ವಿಷಯ ಬಹಳಷ್ಟು ಕಲಿತಿದ್ದೇನೆ, ನಮ್ಮ ಊರಿನ ಹೆಸರುವಾಸಿ ಗಣಿತ ಟೀಚರ್ಗೆ ಕಲಿಸುವಷ್ಟು ಕಲಿತಿದ್ದೇನೆ" ಎಂಬ ಭಾವ ಬಲಿಯುತ್ತಿತ್ತು ಅವಳಲ್ಲಿ.
ಮರುದಿನ ಆ ಬಾಲಕಿ ತಂದಳು ತನ್ನ ಚಿಟ್ಟೆಗಳ ಸಂಗ್ರಹವನ್ನು - ಗಣಿತ ಟೀಚರ್ಗೆ ಚಿಟ್ಟೆ ಕ್ಲಾಸ್ ಮಾಡಲಿಕ್ಕಾಗಿ. ಅವರು ಆ ಚಿಟ್ಟೆಗಳನ್ನು ಮಗುವಿನ ಕುತೂಹಲದಿಂದ ನೋಡಿದರು. ಮತ್ತೆಮತ್ತೆ ಬಾಲಕಿಯ ಜೊತೆ ಪ್ರಶ್ನೆ ಕೇಳಿ ತಿಳಿದುಕೊಂಡರು. ಅನಂತರ ಚಿಟ್ಟೆಗಳ ರೆಕ್ಕೆಗಳ ಆಕಾರದ ಬಗ್ಗೆ ಮಾತಾಡಿದರು. ತ್ರಿಕೋನ, ಆಯತ, ವೃತ್ತ - ಇವುಗಳ ಸಂಖ್ಯೆ, ಆ ಸಂಖ್ಯೆಗಳ ಸಂಬಂಧ ವಿವರಿಸಿದರು. ಅದಾದ ಬಳಿಕ ಬಳಿಕ ಗಣಿತ ಟೀಚರ್ ಹೇಳಿದ್ದು ಚಿಟ್ಟೆಗಳ ಹಾರಾಟ ಪಥವನ್ನು ಹೋಲುವ ಜ್ಯಾಮಿತಿಯ ಆಕೃತಿಗಳ ಬಗ್ಗೆ. ಅವರೀಗ ಗಣಿತದ ಪಾಠವನ್ನೇ ಮಾಡುತ್ತಿದ್ದರು. ಆದರೆ ಆ ಬಾಲಕಿಗೆ ಅದು ಗಣಿತದ ಪಾಠ ಅನ್ನಿಸಲೇ ಇಲ್ಲ. ಅವಳ ಪ್ರಕಾರ ಅದು ಚಿಟ್ಟೆಗಳ ಪಾಠ. ಗಣಿತದ ಪಾಠ ಅವಳಿಗೆ ಇಷ್ಟವಾದ ಚಿಟ್ಟೆಗಳ ಪಾಠವಾಗಿ ಪರಿವರ್ತನೆ ಆಗಿತ್ತು - ಗಣಿತ ಟೀಚರರ ಜಾಣತನದಿಂದಾಗಿ.
ಈ ರೀತಿ ಮಕ್ಕಳಿಗೆ ಆಸಕ್ತಿ ಇರುವ ವಿಷಯದಿಂದ ಶುರು ಮಾಡಿ, ಅವರಿಗೆ ಕಷ್ಟವೆನೆಸುವ ವಿಷಯದತ್ತ ಕಲಿಕೆ ತಿರುಗಿಸಲು ಸಾಧ್ಯವಿದೆ. ಹೀಗೆ ಮಾಡಿದರೆ ತಮ್ಮ ಕಲಿಕಾ ಸಾಮರ್ಥ್ಯದ ಬಗ್ಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಆಗ ಅವರಿಗೆ ಟ್ಯೂಷನ್ನ ಅಗತ್ಯ ಇರಲಾರದು.
೩ ತಾಸು ಮಗುವೇ ಮಾತಾಡಿದ್ದು: ಜಪಾನಿನ ಪುಟ್ಟ ಬಾಲಕಿ ತೊತ್ತೊಚಾನ್. ಸುಮಾರು ಎಂಟು ವರುಷ ವಯಸ್ಸಿನಲ್ಲಿ ಅವಳನ್ನು ಶಾಲೆಯಿಂದ ಕಿತ್ತು ಹಾಕುತ್ತಾರೆ - ಅವಳು ತುಂಟಿ, ಸರಿಯಾಗಿ ಪಾಠ ಕಲಿಯುತ್ತಿಲ್ಲ ಎಂಬ ಕಾರಣಕ್ಕಾಗಿ.
ಅವಳ ತಾಯಿಗೆ ಚಿಂತೆಯೋ ಚಿಂತೆ. ಮರುದಿನ ಮಗಳನ್ನು ಊರಿನ ಹೊರವಲಯದ ಶಾಲೆಗೆ ಕರೆದೊಯ್ಯುತ್ತಾಳೆ. ಕಟ್ಟಡಗಳಿಲ್ಲದ ಆ ಶಾಲೆ ಕಂಡು ತೊತ್ತೊಚಾನ್ಗೆ ಖುಷಿಯೋ ಖುಷಿ. ಅಲ್ಲಿ ತರಗತಿ ಕೋಣೆಗಳೆಂದರೆ ಹಳೆಯ ರೈಲ್ವೇ ವ್ಯಾಗನ್ಗಳು.
ಆ ಶಾಲೆಯ ಹೆಡ್ಮಾಸ್ಟರ್ಗೆ ಅಮ್ಮ ಎಲ್ಲ ಸಂಗತಿ ನಿವೇದಿಸುತ್ತಾಳೆ. ಹೆಡ್ಮಾಸ್ಟರ್ ಕೇಳುತ್ತಾರೆ, "ಅವಳೇನು ತುಂಟತನ ಮಾಡುತ್ತಿದ್ದಳು?" ಅಮ್ಮ ಉತ್ತರಿಸುತ್ತಾಳೆ, "ಅವಳ ಶಾಲೆಯ ಪಕ್ಕದಲ್ಲಿ ರಸ್ತೆ. ಆ ರಸ್ತೆಯಲ್ಲಿ ಸಂಜೆಯ ಹೊತ್ತಿನಲ್ಲಿ ಒಂದು ಬ್ಯಾಂಡ್ ತಂಡವು ಬ್ಯಾಂಡ್ ಬಾರಿಸುತ್ತಾ ಹೋಗುತ್ತಿತ್ತು. ಇವಳು ಬೆಂಚಿನಿಂದ ಎದ್ದು ಅದನ್ನು ನೋಡುತ್ತಾ ನಿಲ್ಲುತ್ತಿದ್ದಳು."
ಇದನ್ನು ಕೇಳಿ ಮುಗುಳ್ನಕ್ಕ ಹೆಡ್ಮಾಸ್ಟರ್, ಅಮ್ಮನಿಗೆ ಮನೆಗೆ ಹಿಂತಿರುಗಲು ಹೇಳುತ್ತಾರೆ. ಅನಂತರ ತನ್ನೆದುರು ಕೂತಿದ್ದ ತೊತ್ತೊಚಾನ್ಗೆ ಒಂದು ಪ್ರಶ್ನೆ ಕೇಳುತ್ತಾರೆ, "ಮಗೂ, ನಿನಗೇನು ಇಷ್ಟ?" ಪಟಪಟನೆ ಮಾತು ಶುರು ಮಾಡುತ್ತಾಳೆ ತೊತ್ತೊಚಾನ್. ಮಧ್ಯಾಹ್ನದ ಊಟದ ಬಿಡುವಿನ ತನಕ ತೊತ್ತೊಚಾನ್ ಮಾತನಾಡುತ್ತಲೇ ಇರುತ್ತಾಳೆ; ಹೆಡ್ಮಾಸ್ಟರ್ ತದೇಕಚಿತ್ತದಿಂದ ಕೇಳುತ್ತಲೇ ಇರುತ್ತಾರೆ - ೩ ತಾಸುಗಳ ಅವಧಿ.
ಅಬ್ಬ, ಎಂಥ ತಾಳ್ಮೆ! ತೊತ್ತೊಚಾನ್ಗೆ ಎಂಥ ಸಂದೇಶ! ಅವಳ ಕೀಳರಿಮೆ ಎಲ್ಲವೂ ಆ ದಿನ ನಾಶವಾಯಿತು. ಅದನ್ನು ಸಾಧಿಸಿದವರು ಆ ಹೆಡ್ಮಾಸ್ಟರ್ - "ಮಗೂ, ಈ ದಿನ ಈ ಪ್ರಪಂಚದಲ್ಲಿ ನೀನು ನನ್ನ ಪಾಲಿಗೆ ಎಲ್ಲರಿಗಿಂತ ಮುಖ್ಯ ವ್ಯಕ್ತಿ" ಎಂಬ ಸಂದೇಶ ನೀಡುತ್ತಾ. ಆ ಪರಿಯಲ್ಲಿ ಅವಳ ಜೀವಮಾನಕ್ಕೆ ಸಾಕಾಗುವಷ್ಟು ಆತ್ಮವಿಶ್ವಾಸ ತುಂಬಿದರು ಅವರು.
ಕುಣಿಯಲು ಗೊತ್ತಿಲ್ಲದವರು: "ಕುಣಿಯಲು ಗೊತ್ತಿಲ್ಲದವನು ರಂಗಸ್ಥಳ ಓರೆ (ಸರಿಯಾಗಿಲ್ಲ) ಎಂದನಂತೆ" ಎಂಬ ಗಾದೆ ಮಾತು ನಮಗೆಲ್ಲ ಗೊತ್ತು. ಆದರೆ ಮಕ್ಕಳಲ್ಲಿ ಈ ಪ್ರವೃತ್ತಿ ಬೆಳೆಯಲು
ಹೆತ್ತವರು ಎಷ್ಟರ ಮಟ್ಟಿಗೆ ಕಾರಣರು?
ಹೊಟ್ಟೆ ತೆವಳಿಕೊಂಡು ಸಾಗುವ ಮಗು ಕೈ ಊರಿ ಎದ್ದು ನಡೆಯಲು ಕಲಿಯುವ ಸನ್ನಿವೇಶ ನೆನಪು ಮಾಡಿಕೊಳ್ಳಿರಿ. ಅಂಥ ಮಗು ಆಯ ತಪ್ಪಿ ಬಿದ್ದು, ಮುಖ ನೆಲಕ್ಕೆ ಜಜ್ಜಿ, ರಕ್ತ ಜಿನುಗುವಾಗ ಅತ್ತು ರಂಪ ಮಾಡುವುದು ಸಹಜ. ಆಗ ಎಷ್ಟು ಮುದ್ದು ಮಾಡಿದರೂ ಮಗು ಅಳು ನಿಲ್ಲಿಸುವುದಿಲ್ಲ. ಆ ಕ್ಷಣದಲ್ಲಿ ಹೆತ್ತವರು ಏನು ಮಾಡುತ್ತಾರೆ? ಮಗುವಿನ ಅಮ್ಮ ಅಥವಾ ಅಪ್ಪ ತಟಕ್ಕನೆ ಕೈಯಿಂದ ನೆಲಕ್ಕೆ ಬಡಿದು ಹೀಗೆನ್ನುತ್ತಾರೆ, "ಅಬ್ಬ ನೆಲವೇ! ನನ್ನ ಮಗೂನ್ನ ಬೀಳಿಸಿ ಬಿಟ್ಟಿತು. ಈ ನೆಲದ್ದೇ ತಪ್ಪು. ಏಟು ಕೊಟ್ಟೆ ನೋಡು. ನೀನಿನ್ನು ಅಳಬೇಡ". ಆಗ ಮಗುವಿನ ಗಮನ ಗಾಯದ ನೋವಿನಿಂದ ಬೇರೆಡೆ ತಿರುಗಿ ಮಗು ಅಳು ನಿಲ್ಲಿಸಬಹುದು. ಆದರೆ ಮಗುವಿಗೆ ಸಿಗುವ ಸಂದೇಶ ಏನು? "ತಪ್ಪು ತನ್ನದೇ ಆಗಿದ್ದರೂ ಅದಕ್ಕಾಗಿ ಬೇರೆ ವಸ್ತು ಅಥವಾ ವ್ಯಕ್ತಿಯನ್ನು ದೂಷಿಸುವುದು ಸರಿ". ಇದು ಆತ್ಮವಿಶ್ವಾಸ ಬೆಳೆಯಲು ಸಹಾಯಕವೇ?
ಚಾಲಕ ಪರವಾನಗಿ - ಆತ್ಮವಿಶ್ವಾಸದ ಪರೀಕ್ಷೆ: ನನ್ನ ಮಗಳಿಗೆ ೧೮ ವರುಷ ಆದಾಗ ದ್ವಿಚಕ್ರ ವಾಹನದ ಚಾಲಕ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಅರ್ಜಿ ಬರೆದಳು. ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್ಟಿಓ) ಕೊಟ್ಟಳು. ಅಲ್ಲಿದ್ದ ಅಧಿಕಾರಿ ಅರ್ಜಿಯ ಮೇಲೆ ಕಣ್ಣಾಡಿಸಿ ಕೇಳಿದ್ದೇನು? "ನೀನು ಕನ್ನಡಕ ಹಾಕಿಕೊಂಡಿದ್ದಿ. ನಿನಗೆ ಕಣ್ಣು ಸರಿಯಾಗಿ ಕಾಣಿಸುತ್ತದೇನು? ರೇರ್-ವಿವ್ ಮಿರರ್ನಲ್ಲಿ ಹಿಂದಿನ ವಾಹನ ನಿನಗೆ ಕಾಣಲಾದೀತೇ?" ಮಾತ್ರವಲ್ಲ, ರೇಷನ ಕಾರ್ಡಿನಲ್ಲಿ ಅವಳ ಹೆಸರು ತಪ್ಪಾಗಿ ಮುದ್ರಿತವಾದ ಬಗ್ಗೆ ತಗಾದೆ ಎತ್ತಿ, ಅವಳ ಅರ್ಜಿಯನ್ನು ತಿರಸ್ಕರಿಸಿದರು.
ಮನೆಗೆ ನಿರಾಶಳಾಗಿ ಮರಳಿದ ಅವಳಿಗೆ "ಹೀಗೆಹೀಗೆ ಮಾಡು, ಹೀಗೆಹೀಗೆ ಮಾತಾಡು" ಎಂದು ತಿಳಿಸಿದೆ. "ಅದೇ ಅಧಿಕಾರಿ ನಿನ್ನ ಅರ್ಜಿಯನ್ನು ಪರೀಕ್ಷೆಗೆ ಶಿಫಾರಸ್ ಮಾಡಿಯೇ ಮಾಡುತ್ತಾರೆ - ಅದೂ ಇನ್ನು ಒಂದು ಗಂಟೆಯೊಳಗೆ, ನೀನೇ ನೋಡು" ಎಂದು ಹುರಿದುಂಬಿಸಿದೆ.
ಅನಂತರ ಅವಳು ಎಸ್ಎಸ್ಎಲ್ಸಿ ಸರ್ಟಿಫಿಕೇಟಿಗೆ ಒಬ್ಬರು ನೋಟರಿಯ ಸಹಿ ಪಡೆದುಕೊಂಡಳು. ಈ ದಾಖಲೆಯೊಂದಿಗೆ ಅದೇ ಅಧಿಕಾರಿಯ ಎದುರು ನಿಂತು ಪುನಃ ಅರ್ಜಿ ನೀಡಿದಳು. "ಪುನಃ ಯಾಕೆ ಬಂದದ್ದು?" ಎಂದವರು ಕೇಳಿದಾಗ, ಎಸ್ಎಸ್ಎಲ್ಸಿ ಸರ್ಟಿಫಿಕೇಟಿನ ಯಥಾಪ್ರತಿ ತೋರಿಸಿದಳು; ಅರ್ಜಿಯಲ್ಲಿ ಬರೆದಿರುವುದೇ ನನ್ನ ಸರಿಯಾದ ಹೆಸರು ಎಂಬುದಕ್ಕೆ ಇದು ಪುರಾವೆ ಎಂದಳು. ಅಧಿಕಾರಿ ಮುಗುಮ್ಮಾಗಿ "ಇದು ಆಗೋದಿಲ್ಲ" ಎಂದಾಗ ಅವಳ ಉತ್ತರ, "ಯಾಕೆ ಆಗೋದಿಲ್ಲ? ನೋಟರಿ ಸಹಿ ಹಾಕಿದ ಸರ್ಟಿಫಿಕೇಟ್ ನೀವು ಒಪ್ಪೋದಿಲ್ಲ ಎಂದು ಬರೆದು ಕೊಡಿ".
ಆಗ ಅಧಿಕಾರಿ ತಾತ್ಕಾಲಿಕ ರೇಷನ್ ಕಾರ್ಡಿನಲ್ಲಿ ಹೆಸರು ತಪ್ಪಾಗಿರುವುದನ್ನು ಸರಿಪಡಿಸಬೇಕೆಂದು ತಕರಾರು ತೆಗೆದರು. "ಅದು ತಪ್ಪು ಮಾಡಿದ್ದು ಕರ್ನಾಟಕ ಸರಕಾರದ ಇನ್ನೊಂದು ಇಲಾಖೆಯವರು. ಅದಕ್ಕೆ ನಾನು ಜವಾಬ್ದಾರಿ ಅಲ್ಲ. ಆ ತಪ್ಪನ್ನು ಸರಿಪಡಿಸಬೇಕೆಂದು ಪತ್ರ ಕೊಟ್ಟು ಒಂದು ವರ್ಷ ದಾಟಿದೆ. ಇಲ್ಲಿ ನೋಡಿ" ಎಂದು ಅದನ್ನೂ ತೋರಿಸಿದಳು. ಈಗ ಆ ಅಧಿಕಾರಿಗೆ ಇನ್ಯಾವುದೇ ತಕರಾರು ತೆಗೆಯಲು ಸಾಧ್ಯವಾಗಲಿಲ್ಲ. ಕಣ್ಣಿನ ದೃಷ್ಟಿ ಬಗ್ಗೆ ಆಸಾಮಿ ತುಟಿ ಪಿಟಕ್ಕೆನ್ನಲಿಲ್ಲ. (ಯಾಕೆಂದರೆ ಕಣ್ಣಿನ ದೃಷ್ಟಿ ಬಗ್ಗೆ ಪರೀಕ್ಷೆ ಮಾಡಬೇಕಾದವರು ಆರ್ಟಿಓ ಅಧಿಕಾರಿಗಳಲ್ಲ, ಕಣ್ಣಿನ ವೈದ್ಯರು) ಒಂದು ತಾಸಿನ ಮುಂಚೆ ತಿರಸ್ಕರಿಸಿದ ಅರ್ಜಿಯನ್ನೇ ಈಗ ಪರೀಕ್ಷೆಗೆ ಶಿಫಾರಸ್ ಮಾಡಿದರು.
ಹೆತ್ತವರು ಹೇಳಿದ್ದನ್ನು ಮಕ್ಕಳು ಕಲಿಯಲಿಕ್ಕಿಲ್ಲ, ಆದರೆ ಹೆತ್ತವರು ಮಾಡುವುದನ್ನು ಅನುಸರಿಸುತ್ತಾರೆ. ಅದಕ್ಕಾಗಿ ಹೆತ್ತವರು ಮಕ್ಕಳಿಗೆ ಹೇಗೆ ಮಾದರಿ ಆಗಬೇಕು ಎಂಬುದಕ್ಕೆ ನಿದರ್ಶನಗಳು ಇಲ್ಲಿರುವ ಪ್ರಕರಣಗಳು. ಮಕ್ಕಳನ್ನು ಆತ್ಮವಿಶ್ವಾಸ ತುಂಬಿದ ವ್ಯಕ್ತಿಗಳನ್ನಾಗಿ ರೂಪಿಸುವ ಆಯ್ಕೆ ಹೆತ್ತವರ ಕೈಯಲ್ಲೇ ಇದೆ. ಮಕ್ಕಳನ್ನು ಆ ರೀತಿ ಬೆಳೆಸಲು ಹೆತ್ತವರು ಕಲಿಯೋಣ.