ಅನುಕರಣೆ ಹಾದಿಯಲ್ಲಿ ನಿಮ್ಮತನ ಅಳಿಯದಿರಲಿ

ಮೋಹನ್ ಎರಡು ತಿಂಗಳ ಮುಂಚೆ ಬ್ಯಾಂಕ್ ಸಾಲ ಪಡೆದು ಬೇಕರಿಯೊಂದನ್ನು ಆರಂಭಿಸಿದ್ದ. ವ್ಯಾಪಾರ ಆಗಿನ್ನೂ ಕುದುರುತ್ತಿತ್ತು. ಅಷ್ಟರಲ್ಲಿ ಪಕ್ಕದ ಮನೆಯವರ ಕೆಂಪು ಮಾರುತಿ ಕಾರು ಕಣ್ ಸೆಳೆಯಿತು. ತಾನೂ ಅಂತಹ ಕಾರಿನಲ್ಲಿ ಊರೆಲ್ಲ ಸುತ್ತಾಡಬೇಕೆಂಬ ಆಸೆ ಬಲವಾಗಿ ಇನ್ನೊಂದು ಸಾಲ ಮಾಡಿ ಹೊಸ ಕಾರು ಖರೀದಿಸಿದ.

ಕ್ರಮೇಣ ಮೋಹನನ ಗಳಿಕೆಯಿಲ್ಲವೂ ಹೊಸ ಕಾರಿನ ಪೆಟ್ರೋಲಿಗೇ ಆಹುತಿ. ಶನಿವಾರ ಬಂತೆಂದರೆ ಹೆಂಡತಿ-ಮಕ್ಕಳ ಒತ್ತಾಯ, "ಹೇಗೂ ಕಾರ್ ಇದೆಯಲ್ಲಾ, ಎಲ್ಲಿಗಾದರೂ ಹೋಗೋಣ." ಪ್ರತೀ ವಾರಾಂತ್ಯದಲ್ಲಿ ದೂರದೂರದ ಊರುಗಳಿಗೆ ಪ್ರವಾಸ ಹೋಗುವುದು ಪರಿಪಾಠವಾಯಿತು. ಇತ್ತ ಬೇಕರಿ ವ್ಯವಹಾರ ಕುಸಿಯತೊಡಗಿತು. ಅತ್ತ ಸಾಲದ ಹೊರೆ ಬೆಳೆಯತೊಡಗಿತು. ಸಾಲದ ಅಸಲು ಅಂತಿರಲಿ, ಬಡ್ಡಿಯನ್ನೂ ಕಟ್ಟಲಾಗದ ಪರಿಸ್ಥಿತಿ ಎದುರಾಯಿತು. ಕೊನೆಗೆ ಬ್ಯಾಂಕಿನವರು ಕಾರನ್ನು ವಶಕ್ಕೆ ತಗೊಂಡು ಹರಾಜು ಹಾಕಿದರು. ಮೋಹನ ಬೇಕರಿಯನ್ನೂ ಮುಚ್ಚಬೇಕಾಯಿತು. ಬಾಕಿಯಾದ ಸಾಲದ ವಸೂಲಿಗಾಗಿ ಬ್ಯಾಂಕ್ ಕೋರ್ಟಿನಲ್ಲಿ ಮೊಕದ್ದಮೆ ಹೂಡಿತು.

ಮದ್ದುಂಟೆ ಚಿನ್ನದ ಮೋಹಕ್ಕೆ?
ಕಲ್ಯಾಣಿಗೆ ಚಿನ್ನದ ಮೋಹ, ಹಿಂಗದ ದಾಹದಂತೆ. ಪವನುಗಟ್ಟಲೆ ಬಂಗಾರದೊಡವೆ ಹಾಕಿ, ಅಪ್ಪ-ಅಮ್ಮ ಮದುವೆ ಮಾಡಿಸಿದ್ದರು. ಆದರೂ ಇವಳಿಗೆ ಸಮಾಧಾನವಿಲ್ಲ. ಆಗರ್ಭ ಶ್ರೀಮಂತಳಾದ ತನ್ನ ಗೆಳತಿಯಂತೆ ತಾನೂ ಮೈತುಂಬ ಚಿನ್ನದೊಡವೆ ಹೇರಿಕೊಳ್ಳಬೇಕೆಂಬ ಬಯಕೆ. ಕೊನೆಗೆ ಚಿನ್ನಕ್ಕಾಗಿ ಹಣ ಗಳಿಸಬೇಕೆಂದು ಸಿದ್ಧ ಉಡುಪು ಹೊಲಿಯುವ ಘಟಕದಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅಲ್ಲಿ ದಿನವೂ ಎಂಟು ಗಂಟೆಗಳ ಕೆಲಸ; ನಂತರ ಮನೆಗೆಲಸ. ಎರಡೂ ಕಡೆ ದುಡಿದು ಹೈರಾಣಾದಳು ಕಲ್ಯಾಣಿ. ಆದರೂ ಚಿನ್ನದಾಸೆ ಬಿಡಲಿಲ್ಲ. ದಿನೇದಿನ ಅವಳ ಆರೋಗ್ಯ ಹದಗೆಟ್ತಿತು.

ಈ ಎರಡೂ ಪ್ರಕರಣಗಳಲ್ಲಿ ಸಮಸ್ಯೆಯ ಕಾರಣ ಅನುಕರಣೆ. ಹಾಗಾದರೆ ಅನುಕರಣೆ ಬೇಡವೇ?

ಜೀವನದಲ್ಲಿ ಅನುಕರಣೆ ಬೇಕು. ಬಾಲ್ಯದಿಂದಲೇ ನಾವು ದಿನನಿತ್ಯದ ಚಟುವಟಿಕೆಗಳನ್ನು ಅನುಕರಣೆಯಿಂದಲೇ ಕಲಿಯುತ್ತೇವೆ. ಭಾಷಾ ಕಲಿಕೆಯನ್ನು ಗಮನಿಸಿ. ಅಪ್ಪ-ಅಮ್ಮ ಹಾಗೂ ಹಿರಿಯರು ಮಾತನಾಡುವುದನ್ನು ಅನುಕರಿಸುತ್ತಲೇ ಅ, ಆ ಇತ್ಯಾದಿ ಸ್ವರಗಳ ಉಚ್ಚಾರವನ್ನು ಮಗು ಕಲಿಯುತ್ತದೆ. ಅಕ್ಷರಗಳನ್ನು ಜೋಡಿಸುತ್ತ ಪದಗಳ ಉಚ್ಚಾರ ಕಲಿಯುತ್ತದೆ. ಕ್ರಮೇಣ ಪದಗಳನ್ನು ಜೋಡಿಸುತ್ತ ವಾಕ್ಯಗಳನ್ನು ರಚಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹಿರಿಯರ ತುಟಿಗಳ ಚಲನೆ ಹಾಗೂ ಅವರು ಹೊರಡಿಸುವ ಧ್ವನಿಗಳ ಅನುಕರಣೆಯೇ ಮುಖ್ಯವಾಗುತ್ತದೆ.

ಮಗುವಿನ ವರ್ತನೆಗಳ ಕಲಿಕೆಯಲ್ಲಿ ಕೂಡ ಅನುಕರಣೆಯೇ ಪ್ರಧಾನ. ನೆಟಿಕೆ ಮುರಿಯುವುದನ್ನು ಅಜ್ಜಿಯಿಂದ, ಸ್ವರವೆತ್ತಿ ಮಾತನಾಡುವುದನ್ನು ಅಜ್ಜನಿಂದ, ಮುದ್ದು ಮಾಡುವುದನ್ನು ಅಮ್ಮನಿಂದ, ಅಳುವುದು- ನಗುವುದನ್ನು ಅಣ್ಣ-ಅಕ್ಕನಿಂದ - ಇವನ್ನೆಲ್ಲ ಅನುಕರಣೆ ಮಾಡುತ್ತಲೇ ಮಗು ಕಲಿಯುತ್ತದೆ.

ಇವೆಲ್ಲ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಗತ್ಯ. ಈ ದಿಸೆಯಲ್ಲಿ ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಅನುಕರಿಸುವುದು ಒಳ್ಳೆಯದೇ. ಸತ್ಯ ಹೇಳುವುದು, ಪ್ರಾಮಾಣಿಕತೆ, ಸಮಯಪಾಲನೆ, ಅನುಕಂಪ, ಕೊಟ್ಟ ಮಾತು ಉಳಿಸಿಕೊಳ್ಳುವುದು - ಇವನ್ನೆಲ್ಲ ಇನ್ನೊಬ್ಬರಿಂದ ಅನುಕರಣೆ ಮಾಡಲೇ ಬೇಕು. ಇಲ್ಲವಾದರೆ ನಮ್ಮ ಸಮಾಜ ಜೀವನವೇ ಹದಗೆಟ್ಟು ಹೋದೀತು.

ಅನುಕರಣೆಯ ಅಪಾಯ
ಮೋಸ, ಸುಳ್ಳು ಹೇಳುವುದು, ಕೀಳಾಗಿ ಮಾತಾಡುವುದು, ನಿಂದಿಸುವುದು, ಹೊಟ್ಟೆಕಿಚ್ಚು ಪಡುವುದು, ಸಮಯದ ಪೋಲು - ಇಂಥವನ್ನೂ ಮಗು ಅನುಕರಿಸಿಯೇ ಕಲಿಯುತ್ತದೆ. ಸಾಲ ವಸೂಲಿಗಾಗಿ ಬಂದವನು ಮನೆಯ ಕರೆಗಂಟೆ ಒತ್ತಿದಾಗ, "ಅಪ್ಪ ಮನೆಯಲ್ಲಿಲ್ಲ ಅಂತ ಹೇಳು" ಎಂದಾಗ ಮಗು "ಹೀಗೂ ಮಾಡಬಹುದು" ಎಂದು ಕಲಿಯುತ್ತದೆ. ಅದನ್ನೇ ಅನುಕರಿಸಿ, ಶಾಲೆಗೆ ಚಕ್ಕರ್ ಹೊಡೆದರೂ "ಶಾಲೆಗೆ ಹೋಗಿದ್ದೆ" ಎಂದು ಸುಳ್ಳು ಹೇಳುವ ಅಭ್ಯಾಸ ಮಾಡಿಕೊಳ್ಳುತ್ತದೆ.

ಹೆತ್ತವರು ಗಮನಿಸಿ
೧) ನಿಮ್ಮ ಮಕ್ಕಳು ಆಗಾಗ ಗಂಟಲಿನಲ್ಲಿ ಸದ್ದು ಮಾಡುವುದು, ನಟಿಕೆ ಮುರಿಯುವುದು, ಕೆಮ್ಮುವುದು, ಉಗುರು ಕಚ್ಚುವುದು, ನಾಲಿಗೆಯಿಂದ ತುಟಿ ಸವರಿಕೊಳ್ಳುವುದು ಇಂತಹ ನಡವಳಿಕೆ ತೋರಿದರೆ, ಅವನ್ನು ಮೊಳಕೆಯಲ್ಲೇ ಚಿವುಟಿ ಹಾಕಿ.


೨) ಸ್ವರವೇರಿಸಿ ಮಾತನಾಡುವುದು, ಹೇಳಿದ್ದನ್ನೇ ಹೇಳುವುದು ಅಥವಾ ಸಣ್ಣ ಕಾರಣಗಳಿಗೂ ಸಿಡುಕುವುದು ಇಂಥ ನಡವಳಿಕೆ ನಿಮ್ಮ ಮಕ್ಕಳಲ್ಲಿ ಕಂಡುಬಂದರೆ, ಅವರು ಯಾವ ಟಿವಿ ಸೀರಿಯಲ್ ನೋಡುತ್ತಿದ್ದಾರೆಂದು ಗಮನಿಸಿ. ಅದರ ಪಾತ್ರವೊಂದರ ಅನುಕರಣೆ ಅವರು ಮಾಡುತ್ತಿರಬಹುದು. ಹಾಗಿದ್ದಲ್ಲಿ, ಆ ಟಿವಿ ಸೀರಿಯಲ್ ನೋಡೋದಕ್ಕೆ ತಡೆ ಹಾಕಿ.

೩) ನಿಮ್ಮ ಮಕ್ಕಳ ಗೆಳೆಯ-ಗೆಳತಿಯರನ್ನು ಗಮನಿಸುತ್ತಿರಿ. ಅಹಿತ ಅಥವಾ ಅಸಭ್ಯ ವರ್ತನೆಯನ್ನು ನಿಮ್ಮ ಮಕ್ಕಳು ಶುರು ಮಾಡಿದರೆ, ಯಾರ ಪ್ರಭಾವದಿಂದ ಹಾಗಾಯಿತೆಂದು ಪರೀಕ್ಷಿಸಿ. ಆ ವ್ಯಕ್ತಿಯ ವರ್ತನೆಯ ಅನುಕರಣೆಯ ದುಷ್ಪರಿಣಾಮಗಳನ್ನು ತಿಳಿಸಿ ಹೇಳಿ.

ಕೆಲವರಿಗೆ ಅನುಕರಣೆ ಎಂಬುದೊಂದು ಚಾಳಿಯಾಗಿ ಬಿಡುತ್ತದೆ. ಹದಿಹರೆಯದಲ್ಲಿ ಈ ಚಾಳಿ ಜಾಸ್ತಿ. ಯಾರನ್ನೋ ಹೀರೋ ಎಂದು ಭಾವಿಸಿದರೆ, ಅವರ ಸಾಮಾನ್ಯ ನಡವಳಿಕೆಗಳೂ ವಿಶೇಷ ಅನ್ನಿಸಿ ಬಿಡುತ್ತವೆ. ತುಟಿ ಕೊಂಕಿಸುವಾಗ, ಮುಖ ಊದಿಸುವಾಗ, ನಗುವಾಗ, ನಡೆಯುವಾಗ - ಹೀಗೆ ಬೇರೆಬೇರೆ ನಡವಳಿಕೆಗಳಲ್ಲಿ ಆ ಹೀರೋನನ್ನೇ ಅನುಕರಿಸುತ್ತಾರೆ. ಅದು ಚಾಳಿಯಾಗಿ ಇತರರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಆದರೆ ಅನುಕರಣೆಯ ಸುಳಿಯಲ್ಲಿ ಸಿಲುಕಿದವರು ಅದರಿಂದ ಹೊರಬರಲಾಗದೆ ಚಡಪಡಿಸುತ್ತಾರೆ.

ಸ್ವಂತಿಕೆ ಬಲಿಯಾಗದಿರಲಿ
ಕೆಲವರಲ್ಲಿ ಅನುಕರಣೆಯ ಚಾಳಿ ಯಾವ ಮಟ್ಟ ತಲಪುತ್ತದೆಂದರೆ ಕೊನೆಗೆ ಅವರು ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಾರೆ. ಅವರ ವ್ಯಕ್ತಿತ್ವದ ಬಹುಪಾಲು ಅಂಶಗಳು ಯಾರದೋ ನಕಲಿಯಾಗುತ್ತದೆ. ಆದ್ದರಿಂದ ಅವರು ಸಹಜವಾಗಿಯೇ ಕೀಳರಿಮೆಯಿಂದ ಬಳಲುವ ಸಾಧ್ಯತೆಗಳಿರುತ್ತವೆ.

ಅನುಕರಣೆಗೆ ಬಲಿಯಾಗಿ ಸ್ವಂತಿಕೆ ಕಳೆದುಕೊಳ್ಳ ಬಾರದು ಎಂಬ ಇಚ್ಚೆ ಇರುವವರಿಗೆ ಇಲ್ಲಿದೆ ಒಂದು ಸುಲಭ ಸೂತ್ರ: ನಿಮ್ಮ ಬದುಕಿನ ದೀರ್ಘಾವಧಿ ಗುರಿ ನಿರ್ಧರಿಸಿ. ಇನ್ನು ೧೦ ವರುಷಗಳಲ್ಲಿ ಮತ್ತು ೨೫ ವರುಷಗಳಲ್ಲಿ ನೀವು ಏನಾಗಬೇಕೆಂದು ಈಗಲೇ ನಿಶ್ಚಯಿಸಿ. ಆಗ ನಿಮ್ಮ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಆ ಹಾದಿಯಲ್ಲಿ ಅತ್ತಿತ್ತ ನೋಡದೆ ನಡೆಯುತ್ತ, ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳಿ. ನೀವು ಬೇರೆ ಯಾರಂತೆ ಆಗಬಾರದು, ನೀವು ನೀವೇ ಆಗಬೇಕು, ಅಲ್ಲವೇ?