ಪುಸ್ತಕ: ಮನಸ್ಸಿನ ಮ್ಯಾಜಿಕ್
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: ೨೦೧೪, ಪುಟ: ೧೨೦, ಬೆಲೆ: ರೂ.೫೫
ನವಕರ್ನಾಟಕ ಪ್ರಕಾಶನದ “ವ್ಯಕ್ತಿ ವಿಕಸನ ಮಾಲೆ”ಯ ಈ ಪುಸ್ತಕ, ಮನಸ್ಸು ಮತ್ತು ಅದರ ವಿವಿಧ ಆಯಾಮಗಳ ಬಗ್ಗೆ ಲೇಖಕರ ಮೊದಲ ಪುಸ್ತಕ. ಎರಡೇ ವರುಷಗಳಲ್ಲಿ ಎರಡು ಬಾರಿ ಮರುಮುದ್ರಣವಾದ ಪುಸ್ತಕ.
ಇದರ ಬಗ್ಗೆ “ವ್ಯಕ್ತಿ ವಿಕಸನ ಮಾಲೆ”ಯ ಸಂಪಾದಕರೂ, ಸುಪ್ರಸಿದ್ಧ ಮನೋವೈದ್ಯರೂ, ಒಂದು ನೂರಕ್ಕೂ ಅಧಿಕ ಪುಸ್ತಕಗಳ ಲೇಖಕರೂ ಆದ ಡಾ.ಸಿ.ಆರ್. ಚಂದ್ರಶೇಖರ್ ಅವರ ಮುನ್ನುಡಿಯಿಂದ ಆಯ್ದ ಭಾಗ: “ಮನಸ್ಸೇ ಒಂದು ಮ್ಯಾಜಿಕ್. ….. ಅಪೂರ್ವ ಕೃತಿರತ್ನಗಳನ್ನು ಬರೆದ ಕವಿ-ಕಾದಂಬರಿಕಾರ ನಾಟಕಕಾರರ ಮನಸ್ಸಿನ ಮ್ಯಾಜಿಕ್, ಅದ್ಭುತ ರಮ್ಯ ಚಿತ್ರಗಳನ್ನು ರಚಿಸಿದ ಕಲಾವಿದರ ಮನಸ್ಸಿನ ಮ್ಯಾಜಿಕ್, ಸೌಂದರ್ಯವೇ ಮೈವೆತ್ತಿ ಬಂದಂತೆ ಶಿಲ್ಪ ಕಡೆದ ಶಿಲ್ಪಿಗಳ ಮನಸ್ಸಿನ ಮ್ಯಾಜಿಕ್, ನಮ್ಮ ದೇಶ, ಸಮಾಜದ ಗತಿಯನ್ನೇ ಬದಲಿಸಿದ ನಾಯಕರುಗಳ ಮನಸ್ಸಿನ ಮ್ಯಾಜಿಕ್, ತಮ್ಮ ಸೃಜನಶೀಲತೆ ಸಂಶೋಧನೆಗಳಿಂದ ವಿಶ್ವಾಮಿತ್ರ ಸೃಷ್ಟಿ ಮಾಡಿದ ವಿಜ್ನಾನಿಗಳ ಮನಸ್ಸಿನ ಮ್ಯಾಜಿಕ್ ನಮ್ಮ ನಿಬ್ಬೆರಗಾಗಿಸುತ್ತದೆ. ನಮ್ಮ ಮನಸ್ಸು ಅಂತಹ ಮ್ಯಾಜಿಕ್ ಮಾಡಲು ಸಾಧ್ಯವಾಗಬಹುದಾದರೆ ಎಷ್ಟು ಚೆನ್ನ!
ಮನಸ್ಸಿನ ಶಕ್ತಿ ಅಪಾರ, ಅಪರಿಮಿತ. ಸಾಮಾನ್ಯ ವ್ಯಕ್ತಿಗಳೂ ಸಮಯ, ಸಂದರ್ಭ ಬಂದಾಗ, ಅವಕಾಶ ಸಿಕ್ಕಾಗ, ಸವಾಲು ಅಪಾಯ ಎದುರಾದಾಗ, ಅಪೂರ್ವ ಮತ್ತು ಅಧ್ಭುತ ಎನ್ನಬಹುದಾದ ಕೆಲಸ-ಸಾಧನೆಗಳನ್ನು ಮಾಡುತ್ತಾರೆ. ಅದುವರೆಗೆ ಯಾವ ದೊಡ್ಡ ಕೆಲಸ ಮಾಡದ ವ್ಯಕ್ತಿ, ನೀರಿಗೆ ಬಿದ್ದು ಮುಳುಗುತ್ತಿದ್ದ ಐದಾರು ಜನರನ್ನು ರಕ್ಷಿಸುವುದನ್ನು ನೋಡುತ್ತೇವೆ. ಹಡಗಿನ ಕ್ಯಾಪ್ಟನ್ ಥಟ್ ಎಂದು ಸತ್ತಾಗ, ಹಡಗಿನ ರಕ್ಷಣೆಯನ್ನು ಹೆಚ್ಚು ಅನುಭವವಿಲ್ಲದ ಕೆಳಹಂತದ ಕೆಲಸಗಾರ ಮಾಡಬಹುದು. ಪ್ರಮುಖ ಕಲಾವಿದ ಇದ್ದಕ್ಕಿದ್ದಂತೆ ಕಂಪೆನಿ ಬಿಟ್ಟು ಹೊರಟುಹೋದಾಗ, ಸಣ್ಣ ಪಾತ್ರ ಮಾಡುತ್ತಿದ್ದವನೊಬ್ಬ ಯಶಸ್ವಿಯಾಗಿ, ಆ ಪ್ರಮುಖ ನಟನ ಪಾತ್ರವನ್ನು ನಿರ್ವಹಿಸಬಹುದು.
ಪ್ರತಿಯೊಬ್ಬ ವ್ಯಕ್ತಿ ತನ್ನ ಮನಃಶಕ್ತಿಯ ಶೇಕಡಾ ೧೦ರಷ್ಟನ್ನು ಮಾತ್ರ ಬಳಸುತ್ತಾನೆ. ಉಳಿದ ಶೇಕಡಾ ೯೦ರಷ್ಟು ಶಕ್ತಿ ಸುಪ್ತವಾಗಿ, ಅವ್ಯಕ್ತವಾಗಿರುತ್ತದೆ ಎಂದು ಮನೋತಜ್ನರು ಹೇಳುತ್ತಾರೆ. ಈ ಸುಪ್ತ, ಅಪ್ರಕಟಿತ ಮೀಸಲು ಶಕ್ತಿಯನ್ನು ಗುರುತಿಸಿ ಬಳಸಿದರೆ, ವ್ಯಕ್ತಿ ದೊಡ್ಡದನ್ನೇ ಸಾಧಿಸಬಲ್ಲ……
ಮಂಗಳೂರಿನ ಅಡ್ಡೂರು ಕೃಷ್ಣ ರಾವ್ ಲೇಖಕರಾಗಿ ಈಗಾಗಲೇ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ. ಚಿಕ್ಕ ಅಧ್ಯಾಯಗಳು, ಅವುಗಳಿಗೆ ಆಕರ್ಷಕ ಶಿರೋನಾಮೆ, ಚಿಕ್ಕ ವಾಕ್ಯಗಳು, ಕಥೆ ಉದಾಹರಣೆಗಳು, ಆತ್ಮೀಯ ಧಾಟಿಯ ಬರಹದ ಶೈಲಿ ಓದುಗರ ಮನಸ್ಸನ್ನು ಮುಟ್ಟುತ್ತದೆ, ತಟ್ಟುತ್ತದೆ, ಪ್ರಚೋದಿಸುತ್ತದೆ. ಆಳವಾದ, ವಿಸ್ತಾರವಾದ ಅಧ್ಯಯನ, ವಿಸ್ತೃತ ಅನುಭವಗಳ, ವಿಶೇಷ ಮನನ-ಚಿಂತನೆಗಳ ಆಧಾರದಿಂದ ಹೊರಹೊಮ್ಮಿರುವ ಈ ಪುಸ್ತಕ ಕನ್ನಡಿಗರಿಗೆ ಉಪಯುಕ್ತ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಲೇಖಕರಿಗೆ, ಓದುಗರು ಮತ್ತು ಪ್ರಕಾಶಕರ ಪರವಾಗಿ ಅಭಿನಂದನೆಗಳು.”
ಪುಸ್ತಕದ ಆರಂಭದಲ್ಲಿ ಲೇಖಕ ಅಡ್ಡೂರು ಕೃಷ್ಣ ರಾವ್, ಈ ಪುಸ್ತಕದ ಉದ್ದೇಶವನ್ನು ಹೀಗೆ ಸ್ಪಷ್ಟಪಡಿಸಿದ್ದಾರೆ: “ನಮ್ಮ ಮನಸ್ಸು ಮ್ಯಾಜಿಕ್ ಮಾಡುತ್ತಲೇ ಇರುತ್ತದೆ. ಅಸಾಧ್ಯವೆಂದು ತೋರುವ ಕನಸುಗಳನ್ನು ಹುಟ್ಟು ಹಾಕುತ್ತದೆ, ಅನಂತರ ಅವನ್ನು ನನಸು ಮಾಡುವ ದಾರಿಗಳನ್ನು ತೋರುತ್ತಲೂ ಇರುತ್ತದೆ.
ಆ ದಾರಿಗಳಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡುತ್ತ, ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ, ಸಾಧನೆ ಮಾಡುವುದು ನಮ್ಮ ಕೈಯಲ್ಲಿದೆ. ಮನುಷ್ಯ ಗೌರಿಶಂಕರ ಶಿಖರವನ್ನು ಏರಿದ್ದು, ಆಕಾಶದಲ್ಲಿ ಹಾರಿದ್ದು, ಬಾಹ್ಯಾಕಾಶದಲ್ಲಿ ಸುತ್ತಿದ್ದು, ಚಂದ್ರಲೋಕದಲ್ಲಿ ಕಾಲಿಟ್ಟು ಮರಳಿದ್ದು - ಇವೆಲ್ಲ ಉದಾಹರಣೆಗಳು.
ಇಂತಹ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಾದರೆ, ನಾವು ಬದಲಾಗಬೇಕಾಗುತ್ತದೆ. ಯಾವಾಗ ಎಂದರೆ ಈಗ, ಈ ಕ್ಷಣದಲ್ಲಿ. ಇಲ್ಲವಾದರೆ, ನಾಗಾಲೋಟದ ಬದುಕಿನಲ್ಲಿ ನಮ್ಮ ಪ್ರತಿಭೆ ಹಾಗೂ ತಾಕತ್ತುಗಳು ಕೆಲಸಕ್ಕೆ ಬಾರದೆ ಹೋದಾವು.
ಒಂದು ಕ್ಷಣ ಈ ಬಗ್ಗೆ ಯೋಚಿಸಿ. "ಈಗಿನಿಂದಲೇ ನಾನು ಬದಲಾಗಬಲ್ಲೆ. ಆದರೆ ನನ್ನನ್ನು ತಡೆಯುತ್ತಿರುವುದು ಯಾವುದು?" ಹತ್ತಾರು ಕಾರಣಗಳನ್ನು ನೀವು ಪಟ್ಟಿ ಮಾಡಬಹುದು. ಆದರೆ ಅವು ನಿಜವಾದ ಕಾರಣಗಳೇ ಅಥವಾ ನೆವನಗಳೇ? ಈಗಿನಿಂದಲೇ ನಾನು ಬದಲಾಗದಂತೆ ನನ್ನನ್ನು ತಡೆಯುತ್ತಿರುವ ಎಲ್ಲವೂ ಕೇವಲ ನೆವನಗಳು; ಒಂದೇ ಒಂದು ಸರಿಯಾದ ಕಾರಣ ಇಲ್ಲ. ಆಸಕ್ತಿಯ ವಿಷಯದ ಪುಸ್ತಕಗಳ ಓದು, ದಿನಚರಿ ಬರಹ, ಹೊಸ ಭಾಷೆಯ ಕಲಿಕೆ, ಪ್ರವಾಸದಿಂದ ಹೊಸ ಅನುಭವ ಗಳಿಕೆ, ದಿನನಿತ್ಯದ ನಡಿಗೆ, ಯೋಗಾಸನಗಳ ಅಭ್ಯಾಸ, ಧ್ಯಾನ ಅಥವಾ ಬೇರೆ ಯಾವುದೇ ಇರಲಿ. ಅದನ್ನು ಇಂದಿನಿಂದಲೇ ಶುರು ಮಾಡಿ, ಹಂತಹಂತವಾಗಿ ಪ್ರಗತಿಯ ಹಾದಿಯಲ್ಲಿ ಸಾಗಿ, ನೀವು ಜೀವನದಲ್ಲಿ ಸಾಧನೆ ಮಾಡಬಹುದು.
ಇದರ ಬೀಜಮಂತ್ರ ನಿಮ್ಮ ಮನಸ್ಸಿನಲ್ಲಿದೆ. ಇಂತಹ ಹತ್ತಾರು ಸಾಧನೆಗಳಿಗೆ ನಿಮ್ಮ ಮನಸ್ಸಿನ ತಾಕತ್ತು ಹಾಗೂ ಲಾಸ್ಯಗಳನ್ನು ಹೇಗೆ ದುಡಿಸಿ ಕೊಳ್ಳಬಹುದು ಎಂಬುದನ್ನು ತಿಳಿಸುವುದು ಈ ಪುಸ್ತಕದ ಉದ್ದೇಶ.”
ಈ ಪುಟ್ಟ ಪುಸ್ತಕದ (೧೨೦ ಪುಟಗಳು) ೨೦ ಅಧ್ಯಾಯಗಳಲ್ಲಿ, ಅಡ್ಡೂರು ಕೃಷ್ಣ ರಾವ್ ಮನಸ್ಸಿನ ತಾಕತ್ತಿನ ದಿಡ್ಡಿ ಬಾಗಿಲು ತೆಗೆಯುವ ದಾರಿಗಳನ್ನೂ ವಿಧಾನಗಳನ್ನೂ ತನ್ನ ಹಾಗೂ ಇತರರ ಬದುಕಿನ ಹಲವು ಘಟನೆಗಳ ಆಧಾರದಿಂದಲೇ ತೆರೆದಿಡುತ್ತಾರೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ದೊಡ್ಡ ಸಾಧನೆ ಮಾಡಲಿಕ್ಕಾಗಿ ಯಾರೂ ಅನುಸರಿಸಬಹುದಾದ ಕಾರ್ಯತಂತ್ರಗಳನ್ನು, ಸಾಧನೆಯ ಮೆಟ್ಟಿಲುಗಳನ್ನು ಪರಿಚಯಿಸುತ್ತಾರೆ.
ಬಾಲ್ಯದಲ್ಲಿ ಪುಸ್ತಕಗಳನ್ನು ತನ್ನ ಕೈಗಿತ್ತು ಪಠ್ಯೇತರ ಓದಿಗೆ ಪ್ರೇರಣೆ ನೀಡಿದ ತಂದೆ ದಿ. ಅಡ್ಡೂರು ಶಿವಶಂಕರ ರಾಯರನ್ನೂ, ಅಧ್ಯಾಪಿಕೆ ವೃತ್ತಿ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತ ತನ್ನ ಅಧ್ಯಯನವನ್ನು ಪ್ರೋತ್ಸಾಹಿಸಿದ ತಾಯಿ ದಿ. ಶ್ರೀಮತಿ ಬಿ. ಸುಶೀಲ ಅವರನ್ನೂ ಈ ಪುಸ್ತಕದ ಪ್ರಕಟಣೆಯ ಸಂದರ್ಭದಲ್ಲಿ ಲೇಖಕರು ಸ್ಮರಿಸಿದ್ದಾರೆ.