ಜಲಜಾಗೃತಿ(32) ಕನಿಷ್ಠ ನೀರಿನಿಂದ ಕೃಷಿ

"ನಮ್ ಕಡೆ ಹಿಂದಿನ್ ವರ್ಷ ಮಳೇನೇ ಆಗಿಲ್ಲ. ನಿಮ್ ಕಡೆ ಸ್ವಲ್ಪನಾದ್ರೂ ಮಳೆ ಆಗೈತಿ. ನಿಮ್ ತೋಟದಾಗೆ ಮಣ್ ಅಗೆದ್ರೆ ಎಷ್ಟಡಿ ಆಳ ನೀರಿನ್ ಪಸೆ ಇರ್ತದೆ?" ಎಂಬ ಪ್ರಶ್ನೆ ವಿಠಲಾಪುರದ ವೀರಪ್ಪ ಅವರದು.
ನನ್ನೊಂದಿಗಿದ್ದ ಚಿಕ್ಕಮಗಳೂರು ತಾಲೂಕಿನ ಕುನ್ನಾಳು ಗ್ರಾಮದ ಹದಿನೈದು ರೈತರು ತಮ್ಮೊಳಗೆ ಮಾತಾಡಿಕೊಂಡು ಉತ್ತರಿಸಿದರು, "ಮಣ್ಣಲ್ಲಿ ಐದಾರು ಇಂಚು ಆಳದ ವರೆಗೆ ನೀರಿನ್ ಪಸೆ ಇರ‍್ಬೋದು."
"ನಮ್ ತೋಟದಲ್ಲಿ ಹೆಂಗೈತೆ ನೋಡಿ" ಎಂದು ವೀರಪ್ಪ ಹಾರೆ ಎತ್ತಿಕೊಂಡು ಮಣ್ಣು ಅಗೆಯತೊಡಗಿದರು. ಎರಡು ಅಡಿ ಆಳಕ್ಕೆ ಅಗೆದು ತೋರಿಸಿದರು. ಅಷ್ಟು ಆಳದ  ವರೆಗೂ ಮಣ್ಣಿನಲ್ಲಿ ತೇವಾಂಶವಿತ್ತು. ಅದರಿಂದಾಗಿಯೇ ಅವರ ೧೫ ಎಕ್ರೆ ತೋಟದಲ್ಲಿ ಮರಗಿಡಗಳೆಲ್ಲ ಹಸುರಾಗಿದ್ದವು. ತೆಂಗು ಮತ್ತು ಅಡಿಕೆ ಮುಖ್ಯ ಬೆಳೆಗಳು. ಜಾಯಿಕಾಯಿ, ವೀಳ್ಯದೆಲೆ, ಅರಸಿನ, ಕರಿಮೆಣಸು, ವೆನಿಲ್ಲಾ, ಪಪ್ಪಾಯಿ ಉಪಬೆಳೆಗಳು.

ಅಕ್ಕಪಕ್ಕದ ತೋಟಗಳಲ್ಲಿ ಮರಗಿಡಗಳೆಲ್ಲ ಒಣಗಿ ಸೊರಗಿದ್ದವು. ಯಾಕೆಂದರೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಹಿಂದಿನ ಎರಡು ವರುಷಗಳಲ್ಲಿ ಮಳೆ ಬಂದದ್ದೇ ಇಲ್ಲ ಅನ್ನಬೇಕು. ವೀರಪ್ಪರ ತೋಟಕ್ಕೆ ನಾವು ಭೇಟಿ ಕೊಟ್ಟ ವರುಷ ಅಕ್ಟೋಬರ್ ತನಕ ಅಲ್ಪಸ್ವಲ್ಪ ಮಳೆ. ಅನಂತರ ಒಂದು ಹನಿ ಮಳೆ ಬಿದ್ದಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಇವರ ತೋಟದ ಮರಗಿಡಗಳು ಬಾಡಿದ್ದರೂ ಹಸುರು ಉಳಿದಿತ್ತು.

"ನಿಮ್ ತೋಟದಾಗೆ ನೀರಿನ್ ಪಸೆ ಉಳಿಸಿಕೊಳ್ಳಾಕೆ ಏನ್ ಮಾಡಿದ್ರಿ?" ಎಂಬ ನಮ್ಮ ಪ್ರಶ್ನೆಗೆ ವೀರಪ್ಪರ ಉತ್ತರ, "ನಮ್ ತೋಟದಾಗೆ ಏನೂ ಬೇಸಾಯ ಮಾಡಿಲ್ಲ. ಅಂದ್ರೆ ಶೂನ್ಯ ಬೇಸಾಯ. ಹಾಗಂತ ಒಂದೇಟಿಗೆ ನಾನ್ ಇಡೀ ತೋಟ ಶೂನ್ಯ ಬೇಸಾಯಕ್ಕೆ ತರ‍್ಲಿಲ್ಲ. ಹತ್ತುಹತ್ತು ಗುಂಟೇನೇ ಬಿಡಿಸ್ತಾ ಬಂದೆ. ಇಡೀ ತೋಟಾನ ಶೂನ್ಯ ಬೇಸಾಯಕ್ಕೆ ತರೋದಕ್ಕೆ ನಂಗೆ ಇಪ್ಪತ್ತು ವರ್ಷ ಬೇಕಾತು."

ಆ ತಾಲೂಕಿನ ಎಲ್ಲ ರೈತರಂತೆ ವೀರಪ್ಪರಿಗೂ ನೀರಿನ ಸಮಸ್ಯೆ. ಹಳೆಯ ಬಾವಿಯ ನೀರು ಕಡಿಮೆಯಾಗುತ್ತ ಬಂದಂತೆ ಎರಡನೇ ಬಾವಿ ತೋಡಿಸಿದರು. ಇದರ ನೀರೂ ವಿಸ್ತರಿಸುತ್ತಿದ್ದ ತೋಟಕ್ಕೆ ಸಾಲದಾಯಿತು. ಆಗ ಕೊಳವೆಬಾವಿ ಕೊರೆಸಲು ಶುರು ಮಾಡಿದರು. "ಹದಿನೆಂಟು ಬೋರ್ ಹೊಡೆಸಿದೆ. ಒಂದ್ರಲ್ಲೂ ನೀರ್ ಸಿಕ್ಲಿಲ್ಲ. ಕೆಲವು ಬೋರ್ ೩೫೦ ಅಡಿ ಹೊಡ್ಸಿದ್ದೆ. ಕೊನೆಗೆ ಆ ಕಲ್ಲುಬಂಡೆ ಹತ್ರ ಬೋರ್ ತೆಗ್ಸಿದೆ. ಅಲ್ಲಿ ೬೦ ಅಡಿಗೇ ನೀರು ಸಿಕ್ತು" ಎಂದು ವೀರಪ್ಪ ನೆನಪು ಮಾಡಿಕೊಂಡರು.

ಇನ್ನು ಹೊಸ ಕೊಳವೆಬಾವಿ ಬೇಡ; ಇರುವ ನೀರಿನಲ್ಲೇ ಕೃಷಿ ಮಾಡಬೇಕೆಂದು ಶೂನ್ಯ ಬೇಸಾಯ ಪದ್ಧತಿ ಅನುಸರಿಸಲು ನಿರ್ಧರಿಸಿದರು. ತೋಟದಲ್ಲಿ ಉಳುಮೆ ಮಾಡೋದನ್ನು ನಿಲ್ಲಿಸಿದರು.  ಸಣ್ಣ ಮಟ್ಟದಲ್ಲಿ ಎರೆಹುಳಗೊಬ್ಬರ ಮಾಡತೊಡಗಿದರು. ಕ್ರಮೇಣ ರೂ. ೨ ಲಕ್ಷ ವೆಚ್ಚದಲ್ಲಿ ಎರೆಹುಳ ಸಾಕಾಣಿಕೆ ಘಟಕದ ನಿರ್ಮಾಣ. ತೋಟಕ್ಕೆ ಬಳಸಿ ಮಿಕ್ಕಿದ ಎರೆಹುಳ ಗೊಬ್ಬರ ಮಾರಾಟ.

"ಎರೆಹುಳ ಗೊಬ್ಬರ ಹಾಕಿದ್ರಿಂದಾಗಿ ಮೂರು ವರುಷ ಮಳೆ ಇಲ್ಲದಿದ್ರೂ ಗಿಡಗಳ ಬುಡದಲ್ಲಿ ನೀರಿನ ಪಸೆ ಉಳಿದೈತೆ. ಯಾಕಂದ್ರೆ ಎರೆಹುಳಗಳೇ ಉಳುಮೆ ಮಾಡ್ತವೆ" ಎಂದರು ವೀರಪ್ಪ. ತೆಂಗಿನ ಮರದ ಬುಡದಿಂದ ಮೂರು ಅಡಿ ದೂರದಲ್ಲಿ ಮರದ ಸುತ್ತಲೂ ಅರ್ಧ ಇಂಚು ಆಳಕ್ಕೆ ಮಣ್ಣನ್ನು ಹಾರೆಯಿಂದ ತೆಗೆಯುತ್ತಾರೆ. ಅಲ್ಲಿ ಎರೆಹುಳಗೊಬ್ಬರ ಹರಡಿ ಅದರ ಮೇಲೆ ಮಣ್ಣು ಹಾಕಿ ಮುಚ್ಚುತ್ತಾರೆ.

ಶೂನ್ಯ ಬೇಸಾಯದಿಂದ ಅವರ ಇಳುವರಿ ಕಡಿಮೆಯಾಗಿಲ್ಲ. ಸರಾಸರಿ ಒಂದು ಅಡಿಕೆಮರದಿಂದ ೨ ಕಿಲೋ ಒಣ ಅಡಿಕೆ ಇಳುವರಿ. "ಏನೂ ಬೇಸಾಯ ಮಾಡದೆ ಮೂರೆಕ್ರೆಯಿಂದ ನಂಗೆ ೨೪ ಕ್ವಿಂಟಾಲ್ ಒಣ ಅಡಿಕೆ ಸಿಗ್ತಿದೆ. ಅದೇ ನಮ್ ಕಡೆ ಉಳುಮೆ ಮಾಡಿ ಪೇಟೆಗೊಬ್ರ ಹಾಕೋರಿಗೂ ಸರಾಸರಿ ಇಷ್ಟು ಇಳುವರಿ ಸಿಗಲ್ಲ" ಎಂದು ವೀರಪ್ಪ ವಿವರಿಸಿದರು.

ತಮ್ಮ ಕೊಳವೆಬಾವಿಗೆ ಜಲಮರುಪೂರಣ ಮಾಡುತ್ತಿರುವ ವೀರಪ್ಪ ಕೃಷಿಕರನ್ನು ಎಚ್ಚರಿಸುತ್ತಾರೆ, "ಎಲ್ಲ ರೈತರೂ ಮಳೆನೀರು ಇಂಗಿಸಬೇಕು. ಇಲ್ಲಾಂದ್ರೆ ಬಹಳ ಕಷ್ಟಕ್ಕೆ ಸಿಕ್‍ಹಾಕ್ಕೊಳ್ತಾರೆ."