"ನಿನ್ನದು ಕೆರೆ ಹತ್ತಿರದ ಜಮೀನು. ಬೋರ್ವೆಲ್ ಹಾಕ್ಸು. ಬಾಳೆ ಮತ್ತು ಟೊಮೆಟೊ ಬೆಳೆಸಿ, ಚೆನ್ನಾಗಿ ದುಡ್ಡು ಮಾಡು" ಎಂದು ತನಗೆ ಹಳ್ಳಿಯಲ್ಲಿ ಹಲವರು ಉಪದೇಶ ಮಾಡಿದ್ದನ್ನು ನೆನೆಯುತ್ತಾರೆ ಬಿ. ಎಲ್. ಶೋಬನಬಾಬು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಾಸಾದದ್ದು ೧೯೮೮ರಲ್ಲಿ. ಸಂಬಳದ ಕೆಲಸಕ್ಕೆ ಹೋಗಬೇಕೆಂದು ಅವರಿಗೆ ಅನಿಸಲಿಲ್ಲ. ’ತಂದೆ ಲಕ್ಷ್ಮಣ ಶೆಟ್ಟಿಯವರ ಪಾಲಿಗೆ ಬಂದ ೧೨ ಎಕ್ರೆ ಜಮೀನಿದೆ. ಅಲ್ಲೇ ಕೆಲಸ ಮಾಡಿದರಾಯಿತು’ ಎಂಬ ಯೋಚನೆಯಿಂದ ತನ್ನ ಹಳ್ಳಿ ಎಸ್. ಬಿದರೆಗೆ ಮರಳಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಹಳ್ಳಿ ಎಸ್. ಬಿದರೆ. ಅಲ್ಲಿಗೆ ತಲಪಲು ಚಿಕ್ಕಮಗಳೂರಿನಿಂದ ಹೊರಟು, ಮಾಗಡಿ ಮತ್ತು ಕಳಸಾಪುರ ದಾಟಿ ೩೬ ಕಿಮೀ ದೂರ ಸಾಗಬೇಕು. ಹಳ್ಳಿಗೆ ಮರಳಿದ ಶೋಬನಬಾಬುವಿಗೆ ಹಲವರು ಅದೇ ರೀತಿ ಉಪದೇಶ ಮಾಡುತ್ತಿದ್ದಾಗ ಅವರು ಕೈಗೊಂಡ ನಿರ್ಧಾರವನ್ನು ಅವರ ಮಾತಿನಲ್ಲೇ ಕೇಳಿ, "ಇನ್ನೊಂದು ಬೋರ್ವೆಲ್ ಕೊರೆಸಬಾರದು; ಮಳೆನೀರಿನಿಂದ ಮತ್ತು ಈಗಿರುವ ಬೋರ್ವೆಲ್ನ ನೀರಿನಿಂದಲೇ ಬೇಸಾಯ ಮಾಡಬೇಕೆಂದು ನಿರ್ಧರಿಸಿದೆ."
ಈ ಯುವಕ ತನ್ನ ನಿರ್ಧಾರಕ್ಕೆ ಅನುಗುಣವಾಗಿ ಬೇಸಾಯ ಮಾಡಿಕೊಂಡಿದ್ದಾಗ ಬರಸಿಡಿಲಿನಂತೆ ಬಂದೆರಗಿತು ಬರಗಾಲ. ಒಂದಲ್ಲ, ಎರಡಲ್ಲ, ಸತತ ಮೂರು ವರುಷಗಳ ಬರಗಾಲ. ೨೦೦೧ರಿಂದ ೨೦೦೪ರ ವರೆಗೆ ಎಸ್. ಬಿದರೆ ಹಳ್ಳಿಗೂ ಶೋಬನಬಾಬುವಿಗೂ ಅಗ್ನಿಪರೀಕ್ಷೆಯ ಕಾಲ. ಒಂದೆಡೆ ಬರಗಾಲದ ಹೊಡೆತ, ಇನ್ನೊಂದೆಡೆ ತೆಂಗಿನಮರಗಳಿಗೆ ನುಸಿರೋಗದ ಪೀಡೆ. ಇವರ ಒಂದೂವರೆ ಎಕ್ರೆ ತೋಟದ ೩೦ ವರುಷ ಹಳೆಯ ತೆಂಗಿನಮರಗಳೆಲ್ಲ ನುಸಿರೋಗದಿಂದ ಸೊರಗಿದವು. "ನಮ್ಮ ತೋಟದ ತೆಂಗಿನಮರಗಳಿಂದ ಐದು ಟನ್ ಕೊಬ್ಬರಿ ಸಿಗುತ್ತಿತ್ತು. ೨೦೦೩ರಲಿ ಸಿಕ್ಕಿದ್ದು ಒಂದು ಟನ್ ಮಾತ್ರ" ಎಂದು ನನ್ನೊಡನೆ ಮಾತಾಡುತ್ತಾ ತನಗಾದ ನಷ್ಟದ ಚಿತ್ರಣ ನೀಡಿದರು ಶೋಬನಬಾಬು.
ಸತತ ಮೂರು ವರುಷಗಳು ಮಳೆ ಕಡಿಮೆಯಾಗುತ್ತಾ ಸಾಗಿದಾಗ ತನ್ನ ತೋಟದಲ್ಲಿ ಬೀಳುವ ಮಳೆನೀರನ್ನೆಲ್ಲ ಸಂಗ್ರಹಿಸಲು ನಿರ್ಧರಿಸಿದರು ಅವರು. ಅದಕ್ಕಾಗಿ ಜಲಾನಯನ ಅಭಿವೃದ್ಧಿ ಇಲಾಖೆಯವರ ಬೆನ್ನು ಹತ್ತಿದರು. ತೋಟದಲ್ಲಿ ಒಡ್ಡು ಕಟ್ಟುವ ಕೆಲಸ ಆರಂಭಿಸಿಯೇ ಬಿಟ್ಟರು. ಅಂತಿಮವಾಗಿ ಇಲಾಖೆಯವರು ತಮ್ಮ ಕಾರ್ಯಕ್ರಮದ ಪ್ರಕಾರ ಕೂಲಿಗಾಗಿ ಐದು ಕ್ವಿಂಟಾಲ್ ಅಕ್ಕಿ ಮಂಜೂರು ಮಾಡಿದರು. "ನಾನು ಎಂ.ಎ. ಮಾಡಿದವನಾದ ಕಾರಣ ಅದನ್ನು ಮಂಜೂರು ಮಾಡಿಸಿಕೊಳ್ಳಲು ಸಾಧ್ಯವಾಯಿತು. ಹಳ್ಳಿಯ ಬೇರೆ ರೈತರಿಗಾದರೆ ಅದು ಸಿಗುತ್ತಿರಲಿಲ್ಲ" ಎಂದು ಒಣ ನಗೆ ನಕ್ಕರು ಶೋಬನಬಾಬು.
ಮುಂದಿನ ಮಳೆಗಾಲದಲ್ಲಿ ಅವರು ಕಟ್ಟಿದ ಒಡ್ಡುಗಳಲ್ಲಿ ಸಾಕಷ್ಟು ಮಳೆನೀರು ಸಂಗ್ರಹವಾಯಿತು. ಆಗ ತನ್ನ ಹಳ್ಳಿಗರನ್ನು ಕರೆಕರೆದು ತೋರಿಸಿದರು ಶೋಬನಬಾಬು. ನೀವೂ ಹೀಗೆ ಮಾಡಿ ಎಂದು ಒತ್ತಾಯಿಸಿದರು. ಹಾಗೆ ಮಳೆನೀರಿನ ಕೊಯ್ಲನ್ನು ಕಣ್ಣಾರೆ ಕಂಡ ಕೆಲವರು ಅದರ ಲಾಭವನ್ನು ಅರ್ಥ ಮಾಡಿಕೊಂಡರು.
ಆದರೆ ಹಳ್ಳಿಯ ಜನ ತಕ್ಷಣದ ಲಾಭವನ್ನಷ್ಟೇ ನೋಡ್ತಾರೆ ಎಂಬ ಸಂಕಟ ಶೋಬನಬಾಬುವಿಗೆ. "ಇಲ್ಲಿ ಹೆಚ್ಚಿನವರು ಟೊಮೆಟೊ ಬೆಳೀತಾರೆ. ಅದಕ್ಕಾಗಿ ರಾಸಾಯನಿಕ ಗೊಬ್ಬರ, ಲೀಟರಿಗೆ ೧,೨೦೦ ರೂಪಾಯಿ ಬೆಲೆಯ ರಾಸಾಯನಿಕ ವಿಷಗಳನ್ನು ಸುರಿದು ಎಕ್ರೆಗೆ ೧೫,೦೦೦ ರೂಪಾಯಿ ಖರ್ಚು ಮಾಡ್ತಾರೆ. ಬೇರೆಯವರ ಬೋರ್ವೆಲ್ನ ನೀರಿಗೆ ದುಡ್ಡು ಕೊಟ್ಟು ತಮ್ಮ ಜಮೀನಿಗೆ ನೀರು ಹಾಯಿಸ್ತಾರೆ. ಕೊನೆಗೆ ಟೊಮೆಟೊಕ್ಕೆ ರೇಟಿಲ್ಲ ಅಂತ ತಲೆ ಚಚ್ಚಿಕೊಳ್ತಾರೆ. ಮಾಡಿದ ಸಾಲ ತೀರಿಸಲಾಗದೆ ಒದ್ದಾಡ್ತಾರೆ" ಎಂಬ ವಿವರಣೆ ಅವರದು.
ತನ್ನ ಹಳ್ಳಿಯವರಿಗೆ ಮಳೆನೀರ ಸಂಗ್ರಹ, ಮಳೆ ನೀರಿಂಗಿಸುವುದು, ರಾಸಾಯನಿಕರಹಿತ ಕೃಷಿ ಇವೆಲ್ಲದರ ಬಗ್ಗೆ ತಾನು ಅನುಭವದಿಂದ ಕಲಿತದ್ದನ್ನೆಲ್ಲ ತಿಳಿಸಬೇಕು, ನೆಮ್ಮದಿಯ ಬದುಕಿಗೆ ದಾರಿ ತೋರಿಸಬೇಕು ಎಂಬ ಮಹದಾಸೆ ಶೋಬನಬಾಬುವಿಗೆ. ಜಲಜಾಗೃತಿ ಮಾಡಲು ಇಂಥವರು ಹಳ್ಳಿಗೊಬ್ಬರು ಇದ್ದರೆ ಸಾಕು, ಅಲ್ಲವೇ?