ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆ. ಕಣಬೂರು ಗ್ರಾಮದಲ್ಲಿದೆ ಕೊರಲುಕೊಪ್ಪ. ಅಲ್ಲಿಯ ಜಮೀನಿಗೆ ತುಂಗಾ ಏತ ನೀರಾವರಿ ಯೋಜನೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆ ನೀರು ಒದಗಿಸಬೇಕಾಗಿತ್ತು. ಆದರೆ ಇಲಾಖೆ ನೀರು ಸರಬರಾಜು ಮಾಡಲೇ ಇಲ್ಲ. ಹಾಗಂತ ರೈತರಿಗೆ ನೀರಾವರಿ ಶುಲ್ಕ ವಿನಾಯ್ತಿ ಮಾಡಿದರೇ? ಅದನ್ನೂ ಮಾಡಲಿಲ್ಲ.
ತುಂಗಾ ಏತ ನೀರಾವರಿ ಯೋಜನೆ ಕಾರ್ಯಗತವಾದದ್ದು ೧೯೭೨ರಲ್ಲಿ. ಕೆ. ಕಣಬೂರು ಗ್ರಾಮದ ೧೦೧೮ ಎಕ್ರೆ ಜಮೀನಿಗೆ ನೀರು ಒದಗಿಸಲಿಕ್ಕಾಗಿ. ಅಲ್ಲಿಂದ ೫ ಕಿ.ಮೀ. ದೂರದ ಕೊರಲುಕೊಪ್ಪದ ಜಮೀನಿಗೂ ಆಗ ನೀರು ಹರಿಸುವ ಯೋಜನೆ ಮಾಡಲಾಗಿತ್ತು. ಆದರೆ ಗದ್ದೆಗಳಿಗೆ ನೀರು ಹರಿಸಲು ಕಾಲುವೆ ನಿರ್ಮಿಸಲಿಲ್ಲ. ಇದರಿಂದಾಗಿ ಇಲ್ಲಿನ ತೋಟಗಳು ಒಣಗಿ ಹೋದವು ಎಂಬುದು ಗ್ರಾಮದ ಹಿರಿಯರ ದೂರು.
ರೈತರ ಜಮೀನಿಗೆ ನೀರು ಒದಗಿಸದಿದ್ದರೂ ನೀರಾವರಿ ಇಲಾಖೆ ಪ್ರತಿ ವರುಷ ನೀರಾವರಿ ಶುಲ್ಕ ವಿಧಿಸುತ್ತಾ ಬಂತು. "ಇದು ಅನ್ಯಾಯ" ಎಂದು ರೈತರು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದರು. ಇದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲೇ ಇಲ್ಲ. ಕ್ರಮೇಣ ಹಲವು ವರುಷಗಳ "ಶುಲ್ಕ ಬಾಕಿ" ಸಾವಿರಾರು ರೂಪಾಯಿಗಳಿಗೆ ಬೆಳೆಯಿತು. ಕೊನೆಗೆ ತಹಶೀಲ್ದಾರರಿಂದ ರೈತರಿಗೆ ಬಂದ ನೋಟೀಸ್‍ನಲ್ಲಿ "ಶುಲ್ಕ ಬಾಕಿ ಕಟ್ಟದಿದ್ದರೆ ಜಮೀನು ಹರಾಜು ಹಾಕಲಾಗುವುದು" ಎಂಬ ಬೆದರಿಕೆ!
"ನೀರಾವರಿ ಇಲಾಖೆ ಪ್ರಕಾರ ಕೊರಲುಕೊಪ್ಪಕ್ಕೆ ನೀರು ಸರಬರಾಜಾಗುತ್ತಿದ್ದು ಅದನ್ನು ಬಳಸಿ ರೈತರು ಬೆಳೆ ಬೆಳೆದಿದ್ದಾರೆ. ಅವರಿಗೆ ವರುಷಕ್ಕೆ ಒಂದು ಎಕ್ರೆಗೆ ೭೫ ರೂಪಾಯಿಗಳಂತೆ ನೀರಾವರಿ ಶುಲ್ಕ ಮತ್ತು ೪ ರೂಪಾಯಿ ನಿರ್ವಹಣಾ ವೆಚ್ಚ ವಿಧಿಸಲಾಗುತ್ತಿತ್ತು. ಆದರೆ ಶುಲ್ಕ ಪಾವತಿಸದ ರೈತರ ನಿರ್ಲಕ್ಷ್ಯದಿಂದಾಗಿ ಬಾಕಿ ಮಾಡಿದ ತೆರಿಗೆ ದೊಡ್ಡ ಮೊತ್ತವಾಗಿ ಬೆಳೆದಿದೆ" ಎಂಬುದು ತಹಶೀಲ್ದಾರರ ಅಂಬೋಣ.
ಇಂತಹ ಸಂದರ್ಭಗಳಲ್ಲಿ ರೈತರು ಏನು ಮಾಡಬಹುದು? ನ್ಯಾಯಕ್ಕಾಗಿ "ಬಳಕೆದಾರರ ಕೋರ್ಟಿ"ನ ಮೆಟ್ಟಲು ಹತ್ತಬಹುದು. ಹೀಗೆ ಹಕ್ಕು ಸಾಧನೆ ಮಾಡಿದವರು ಚಾಮರಾಜನಗರದ ಆಲೂರು ಗ್ರಾಮದ ಇಬ್ಬರು ರೈತರು. ಅವರಿಬ್ಬರೂ ನೀರಾವರಿ ಇಲಾಖೆ ವಿರುದ್ಧ ಬಳಕೆದಾರರ ಕೋರ್ಟಿನಲ್ಲಿ ದಾವೆ ಹೂಡಿ ಗೆದ್ದಿದ್ದಾರೆ.
ಪ್ರಕರಣದ ಹಿನ್ನೆಲೆ: ಸುವರ್ಣಾವತಿ ನದಿ ದಡದಲ್ಲಿರುವ ಆಲೂರಿನಲ್ಲಿ ಚೋಳರ ಕಾಲದಿಂದಲೂ ಕೃಷಿ ಸಾಗಿ ಬಂದಿದೆ. ೧೯೬೬ರಲ್ಲಿ ನದಿಗೆ ಅಣೆಕಟ್ಟು ಕಟ್ಟಲು ಸರಕಾರದ ನಿರ್ಧಾರ. ಇದರಿಂದ ಹಚ್ಚುವರಿ ೭,೦೦೦ ಎಕ್ರೆಗಳಿಗೆ ನೀರಾವರಿ ಒದಗಿಸುವ ಯೋಜನೆ. ಆಗಲೇ ಆಲೂರಿನ ರೈತರು ಇದನ್ನು ವಿರೋಧಿಸಿದ್ದರು. ಅಂತಿಮವಾಗಿ ಸರಕಾರ ರೈತರಿಗೆ ಲಿಖಿತ ಆಶ್ವಾಸನೆ ನೀಡಿತು: ಜಲಾಶಯದಿಂದ ನಿರಂತರವಾಗಿ ಕೃಷಿಗೆ ನೀರು ಸರಬರಾಜು ಮಾಡಲಾಗುವುದೆಂದು.
ಆದರೆ ಆದದ್ದೇನು? ೨೦೦೨ -೨೦೦೫ರಲ್ಲಿ ಆಲೂರನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ ಅಧಿಕಾರಿಗಳು, ಜಲಾಶಯದಿಂದ ನೀರು ಬಿಡಲು ನಿರಾಕರಿಸಿದರು. ಇದರಿಂದಾಗಿ ೪೦ ಗ್ರಾಮಗಳ ೪,೦೦೦ ಹೆಕ್ಟೇರ್ ರೈತರ ಜಮೀನಿನಲ್ಲಿ ಕೃಷಿಗೆ ಎದುರಾಯಿತು ಸಂಕಟ.
ಅಲ್ಲಿನ ತೆಂಗು ಬೆಳೆಗಾರ ಮಹೇಶ ಪ್ರಭು "ನೀರು ಪಡೆಯುವ ತಮ್ಮ ಹಕ್ಕು ಸಾಧನೆ" ಮಾಡಲು ನಿರ್ಧರಿಸಿದರು. ಅದಕ್ಕಾಗಿ ಚಾಮರಾಜನಗರದ ಜಿಲ್ಲಾ ಬಳಕೆದಾರರ ಕೋರ್ಟಿನಲ್ಲಿ ೮ ಎಪ್ರಿಲ್ ೨೦೦೫ರಂದು ದಾವೆ ಹೂಡಿದರು. ತಮಗಾದ ನಷ್ತಕ್ಕಾಗಿ ರೂ.೪,೯೦,೦೦೦ ಪರಿಹಾರ ಕೇಳಿದರು. ಅದೇ ಕೋರ್ಟಿನಲ್ಲಿ ಅಲ್ಲಿನ ಮಮತಾ ಅವರೂ ದಾವೆ ಹೂಡಿ ರೂ.೨,೯೧,೦೦೦ ಪರಿಹಾರ ವಿನಂತಿಸಿದರು. ತಾವು ಬಳಕೆದಾರರು; ಸೇವಾ ನ್ಯೂನತೆಗಾಗಿ ಸರಕಾರ ಪರಿಹಾರ ನೀಡಬೇಕೆಂಬುದು ಅವರ ವಾದ.
ಅಂತಿಮವಾಗಿ, ೧೯ ಜನವರಿ ೨೦೦೬ರಂದು ಬಳಕೆದಾರರ ಕೋರ್ಟ್ ಇಬ್ಬರೂ ರೈತರ ಪರವಾಗಿ ಚಾರಿತ್ರಿಕ ತೀರ್ಪು ನೀಡಿತು. ಬಳಕೆದಾರರ ರಕ್ಷಣಾ ಕಾಯಿದೆಯ ಪ್ರಕಾರ, ರೈತರು ನೀರಾವರಿ ಇಲಾಖೆಯ ಬಳಕೆದಾರರೆಂದೂ ಜಲಾಶಯದ ನಿರ್ವಹಣಾ ಅಧಿಕಾರಿಗಳು ಪೂರೈಕೆದಾರರೆಂದೂ ಕೋರ್ಟ್ ಘೋಷಿಸಿತು. ರೈತರಿಗೆ ಕೃಷಿ ನಷ್ತಕ್ಕಾಗಿ ರೂ.೫,೦೦೦ ಪರಿಹಾರ, ಮಾನಸಿಕ ಹಿಂಸೆಗಾಗಿ ಪರಿಹಾರ ಮತ್ತು ದಾವೆಯ ವೆಚ್ಚ ಪಾವತಿಸಬೇಕೆಂದು ತೀರ್ಪಿನಲ್ಲಿ ಕೋರ್ಟ್ ಆದೇಶಿಸಿತು.
ತಾವು ಬಳಕೆದಾರರು ಎಂಬುದನ್ನು ರೈತರಿಬ್ಬರೂ ಸರಕಾರಿ ನಿಯಮಗಳ ಆಧಾರದಿಂದಲೇ ಸಾಬೀತು ಮಾಡಿದರು. ಯಾಕೆಂದರೆ ಕರ್ನಾಟಕ ನೀರಾವರಿ ನಿಯಮಗಳು ೧೯೬೫ರ ನಿಯಮ ೪ ಹೀಗೆಂದು ವಿಧಿಸಿದೆ: "ಹೆಕ್ಟೇರಿಗೆ ರೂಪಾಯಿ ೨ರಿಂದ ರೂಪಾಯಿ ೪೫ ತನಕ ನೀರಿನ ಶುಲ್ಕ (ವಾಟರ್ ರೇಟ್) ವಸೂಲಿ ಮಾಡತಕ್ಕದ್ದು."
ನೀರಾವರಿ ಪ್ರದೇಶದ ಎಲ್ಲ ರೈತರೂ ಸರಕಾರಕ್ಕೆ ೩ ವಿಧಗಳ ಶುಲ್ಕ ಪಾವತಿಸುತ್ತಾರೆ: ಅಭಿವೃದ್ಧಿ ಶುಲ್ಕ, ನಿರ್ವಹಣಾ ಸೆಸ್ ಮತ್ತು ನೀರಿನ ಶುಲ್ಕ. ಬೇರೆಬೇರೆ ಪ್ರದೇಶಗಲ್ಲಿ ಬೇರೆಬೇರೆ ಮೊತ್ತದ ನೀರಿನ ಶುಲ್ಕ ವಸೂಲಿ. ಈ ದಾವೆ ಹೂಡಿದ ರೈತರು, ನೀರಿನ ಶುಲ್ಕವು "ತೆರಿಗೆ" ಅಲ್ಲವೆಂದೂ, ಅದು ನೀರೊದಗಿಸುವ "ಸೇವೆ"ಗೆ ವಿಧಿಸುವ "ಶುಲ್ಕ"ವೆಂದೂ ವಾದಿಸಿದರು. ಈ ವಾದವನ್ನು ಎತ್ತಿ ಹಿಡಿದ ಬಳಕೆದಾರರ ಕೋರ್ಟ್ ರೈತರಿಬ್ಬರೂ ಕಾಯಿದೆಯ ಪ್ರಕಾರ "ಬಳಕೆದಾರರು" ಎಂದು ಸಾರಿತು.
ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಳ್ಳುವ ರೈತರಿಗೆ ಎರಡು ದಾರಿಗಳಿವೆ: ಸರಕಾರವನ್ನು ದೂಷಿಸುತ್ತಾ ಅನ್ಯಾಯವನ್ನು ಸಹಿಸಿಕೊಳ್ಳುವುದು ಅಥವಾ ಪುರಾವೆಗಳ ಆಧಾರದಿಂದ ಕೋರ್ಟಿನಲ್ಲಿ ಹಕ್ಕು ಸಾಧನೆ ಮಾಡಿ ಪರಿಹಾರ ಪಡೆಯುವುದು. ಆಯ್ಕೆ ರೈತರ ಕೈಯಲ್ಲೇ ಇದೆ.