ಕೇಂದ್ರ ಸರಕಾರದ ಕೃಷಿ ಹಾಗೂ ಜಲ ಸಂಪನ್ಮೂಲ ಸಚಿವರು, ಯೋಜನಾ ಆಯೋಗದ ಅಥವಾ ಜಾಗತಿಕ ಬ್ಯಾಂಕಿನ ವಕ್ತಾರರು ಇವರು ಯಾರನ್ನೇ ಕೇಳಿ: ಕೃಷಿಯ ಸಮಸ್ಯೆಗಳಿಗೆ ಪರಿಹಾರವೇನು? ಅವರಿಂದ ಒಂದೇ ಉತ್ತರ: ಬೃಹತ್ ಜಲಾಶಯಗಳನ್ನು ನಿರ್ಮಿಸಿ, ಅಗಾಧ ಪ್ರಮಾಣದ ಮಳೆನೀರು ಸಂಗ್ರಹಿಸಿ, ಕೃಷಿಗಾಗಿ ಬಳಸಿ.
ಆದರೆ ಈ ಬಗ್ಗೆ ನಾವೆಲ್ಲರೂ ಕೇಳಲೇ ಬೇಕಾದ ಪ್ರಶ್ನೆಗಳಿವೆ: ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಜಲಾಶಯಗಳಿಂದ ಆಗಿರುವ ಪ್ರಯೋಜನಗಳೇನು? ಅವುಗಳ ನಿರ್ಮಾಣದ ಮುಂಚೆ ಆಶ್ವಾಸನೆ ನೀಡಿದ್ದ ಪ್ರಯೋಜನಗಳು ಸಿಕ್ಕಿವೆಯೇ?
ಭಾರತದಲ್ಲಿರುವ ಬೃಹತ್ ಜಲಾಶಯಗಳ ಸಂಖ್ಯೆ ೪,೦೦೦ಕ್ಕಿಂತ ಅಧಿಕ. ಇವುಗಳಲ್ಲಿ ಕೇವಲ ೭೬ ಜಲಾಶಯಗಳ ಬಗ್ಗೆ ಕೇಂದ್ರ ಜಲಮಂಡಲಿ ಮಾಹಿತಿ ಸಂಗ್ರಹಿಸುತ್ತಿದೆ. ಮಂಡಲಿಯ ವಾರ್ತಾಪತ್ರವು ಈ ಜಲಾಶಯಗಳ ಪ್ರಯೋಜನದ ಬಗ್ಗೆ ಬೆಳಕು ಚೆಲ್ಲುತ್ತದೆ. ಹನ್ನೆರಡು ವರುಷಗಳ (೧೯೯೪ರಿಂದ ೨೦೦೫) ಮಾಹಿತಿಯ ಪರೀಕ್ಷೆಯಿಂದ ತಿಳಿದು ಬರುವ ಸತ್ಯಾಂಶಗಳು ಹೀಗಿವೆ:
* ಪ್ರತಿ ವರುಷ, ಸರಾಸರಿ ಲೆಕ್ಕದಲ್ಲಿ ೩೬.೨೫ ಬಿಲಿಯನ್ ಘನ ಮೀಟರ್ (ಬಿಘಮೀ) ಸಂಗ್ರಹ ಸಾಮರ್ಥ್ಯದಲ್ಲಿ ಮಳೆನೀರು ತುಂಬುವುದೇ ಇಲ್ಲ. ಕೇಂದ್ರ ಜಲಮಂಡಲಿ ಮಾಹಿತಿ ಪಡೆಯುತ್ತಿರುವುದು ಕೇವಲ ೧೩೩ ಬಿಘಮೀ ಸಂಗ್ರಹ ಸಾಮರ್ಥ್ಯದ ಬಗ್ಗೆ. ಅದರಲ್ಲೇ ಹೀಗಾಗುತ್ತಿದೆ.
* ಇದರರ್ಥ ಏನು? ಪ್ರತಿ ವರುಷ, ಸರಾಸರಿ ಲೆಕ್ಕದಲ್ಲಿ ರೂಪಾಯಿ ೩೭,೭೯೩ ಕೋಟಿ ವೆಚ್ಚದ ಸಂಗ್ರಹ ಸಾಮರ್ಥ್ಯ ಉಪಯೋಗ ಆಗುತ್ತಿಲ್ಲ.
* ಆ ೧೨ ವರುಷಗಳ ಅವಧಿಯಲ್ಲಿ, ಏಳು ವರುಷಗಳಲ್ಲಿ ಮಳೆ ಚೆನ್ನಾಗಿತ್ತು. ಅಂದರೆ ಸರಾಸರಿಗೆ ಸಮವಾಗಿತ್ತು ಅಥವಾ ಸರಾಸರಿಗಿಂತ ಜಾಸ್ತಿಯಾಗಿತ್ತು. ಆದರೂ ಹೀಗಾಗಿದೆ.
ಅಗಾಧವಾದ ಬಂಡವಾಳ ಹೂಡಿಕೆಯಿಂದ ಸಿಗಬೇಕಾದ ಪ್ರಯೋಜನ ಯಾಕೆ ಸಿಗುತ್ತಿಲ್ಲ? ನಮ್ಮ ದೇಶದ ಎರಡು ಬೃಹತ್ ಜಲಾಶಯಗಳ ಮಾಹಿತಿ ಪರಿಶೀಲಿಸೋಣ:
ಭಾಕ್ರಾ ಅಣೆಕಟ್ಟು: ೧೯೮೯ರಿಂದ ೨೦೦೫ರ ವರೆಗೆ ೫೧೪ ಮೀಟರ್ ಎತ್ತರದ ಈ ಜಲಾಶಯ ಯಾವುದೇ ವರುಷ ಭರ್ತಿಯಾಗಿಲ್ಲ.
ವೈಗೈ ಅಣೆಕಟ್ಟು: ೨೦ ವರುಷಗಳ ಬಳಿಕ ಈ ಜಲಾಶಯದಿಂದ ನೀರನ್ನು ಹೊರಬಿಟ್ಟದ್ದು ೨೦೦೬ರಲ್ಲಿ. ಅಂದರೆ ಸತತ ೨೦ ವರುಷ ಇದರಲ್ಲಿ ಸಾಕಷ್ಟು ಮಳೆನೀರು ಸಂಗ್ರಹವಾಗಲೇ ಇಲ್ಲ.
ಸಮಗ್ರ ಜಲ ಸಂಪನ್ಮೂಲ ಅಭಿವೃದ್ಧಿಯ ರಾಷ್ಟ್ರೀಯ ಕಮಿಷನಿನ ೧೯೯೯ರ ವರದಿ ಈ ಬಗ್ಗೆ ಏನೆನ್ನುತ್ತದೆ? ಪ್ರತಿ ವರುಷ ಸುಮಾರು ೧.೪ ಬಿಘಮೀ ಮಳೆನೀರು ಸಂಗ್ರಹಣಾ ಸಾಮರ್ಥ್ಯವನ್ನು ಜಲಾಶಯಗಳಲ್ಲಿ ಹೂಳು ತುಂಬುವ ಕಾರಣದಿಂದಾಗಿ ಕಳೆದುಕೊಳ್ಳುತ್ತಿದ್ದೇವೆ. ಈಗಿನ ಹೂಡಿಕೆ ವೆಚ್ಚವನ್ನು ಪರಿಗಣಿಸಿದಾಗ, ಇದು ಪ್ರತಿ ದಿನಕ್ಕೆ ರೂಪಾಯಿ ೪ ಕೋಟಿಗಳ ನಷ್ಟಕ್ಕೆ ಸಮಾನ.
ಜಲಾನಯನ ಪ್ರದೇಶದಿಂದ ಮಳೆನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬರುವುದನ್ನು ತಡೆದರೆ, ಹೂಳು ತುಂಬುವುದನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಮಣ್ಣು ಕೊಚ್ಚಣೆ ತಡೆಕ್ರಮಗಳ ಬಿಲ್ ತಯಾರಿಸಿ ಹಣ ಸ್ವಾಹಾ ಮಾಡಲಾಗುತ್ತದೆ ವಿನಹ ಅವನ್ನು ವಾಸ್ತವವಾಗಿ ಕಾರ್ಯಗೊಳಿಸುತ್ತಿಲ್ಲ.
ದೇಶದ ಒಟ್ಟು ನೀರಿನ ಬೇಡಿಕೆಯಲ್ಲಿ ಶೇಕಡಾ ೭೦ ಕೃಷಿರಂಗದ್ದು. ಕೃಷಿಗೆ ಅಗತ್ಯವಾದ ನೀರಾವರಿಯ ಸಮಸ್ಯೆಯ ಪರಿಹಾರಕ್ಕೆ ಎರಡು ಪರಿಣಾಮಕಾರಿ ದಾರಿಗಳು: ಸಣ್ಣ ಅಣೆಕಟ್ಟುಗಳ ನಿರ್ಮಾಣ ಮತ್ತು ಅಂತರ್ಜಲ ಮರುಪೂರಣದ ಕಾರ್ಯಕ್ರಮಗಳು. ಇವೆರಡಕ್ಕೂ ಪ್ರಾಮುಖ್ಯತೆ ನೀಡಲಾಗಿಲ್ಲ.
ಇನ್ನಾದರೂ ಬೃಹತ್ ಅಣೆಕಟ್ಟುಗಳ ಬದಲಾಗಿ ಸಾವಿರಾರು ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಬೇಕಾಗಿದೆ. ಜೊತೆಯಲ್ಲೇ ಅಂತರ್ಜಲ ಮರುಪೂರಣವನ್ನು ಜನಾಂದೋಲನವಾಗಿ ಹಳ್ಳಿಹಳ್ಳಿಗಳಲ್ಲಿ ಮುಂದೊತ್ತಬೇಕಾಗಿದೆ. ’ಇದು ಸಾಧ್ಯ’ ಎಂದು ಚನ್ನಬಸಪ್ಪ ಶಿವಪ್ಪ ಕೊಂಬಳಿ ಅವರು ಕಾಕೋಳ ಗ್ರಾಮದಲ್ಲಿ ಸಾಧಿಸಿ ತೋರಿಸಿದ್ದಾರೆ. (ಅವರ ವಿಳಾಸ: ಕಾಕೋಳ, ರಾಣಿಬೆನ್ನೂರ ತಾಲೂಕು, ೫೮೧ ೧೧೫, ಮೊಬೈಲ್ ೯೮೪೫೮೯೦೪೧೧) ಅಲ್ಲಿನ ತೆರೆದಬಾವಿ ಮರುಪೂರಣದ ಯಶೋಗಾಥೆಯನ್ನು ಪೂರ್ಣಪ್ರಜ್ಞ ಬೇಳೂರು "ಜಲನೆಮ್ಮದಿಯತ್ತ ಕಾಕೋಳ" ಪುಸ್ತಕದಲ್ಲಿ ದಾಖಲಿಸಿದ್ದಾರೆ.(ಪ್ರಕಾಶಕರು:ಕೃಷಿ ಮಾಧ್ಯಮ ಕೇಂದ್ರ, ೧ನೇ ಮುಖ್ಯ ರಸ್ತೆ, ೪ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ ೫೮೦ ೦೦೮)
ಕೃಷಿಯ ಸಮಸ್ಯೆಗಳಿಗೆ ಬೃಹತ್ ಜಲಾಶಯಗಳ ನಿರ್ಮಾಣವೇ ಪರಿಹಾರವೆಂದು ವಾದ ಮಾಡುವವರು ಕಾಕೋಳದ ಸಾಧನೆ ಕಣ್ಣಾರೆ ಕಂಡು ಕಣ್ಣು ತೆರೆಯುವಂತಾಗಲಿ.