ಉತ್ತರಕನ್ನಡದ ಯಲ್ಲಾಪುರದ ಹತ್ತಿರದ ಕವಡಿಕೆರೆ ಹಳ್ಳಿಯಲ್ಲಿ ಅಂದು ಮುಸ್ಸಂಜೆಯ ಹೊತ್ತು. ಆಗಷ್ಟೇ ಆ ಮನೆ ಹೊಕ್ಕಿದ್ದೆವು. ಆಗಂತುಕರಾದ ನಮ್ಮನ್ನು ’ಏನು ಈ ಕಡೆ ಬಂದದ್ದು’ ಎಂದು ವಿಚಾರಿಸಿದವರು ಗಣಪತಿ ನಾರಾಯಣ ಭಟ್ಟರು. "ಇಡಗುಂದಿಯ ಸ್ನೇಹಸಾಗರ ಶಾಲೆಗೆ ತರಬೇತಿಗಾಗಿ ಬಂದೋರು ನಾವು. ನಿಮ್ ಹಳ್ಳಿಗೆ ಬಂದು ನಿಮ್ಮನ್ನೆಲ್ಲ ಕಾಣ್‍ಬೇಕಂತ ಬಂದಿದೀವಿ" ಎಂದು ಪರಿಚಯಿಸಿಕೊಂಡೆವು ನಾವು ನಾಲ್ವರು. "ನಮ್ ಹಳ್ಳೀಲಿ ಅಂತಾ ವಿಶೇಷವೇನಿಲ್ಲ ಬಿಡಿ’ ಎನ್ನುತ್ತಾ ನಮ್ಮನ್ನು ಬೆಂಚಿನಲ್ಲಿ ಕೂರಿಸಿ, ಅವರು ನಿಂತುಕೊಂಡೇ ನಮ್ಮೊಂದಿಗೆ ಮಾತಿಗಿಳಿದರು.
ಅದು ಹಳೆಯ ಮನೆ. ಹೆಂಚಿನ ಚಾವಣಿ. ಮಣ್ಣು ತೇದು ಮಾಡಿದ ನೆಲ. ಮನೆಯೆದುರಿನ ಅಡಿಕೆ ತೋಟದಲ್ಲಿ ಎತ್ತರಕ್ಕೆ ಬೆಳೆದು ನಿಂತ ಅಡಿಕೆ ಗಿಡಗಳು. ಸಹಜವಾಗಿಯೇ ಅಡಿಕೆ ಕೃಷಿಯ ಸ್ಥಿತಿಗತಿ ಬಗ್ಗೆ ಕೇಳಿದೆವು. "ನಿಮಗೆ ಗೊತ್ತಲ್ಲ. ಅಡಿಕೆ ದರ ಕ್ವಿಂಟಾಲಿಗೆ ೧೨,೦೦೦ ರೂಪಾಯಿ ಇದ್ದದ್ದು ೬,೦೦೦ ರೂಪಾಯಿಗೆ ಇಳಿದಿದೆ. ಮುಂಚೆ ಅಡಿಕೆ ಜೊತೆ ಬಾಳೆ, ಏಲಕ್ಕಿ, ಕಾಳುಮೆಣಸು ಬೆಳೀತಿದ್ದೆವು. ಅದೆಲ್ಲದ್ರಿಂದ ಬರೋ ಆದಾಯ ನಮ್ ಮನೆ ಖರ್ಚಿಗೆ ಸಾಕಾಗ್ತಿತ್ತು. ಈಗ ಹಾಗಿಲ್ಲ. ಹತ್ತು ವರ್ಷಂದೀಚೆಗೆ ಎಲ್ಲರ ತೋಟದಲ್ಲಿ ಪಣಿಯೂರು ಕಾಳುಮೆಣಸಿನ ಬಳ್ಳಿ ಕಟ್ಟೆ ರೋಗಕ್ಕೆ ಬಲಿಯಾಗಿದೆ. ಹೊಸ ಗಿಡ ಹಚ್ಚಿದ್ರೆ ಐದಾರು ಅಡಿ ಬೆಳೀತದೆ. ಮತ್ತೆ ಸಾಯ್ತದೆ. ಇದಕ್ಕೆ ಬಾಳೆ ಕೃಷಿ ಕಾರಣವೇ ಗೊತ್ತಿಲ್ಲ. ಬಳ್ಳಿ ಉಳಿಸಲು ಸುಣ್ಣ ಹಾಕಿ ನೋಡಿ ಆಯ್ತು. ಆದರೆ ಕಾಳುಮೆಣಸು ಬಳ್ಳಿ ಉಳಿಯೋದಿಲ್ಲ. ಏಲಕ್ಕಿ ಗಿಡಗಳೂ ಸತ್ ಹೋಗಿವೆ" ಎಂದು ಬದಲಾದ ಸ್ಠಿತಿಯ ಚಿತ್ರಣ ನೀಡಿದರು.
ಅಡಿಕೆ ಗಿಡಗಳಿಗೆ ಇವರ ಪೋಷಣೆ ವರುಷಕ್ಕೆ ಗಿಡಕ್ಕೆ ಒಂದು ಬುಟ್ಟಿ ಗೊಬ್ಬರ ಮತ್ತು ನೀರು, ಇಷ್ಟೇ. ಅದೇ ರೀತಿ, ಕೊಳೆ ರೋಗ ಹತೋಟಿಗೆ ಬೋರ್ಡೋ ಸಿಂಪರಣೆ ಮಾತ್ರ; ಜುಲೈ ಮತ್ತು ಒಕ್ಟೋಬರ್ ಆರಂಭದಲ್ಲಿ, ವರುಷಕ್ಕೆ ಎರಡು ಸಲ. ತನ್ನ ಸಣ್ಣ ತೋಟದಿಂದ ಇವರು ವರುಷಕ್ಕೆ ಎರಡರಿಂದ ಎರಡೂವರೆ ಕ್ವಿಂಟಾಲ್ ಒಣ ಅಡಿಕೆ ಪಡೆಯುತ್ತಾರೆ, ಅಷ್ಟೇ.
ಅವರ ಹಿರೇಮಗ ನಾಗೇಶ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಯಾಂಕ ಗಳಿಸಿದ್ದ. ಅವನ ಇಂಜಿನಿಯರಿಂಗ್ ಕೋರ್ಸಿನ ಖರ್ಚಿಗಾಗಿ, ಅಡಿಕೆ ಬೆಲೆ ಕುಸಿತದ ಕಾಲದಲ್ಲಿ, ಗಣಪತಿ ಭಟ್ಟರು ತಮ್ಮ ದನಕರುಗಳನ್ನು ಮಾರಿದರು. "ಹದಿನೈದು ದನಕರು ಇಟ್ಕೊಂಡಿದ್ದೆ. ಈಗ ಎರಡೇ ಇದ್ದಾವೆ. ಉಳಿದದ್ದೆಲ್ಲ ಮಾರಿಬಿಟ್ಟೆ" ಎಂದರು ಯಾವುದೇ ಏರಿಳಿತವಿಲ್ಲದ ದನಿಯಲ್ಲಿ.
ವರುಷವಿಡೀ ಕವಡಿಕೆರೆಯಿಂದ ಇವರ ಹಾಗೂ ಹಳ್ಳಿಯ ಇತರೆಲ್ಲರ ತೋಟಗಳಿಗೆ ನೀರು ಹರಿದು ಬರುತ್ತದೆ. ಕೆರೆ ಮೇಲು ಹಂತದಲ್ಲಿ ಇರುವುದರಿಂದ ನೀರಾವರಿಗೆ ಪಂಪ್‍ಸೆಟ್ ಬೇಕಾಗಿಲ್ಲ. ಇವರ ಭತ್ತದ ಬೆಳೆಗೂ ಅದೇ ಕೆರೆಯ ನೀರು. ಬೆಳೆಯೋದು ದೊಡ್ಡ ಭತ್ತ ಮತ್ತು ಆಲೂರು ಸಣ್ಣ ತಳಿ. ಜುಲೈಯಲ್ಲಿ ಭತ್ತದ ಸಸಿಗಳನ್ನ್ಜು ನಾಟಿ ಮಾಡಿ ಒಕ್ಟೋಬರಿನಲ್ಲಿ ಕಟಾವು.
ಉತ್ತರದಿಕ್ಕಿನಲ್ಲಿ ಕವಡಿಕೆರೆಗೆ ೨೦೦ ಮೀ. ಉದ್ದದ ೪ ಮೀ. ಅಗಲದ ಏರಿ. ಇದರ ಕೊನೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ. ಇದು ಸ್ವರ್ಣವಲ್ಲಿ ಮಠಕ್ಕೆ ಸೇರಿದ್ದು. ಮಠದ ೨೦ ಎಕ್ರೆ ಜಮೀನನ್ನು ಹಳ್ಳಿಯಲ್ಲಿದ್ದ ೬ ಕುಟುಂಬಗಳಿಗೆ ಹಲವು ದಶಕಗಳ ಮುನ್ನ ಹಂಚಲಾಗಿದೆ.
ಕವಡಿಕೆರೆ ೨೧ ಬ್ರಾಹ್ಮಣ ಮನೆಗಳಿರುವ ಸಣ್ಣ ಹಳ್ಳಿ. ಕೆರೆಯ ಏರಿಯ ಬುಡದಿಂದ ಸಾಗುವ ಅರ್ಧ ಕಿಮೀ ಹಾದಿಯ ಎಡಬದಿಯಲ್ಲೇ ಇವರೆಲ್ಲರ ಮನೆಗಳಿವೆ. ಎಲ್ಲ ಕುಟುಂಬಗಳಿಗೂ ಕೃಷಿಯೇ ಜೀವನಾಧಾರ. ಇಡೀ ಹಳ್ಳಿಯ ಬದುಕಿನ ಸೆಲೆ, ನೀರಿನಾಸರೆಯಾದ ಕವಡಿಕೆರೆ.
ಒಂದುಕಾಲದಲ್ಲಿ ಕವಡಿಕೆರೆ ೬೫ ಎಕ್ರೆ ವ್ಯಾಪ್ತಿಯ ವಿಶಾಲ ಕೆರೆಯಾಗಿತ್ತು. ಈಗ ಕೆರೆಯಲ್ಲಿ ಹೂಳು ತುಂಬಿದ್ದರಿಂದ ವ್ಯಾಪ್ತಿ ೪೦ ಎಕ್ರೆಗೆ ಇಳಿದಿದೆ. ಈ ಕೆರೆಯಿಂದ ೧೫೦ ಎಕ್ರೆ ಜಮೀನಿಗೆ ವರುಷವಿಡೀ ನೀರಾವರಿ ಒದಗುತ್ತಿದೆ. ಅಷ್ಟೇ ಅಲ್ಲ, ಇದರಿಂದಾಗಿ ಸುತ್ತಲಿನ ೫ ಕಿಲೋಮೀಟರ್ ಫಾಸಲೆಯಲ್ಲಿ ಯಾವುದೇ ಕೆರೆ ಬತ್ತುವುದಿಲ್ಲ ಎಂದು ಗಣಪತಿ ನಾರಾಯಣ ಭಟ್ಟರು ಕವಡಿಕೆರೆಯ ಮಹತ್ವ ವಿವರಿಸಿದರು. ನಾವು ಅಲ್ಲಿಂದ ಹೊರಟಾಗ ಅವರೊಂದು ಮಾತು ಹೇಳಿದರು,"ಯಾವುದೇ ಕುಟುಂಬ ನಮ್ ಹಳ್ಳಿ ಬಿಟ್ಟು ಹೋಗಿಲ್ಲ, ನೋಡಿ."
ಒಂದು ಹಳ್ಳಿಯವರು, ತಮ್ಮ ಬದುಕಿನ ಸೆಲೆಯಾದ ಕೆರೆಯೊಂದಿಗೆ ಇಂತಹ ಅವಿನಾಭಾವ ಸಂಬಂಧ ಬೆಳೆಸಿಕೊಂಡರೆ ಮಾತ್ರ ಅವರಿಗೆ ಆ ಕೆರೆ ಉಳಿಸುವ ಬುದ್ಧಿ ಬಂದೀತು, ಅಲ್ಲವೇ?