ಅಡಿ ಜಾರಿ ಬೀಳುವುದು, ತಡವಿಕೊಂಡೇಳುವುದು
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು
ಬದುಕೆಂಬುದಿದು ತಾನೆ? - ಮಂಕುತಿಮ್ಮ
ಕಾಲು ಜಾರಿ ಬೀಳುವುದು, ಬಿದ್ದಲ್ಲಿಂದ ಮೈ ತಡವಿಕೊಂಡು ಏಳುವುದು. ರುಚಿಯಾಗಿದೆಯೆಂದು ಕಡುಬನ್ನು ನುಂಗುವುದು; ಅನಂತರ ಹೊಟ್ಟೆ ಕೆಟ್ಟಿತೆಂದು ಕಹಿಮದ್ದು ಕುಡಿಯುವುದು. ದುಡುಕಿ, ಮತಿಗೆಟ್ಟು ತಪ್ಪು ಮಾಡುವುದು; ಬಳಿಕ ಅದು ತಪ್ಪಲ್ಲ, ಅದು ಸರಿಯಾದದ್ದೇ ಎಂದು ವಾದಿಸುವುದು. ಇದುವೇ ಬದುಕು ತಾನೇ? ಎಂದು ಪ್ರಶ್ನಿಸುವ ಮೂಲಕ ಈ ಮುಕ್ತಕದಲ್ಲಿ ನಮ್ಮ ವಿವೇಕವನ್ನು ಮೀಟುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಜಾಗ್ರತೆ ಮಾಡದೆ ಹೆಜ್ಜೆಯಿಟ್ಟರೆ ಬಿದ್ದೇ ಬೀಳುತ್ತೇವೆ. ವಾಹನ ಅಪಘಾತಗಳನ್ನು ಗಮನಿಸಿ. ವಾಹನ ಚಾಲಕರೆಲ್ಲರೂ ವಾಹನ ಚಲಾವಣೆ ತರಬೇತಿ ಪಡೆದು, ಪರೀಕ್ಷೆಯಲ್ಲಿ ಪಾಸಾಗಿ, ವಾಹನ ಚಲಾವಣಾ ಪರವಾನಗಿ ಪಡೆದಿರುತ್ತಾರೆ. ಆದರೂ, ಭಾರತದಲ್ಲಿ ಅತ್ಯಧಿಕ ಸಾವುಗಳು ಆಗುತ್ತಿರುವುದು ವಾಹನ ಅಪಘಾತಗಳಿಂದ! ಮದ್ಯಪಾನ ಮಾಡಿ ವಾಹನ ಓಡಿಸುವುದು, ಅತಿ ವೇಗದಿಂದ ಅಥವಾ ಅತಿ ಭಾರ ಹೇರಿಕೊಂಡು ವಾಹನ ಚಲಾಯಿಸುವುದು – ಇವೆಲ್ಲ ಬೇಕುಬೇಕೆಂದೇ ಅಡಿ ಜಾರಿ ಬೀಳುವ ನಿದರ್ಶನಗಳು.
ಸಿಗರೇಟು/ ಬೀಡಿ ಸೇದುವುದು, ತಂಬಾಕು ಸೇವನೆ, ಮದ್ಯಪಾನ – ಇವೆಲ್ಲ ಜೀವಕ್ಕೇ ಕುತ್ತು ಎಂದು ಗೊತ್ತಿದ್ದರೂ, ಆ ಚಟಕ್ಕೆ ಬಲಿಯಾಗುವವರನ್ನು ಗಮನಿಸಿ. ಕಡುಬು ನುಂಗಿ, ಕಹಿಮದ್ದು ಕುಡಿಯುವಂತೆ, ಅನಂತರ ಈ ಚಟಗಳಿಂದ ಪಾರಾಗಲು ಜೀವಮಾನವಿಡೀ ಹೆಣಗುತ್ತಾರೆ; ಹಲವರು ಕ್ಯಾನ್ಸರಿನಿಂದ ಸಾಯುತ್ತಾರೆ. ಮಾದಕದ್ರವ್ಯಗಳ ಸೇವನೆಯ ಚಟವೂ ಭಯಾನಕ. ೨೦೧೭ರಲ್ಲಿ ವರದಿಯಾಗಿರುವ ಮಂಗಳೂರಿನ ಪ್ರದೇಶದಲ್ಲಿ ಮಾದಕ ದ್ರವ್ಯಗಳನ್ನು ಪೊಲೀಸರು ವಶಪಡಿಸಿಕೊಂಡ ಹತ್ತಾರು ಪ್ರಕರಣಗಳು, ಈ ಚಟದ ಕರಾಳ ಬಾಹುಗಳ ಪುರಾವೆಗಳು.
ಸರಕಾರವೇ ದುಡುಕಿ ಮತಿದಪ್ಪಿ, ತದನಂತರ ತಾನು ಮಾಡಿದ್ದೇ ಸರಿ ಎಂದು ಸಾಧಿಸುವುದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಗುಹೋಗುಗಳೇ ಪುರಾವೆ. ಆ ಇಲಾಖೆಯಲ್ಲಿ ಕಳೆದ ೩ ವರುಷದಲ್ಲಿ ೧೪ ಆಯುಕ್ತರನ್ನು ಎತ್ತಂಗಡಿ ಮಾಡಲಾಗಿದೆ! ಪಡಿತರ ಧಾನ್ಯ ಕಳ್ಳತನ, ಅನ್ನಭಾಗ್ಯದ ಭ್ರಷ್ಟಾಚಾರ ಆ ಇಲಾಖೆಯ ನಿರಂತರ ಕಳಂಕ. ಈ ವರೆಗೆ ಪತ್ತೆಯಾಗಿರುವ ನಕಲಿ ರೇಷನ್ ಕಾರ್ಡುಗಳ ಸಂಖ್ಯೆ ೨೦ ಲಕ್ಷಕ್ಕಿಂತ ಅಧಿಕ! ಆ ಕಾರ್ಡುಗಳಿಗೆ ಸಹಿ ಮಾಡಿದವರು ಅದೇ ಇಲಾಖೆಯ ಅಧಿಕಾರಿಗಳು! ಇಷ್ಟೆಲ್ಲ ಆದರೂ, ತಾನು ಕೈಗೊಂಡ ಕ್ರಮಗಳೆಲ್ಲ ಸರಿ ಎಂದೇ ಸಮರ್ಥಿಸುತ್ತದೆ ನಮ್ಮ ಘನ ಸರಕಾರ! ಇದೇ ಬದುಕು, ಅಲ್ಲವೇ?
ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ
ಕುದಿಸುತ್ತ ಕೆದಕುತ್ತ ಕುಲುಕುತಿರುವಂದು
ಬದಲಾಗದೆಂತು ನೀಮಿರ್ಪುದೀ ನಿಮ್ಮಾಟ
ವಿಧಿಯ ನಿತ್ಯವಿಲಾಸ – ಮರುಳ ಮುನಿಯ
ಬದುಕು ಎಂಬ ಹೆಸರಿನಲ್ಲಿ ನೀನು ಜಗತ್ತನ್ನೂ, ಜಗತ್ತು ನಿನ್ನನ್ನೂ ಕುದಿಸುತ್ತ ಕೆದಕುತ್ತ ಕುಲುಕುತ್ತಿದೆ. ಹೀಗಿರುವಾಗ ನೀನು, ನಿನ್ನ ಇರುವಿಕೆ ಬದಲಾಗದಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸುವ ಮಾನ್ಯ ಡಿವಿಜಿಯವರು ಈ ನಿಮ್ಮ ಆಟ ವಿಧಿಯ ನಿತ್ಯವಿಲಾಸ ಎನ್ನುತ್ತಾರೆ. ಇದು ಸತ್ಯವೆಂಬುದಕ್ಕೆ ಚರಿತ್ರೆಯಲ್ಲಿ ನಿದರ್ಶನಗಳು ಹಲವಾರು. ಚಕ್ರವರ್ತಿ ಅಲೆಗ್ಸಾಂಡರ್ ದಂಡೆತ್ತಿ ಹೊರಟು, ಭಾರತದ ವರೆಗೂ ಬಂದದ್ದು! ಅಲ್ಲಾವುದ್ದೀನ್ ಖಿಲ್ಜಿ, ಚೆಂಗಿಸ್ ಖಾನ್ ಇಂತಹ ಹತ್ತಾರು ರಾಜರು ಭಾರತದ ಸಂಪತ್ತು ದೋಚಲಿಕ್ಕಾಗಿ ಮತ್ತೆಮತ್ತೆ ಮೇಲೆ ಧಾಳಿ ಮಾಡಿದ್ದು!
ಏಷ್ಯಾ ಖಂಡಕ್ಕೆ ಸಾಗರಪಥ ಪತ್ತೆ ಮಾಡುತ್ತೇನೆಂದು ೬ ಸಪ್ಟಂಬರ್ ೧೪೯೫ರಂದು ಸ್ಪೇನಿನಿಂದ ಮೂರು ನೌಕೆಗಳಲ್ಲಿ ಹೊರಟ ಕೊಲಂಬಸ್ ೧೨ ಅಕ್ಟೋಬರ್ ೧೪೯೫ರಂದು ತಲಪಿದ್ದು ವೆಸ್ಟ್-ಇಂಡೀಸ್ ದ್ವೀಪಗಳ ಸಾನ್ಸಾಲ್ವಡೋರಿಗೆ! ಹಾಗೆಯೇ, ಫರ್ಡಿನಾಂಡ್ ಮೆಗೆಲ್ಲನ್ ೨೦ ಸಪ್ಟಂಬರ್ ೧೫೧೯ರಂದು ಐದು ನೌಕೆಗಳಲ್ಲಿ ಸ್ಪೇನಿನಿಂದ ಹೊರಟು, ಅಮೇರಿಕಾ ಖಂಡ ದಾಟಿ, ೧೫೨೧ರ ಎಪ್ರಿಲಿನಲ್ಲಿ ಫಿಲಿಫೈನ್ಸ್ ತಲಪಿ, ಅಲ್ಲೇ ಎಪ್ರಿಲ್ ೨೭ರಂದು ತೀರಿಕೊಂಡ. ಅನಂತರ, ಯುರೋಪಿನಿಂದ ಬ್ರಿಟಿಷರು, ಫ್ರೆಂಚರು, ಡಚ್ಚರು, ಸ್ಪೇನಿನವರು ಅಮೇರಿಕಾ, ಆಫ್ರಿಕಾ ಹಾಗೂ ಏಷ್ಯಾ ಖಂಡಗಳಿಗೆ ಮತ್ತೆಮತ್ತೆ ಧಾಳಿ ಮಾಡಿದರು. ಅವರಿಂದ ಅಲ್ಲಿನ ಮೂಲನಿವಾಸಿಗಳ ಮಾರಣಹೋಮ. ಅಮೇರಿಕಾದ ಮೂಲನಿವಾಸಿಗಳ ನಿರ್ನಾಮ. ಆಫ್ರಿಕಾದ ಲಕ್ಷಗಟ್ಟಲೆ ಅಸಹಾಯಕ ಮೂಲನಿವಾಸಿಗಳನ್ನು ಸೆರೆ ಹಿಡಿದು, ಅಮೇರಿಕಾಕ್ಕೆ ಸಾಗಿಸಿ, ಅಲ್ಲಿ ಗುಲಾಮರನ್ನಾಗಿ ಶತಮಾನಗಳ ಕಾಲ ದುಡಿಸಿದ ಕ್ರೌರ್ಯ.
ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳಂತೂ ಕೆಲವೇ ದೇಶಗಳ ನಾಯಕರು ಜಗತ್ತನ್ನು ಕುದಿಸಿ, ಕೆದಕಿ, ಕುಲುಕಿದ್ದಕ್ಕೆ ಮಹಾನಿದರ್ಶನ. ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ಸ್ಫೋಟಿಸಿ ಲಕ್ಷಗಟ್ಟಲೆ ಅಮಾಯಕರ ಬದುಕು ಚಿಂದಿಚಿಂದಿ. ಆದರೂ ಯುದ್ಧಗಳು ಮುಗಿದಿಲ್ಲ. ಈ ಶತಮಾನದಲ್ಲಂತೂ, ಭಯೋತ್ಪಾದನೆಯ ಹಿಂಸೆಯ ಅಟ್ಟಹಾಸದಿಂದಾಗಿ ಕೋಟಿಗಟ್ಟಲೆ ಜನರ ಬದುಕು ಅಲ್ಲೋಲಕಲ್ಲೋಲ. ಇವೆಲ್ಲವೂ ವಿಧಿಯ ನಿತ್ಯವಿಲಾಸ.