ಕಗ್ಗ ದರ್ಶನ – 47

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು
ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ
ತೋಟಗಾರನು ಮಣ್ಣನ್ನು ಅಗೆದು, ಗೊಬ್ಬರ ಹಾಕಿ, ನೀರೆರೆದು ಗುಲಾಬಿ ಗಿಡವನ್ನು ಬೆಳೆಸುತ್ತಾನೆ. ಅದರ ಆರೈಕೆ ಮಾಡುವಾಗೆಲ್ಲ, ಆ ಗಿಡದ ಮೊನಚಾದ ಮುಳ್ಳುಗಳ ಇರಿತಗಳನ್ನೂ ಚುಚ್ಚುವಿಕೆ (ಜಗಿವ)ಯನ್ನೂ ಸಹಿಸಿಕೊಳ್ಳುತ್ತಾನೆ. ಇಷ್ಟೆಲ್ಲ ಆರೈಕೆ ಮಾಡಿ ಬೆಳೆಸಿದ ಗಿಡದಲ್ಲಿ ಮೂಡುವ ಮೊಗ್ಗು, ಗುಲಾಬಿ ಹೂವಾಗಿ ಅರಳಿ ನಗುವುದು ಸ್ವಲ್ಪ ಸಮಯ (ಅರೆ ನಿಮಿಷ) ಮಾತ್ರ. ಹಾಗೆ ಅರಳುತ್ತಲೇ ಆ ಗುಲಾಬಿ ಹೂವಿನ ಬಾಳು ಮುಗಿಯುತ್ತದೆ; ಅದು ಬಾಡಿ ಹೋಗುತ್ತದೆ. ಗುಲಾಬಿಯ ಮೊಗ್ಗು (ಮುಗುಳು) ಮತ್ತು ಸ್ವಲ್ಪ ಸಮಯ ಅರಳಿದಾಗಿನ ಚೆಲುವೇ ತೋಟಗಾರನ ದುಡಿತಕ್ಕೆ ಸಿಗುವ ಪ್ರತಿಫಲ ಹಾಗೂ ತೃಪ್ತಿ ಎಂದು ಈ ಮುಕ್ತಕದಲ್ಲಿ ಮನಮುಟ್ಟುವ ಸಂದೇಶ ನೀಡುತ್ತಾರೆ ಮಾನ್ಯ ಡಿ.ವಿ.ಗುಂಡಪ್ಪನವರು.
ಇದಕ್ಕೆ ಉಜ್ವಲ ಉದಾಹರಣೆ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು. ತೀರಾ ಬಡತನದಲ್ಲಿ ಬೆಳೆದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಉತ್ಸಾಹದಿಂದ ಭಾಗವಸಿದರು. ನಮ್ಮ ದೇಶ ೧೫ ಆಗಸ್ಟ್ ೧೯೪೭ರಂದು ಸ್ವಾತಂತ್ರ್ಯ ಗಳಿಸಿದ ನಂತರವೂ, ತಮ್ಮ ಬದುಕನ್ನು ದೇಶಸೇವೆಗೆ ಮುಡಿಪಾಗಿಟ್ಟರು. ಶಾಸ್ತ್ರಿಯವರ ಪ್ರಾಮಾಣಿಕತೆ, ಶಿಸ್ತು, ದೇಶಪ್ರೇಮ, ಸೇವಾತತ್ಪರತೆ ಹಾಗೂ ಕಾರ್ಯದಕ್ಷತೆಯನ್ನು ಹತ್ತಿರದಿಂದ ಕಂಡಿದ್ದ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ, ಶಾಸ್ತ್ರಿಯವರನ್ನು ಕೇಂದ್ರ ಸರಕಾರದ ಸಚಿವ ಸ್ಥಾನಕ್ಕೆ ಸೇರಿಸಿಕೊಂಡರು. ಕೇಂದ್ರ ರೈಲ್ವೇ ಸಚಿವರಾಗಿದ್ದಾಗ, ರೈಲು ಅಪಘಾತಗಳಲ್ಲಿ ನೂರಾರು ಜನರು ಸತ್ತಾಗ, ಅದರ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಶಾಸ್ತ್ರಿ. ಅನಂತರ, ಪುನಃ ಕೇಂದ್ರ ಸರಕಾರದ ಸಚಿವಸ್ಥಾನ ಅವರನ್ನು ಅರಸಿಕೊಂಡು ಬಂತು. ತಮ್ಮ ಜವಾಬ್ದಾರಿಗಳ ನಿರ್ವಹಣೆಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದ ಶಾಸ್ತ್ರಿಯವರಿಗೆ ಎರಡು ಬಾರಿ ಹೃದಯಾಘಾತ. ತದನಂತರ, ಜವಾಹರಲಾಲ್ ನೆಹರೂ ತೀರಿಕೊಂಡಾಗ, ದೇಶವಾಸಿಗಳಿಗೆಲ್ಲ “ಮುಂದೇನು?” ಎಂಬ ಆತಂಕ. ಆ ಸಂಧಿಕಾಲದಲ್ಲಿ ಭಾರತದ ಪ್ರಧಾನಮಂತ್ರಿಯಾದವರು ಲಾಲ್ ಬಹಾದ್ದೂರ್ ಶಾಸ್ತ್ರಿ. ಕೆಲವೇ ತಿಂಗಳುಗಳಲ್ಲಿ, ಕಾಲುಕೆರೆದು ಯುದ್ಧಕ್ಕೆ ಬಂದ ಪಾಕಿಸ್ಥಾನ ಸೈನ್ಯವನ್ನು ತಮ್ಮ ದಿಟ್ಟ ನಿರ್ಧಾರಗಳಿಂದ ಮಣಿಸಿದರು ಶಾಸ್ತ್ರಿ. ಅನಂತರ, ರಷ್ಯಾದ ಅಧ್ಯಕ್ಷರ ಒತ್ತಾಯದ ಮೇರೆಗೆ ಟಾಷ್ಕೆಂಟಿಗೆ ಹೋಗಿ, ಸಂಧಾನ ನಡೆಸಿ, ಪಾಕಿಸ್ಥಾನದೊಂದಿಗೆ ಚಾರಿತ್ರಿಕ “ಶಾಂತಿ ಒಪ್ಪಂದಕ್ಕೆ“ ಸಹಿ ಹಾಕಿದರು; ಅದೇ ದಿನ ನಡುರಾತ್ರಿ ದಾಟಿದ ನಂತರ ಅಲ್ಲೇ ವಿಧಿವಶರಾದರು. ದೇಶಕ್ಕಾಗಿ ಬದುಕನ್ನೇ ಸವೆಯಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇಹಲೋಕ ತ್ಯಜಿಸಿದಾಗ ಅವರಿಗೊಂದು ಸ್ವಂತ ಮನೆಯೂ ಇರಲಿಲ್ಲ. ಹಾಗಾದರೆ, ಅವರ ದುಡಿತಕ್ಕೆ ಸಿಕ್ಕ ಪ್ರತಿಫಲ ಏನು? ಅದು, ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅವರ ಬಗ್ಗೆ ಇರುವ ಅಪಾರ ಗೌರವ, ಅಲ್ಲವೇ?


ನಗುನಗುತ ಕರೆಯುವವೊಲಾಡುತ್ತಿತ್ತು ಗುಲಾಬಿ
ಸೊಗದ ವಾಸನೆಗೆಂದು ಪಿಡೆಯೆ ನಿರ್ಗಂಧ
ಮುಗಿದೆ ನಾಂ ಕೈಯ ಮುಳ್ಳು ಚುಚ್ಚಲಿಲ್ಲೆಂದು
ಜಗದ ಸಂಗತಿಯಷ್ಟು – ಮರುಳ ಮುನಿಯ
ಗುಲಾಬಿ ಗಿಡದಲ್ಲಿ ಅರಳಿದ್ದ ಗುಲಾಬಿ ಹೂವೊಂದು “ನನ್ನ ಚೆಲುವನ್ನು ನೋಡು, ನನ್ನ ಮೃದುತನವನ್ನು ಸ್ಪರ್ಶಿಸಿ ನೋಡು” ಎಂದು ಕರೆಯುವಂತೆ ಕಂಡಿತು. ಅದರ ಪರಿಮಳ (ಸೊಗದ ವಾಸನೆ) ಆಸ್ವಾದಿಸಬೇಕೆಂದು, ಆ ಗುಲಾಬಿ ಹೂವನ್ನು ಹಿಡಿದಾಗ ನನ್ನ ಕೈಗೆ ಸಿಕ್ಕಿದ್ದು ವಾಸನೆಯಿಲ್ಲದ ಹೂವು. ನನ್ನಾಶೆ ನಿರಾಶೆಯಾದರೂ, ನನ್ನ ಕೈಗೆ ಗುಲಾಬಿ ಗಿಡದ ಮುಳ್ಳುಗಳು ಚುಚ್ಚಲಿಲ್ಲವೆಂದು ಸಮಾಧಾನ ಮಾಡಿಕೊಂಡು ಕೈಮುಗಿದೆ. ಈ ಜಗತ್ತಿನ ಸಂಗತಿಗಳೂ ಇಷ್ಟೇ ಎಂದು ನಮ್ಮ ತಲೆಯ ಮೇಲೆ ಹೊಡೆದಂತೆ ಸತ್ಯವೊಂದನ್ನು ಬಿಚ್ಚಿಡುತ್ತಾರೆ ಡಿ.ವಿ.ಜಿ.ಯವರು.
ಇದು ಮನವರಿಕೆಯಾಗಲು ಒಂದು ಪ್ರಕರಣ ಗಮನಿಸಿ. ಒಬ್ಬರು ತನ್ನ ಹಳೆಯ ಬೈಕ್ ಮಾರಲೆತ್ನಿಸುತ್ತಿದ್ದರು. ಮಂಗಳೂರಿನಲ್ಲಿ ಒಂದು ಬ್ರ್ಯಾಂಡಿನ ಬೈಕಿನ ವರ್ಕ್-ಷಾಪಿನಲ್ಲಿ ಮೆನೇಜರ್ ಆಗಿದ್ದ ಅವರ ಮಿತ್ರ, ಒಳ್ಳೆಯ ರೇಟಿಗೆ ಮಾರಾಟ ಮಾಡಿಸುತ್ತೇನೆ ಎಂದು ಆ ಬೈಕ್ ಒಯ್ದರು. ಆದರೆ ಒಂದು ವರುಷ ಕಳೆದರೂ ಆ ಬೈಕ್ ಮಾರಾಟ ಆಗಲಿಲ್ಲ. ಬೈಕಿನ ಮಾಲೀಕ ತನಿಖೆ ಮಾಡಿದಾಗ ತಿಳಿದದ್ದು: ಆ ಮಿತ್ರ ಬೈಕನ್ನು ಒಂದು ವರುಷ ಆರಾಮವಾಗಿ ಸ್ವಂತ ಬೈಕಿನಂತೆ ಓಡಾಡಿಸುತ್ತಿದ್ದರು!
“ಅರ್ಧ ಬೆಲೆಗೆ ಫ್ರಿಜ್, ಬೈಕ್, ಕಾರು ಪಡೆಯಿರಿ” ಎಂಬ ಸ್ಕೀಮುಗಳು, “ಪ್ಲಾಂಟೇಷನ್ ಸ್ಕೀಮಿನಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿ ೨೦ ವರುಷಗಳ ನಂತರ ೨೦ ಲಕ್ಷ ರೂಪಾಯಿ ಗಳಿಸಿರಿ” ಎಂದು ರೂ.೨೫,೦೦೦ ಕೋಟಿಗಳನ್ನೇ ನುಂಗಿ ಹಾಕಿದ ಪ್ಲಾಂಟೇಷನ್ ಕಂಪೆನಿಗಳು, “ವಾರ್ಷಿಕ ಶೇಕಡಾ ೨೫ ಬಡ್ಡಿ ನೀಡುತ್ತೇವೆ” ಎಂದು  ಜಾಹೀರಾತು ಪ್ರಕಟಿಸಿ, ಲಕ್ಷಗಟ್ಟಲೆ ಠೇವಣಿದಾರರ ಕೋಟಿಗಟ್ಟಲೆ ರೂಪಾಯಿ ಹಣ ದೋಚಿದ ಬ್ಲೇಡ್ ಕಂಪೆನಿಗಳು, ಇ-ಮೆಯಿಲ್ ಮತ್ತು ಎಸ್.ಎಮ್.ಎಸ್. ಮೂಲಕ “ನಿಮಗೆ ಕೋಟಿಕೋಟಿ ರೂಪಾಯಿ ಲಾಟರಿ ಬಂದಿದೆ” ಎಂದೆಲ್ಲ ಈಗ ಮತ್ತೆಮತ್ತೆ ಬಲೆಬೀಸುವವರು – ಇವೆಲ್ಲವೂ “ನಗುನಗುತ ಕರೆಯುವವೊಲಾಡುವ ಗುಲಾಬಿಗಳೇ” ಅಲ್ಲವೇ?