ಕಗ್ಗ ದರ್ಶನ – 35

ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ
ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ
ಈಗಲೊ ಆಗಲೋ ಎಂದೊ ಮುಗಿವುಂಟೆಂಬ
ಭಾಗ್ಯವನು ನೆನೆದು ನಲಿ - ಮಂಕುತಿಮ್ಮ
ಮನುಷ್ಯರಾಗಿ ಹುಟ್ಟಿದ ನಮಗೆ ಸಾವು ನಿಶ್ಚಿತ. ನಿಜ ಹೇಳಬೇಕೆಂದರೆ, ನಮ್ಮ ಹುಟ್ಟಿನೊಂದಿಗೇ ಸಾವು ಬೆನ್ನಟ್ಟಿಕೊಂಡು ಬರುತ್ತದೆ. ಅಂತಿಮ ಕ್ಷಣದ ವರೆಗೆ ನಮ್ಮ ಬದುಕು ಹಾಗೆಯೋ ಹೀಗೆಯೋ ಅಂದರೆ ಯಾವುದೋ ಒಂದು ರೀತಿಯಲ್ಲಿ ಸಾಗುತ್ತದೆ. ಒಬ್ಬ ವ್ಯಕ್ತಿಯ ಆಯುಸ್ಸು ಮುಗಿದು, ಜೀವನ ಅಂತ್ಯವಾಗುತ್ತದೆ ಎಂಬುದೇ ಒಳ್ಳೆಯ ಸಂಗತಿ (ಸುಕೃತ). ಯಾರೂ ನಿರಂತರವಾಗಿ ಬದುಕಬೇಕಾಗಿಲ್ಲ, ಯಾವಾಗಲೋ ಬಾಳಿಗೆ ಮುಕ್ತಾಯ (ಮುಗಿವು) ಬಂದೇ ಬರುತ್ತದೆ ಎಂಬ ಭಾಗ್ಯವನ್ನು ನೆನೆದು ನಲಿ ಎಂದು ಬದುಕಿನ ಬಗ್ಗೆ ಸಕಾರಾತ್ಮಕ ಅರಿವು ನೀಡಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಇತ್ತೀಚೆಗೆ ೨೦೧೬ನೇ ವರುಷ ಮುಗಿದಿದೆ. ಈ ವರುಷದಲ್ಲಿ ನಮ್ಮನ್ನು ಅಗಲಿದವರಲ್ಲಿ ಸಾಂಸೃತಿಕ ರಂಗಕ್ಕೆ ಅಮೋಘ ಕೊಡುಗೆಯನ್ನಿತ್ತ ಹಲವರಿದ್ದಾರೆ. ಗಾಯಕ ಬಾಲಮುರಳಿಕೃಷ್ಣ, ನೃತ್ಯವಿಶಾರದೆ ಮೃಣಾಲಿನಿ ಸಾರಾಭಾಯ್, ಕವಿ ಅಕಬರ ಅಲಿ, ಸಾಹಿತಿ ಓ.ಎನ್.ವಿ. ಕುರುಪ್, ಪತ್ರಕರ್ತ ಚೋ ರಾಮಸ್ವಾಮಿ, ಚಿತ್ರ ನಿರ್ದೇಶಕ ಗೀತಪ್ರಿಯ. ಮರೆಯಲಾಗದ ಈ ಮಹನೀಯರನ್ನು ಶಾಶ್ವತವಾಗಿ ಕಳೆದುಕೊಂಡೆವಲ್ಲಾ ಎಂದು ದುಃಖವಾಗುತ್ತದೆ. ಆದರೆ ಇವರೆಲ್ಲರೂ ನಮ್ಮ ದೇಶದ ಜನರ ಪ್ರೀತಿ, ಆದರ ಗಳಿಸಿದವರು; ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಶಾಶ್ವತವಾಗಿ ನಮ್ಮ ಮನದಲ್ಲಿ ನೆಲೆಸಿದವರು. ಅವರ ಗಾಯನ, ಗೀತೆ, ಕವನ, ಕತೆ, ಕಾದಂಬರಿ, ಚುಟುಕು, ಬರಹ, ಸಾಹಿತ್ಯ, ನೃತ್ಯ, ಚಲನಚಿತ್ರ – ಇವೆಲ್ಲವೂ ಅವರೆಲ್ಲರ ನೆನಪನ್ನು ಅಮರವಾಗಿಸಿವೆ.
೨೦೧೬ರಲ್ಲಿ ಇಹಲೋಕ ತೊರೆದವರಲ್ಲಿ ರಾಜಕೀಯರಂಗದಲ್ಲಿ ಪ್ರಮುಖರು: ಐದು ಬಾರಿ ತಮಿಳ್ನಾಡಿನ ಮುಖ್ಯಮಂತ್ರಿ ಸ್ಥಾನಕ್ಕೇರಿದ ಜಯಲಲಿತಾ ಮತ್ತು ಎರಡು ಬಾರಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾದ ಮುಫ್ತಿ ಮೊಹಮ್ಮದ್ ಸಯೀದ್. ೨೦೧೬ನೇ ವರ್ಷಾಂತ್ಯದಲ್ಲಿ, ಎರಡು ತಿಂಗಳ ಅನಾರೋಗ್ಯದ ಬಳಿಕ ಜಯಲಲಿತಾ ತೀರಿಕೊಂಡಾಗ ತಮಿಳ್ನಾಡಿನ ಜನತೆಗೆ ಆಘಾತ. ಈ ಆಘಾತ ತಾಳಲಾಗದೆ ಸಾವಿಗೀಡಾದವರು ನೂರಕ್ಕಿಂತ ಅಧಿಕ ಜನರು.
ಆಪ್ತರು ಮೃತರಾದಾಗ ಒಮ್ಮೆ ದುಃಖವಾಗುತ್ತದೆ ನಿಜ. ಆದರೆ, ಪ್ರತಿಯೊಬ್ಬರ ಜೀವನಕ್ಕೂ ಅಂತ್ಯವುಂಟೆಂಬುದು ನಿಜಕ್ಕೂ ಭಾಗ್ಯ. ಇದನ್ನು ನೆನೆದು ನಲಿಯಲೇ ಬೇಕು, ಅಲ್ಲವೇ?

ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ
ಬೀಳಾಯ್ತು ನಿನ್ನೆಯದೆಂದಳುವುದೇಕೆ?
ಮೇಲು ಮಾಡಲ್ಕಂದು ಸಮಯವದಕಾಣೆಯೇಂ
ಪಾಳೊಂದುಮಿಲ್ಲವೆಲೊ – ಮರುಳ ಮುನಿಯ
ನಿನ್ನೆ ಮುಗಿದಿದೆ. ಆದರೆ ನಾಳೆ ಕಾದಿದೆ ಎಂಬುದು ನೆನಪಿರಲಿ. ಬಾಳಿನಲ್ಲಿ ನಿನ್ನೆಯ ದಿನ ಹಾಳಾಗಿ ಹೋಯಿತು ಎಂದು ಅಳುವುದೇಕೆ? ಅದನು ಮೇಲು ಮಾಡಲಿಕ್ಕೆ, ಅಂದರೆ ಅದರಿಂದ ಒಳಿತು ಮಾಡಲಿಕ್ಕೆ, ಸೂಕ್ತ ಸಮಯಕ್ಕಾಗಿ ವಿಧಿ ಕಾಯುತ್ತಿದೆ ಎಂಬುದು ನಿನಗೆ ಕಾಣಿಸುತ್ತಿಲ್ಲವೇ? ಈ ಜಗತ್ತಿನಲ್ಲಿ ಹಾಳು ಎಂಬುದು ಯಾವುದೂ ಇಲ್ಲ ಎಂದು ಈ ಮುಕ್ತಕದಲ್ಲಿ ತಿಳಿಸುವ ಡಿವಿಜಿಯವರು ನಮ್ಮನ್ನು ಗಹನವಾದ ಚಿಂತನೆಗೆ ಒಡ್ಡುತ್ತಾರೆ.
೨೦೧೭ಕ್ಕೆ ಕಾಲಿಟ್ಟ ಈ ಹೊತ್ತಿನಲ್ಲಿ ೨೦೧೬ನೇ ವರುಷವೇ ಕಳೆದು ಹೋಯಿತೆಂದು ನಾವು ಚಿಂತಿಸಬೇಕಾಗಿಲ್ಲ. ಒಳ್ಳೆಯ ಕೆಲಸಗಳನ್ನು ಆರಂಭಿಸಲು ಯಾವುದೇ ದಿನ ಸೂಕ್ತ. ಈ ಕ್ಷಣವೇ ಸುಮುಹೂರ್ತ. ಪ್ರತಿ ದಿನದ ನಡಿಗೆ ಅಥವಾ ವ್ಯಾಯಾಮ ಇಂದೇ ಶುರು ಮಾಡೋಣ. ನಾಳೆಗೆ ಮುಂದೂಡಿದರೆ, ನಮ್ಮ ಆರೋಗ್ಯ ಸುಧಾರಿಸುವ ಕಾಯಕವನ್ನೇ ಒಂದು ದಿನ ತಡ ಮಾಡಿದಂತೆ, ಅಲ್ಲವೇ? ಸಮುದಾಯದ ಕೆಲಸಗಳಿಗೂ ಇದೇ ನಿಯಮ ಅನ್ವಯ. ನಮ್ಮೂರನ್ನು ಅಥವಾ ನಮ್ಮ ಬೀದಿಯನ್ನು ಸ್ವಚ್ಛವಾಗಿಡುವ ಕೆಲಸ. ಇದಕ್ಕಾಗಿ ಮನೆಮನೆಯವರನ್ನು ವಠಾರ ಸ್ವಚ್ಛವಾಗಿಡಲು ಆಗ್ರಹಿಸುವುದು, ವಿದ್ಯಾರ್ಥಿಗಳನ್ನು ಹುರಿದುಂಬಿಸುವುದು, ಸಂಘಸಂಸ್ಥೆಗಳ ಸಹಕಾರದಿಂದ ಸ್ವಚ್ಛತಾ ಆಂದೋಲನ ಮುನ್ನಡೆಸುವುದು – ಇಂತಹ ಜನಪರ ಕೆಲಸಗಳನ್ನು ಯಾರೂ ಸಂಘಟಿಸಬಹುದು. ಕಳೆದ ವರುಷ ಇದನ್ನು  ಮಾಡಲಿಲ್ಲ ಎಂಬ ನಿರಾಶೆ ಬೇಡ. ಈ ವರುಷವಾದರೂ ಇದನ್ನು ಮಾಡೋಣ ಎಂಬ ಹುಮ್ಮಸ್ಸು ಬೇಕು.
೮ ನವಂಬರ್ ೨೦೧೬ರಂದು ರೂ.೫೦೦ ಮತ್ತು ರೂ.೧,೦೦೦ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ, ನಮ್ಮ ದೇಶದಲ್ಲಿ ಕಡಿಮೆ ಮೌಲ್ಯದ ನೋಟುಗಳಿಗಾಗಿ ಜನರು ಕಾಯಬೇಕಾಯಿತು. ಬ್ಯಾಂಕಿನ ಬ್ರಾಂಚುಗಳಲ್ಲಿ ಹಾಗೂ ಎಟಿಎಂಗಳಲ್ಲಿ ತಮ್ಮದೇ ಹಣ ಪಡೆಯಲಿಕ್ಕಾಗಿ ಸರತಿಸಾಲಿನಲ್ಲಿ ಸಾವಿರಾರು ಜನರು ನಿಲ್ಲಬೇಕಾಯಿತು. ಇದೆಲ್ಲ ಬೇಕಾಗಿರಲಿಲ್ಲ; ಇದರಿಂದ ತೊಂದರೆಯಾಯಿತು ಎಂದು ಒಮ್ಮೆ ಅನಿಸಿತು. ಆದರೆ “ಹಾಳು ಎಂಬುದು ಇಲ್ಲ” ಎಂಬುದು ಈ ಸನ್ನಿವೇಶದಲ್ಲಿಯೂ ಸಾಬೀತಾಯಿತು. ಇದರಿಂದಾಗಿ, ಈ ವರೆಗೆ ಬ್ಯಾಂಕಿಗೆ ಜಮೆಯಾಗದಿದ್ದ ಕೋಟಿಗಟ್ಟಲೆ ರೂಪಾಯಿ ಹಣ ಬ್ಯಾಂಕುಗಳಿಗೆ ಬಂತು. ಈ ಅಗಾಧ ಹಣ ಬಳಸಿ, ಜನಸಾಮಾನ್ಯರಿಗೆ ಮನೆ ಕಟ್ಟಲು ಕಡಿಮೆ ಬಡ್ಡಿಯ ಸಾಲ ನೀಡುವುದಾಗಿ ಕೆಲವು ಬ್ಯಾಂಕುಗಳು ಈಗಾಗಲೇ ಘೋಷಿಸಿವೆ. ಅಂದರೆ, ಹಾಳು ಎಂದು ತೋರಿದ ಕ್ರಮದಿಂದಾಗಿ ಸೂಕ್ತ ಸಮಯ ಬಂದಾಗ ಒಳಿತಾಗಿದೆ, ಅಲ್ಲವೇ?