ಗುಜರಾತಿನಲ್ಲೊಂದು ವಿಶ್ವವಿದ್ಯಾಲಯ. ರಾಯ್ ವಿಶ್ವವಿದ್ಯಾಲಯ ಎಂಬ ಅದರ ಹೆಸರು ಪರಿಚಿತ – ಆದರೆ ಶಿಕ್ಷಣರಂಗದ ಸಾಧನೆಗಳಿಗಾಗಿ ಅಲ್ಲ. ಮತ್ತೆ ಯಾಕೆ? ಅದರ ಪ್ರವರ್ತಕರು ಮಾಧ್ಯಮಗಳಲ್ಲಿ ನೀಡುವ ಅಬ್ಬರದ ಜಾಹೀರಾತುಗಳಿಗಾಗಿ!
ನವಂಬರ್ ೨೦೧೩ರಲ್ಲಿ ಅದು ಇನ್ನೊಮ್ಮೆ ಸುದ್ದಿ ಮಾಡಿತು – ಈ ನಾಲ್ವರು ಸೆಲೆಬ್ರೆಟಿಗಳಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ: ಮಾರಾಟಗಾರಿಕೆ ಪರಿಣತ ಹಾಗೂ ನಟ ಸುಹೇಲ್ ಸೇತ್, ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಉದ್ಯಮಶೀಲ ಸಾಧಕ ಪ್ರೀತಿ ಪಾವುಲ್ ಮತ್ತು ಫ್ಯಾಷನ್ ಉಡುಪುಗಳ ವಿನ್ಯಾಸಗಾರ ರಿತು ಬೆರಿ.
ತಕ್ಷಣವೇ ಇಂಟರ್-ನೆಟ್ಟಿನ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಭುಗಿಲೆದ್ದಿತು: ಹೀಗೆ ಸೆಲೆಬ್ರೆಟಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಸುದ್ದಿ ಮಾಡುವುದು ಅಮಾಯಕ ವಿದ್ಯಾರ್ಥಿಗಳನ್ನು ತಮ್ಮ ವಿಶ್ವವಿದ್ಯಾಲಯಕ್ಕೆ ಸೆಳೆಯುವ ತಂತ್ರವಲ್ಲವೇ? ಎಂಬ ಚರ್ಚೆ.
“ಕ್ಯಾರಿಯರ್ಸ್ ೩೬೦” ಎಂಬ ಉದ್ಯೋಗ ಸಲಹಾ ಸಂಸ್ಥೆಯ ಪ್ರಧಾನ ನಿರ್ವಹಣಾ ಅಧಿಕಾರಿ ಮಹೇಶ್ವರ್ ಪೆರಿ ಎಂಬವರು ಫೇಸ್-ಬುಕ್ಕಿನಲ್ಲಿ ಚರ್ಚೆಯೊಂದನ್ನು ಶುರುವಿಟ್ಟರು: ರಾಯ್ ವಿಶ್ವವಿದ್ಯಾಲಯದ ವಿರುದ್ಧ ಮಾನ್ಯತೆಯಿಲ್ಲದ ಕೋರ್ಸುಗಳನ್ನು ನಡೆಸುತ್ತಿರುವ ಮತ್ತು ಉದ್ಯೋಗ ಕೊಡಿಸುವ ಸುಳ್ಳು ಭರವಸೆ ನೀಡುತ್ತಿರುವ ಆಪಾದನೆಗಳಿವೆ. ಇಂತಹ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿದ್ದೇನೆ ಎಂಬುದು ಸುಹೇಲ್ ಸೇತ್ ಅವರಿಗೆ ತಿಳಿದಿದೆಯೇ? ಇದಾದ ತಕ್ಷಣ ಸುಹೇಲ್ ಸೇಟ್ ಸ್ಪಂದಿಸಿದರು: ತನ್ನ ಗೌರವ ಡಾಕ್ಟರೇಟನ್ನು ರಾಯ್ ವಿಶ್ವವಿದ್ಯಾಲಯಕ್ಕೆ ಹಿಂತಿರುಗಿಸುವ ಮೂಲಕ.
ಇಂತಹ ಘಟನೆಗಳು ಮತ್ತೆಮತ್ತೆ ನಡೆಯುತ್ತಲೇ ಇರುತ್ತವೆ. ಯಾಕೆಂದರೆ, “ಇದು ಅದ್ಭುತ”, “ಇದು ಭಾರೀ ಉಪಯುಕ್ತ” ಎಂಬ “ಶಿಫಾರಸ್”ಗಳನ್ನು ಸೆಲೆಬ್ರೆಟಿಗಳು ನೀಡಿದರೆ (ಪತ್ರಿಕಾ, ರೇಡಿಯೋ ಅಥವಾ ಟಿವಿ ಮಾಧ್ಯಮಗಳಲ್ಲಿ) ಅದನ್ನು ನಂಬುವುದು ಭಾರತೀಯರ ಪ್ರವೃತ್ತಿ. ಇದನ್ನು ಕೆಲವು ವಿಶ್ವವಿದ್ಯಾಲಯಗಳು ಮತ್ತು ವಿದ್ಯಾಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ.
ಗೌರವ ಡಾಕ್ಟರೇಟ್ ನೀಡುವುದು ಜಗತ್ತಿನಾದ್ಯಂತ ವಿಶ್ವವಿದ್ಯಾಲಯಗಳು ಅನುಸರಿಸುತ್ತಿರುವ ಪರಿಪಾಠ. ಉದಾಹರಣೆಗೆ, ಮಾನವಕುಲದ ಸೇವೆಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟಿರುವ ಬಾಬಾ ಅಮ್ಟೆ ಮತ್ತು ಅಣ್ಣಾ ಹಜಾರೆಯಂತಹ ಸಮಾಜ ಸೇವಕರಿಗೆ, ಸಂಗೀತದಲ್ಲಿ ಉತ್ತುಂಗತೆ ಸಾಧಿಸಿದ ಎಂ.ಎಸ್. ಸುಬ್ಬುಲಕ್ಷ್ಮಿ ಮತ್ತು ಭೀಮಸೇನ ಜೋಷಿಯಂತಹ ಮಹಾನ್ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುವುದು ಅಗತ್ಯ. ಹಾಗೆ ಇತ್ತಾಗ, ಅದನ್ನು ನೀಡುವ ವಿಶ್ವವಿದ್ಯಾಲಯಕ್ಕೇ ಅದರಿಂದಾಗಿ ಗೌರವ ಸಂದಾಯ.
ಆದರೆ, ಯಾವುದೇ ವಿಶ್ವವಿದ್ಯಾಲಯಕ್ಕೆ ಶಿಕ್ಷಣ ನೀಡುವುದಕ್ಕಿಂತ ಶಿಕ್ಷಣದ ವ್ಯಾಪಾರವೇ ಮುಖ್ಯವಾದಾಗ ಇದೆಲ್ಲ ತಲೆಕೆಳಗಾಗುತ್ತದೆ. ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಮಾನ್ಯತೆಯಿಲ್ಲದ ಹಾಗೂ ದುಬಾರಿ ಶುಲ್ಕದ ತನ್ನ ಕೋರ್ಸುಗಳಿಗೆ ಸೆಳೆಯಲಿಕ್ಕಾಗಿ ಮೋಸದ ವಿಧಾನಗಳನ್ನು ಮಾರ್ಕೆಟಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳಲು ಅಂತಹ ವಿಶ್ವವಿದ್ಯಾಲಯ ಮುಂದಾಗುತ್ತದೆ.
ಅದರ ಅಂಗವಾಗಿ, ಜನಪ್ರಯತೆಯ ತುತ್ತುತುದಿಯಲ್ಲಿರುವ ಸೆಲೆಬ್ರೆಟಿಗಳನ್ನು ತನ್ನ ಪ್ರಚಾರಕ್ಕಾಗಿ ಯಾವುದೇ ವಿಧಾನದಿಂದ ಒಲಿಸಿಕೊಳ್ಳಲು ತಂತ್ರ ಹೂಡುತ್ತದೆ. ಯಾಕೆಂದರೆ ಆ ಸೆಲೆಬ್ರೆಟಿಯ ಹೆಸರು ತಗಲಿಕೊಂಡಿದೆ ಎಂಬ ಕಾರಣಕ್ಕಾಗಿ ಈ ವಿಶ್ವವಿದ್ಯಾಲಯ ಸುದ್ದಿಯಾಗುತ್ತದೆ.
ಇದನ್ನೆಲ್ಲ ಹೇಗೆ ತಡೆಯಬಹುದು? ಗೌರವ ಡಾಕ್ಟರೇಟ್ ನೀಡಲಿಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು ಒಂದು ವಿಧಾನ. ಆದರೆ, ಈ ಸೂತ್ರಗಳಿಗೆ ಕಿಮ್ಮತ್ತಿನ ಬೆಲೆ ನೀಡದಿದ್ದರೆ ಈ ವಿಧಾನ ವಿಫಲ. ಯಾಕೆಂದರೆ, ವಿಶ್ವವಿದ್ಯಾಲಯಗಳ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ನಿಯಮಗಳನ್ನೇ ಗಾಳಿಗೆ ತೂರುವ ವಿಶ್ವವಿದ್ಯಾಲಯಗಳಿವೆ. ಹೀಗೆ ಮಾಡಿದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ೨೦೧೩ರಲ್ಲಿ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ರದ್ದು ಪಡಿಸಿದ ಕಾರಣ ಸಾವಿರಾರು ಪದವೀಧರರು / ಸ್ನಾತಕೋತ್ತರ ಪದವೀಧರರು ಸಂಕಷ್ಟಕ್ಕೆ ಗುರಿಯಾದರು.
ಡಿಗ್ರಿಗಳನ್ನು ಮಾರುವ ವಿದ್ಯಾಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಇವುಗಳ ಮಾರಾಟ ತಂತ್ರಗಳ ಮೇಲೆ ಶಿಕ್ಷಣ ರಂಗದ ನಿಯಂತ್ರಣ ಇಲಾಖೆಗಳಿಗೆ ಯಾವುದೇ ಹತೋಟಿಯಿಲ್ಲ. ಹಾಗಿರುವಾಗ ಗೌರವ ಡಾಕ್ಟರೇಟ್ ನೀಡುವ ಪದ್ಧತಿಯನ್ನೇ ರದ್ದು ಪಡಿಸುವುದು ಸೂಕ್ತ. (ಗೌರವ ಡಾಕ್ಟರೇಟ್ ಪಡೆಯುವ ಯೋಗ್ಯತೆ ಇರುವ ಯಾರಿಗೂ ಈ ಬಿರುದುಬಾವಲಿ ಅಗತ್ಯವಿಲ್ಲ ಎಂಬುದನ್ನು ಗಮನಿಸಿ.) ಕರ್ನಾಟಕ ಸರಕಾರ ನೀಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿಗಳನ್ನೇ ಪರಿಶೀಲಿಸಿ. ಒಂದೇ ವರುಷದಲ್ಲಿ ೬೦ರಿಂದ ೧೦೦ ಜನರಿಗೆ ಇಂತಹ ಪ್ರಶಸ್ತಿ ಕೊಡುತ್ತಾರೆಂದರೆ ಏನರ್ಥ? ಏಲಂನಲ್ಲಿ ಆಗುವಂತೆ ಇವೆಲ್ಲ ಖರೀದಿಗೆ ಸಿಗೋದಿಲ್ಲ ಎಂದಾಗ ಬೇಕಾದರೆ, ಇವುಗಳ ನಿಷೇಧ ಅಗತ್ಯ, ಅಲ್ಲವೇ?
ಚಿತ್ರ ಕೃಪೆ: ಷಟರ್ ಸ್ಟೋಕ್. ಕೊಮ್