ಹೆಚ್ಚುತ್ತಿರುವ ಸಿಸೇರಿಯನ್ ಹೆರಿಗೆಗಳು

ಹತ್ತು ವರುಷಗಳಿಂದೀಚೆಗೆ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದೆಯೆಂದು ಹಲವರು ಮಾತಾಡುತ್ತಾರೆ. ಅಜ್ಜಿಯರಂತೂ ತಮ್ಮ ಕಾಲದಲ್ಲಿ ತಾಯಂದಿರು ಹತ್ತಾರು ಹೆತ್ತರೂ ಎಲ್ಲವೂ ಸಹಜ ಹೆರಿಗೆ; ಈಗಿನಂತೆ ಸಿಸೇರಿಯನ್ ಹೆರಿಗೆ ಆಗ ಇರಲಿಲ್ಲವೆಂದು ಹೇಳುತ್ತಲೇ ಇರುತ್ತಾರೆ.
ಅಜ್ಜಿಯರ ಮಾತನ್ನು ಅದೇನೋ ಭ್ರಮೆ ಎಂದು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಢೆಲ್ಲಿಯಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಸರಕಾರಿ ಆಸ್ಪತ್ರೆಗಳಲ್ಲಿ ಶೇಕಡಾ ೨೩ಕ್ಕಿಂತ ಜಾಸ್ತಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ೫೪. ಇದು ಸೀತಾರಾಮ್ ಭಾರ್ತಿಯಾ ವಿಜ್ನಾನ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿ ಬಹಿರಂಗ ಪಡಿಸಿರುವ ಸತ್ಯಾಂಶ. ಲಂಡನ್ ಸ್ಕೂಲ್ ಆಫ್ ಇಕೊನೊಮಿಕ್ಸಿನ ಸಾಮಾಜಿಕ ಧೋರಣೆ ವಿಭಾಗದ ಟಿಜಿಯಾನಾ ಲಿಯೋನ್ ನಡೆಸಿದ ಅಧ್ಯಯನವೂ ಇದೇ ಆತಂಕಕಾರಿ ವಿಷಯವನ್ನು ಬೆರಳೆತ್ತಿ ತೋರಿಸಿದೆ. ಜಾಗತಿಕ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಓ.) ಸಿಸೇರಿಯನ್ ಹೆರಿಗೆಗಳ ಪ್ರಮಾಣ ಶೇ.೧೦ರಿಂದ ೧೫ ಇರಬಹುದೆಂದು ಸೂಚಿಸಿದೆ; ಆದರೆ ಭಾರತದ ಕೆಲವು ಪ್ರದೇಶಗಳಲ್ಲಿ ಇದು ಶೇ.೩೦ಕ್ಕಿಂತ ಅಧಿಕವಾಗಿದೆ. ಚೆನ್ನೈಯ ರಾಷ್ಟ್ರೀಯ ಎಪಿಡಿಮಿಯೊಲಜಿ ಸಂಸ್ಥೆಯು, ಇದು ಕೇರಳದಲ್ಲಿ ಶೇ.೪೧ ಮತ್ತು ತಮಿಳ್ನಾಡಿನಲ್ಲಿ ಶೇ.೫೮ ಎಂದು ತಿಳಿಸಿದೆ. ಭಾರತದಲ್ಲಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿರುವುದಂತೂ ಖಂಡಿತ.
ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ಸಿಸೇರಿಯನ್ ಹೆರಿಗೆ ಅಗತ್ಯ. ಈ ಬಗ್ಗೆ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಎಸೋಸಿಯೇಷನ್ ಎಂಬ ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯೊಂದು ಹೀಗೆನ್ನುತ್ತದೆ: ಒಂದು ಸಮುದಾಯದಲ್ಲಿ ಸಿಸೇರಿಯನ್ ಹೆರಿಗೆಯ ಪ್ರಮಾಣ ಶೇ.೧೯ ತನಕ ಏರಿಕೆಯಾಗಬಹುದು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಸೇರಿಯನ್ ಹೆರಿಗೆ ಮಾಡಲಾಗುತ್ತಿದ್ದರೆ, ಅದು ಗರ್ಭಿಣಿಯರ ಅಥವಾ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡಲಿಕ್ಕಾಗಿ ಅಲ್ಲ.
ಭಾರತದ ಪ್ರಸವ ವಿಜ್ನಾನ ಮತ್ತು ಸ್ತ್ರೀರೋಗ ವಿಜ್ನಾನದ ಸೊಸೈಟಿಗಳ ಫೆಡರೇಷನಿನ ಅಧ್ಯಕ್ಷ ಪ್ರಕಾಶ್ ತ್ರಿವೇದಿ, ಹೆಚ್ಚುತ್ತಿರುವ ಸಿಸೇರಿಯನ್ ಹೆರಿಗೆಗಳನ್ನು ಸಮರ್ಥಿಸುತ್ತಾರೆ. ಅವರು ನೀಡುವ ಕಾರಣಗಳು: ಈಗ ಮಹಿಳೆಯರು ಗರ್ಭವತಿಯರಾಗುವ ವಯಸ್ಸಿನಲ್ಲಿ ಹೆಚ್ಚಳ, ಮುಂಚೆ ಸಿಸೇರಿಯನ್ ಹೆರಿಗೆ ಆದವರು ಪುನಃ ಗರ್ಭಿಣಿಯರಾಗುವುದು, ಕೃತಕ ಗರ್ಭಧಾರಣೆ ಇತ್ಯಾದಿ.
ಹೆರಿಗೆಯ ನೋವು ತಡೆದುಕೊಳ್ಳುವ ತಾಳ್ಮೆ ಈಗಿನ ಗರ್ಭವತಿಯರಲ್ಲಿ ಕಡಿಮೆ ಆಗುತ್ತಿರುವುದೂ ಸಿಸೇರಿಯನ್ ಹೆರಿಗೆಗಳ ಹೆಚ್ಚಳಕ್ಕೆ ಒಂದು ಕಾರಣ. ಕೆಲವೊಮ್ಮೆ ಗರ್ಭಿಣಿಯರೇ ಅಂಧಶ್ರದ್ಧೆಯಿಂದ ಸಿಸೇರಿಯನ್ ಹೆರಿಗೆ ಮಾಡಿಸಲು ವೈದ್ಯರನ್ನು ಒತ್ತಾಯಿಸುತ್ತಾರೆ; ಉದಾಹರಣೆಗೆ, “ಒಳ್ಳೆಯ ದಿನ” ಮಗು ಹುಟ್ಟಬೇಕೆಂಬ ಕಾರಣಕ್ಕಾಗಿ. ಇನ್ನೊಂದು ಕಾರಣ, ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲವು ದಿನಗಳಲ್ಲಿ ಪರಿಣತ ವೈದ್ಯರ ಅಲಭ್ಯತೆ; ಹಾಗಾಗಿ, ಅಲ್ಲಿ ವೈದ್ಯರು ಲಭ್ಯವಿರುವ ದಿನಗಳಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸುವ ಪ್ರವೃತ್ತಿ ಹೆಚ್ಚುತ್ತಿದೆ.
೨೦೧೫ರಲ್ಲಿ ಅಹ್ಮದಾಬಾದಿನ ಎಲ್.ಜಿ.ಆಸ್ಪತ್ರೆಯ ಪ್ರಸವ ವಿಜ್ನಾನ ಮತ್ತು ಸ್ತ್ರೀರೋಗ ವಿಭಾಗವು ೫೦೦ ಸಿಸೇರಿಯನ್ ಹೆರಿಗೆ ಪ್ರಕರಣಗಳ ವಿಶ್ಲೇಷಣೆ ಮಾಡಿತು: ವೈದ್ಯರು ಸಿಸೇರಿಯನ್ ಹೆರಿಗೆ ಮಾಡಿಸಲು ನಿರ್ಧರಿಸಿದ್ದು ಯಾಕೆ? ಎಂಬುದನ್ನು ಪರಿಶೀಲಿಸಲಿಕ್ಕಾಗಿ. ಈ ಅಧ್ಯಯನದಲ್ಲಿ ತಿಳಿದು ಬಂದ ಪ್ರಧಾನ ಕಾರಣಗಳು: ಮುಂಚೆ ಸಿಸೇರಿಯನ್ ಹೆರಿಗೆ ಆಗಿದ್ದರಿಂದ ಮತ್ತು ಗರ್ಭದಲ್ಲಿರುವ ಭ್ರೂಣ ಒತ್ತಡಕ್ಕೆ ಒಳಗಾದ್ದರಿಂದ.
ಆದರೆ, ಒಮ್ಮೆ ಸಿಸೇರಿಯನ್ ಮೂಲಕ ಮಗುವನ್ನು ಹೆತ್ತ ತಾಯಿಯ ಮುಂದಿನ ಎಲ್ಲ ಹೆರಿಗೆಗಳೂ ಸಿಸೇರಿಯನ್ ಆಗಬೇಕೆಂಬುದು ಸರಿಯಲ್ಲ. ಆಕೆ, ಎರಡನೆಯ ಹೆರಿಗೆಯಲ್ಲಿ ಸಹಜ ಹೆರಿಗೆ ಮಾಡಿಕೊಳ್ಳಬಹುದು. ಆದರೆ, ಅಂತಹ ತಾಯಂದಿರಿಗೆ ಸಹಜ ಹೆರಿಗೆ ಮಾಡಿಸಲು ವೈದ್ಯರಿಗೆ ಉತ್ಸಾಹವಿಲ್ಲ.
ಯಾಕೆ? ಯಾಕೆಂದರೆ ಸಿಸೇರಿಯನ್ ಹೆರಿಗೆಗಳಿಗೆ ಖರ್ಚು ಜಾಸ್ತಿ – ಇದಕ್ಕೆ ಸಹಜ ಹೆರಿಗೆಯ ಖರ್ಚಿಗಿಂತ ಒಂದೂವರೆ ಪಟ್ಟಿನಿಂದ ತೊಡಗಿ ಎರಡು ಪಟ್ಟು ಜಾಸ್ತಿ “ಹೆರಿಗೆ ಬಿಲ್” ಮಾಡುತ್ತಾರೆ. “ಭಾರತದಲ್ಲಿ ಸಿಸೇರಿಯನ್ ಹೆರಿಗೆಗೆ ಜಾಸ್ತಿ ದರಕ್ಕೆ ಕಾರಣ ವೈದ್ಯರು ಮತ್ತು ನೀತಿನಿಯಮಾವಳಿಗಳು ಇಲ್ಲದಿರುವುದು. ಹೆರಿಗೆಯ ಆಸ್ಪತ್ರೆ ವೆಚ್ಚದ ಮರುಪಾವತಿ ಸವಲತ್ತುಗಳು, ಆರೋಗ್ಯ ವಿಮಾ ಪಾಲಿಸಿಗಳ ಮಾರಾಟ ಮಾಡುವ ಖಾಸಗಿ ವಿಮಾ ಕಂಪೆನಿಗಳು ಮತ್ತು ಹೆಚ್ಚುತ್ತಿರುವ ಆದಾಯ – ಇವುಗಳಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದೆ” ಎನ್ನುತ್ತಾರೆ ಟಿಜಿಯಾನಾ ಲಿಯೋನ್ – ಪಂಜಾಬ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತಮಿಳ್ನಾಡು ಮತ್ತು ಢೆಲ್ಲಿ ರಾಜ್ಯಗಳಲ್ಲಿ ನಡೆಸಿದ ಅಧ್ಯಯನದ ಆಧಾರದಿಂದ.
ಇಂತಹದೇ ಕಾರಣಗಳಿಂದಾಗಿ, ಬ್ರೆಜಿಲಿನಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಶೇಕಡಾ ೮೦ ದಾಟಿತು. ಇದರಿಂದಾಗಿ ಗಾಬರಿಯಾದ ಅಲ್ಲಿನ ಸರಕಾರ ಜುಲಾಯಿ ೨೦೧೫ರಲ್ಲಿ “ಹೊಸ ಸಿಸೇರಿಯನ್ ಹೆರಿಗೆ ನಿಯಮಗಳನ್ನು” ಜ್ಯಾರಿ ಮಾಡಿತು – ಆ ಪ್ರಮಾಣವನ್ನು ಇಳಿಸಲಿಕ್ಕಾಗಿ.
ಭಾರತ ಸರಕಾರವೂ ಎಚ್ಚೆತ್ತು, ಅಂತಹ ನಿಯಮ ಜ್ಯಾರಿ ಮಾಡಬೇಕಾಗಿದೆ; ಸಿಸೇರಿಯನ್ ಹೆರಿಗೆ ಮಾಡಿಸುವ ವೈದ್ಯರು, ತಮ್ಮ ನಿರ್ಧಾರಕ್ಕೆ ಸಕಾರಣಗಳನ್ನು ದಾಖಲಿಸಿ, ಸಮರ್ಥಿಸಿಕೊಳ್ಳುವುದು ಕಡ್ಡಾಯವಾಗ ಬೇಕಾಗಿದೆ.