1)ಸಸ್ಯಗಳ ಮತ್ತು ಪ್ರಾಣಿಗಳ ಲಕ್ಷಣಗಳನ್ನು ಹೊಂದಿರುವ ಏಕಕೋಶ ಜೀವಿಗಳಿವೆ ಎಂದರೆ ನಂಬುತ್ತೀರಾ? ಉದಾಹರಣೆಗೆ ಯೂಗ್ಲಿನಾ ಎಂಬ ಏಕಕೋಶ ಜೀವಿ. ಇದು ನೀರಿನಲ್ಲಿದ್ದಾಗ ಪ್ರಾಣಿಯಂತೆ ಅಂದರೆ ಹಾವಿನ ಚಲನೆಗಳನ್ನು ಮಾಡುತ್ತಾ ಮುಂದಕ್ಕೆ ಸರಿಯುತ್ತದೆ. ಜೊತೆಗೆ, ಇದರಲ್ಲಿದೆ ಸಸ್ಯಗಳ ಪ್ರಧಾನ ಗುಣಲಕ್ಷಣವಾದ ಪತ್ರಹರಿತ್ತು.
2)ರೇಷ್ಮೆಹುಳಗಳನ್ನು (ಬೊಮ್-ಬಿಕ್ಸ್ ಮೊರಿ) ಮನುಷ್ಯ ಸಾವಿರಾರು ವರುಷ ಸಾಕಿರುವ ಕಾರಣ, ಅದಕ್ಕೆ ಮನುಷ್ಯನ ಆರೈಕೆಯಿಲ್ಲದೆ ಬದುಕಲು ಸಾಧ್ಯವಿಲ್ಲದಾಗಿದೆ. ಅದೊಂದು ಸಾಕುಹುಳವಾಗಿ ಬದಲಾದ ಕಾರಣ, ಹಾರುವ ಶಕ್ತಿಯನ್ನೂ ಕಳೆದುಕೊಂಡಿದೆ.
3)ಸಮುದ್ರಹಾವುಗಳಲ್ಲಿ ಸುಮಾರು ಐವತ್ತು ಸ್ಪಿಷೀಸ್‌ಗಳನ್ನು ಗುರುತಿಸಲಾಗಿದೆ. ಅವೆಲ್ಲವೂ ವಿಷದ ಹಾವುಗಳು. ಪರ್ಷಿಯನ್ ಕೊಲ್ಲಿಯಿಂದ ತೊಡಗಿ ಜಪಾನಿನ ವರೆಗೆ ಮತ್ತು ಆಸ್ಟ್ರೇಲಿಯಾ ಹಾಗೂ ಮೆಲಾನೆಸಿಯಾದ ಸುತ್ತಲೂ ಸಮುದ್ರತೀರಗಳಲ್ಲಿ ಅವನ್ನು ಬಹುಸಂಖ್ಯೆಯಲ್ಲಿ ಕಾಣಬಹುದು. ಅವುಗಳ ವಿಷ ನಾಗರಹಾವಿನ ವಿಷಕ್ಕಿಂತ ಹತ್ತು ಪಟ್ಟು ತೀಕ್ಷ್ಣ. ಸಮುದ್ರಹಾವು ಕಚ್ಚಿದ ಮನುಷ್ಯರು ಕೇವಲ ಎರಡೂವರೆ ಗಂಟೆಗಳಲ್ಲಿ ಸತ್ತುಹೋದ ನಿದರ್ಶನಗಳಿವೆ.
4)ಬೇರೆಲ್ಲ ಜಾತಿಯ ಪ್ರಾಣಿಗಳ ವಿವಿಧ ನಮೂನೆಗಳ ಒಟ್ಟು ಸಂಖ್ಯೆಗಿಂತ ಜಾಸ್ತಿ ಸಂಖ್ಯೆಯ ಕೀಟಗಳ ನಮೂನೆಗಳಿವೆ. ಅಂದರೆ ಕೀಟಪ್ರಭೇದಗಳ ಸಂಖ್ಯೆ ಅಷ್ಟು ಅಗಾಧ.
5)ಆಹಾರ ಅಭಾವದ ಸಮಯದಲ್ಲಿ ಆಹಾರ ಒದಗಿಸಲಿಕ್ಕಾಗಿ ಮರುಭೂಮಿಯ ಜೇನು-ಇರುವೆ (ಹನಿ ಆಂಟ್) ಒಂದು ವಿಚಿತ್ರ ವಿಧಾನವನ್ನು ಅನುಸರಿಸುತ್ತವೆ. ಅವುಗಳ ಸಮುದಾಯದ ಕೆಲವು ಇರುವೆಗಳಿಗೆ ದ್ರವ-ಆಹಾರ ಅಥವಾ ನೀರನ್ನು ಕುಡಿಸಿಕುಡಿಸಿ, ಅವುಗಳ ದೇಹದ ಹಿಂಭಾಗವು ಅವರೆಕಾಳಿನಷ್ಟು ದೊಡ್ಡದಾಗುವಂತೆ ಮಾಡುತ್ತವೆ. ಕ್ಷಾಮ ಬಂದಾಗ, ಈ ಇರುವೆಗಳು ತಮ್ಮಲ್ಲಿ ಶೇಖರಿಸಿಕೊಂಡ ಆಹಾರವನ್ನು ಇತರ ಇರುವೆಗಳು ತಿನ್ನಲಿಕ್ಕಾಗಿ ವಾಂತಿ ಮಾಡುತ್ತವೆ.
6)ಕೆಲವು ಕೀಟಗಳು, ಅವುಗಳ ತಲೆಗಳನ್ನು ಕತ್ತರಿಸಿದ ನಂತರ ಒಂದು ವರುಷದ ತನಕವೂ ಬದುಕುತ್ತವೆ. ಇವುಗಳ ದೇಹವು ಬೆಳಕು, ಉಷ್ಣತೆ, ತೇವಾಂಶ, ರಾಸಾಯನಿಕಗಳು ಮತ್ತು ಇತರ ಪ್ರಚೋದಕಗಳಿಗೆ ಪ್ರತಿಕ್ರಿಯಿಸುತ್ತವೆ.
7)ರಾಣಿ ಜೇನ್ನೊಣವು ಹೊಸ ರಾಣಿಗಳು ಹುಟ್ಟಿ ಬರಲಿಕ್ಕಾಗಿ ಫಲೀಕೃತ ಮೊಟ್ಟೆಗಳನ್ನು ಇಡುತ್ತದೆ. ಇವುಗಳಲ್ಲಿ ಮೂಡುವ ಹೊಸ ರಾಣಿಗಳಲ್ಲಿ ಒಂದೇ ಒಂದು ರಾಣಿ ಜೇನ್ನೊಣ ಬದುಕಿ ಉಳಿಯುತ್ತದೆ. ಯಾಕೆಂದರೆ, ತನ್ನ ಕೋಶದಿಂದ ಮೊದಲಾಗಿ ಹೊರಬರುವ ರಾಣಿ ಜೇನ್ನೊಣವು, ಕೋಶದೊಳಗೆ ಬೆಳೆಯುತ್ತಿರುವ ಇತರ ಎಲ್ಲ ರಾಣಿ ಜೇನ್ನೊಣಗಳನ್ನು ಕೊಂದು ಹಾಕುತ್ತದೆ!
8)ನೆಲದೊಳಗೆ ಸುಮಾರು ಹದಿನೈದು ವರುಷ ಕೋಶಾವಸ್ಥೆಯಲ್ಲಿರುವ ಕೆಲವು ಜಾತಿಯ ಮಿಡತೆಗಳ ಪ್ರಬುದ್ಧ ಜೀವನ (ಮಿಡತೆಯಾದ ನಂತರ) ಕೇವಲ ಒಂದೆರಡು ವಾರಗಳು!
9)ಗಂಡು ಪ್ರಾರ್ಥನಾಕೀಟ(ಪ್ರೇಯಿಂಗ್ ಮಾಂಟಿಸ್) ಹೆಣ್ಣಿನೊಡನೆ ಕೂಡಿದ ನಂತರ ತನ್ನ ತಲೆಯನ್ನೇ ಕಳೆದುಕೊಳ್ಳುತ್ತದೆ. ಹೆಣ್ಣು ಪ್ರಾರ್ಥನಾಕೀಟವು ಗಂಡಿನ ತಲೆಯನ್ನೇ ಕತ್ತರಿಸಿ, ಕೊನೆಗೆ ಅದರ ಇಡೀ ದೇಹವನ್ನೇ ಚಪ್ಪರಿಸಿ ತಿನ್ನುತ್ತದೆ.
10)ಬಸವನಹುಳಗಳಿಗೆ ನಿದ್ದೆ ಜಾಸ್ತಿ. ಅವು ಚಳಿಗಾಲದಲ್ಲಿ ಸುಪ್ತಾವಸ್ಥೆಗೆ ಹೋಗುತ್ತವೆ. ಅದಲ್ಲದೆ, ಬಿಸಿಲು ತಮ್ಮ ದೇಹವನ್ನು ಒಣಗಿಸುವ ಕಾರಣ, ಬಿಸಿಲಿನಿಂದ ಬಚಾವಾಗಲಿಕ್ಕಾಗಿ ತಮ್ಮ ಚಿಪ್ಪಿನೊಳಗೆ ಸೇರಿಕೊಂಡು ನಿದ್ದೆ ಹೊಡೆಯುತ್ತವೆ. ಅಥವಾ, ಜೋರು ಮಳೆಬರುವಾಗ ಮಳೆನೀರಿನಲ್ಲಿ ಮುಳುಗುವ ಬದಲಾಗಿ ತಮ್ಮ ಚಿಪ್ಪಿನೊಳಗೆ ನುಸುಳಿ ಮಳೆಯ ಹೊಡೆತದಿಂದ ಪಾರಾಗುತ್ತವೆ. ಮರುಭೂಮಿಯ ಬಸವನಹುಳಗಳು ಮೂರು ಅಥವಾ ನಾಲ್ಕು ತಾಸು ತೂಕಡಿಸುತ್ತವೆ!
ಫೋಟೋ ೧: ಯೂಗ್ಲಿನಾ