ಹೀಗೂ ಉಂಟೇ! ನಮ್ಮ ಭೂಮಿ (ಭಾಗ 3)

14)ಭೂಮಿಯಲ್ಲಿ ಅಥವಾ ವಿಶ್ವದಲ್ಲಿ ಎಲ್ಲೇ ಆದರೂ “ಜೀವ" ಇರುವುದಕ್ಕೆ ಒಂದು ಕಾರಣ: ನಕ್ಷತ್ರಪುಂಜಗಳು ಭೂಮಿಯಿಂದ ದೂರಕ್ಕೆ ಸರಿಯುತ್ತಿರುವುದು. ಇದರ ಪರಿಣಾಮವಾಗಿ, ಅವುಗಳಿಂದ ಭೂಮಿಗೆ ಬರುವ ಬೆಳಕು “ಕೆಂಪಾಗುತ್ತಿದೆ" (ಡೊಪ್ಪ್ಲರ್ ಪರಿಣಾಮದಿಂದಾಗಿ) ಮತ್ತು ತನ್ನ ಶಕ್ತಿ ಹಾಗೂ ಉಷ್ಣತೆಯನ್ನು ಕಳೆದುಕೊಳ್ಳುತ್ತಿದೆ. ಇದ್ದಂತೆಯೇ ಇರುವ ಅಥವಾ ಕಿರಿದಾಗುವ ವಿಶ್ವದಲ್ಲಿ, ಅಂತಿಮವಾಗಿ ಎಲ್ಲೆಡೆಗಳಲ್ಲಿಯೂ ಅಧಿಕ ಉಷ್ಣತೆ (ಲಕ್ಷಗಟ್ಟಲೆ ಡಿಗ್ರಿ) ಇರುತ್ತದೆ; ಇದರಿಂದಾಗಿ ಎಲ್ಲಿಯೂ "ಜೀವ" ಇರಲು ಸಾಧ್ಯವೇ ಇಲ್ಲ.

15)ಬಹುಶಃ ಭೂಮಿಯಲ್ಲಿ ಆಮ್ಲಜನಕ-ರಹಿತ ವಾತಾವರಣದಲ್ಲಿ ಜೀವ ಅಭಿವೃದ್ಧಿ ಹೊಂದಿತು. ಈಗಲೂ, ಆಮ್ಲಜನಕ-ರಹಿತ ವಾತಾವರಣದಲ್ಲಿ ಮಾತ್ರ ಜೀವಿಸಬಲ್ಲ ಸೂಕ್ಷ್ಮಜೀವಿಗಳು ಭೂಮಿಯಲ್ಲಿವೆ.

16)ಒಂದು ನೂರು ಮೈಲು ಉದ್ದದ ಮತ್ತು ೧೫,೦೦೦ ಚದರ ಮೈಲು ವಿಸ್ತೀರ್ಣದ ದ್ವೀಪವೊಂದು ಬೃಹತ್ ನದಿ ಅಮೆಜಾನ್ ಸಾಗರ ಸೇರುವಲ್ಲಿಯೇ ಇದೆ. (ಇದರ ವಿಸ್ತೀರ್ಣ ನ್ಯೂಯಾರ್ಕ್ ಪ್ರಾಂತ್ಯದ ಮೂರನೆಯ ಒಂದು ಭಾಗಕ್ಕೆ ಸಮ.) ಮರಾಜೋ ಹೆಸರಿನ ಈ ದ್ವೀಪದಲ್ಲಿ ಜನವಸತಿ ಇಲ್ಲ. ಇದು ಭೂಮಧ್ಯರೇಖೆಯಲ್ಲೇ ಇರುವುದು ವಿಶೇಷ. (ಫೋಟೋ ನೋಡಿ)

17)ಮುಸ್ಸಂಜೆಯಲ್ಲಿ ದಿಗಂತದಲ್ಲಿ ಮುಳುಗುವ ಸೂರ್ಯ ಕೆಂಪಾಗಿ ಕಾಣಿಸುವುದು ಯಾಕೆ? ಯಾಕೆಂದರೆ, ಬೆಳಗ್ಗೆಯ ಗಾಳಿಗೆ ಹೋಲಿಸಿದಾಗ ಸಂಜೆಯ ಗಾಳಿಯಲ್ಲಿ ಧೂಳು ಹೆಚ್ಚಾಗಿರುತ್ತದೆ.

18)ಸಹಾರಾ ಮರುಭೂಮಿಯ ಕೆಲವು ಸ್ಥಳಗಳಲ್ಲಿ ಹೊಸ-ಶಿಲಾ ಯುಗಕ್ಕೆ ಸೇರಿದ ಧಾನ್ಯ ಬೀಸುವ ಮತ್ತು ಅರೆಯುವ ಕಲ್ಲುಗಳು ಚದರಿಕೊಂಡು ಬಿದ್ದಿವೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಬೆಳೆಯುತ್ತಿದ್ದ ಕಾಡಿನ ಹುಲ್ಲುಗಳ ಧಾನ್ಯಗಳನ್ನು ಬೀಸಲು ಮತ್ತು ಅರೆಯಲು ಈ ಕಲ್ಲುಗಳನ್ನು ಪುರಾತನ ಮನುಷ್ಯರು ಬಳಸಿದ್ದರು ಎಂಬುದು ಜೀವಶಾಸ್ತ್ರಜ್ನರ ಅಭಿಪ್ರಾಯ.
19)ಅತಿ ಎತ್ತರದ ಹದಿಮೂರನೆಯ ಶಿಖರವನ್ನು ೧೯೬೪ರಲ್ಲಿ ಚೀನಿಯರು ಏರಿದರು. ಅದುವೇ ಮೌಂಟ್ ಎವರೆಸ್ಟ್ ಹತ್ತಿರದ, ೨೬,೨೯೧ ಅಡಿ ಎತ್ತರದ ಗೋಸಾಯಿನ್-ಥಾನ್ ಶಿಖರ.

20)ರಸಾಯನ ಶಾಸ್ತ್ರಜ್ನರು ೧೧೮ ಮೂಲವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಇವುಗಳನ್ನು ಪರಮಾಣು ಸಂಖ್ಯೆಗೆ ಅನುಗುಣವಾಗಿ ಆವರ್ತ ಕೋಷ್ಠಕದಲ್ಲಿ  (ಪೀರಿಯೋಡಿಕ್ ಟೇಬಲ್) ಪಟ್ಟಿ ಮಾಡಲಾಗಿದೆ. ಜಲಜನಕದ ಪರಮಾಣು ಸಂಖ್ಯೆ ೧ ಮತ್ತು ಒಗನೆಸ್ಸೊನ್ ಅದರ ಪರಮಾಣು ಸಂಖ್ಯೆ ೧೧೮. ಭೂಮಿಯ ಶೇಕಡಾ ೯೮ರಷ್ಟು ಭಾಗದಲ್ಲಿ ತುಂಬಿರುವುದು ಕೇವಲ ಆರು ಮೂಲವಸ್ತುಗಳು: ಕಬ್ಬಿಣ, ಆಮ್ಲಜನಕ, ಮೆಗ್ನೇಸಿಯಂ, ಸಿಲಿಕೋನ್, ಗಂಧಕ ಮತ್ತು ನಿಕ್ಕಲ್.