ಹೀಗೂ ಉಂಟೇ! ದುರಂತಗಳು (ಭಾಗ 2)

6)ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಭೀಕರ ಭೂಕಂಪ ಆದದ್ದು ೧೬ ಡಿಸೆಂಬರ್ ೧೮೧೧ರಂದು. ಎರಡು ವಾರ ಮತ್ತು ಏಳು ವಾರಗಳ ನಂತರ ಇನ್ನೆರಡು ಸಲ ಅಲ್ಲಿ ಭೂಮಿ ಕಂಪಿಸಿತು. ಭೂಕಂಪದ ಕೇಂದ್ರ ಮಿಸ್ಸೋರಿಯ ನ್ಯೂ ಮ್ಯಾಡ್ರಿಡ್ ಆಗಿತ್ತು; ಇದು ಮಿಸ್ಸಿಸಿಪ್ಪಿ ಮತ್ತು ಓಹಿಯೋ ನದಿಗಳು ಸೇರುವ ಸ್ಥಳದಿಂದ ೫೦ ಮೈಲುಗಳ ದೂರದಲ್ಲಿದೆ. ಹತ್ತು ಲಕ್ಷ ಚದರ ಮೈಲು ಪ್ರದೇಶ ಭೂಕಂಪದಿಂದ ನಡುಗಿತ್ತು (ಇದು ೧೯೦೬ರಲ್ಲಿ ಕ್ಯಾಲಿಫೋರ್ನಿಯಾ ಭೂಕಂಪದಿಂದ ನಡುಗಿದ್ದ ಪ್ರದೇಶಕ್ಕಿಂತ ಜಾಸ್ತಿ.) ಭೂಕಂಪದಿಂದಾಗಿ ೪೦೦ ಮೈಲು ದೂರದ ಸಿನ್‌ಸಿನ್ನಾಟಿಯ ಕಾರ್ಖಾನೆಗಳ ಚಿಮಿಣಿಗಳು ನೆಲಕ್ಕೆ ಉರುಳಿದ್ದವು. ೫೦೦ ಮೈಲು ದೂರದ ನ್ಯೂ ಆರ್ಲಿಯನ್ಸ್ ಮತ್ತು ೧,೧೦೦ ಮೈಲು ದೂರದ ಬೋಸ್ಟನಿನಲ್ಲಿಯೂ ಭೂಮಿ ಕಂಪಿಸಿತ್ತು! ಮಿಸ್ಸಿಸಿಪ್ಪಿ ನದಿಯ ಹರಿವು ಬದಲಾಯಿತು, ಕೆಲವು ದ್ವೀಪಗಳೇ ಕಣ್ಮರೆಯಾದವು ಮತ್ತು ಹೊಸ ಸರೋವರಗಳು ಮೂಡಿದವು!

7)ಹದಿನೇಳನೇ ಶತಮಾನದಲ್ಲಿ, “ಮೂವತ್ತು ವರುಷಗಳ ಯುದ್ಧ"ದಲ್ಲಿ (೧೬೧೮ರಿಂದ ೧೬೪೮) ಯುರೋಪಿನಲ್ಲಿ ಸುಮಾರು ೬೦ ದಶಲಕ್ಷ ಜನರು ಸಿಡುಬು ರೋಗದಿಂದ ಸತ್ತರು.

8)ಮಧ್ಯ ಅಮೇರಿಕಾದ ಪನಾಮಾ ಕಾಲುವೆಯು, (ಫೋಟೋ) ಆರಂಭದ ಯೋಜನೆಯಂತೆ, ನಿಕರಾಗುವಾ ದೇಶದ ಮೂಲಕ ಹಾದು ಹೋಗಿದ್ದರೆ ಏನಾಗುತ್ತಿತ್ತು? ನಿಕರಾಗುವಾ ಸರೋವರವು ಆ ಕಾಲುವೆಯ ಭಾಗವಾಗುತ್ತಿತ್ತು. ಇದರಿಂದಾಗಿ ಕಾಲುವೆಯ ಅರ್ಧ ಭಾಗದಷ್ಟು ಉದ್ದಕ್ಕೆ ಕಾಲುವೆ ನಿರ್ಮಿಸುವ ಅಗತ್ಯವಿರುತ್ತಿರಲಿಲ್ಲ. ಹಾಗಿದ್ದರೂ, ಪನಾಮಾ ಕಾಲುವೆಯನ್ನು ಈಗಿರುವಂತೆ ನಿರ್ಮಿಸಿದ್ದು ಯಾಕೆ? ಯಾಕೆಂದರೆ, ಅಗ್ನಿಪರ್ವತದ ಭಯ. ಆರಂಭದ ಯೋಜನೆಯ ಕಾಲುವೆಯ ಪಥದ ಒಂದು ನೂರು ಮೈಲು ಅಂತರದೊಳಗೆ ಸಕ್ರಿಯ ಅಗ್ನಿಪರ್ವತವೊಂದಿತ್ತು. (೧,೬೦೦ ಮೈಲು ದೂರದ ಮೌಂಟ್ ಪಿಲೀ ಅಗ್ನಿಪರ್ವತ ೧೯೦೨ರಲ್ಲಿ ಸ್ಫೋಟಿಸಿತ್ತು. ಅದು ಮಾರ್ಟಿನಿಕ್ ಎಂಬ ಫ್ರೆಂಚ್ ಕ್ಯಾರಿಬಿಯನ್ ದ್ವೀಪದ ಪೂರ್ವ ತುದಿಯಲ್ಲಿದೆ. ಆ ಸ್ಫೋಟ ಹತ್ತಿರದ ಸೈಂಟ್ ಪಿಯರ್ರೆ ಬಂದರನ್ನು ಧ್ವಂಸ ಮಾಡಿ, ೩೦,೦೦೦ ಜನರ ಸಾವಿಗೆ ಕಾರಣವಾಗಿತ್ತು.)

9)ಸುಮಾರು ಕ್ರಿ.ಪೂ. ೧೫೦೦ರಲ್ಲಿ, ಏಜಿಯನ್ ಸಮುದ್ರದ ಸಾಂಟೊರಿನಿ ದ್ವೀಪದಲ್ಲಿ ಅಗ್ನಿಪರ್ವತವೊಂದು ಸ್ಫೋಟಿಸಿತು. ಇದರ ಆಘಾತ, ೧೮೮೩ರಲ್ಲಿ ಜಾವಾ ಮತ್ತು ಸುಮಾತ್ರಗಳ ನಡುವಿನ ಕ್ರಕಟೋವಾ ದ್ವೀಪದ ಅಗ್ನಿಪರ್ವತದ ಸ್ಫೋಟದ ಆಘಾತಕ್ಕಿಂತ ಐದು ಪಟ್ಟು ಜಾಸ್ತಿಯೆಂದು ಅಂದಾಜಿಸಲಾಗಿದೆ. ಸಾಂಟೊರಿನಿ ಸ್ಫೋಟದಿಂದಾಗಿ ಅಗ್ನಿಪರ್ವತವೇ ಕುಸಿದು, ನಿರ್ಮಾಣವಾದ ದೈತ್ಯ ಕುಳಿಯ ಆಳ ೨,೫೦೦ ಅಡಿ ಮತ್ತು ವಿಸ್ತೀರ್ಣ ೩೨ ಚದರ ಮೈಲು. ಆ ಸ್ಫೋಟ ಆರು ಘನ ಮೈಲು ಪರಿಮಾಣದ ಬೂದಿಯನ್ನು ಆಕಾಶಕ್ಕೆ ಒಗೆಯಿತು.

10)ಹವಾಯಿ ದ್ವೀಪದ ಜನರನ್ನೂ ಮನೆಗಳನ್ನು ಸಮುದ್ರಕ್ಕೆ ಸೆಳೆದೊಯ್ದದ್ದು ೧೯೪೬ರ ಸುನಾಮಿ. ಇದಕ್ಕೆ ಕಾರಣ ೨,೩೦೦ ಮೈಲು ದೂರದ ಅಲೆಟಿಯನ್ಸಿನಲ್ಲಿ ಭೂಕಂಪದಿಂದಾಗಿ ೫ ಗಂಟೆಗಳ ಮುಂಚೆ ಶುರುವಾಗಿದ್ದ ಸಮುದ್ರದಾಳದ ನೀರಿನ ಚಲನೆ.