ದಕ್ಷಿಣ ರೈಲ್ವೆ ನಿಯಮದಿಂದಾಗಿ ರದ್ದಾದ ಟಿಕೆಟ್ ಹಣ ಮರುಪಾವತಿಗೆ ಎರಡೂವರೆ ತಿಂಗಳು ವಿಳಂಬವಾದ ಪ್ರಕರಣ ಇದು.
ಮೂಡುಬಿದರೆಯ ಶ್ರೀ. ಐ.ವಿ. ಸೋನ್ಸ್ ಎಂಬುವಬರು ತಮ್ಮ ಕುಟುಂಬದವರೋಡನೆ ಕುರ್ಲಾದಿಂದ ಮಂಗಳೂರಿಗೆ ಪ್ರಯಾಣಿಸಲು ಮತ್ಸ್ಯಗಂಧಾ ಎಕ್ಸ್ -ಪ್ರೆಸ್ ರೈಲಿನಲ್ಲಿ 2-ಟೈಯರ್ ಎ.ಸಿ.ಯ ನಾಲ್ಕು ಬರ್ತ್‍ಗಳನ್ನು ಕಾದಿರಿಸಿದರು. ಪ್ರಯಾಣದ ದಿನವಾದ 18-1-99ರಂದು ಕುರ್ಲಾ ರೈಲ್ವೇ ನಿಲ್ದಾಣ ತಲುಪಿದಾಗ ಅವರಿಗೆ 2-ಟೈಯರ್ ಎ.ಸಿ. ಕೋಚ್ ರದ್ದಾಗಿ, ಅದರ ಬದಲು 3-ಟೈಯರ್ ಎ.ಸಿ. ಕೋಚ್‍ನಲ್ಲಿ ಬರ್ತ್‍ಗಳನ್ನು ನೀಡಿದ್ದರು. ಟಿಕೆಟ್ ದರದಲ್ಲಿನ ವ್ಯತ್ಯಾಸದ ಮೊತ್ತವಾದ ರೂ. 2,294/-ನ್ನು ಮಂಗಳೂರಿನ ನಿಲ್ದಾಣದಲ್ಲಿ ಪಡೆದುಕೊಳ್ಳುವಂತೆ ತಿಳಿಸಿ “ಟಿಟಿ”ಯು ಒಂದು ಅಧಿಕೃತ ಪತ್ರ ನೀಡಿದರು.
ಸೋನ್ಸ್ ಅವರು ಮಂಗಳೂರಿನಿಂದ ಮತ್ತೆ ಪ್ರಯಾಣವನ್ನು ಬಸ್ಸಿನಲ್ಲಿ ಮುಂದುವರಿಸಬೇಕಾಗಿತ್ತು ಮತ್ತು ಮಂಗಳೂರು ನಿಲ್ದಾಣದ ಕೌಂಟರಿನ ಎದುರು ಸರದಿಯಲ್ಲಿ ನಿಲ್ಲಲು ಸಮಯಾವಕಾಶ ಇರಲಿಲ್ಲ. ಆದ್ದರಿಂದ ಅವರು ಆ ದಿನ ಹಣ
ಮರುಪಾವತಿ ಪಡೆದುಕೊಳ್ಳದೆ, ಒಂಬತ್ತು ದಿನಗಳ ನಂತರ ಅವರ ಪತ್ನಿಯನ್ನು ರೈಲ್ವೆ ನಿಲ್ದಾಣಕ್ಕೆ ಕಳುಹಿಸಿದರು. ಅವರ ಪತ್ನಿ ಸುಮಾರು ಒಂದು ಗಂಟೆ ಕಾಲ ಸರದಿಯಲ್ಲಿ ನಿಂತ ಬಳಿಕ ಕೌಂಟರಿನ ಎದುರು ತಲುಪಿದರು. ಪ್ರಯಾಣ ಮುಗಿಸಿ ಈಗಾಗಲೇ 24 ಗಂಟೆಗಳ ಮೇಲಾದದ್ದರಿಂದ ಮರುಪಾವತಿ ಮಂಗಳೂರಿನಲ್ಲಿ ಸಾಧ್ಯವಿಲ್ಲವೆಂದು ಕೌಂಟರಿನಲ್ಲಿದ್ದ ಸಿಬ್ಬಂದಿ ಹೇಳಿದರು.
ಮರುಪಾವತಿಯನ್ನು ಪಾಲ್ಫಾಟ್ ರೈಲ್ವೇ ನಿಲ್ದಾಣದಿಂದ ಪಡೆಯುವಂತೆಯೂ ಸೂಚಿಸಿದರು. ಬೇರೆ ವಿಧಿಯಿಲ್ಲದೆ ಶ್ರೀಯುತರು ಟಿಕೆಟ್ ಮತ್ತುಟಿಟಿಯವರು ನೀಡಿದ್ದ ಪತ್ರವನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಪಾಲ್ಫಾಟ್‍ಗೆ ಕಳುಹಿಸಿದರು. ಇದಾಗಿ ಎರಡು ತಿಂಗಳು ಕಳೆದರೂ ಅಲ್ಲಿಂದ ಉತ್ತರವಿಲ್ಲ. ಈ ಮಧ್ಯೆ ಶ್ರೀಯುತರು ಎರಡು ಜ್ಞಾಪನಾ ಪತ್ರಗಳನ್ನು ಬರೆದರೆ ಅದಕ್ಕೂ ಉತ್ತರವಿಲ್ಲ. ಕೊನೆಯ ಪ್ರಯತ್ನವಾಗಿ ಶ್ರೀಯುತರು ಮತ್ತೊಂದು ಪತ್ರವನ್ನು ಬರೆದು ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿಕೊಟ್ಟರು. ಕೆಲವೇ ದಿನಗಳಲ್ಲಿ ಶ್ರೀಯುತರಿಗೆ ಬರಬೇಕಾಗಿದ್ದ ಮೊತ್ತ ಅವರಿಗೆ ತಲುಪಿತು.
ಇಲ್ಲಿ ರೈಲ್ವೆ ಇಲಾಖೆಯ ಅವೈಜ್ಞಾನಿಕ ನಿಯಮಗಳಿಂದಾಗಿ ಬಳಕೆದಾರರಿಗೆ ತೊಂದರೆಯಾಯಿತು. ಪ್ರಯಾಣದ ಗಡಿಬಿಡಿಯಲ್ಲಿರುವ ಯಾರೂ ಇಲಾಖೆಯ ನಿಯಾಮವಳಿಗಳತ್ತ ಗಮನಹರಿಸುವುದಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಮರುಪಾವತಿಯನ್ನು 24 ಗಂಟೆಗಳ ಒಳಗೆ ಪಡೆದುಕೊಳ್ಳಬೇಕೆಂಬ ನಿಯಮವನ್ನು ಬಳಕೆದಾರರು ಗಮನಿಸಲಿಲ್ಲ. ಇಂತಹ ಒಂದು ನಿಯಮ ಇದೆ ಎಂದು ಬಳಕೆದಾರರಿಗೆ ತಿಳಿಸುವುದು ಟಿಟಿಯವರ ಕರ್ತವ್ಯವಾಗಿತ್ತು.
ಫೋಟೋ: ಮಂಗಳೂರು ರೈಲ್ವೇ ನಿಲ್ದಾಣದ ಒಂದು ನೋಟ
ಸಂಗ್ರಹ: ಬಳಕೆದಾರರ ಶಿಕ್ಷಣ, 20-6-1999