ಹಕ್ಕು ಹೋರಾಟ 8: ಚಿನ್ನದ ಬಳೆಗಾಗಿ ನೀಡಿದ ಹಣ ಮರುಪಾವತಿ

ಎ.ಎ. ಕಾರಂತ,
16, ಅಶಿಯಾನಾ ಲೇ ಔಟ್
ಹಿರಿಯ ಪ್ರಾಥಮಿಕ ಶಾಲೆಯ ಎದುರು,
ಅಶೋಕ ನಗರ, ಮಂಗಳೂರು - 575 006 - ಇವರಿಂದ,


ಶ್ರೀ ಸುಧೀರ
ಶ್ರಿಂಗಾರ ಜುವೆಲರ್ಸ್
ಮಹಾತ್ಮಾ ಗಾಂಧಿ ರಸ್ತೆ, ಮಂಗಳುರು - 575 003- ಇವರಿಗೆ
ಮಾನ್ಯರೇ,
ನಿಮ್ಮ ಅಂಗಡಿಯಲ್ಲಿ ದಿನಾಂಕ 14-2-98ರಂದು ಎರಡು ಚಿನ್ನದ ಬಳೆ ಮಾಡಿಸಿಕೊಳ್ಳುವ ಸಲುವಾಗಿ 3,000/- ರೂಪಾಯಿ ಎಡ್ವಾನ್ಸ್ ನೀಡಿದ್ದೆ. ನೀವು ಒಂದು ತಿಂಗಳೊಳಗೆ ಬಳೆ ಮಾಡಿಕೊಡುತ್ತೀರೆಂದು ತಿಳಿಸಿದ್ದೀರಿ. ಆದರೆ ನಾನು ಅನೇಕ ಸಲ ನಿಮ್ಮ ಅಂಗಡಿಗೆ ಬಂದಾಗಲೂ ನೀವು ಬಳೆ ಮಾಡಿ ಕೊಡಲಿಲ್ಲ. 1998 ಜೂನ್ ತಿಂಗಳವರೆಗೂ ವಾರಕ್ಕೆ ಎರಡು ಬಾರಿ ನಿಮ್ಮ ಅಂಗಡಿಗೆ ಭೇಟಿ ನೀಡಿದ್ದೇನೆ. ಆದರೆ ನಿಮ್ಮಿಂದ ಸರಿಯಾದ ಉತ್ತರ ಸಿಗಲಿಲ್ಲ.

ಈಗ ನನಗೆ ಬಳೆಯ ಅಗತ್ಯವಿಲ್ಲ. ನಾನು ನಿಮ್ಮೊಡನೆ ಕೊಟ್ಟ ಹಣ ರೂಪಾಯಿ 3,000/- ಮತ್ತು ಶೇಕಡಾ 18ರಂತೆ ಈ ವರೆಗಿನ ಬಡ್ಡಿ ಮತ್ತು ನನಗಾದ ಮಾನಸಿಕ ಹಿಂಸೆಗೆ ಪರಿಹಾರವಾಗಿರೂಪಾಯಿ 300/-ನ್ನು ಸೇರಿಸಿ ಕೊಡಬೇಕಾಗಿ ಅಪೇಕ್ಷಿಸುತ್ತೇನೆ.
ಇತೀ ತಮ್ಮ ವಿಶ್ವಾಸಿ,
(ಸಹಿ) ಎ.ಎ. ಕಾರಂತ
ತಾ. 16-7-98

ಯಥಾಪ್ರತಿ: ಬಳಕೆದಾರರ ವೇದಿಕೆ, ಮಂಗಳೂರು.
ವಿವರಣೆ: ಈ ಪತ್ರ ಬರೆದು ಒಂದು ತಿಂಗಳಾಗುತ್ತ ಬಂದರೂ ಶ್ರಿಂಗಾರ ಜುವೆಲ್ಲರ್ಸ್-ನವರು ಸ್ಪಂದಿಸದಿರುವುದರಿಂದ ತಾ. 14-8-98ರಲ್ಲಿ ಜ್ಞಾಪನ ಪತ್ರ ಬರೆದರು. ಈ ಪತ್ರಕ್ಕೂ ಉತ್ತರ ಕೊಡದಿದ್ದಾಗ ಶ್ರೀ ಕಾರಂತರು ಈ ವಿಷಯವನ್ನು ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರು, ಮಂಗಳೂರು - ಇವರಿಗೆ ಒಂದು ಪತ್ರ ಬರೆದು ತಿಳಿಸಿ, ತನಗೆ ಸದ್ರಿ ಹಣವನ್ನು ಶ್ರೀ ಸುಧೀರರಿಂದ ಕೊಡಿಸಬೇಕೆಂದು ಕೇಳಿಕೊಂಡರು.
ಪರಿಣಾಮವಾಗಿ ಶ್ರೀ ಸುಧೀರರು ತನಗೆ ಹಣವನ್ನು ಎರಡು ಕಂತುಗಳಲ್ಲಿ ಹಿಂತಿರುಗಿಸಿದ್ದಾರೆ ಎಂದು ಶ್ರೀ ಕಾರಂತರು ಡಿಸೆಂಬರ್ 98ರಲ್ಲಿ ಮಂಗಳೂರು ಬಳಕೆದಾರರ ವೇದಿಕೆಗೆ ತಿಳಿಸಿದ್ದಾರೆ.

ಸಂಗ್ರಹ: ಬಳಕೆದಾರರ ಶಿಕ್ಷಣ, 20-3-1999