ಬಂಟ್ವಾಳ ಬಳಕೆದಾರರ ವೇದಿಕೆಯಿಂದ ಪರಿಹಾರಗೊಂಡ ಪ್ರಕರಣ
ಬಂಟ್ವಾಳ ತಾಲೂಕಿನ ಅಮ್ಟಾಡಿಯ ಶ್ರೀನಿವಾಸ ಭಂಡಾರಿಯವರು ಈಗ ದುಬೈಯಲ್ಲಿ ಉದ್ಯೋಗದಲ್ಲಿದ್ದಾರೆ. ಕಳೆದ ವರ್ಷ ಆಕ್ಟೋಬರಿನಲ್ಲಿ ಅವರು ರಜೆಗೆಂದು ಊರಿಗೆ ಬಂದರು. ಹಾಗೆ ಬರುವಾಗ ಊರಿನಲ್ಲಿದ್ದ ತನ್ನ ತಂದೆ-ತಾಯಿಯರಿಗೆ, ಅಣ್ಣತಮ್ಮಂದಿರಿಗೆ, ಅಕ್ಕ-ತಂಗಿಯರಿಗೆ ಹಲವು ವಸ್ತುಗಳನ್ನು ತರಲು ಬಯಸಿದರು. ತನ್ನ ವೃತ್ತಿಗೆ ಸಂಬಂಧಿಸಿದ ಹಲವು ಉಪಕರಣಗಳನ್ನೂ ಹಿಡಿದುಕೊಂಡರು. ತಮ್ಮ ಮಿತ್ರನೊಬ್ಬ ಊರಿಗೆ ಹೋಗುತ್ತಿದ್ದಾನೆ ಎಂದು ಶ್ರೀನಿವಾಸರ ಹಲವು ಗೆಳೆಯರು ತಮ್ಮ ತಮ್ಮ ಮನೆಗಳಿಗೆ ಮುಟ್ಟಿಸಲೆಂದು ಅವರ ಕೈಗೆ ಹಲವು ವಸ್ತುಗಳನ್ನು ಕೊಟ್ಟರು. ಹೀಗೆ ಶ್ರೀನಿವಾಸರ ಲಗ್ಗೇಜು ಎರಡು ದೊಡ್ಡ ಸೂಟುಕೇಸುಗಳಷ್ಟಾಯಿತು.
ದುಬೈಯಿಂದ ಮುಂಬಯಿಗೆ ಬಂದಿಳಿದ ಶ್ರೀನಿವಾಸರು ಅಲ್ಲಿಂದ ಮಂಗಳೂರಿಗೆ ಕೆನರಾ-ಪಿಂಟೊ ಟ್ರಾವೆಲ್ಸಿನ ಬಸ್ಸಿನಲ್ಲಿ ಹೊರಟರು. ಬಸ್ಸಿಗೆ ಹತ್ತುವಾಗಲೇ ತನ್ನ ಸೂಟುಕೇಸುಗಳನ್ನು ಕ್ಷೇಮವಾಗಿಡುವ ಬಗ್ಗೆ ಅವರು ಗಮನ ಹರಿಸಿದರು. ಆದರೆ “ಡಿಕ್ಕಿಯಲ್ಲಿ ಜಾಗ ಇಲ್ಲ” ಎಂಬ ಕಾರಣ ನೀಡಿ ಶ್ರೀನಿವಾಸರ ಲಗ್ಗೇಜುಗಳನ್ನು ಬಸ್ಸಿನ ಟಾಪಿನ ಮೇಲೆಹಾಕಲಾಯಿತು. ತನ್ನ ಕೈಯಲ್ಲಿ ಹೇಗೋ ಬಸ್ಸಿನ ಸಿಬ್ಬಂದಿ ಲಗೇಜಿನ ಬಗ್ಗೆ ಕೊಟ್ಟ ಟ್ಯಾಗು ಇದೆಯಲ್ಲ ಎಂದು ಶ್ರೀನಿವಾಸರು ಸಮಾಧಾನ ಮಾಡಿಕೊಂಡರು.
ರಾತ್ರಿ ಬೆಳಗಾದಾಗ ಸೂಟ್ ಕೇಸ್ ಮಾಯ!
ಬಸ್ಸು ಬೆಳಿಗ್ಗೆ ಭಟ್ಕಳ ತಲುಪಿದಾಗ ಬಸ್ಸಿನ ಸಿಬ್ಬಂದಿ ಟಾಪಿನ ಮೇಲೆ ಹತ್ತಿ ಲಗ್ಗೇಜುಗಳನ್ನು ಪರೀಕ್ಷಿಸಿ ಶ್ರೀನಿವಾಸರ ಸೂಟ್‍ಕೇಸುಗಳು ಮಾಯವಾಗಿರುವುದನ್ನು ಅವರಿಗೆ ತಿಳಿಸಿದರು! ರಾತ್ರಿ ಪ್ರಯಾಣದಲ್ಲಿ ಬಸ್ ಒಂದೆರಡು ಕಡೆ ನಿಂತು
ಹೊರಟಿದ್ದು ಶ್ರೀನಿವಾಸರ ಗಮನಕ್ಕೆ ಬಂದಿತ್ತು. ಆದರೆ ಅರೆ ನಿದ್ದೆಯಲ್ಲಿದ್ದ ಅವರು ಬಸ್ ಎಲ್ಲಿ ನಿಂತಿತ್ತು ಎಂಬುದನ್ನಾಗಲೀ, ಬಸ್ ನಿಂತಾಗ ಏನು ನಡೆಯಿತು ಎಂಬುದನ್ನಾಗಲೀ ಗಮನಿಸಿರಲಿಲ್ಲ.
ಈಗ ಸೂಟ್‍ಕೇಸು ಮಾಯವೆಂದು ತಿಳಿದು ಶ್ರೀನಿವಾಸರಿಗೆ ಗಾಬರಿಯಾಯಿತು. ತನ್ನ ಸೂಟ್‍ಕೇಸು ವಿಷಯ ಇತ್ಯರ್ಥವಾಗದೆ ಬಸ್ ಮುಂದೆ ಹೋಗಲು ಸಾಧ್ಯವೇ ಇಲ್ಲವೆಂದು ಅವರ ತಕರಾರು ತೆಗೆದರು. ಪೊಲೀಸರೂ ಸ್ಥಳಕ್ಕೆ ಬಂದರು. ಅಂತೂ ಸುಮಾರು ಮೂರು ಗಂಟೆಗಳ ವಾದ ವಿವಾದದ ನಂತರ, ಮಂಗಳೂರಿನಲ್ಲಿರುವ ಕೆನರಾ-ಪಿಂಟೊ ಟ್ರಾವೆಲ್ಸಿನ ಕಚೇರಿಗೆ ದೂರು ಸಲ್ಲಿಸಲು ಶ್ರೀನಿವಾಸರು ಒಪ್ಪಿದ ಬಳಿಕ ಬಸ್ಸು ಹೊರಟಿತು.
ಮಂಗಳೂರಿನ ಕೆನರಾ-ಪಿಂಟೊ ಟ್ರಾವೆಲ್ಸಿನ ಆಫೀಸಿನಲ್ಲಿ ಮೌಖಿಕ ದೂರು ಸಲ್ಲಿಸಿದಾಗ ತಾನು ಈ ಬಗ್ಗೆ ವಿಚಾರಣೆ ನಡೆಸಿ ದೂರವಾಣಿ ಮೂಲಕ ಶ್ರೀನಿವಾಸರನ್ನು ಸಂಪರ್ಕಿಸುವುದಾಗಿ ಅಲ್ಲಿನ ಮೆನೇಜರ್ ತಿಳಿಸಿದರು. ಅಂತೂ ದುಬೈಗೆ ಹೋಗಿ
ವರ್ಷಗಟ್ಟಲೆ ಕಷ್ಟ ಪಟ್ಟು ಸಂಪಾದಿಸಿದ ಹಣದಿಂದ ತನ್ನವರೆಲ್ಲರಿಗೂ ಹಲವು ವಸ್ತುಗಳನ್ನು ತಂದು ಕೊಡುವ ಸಂಭ್ರಮದ ಕನಸು ಕಾಣುತ್ತಿದ್ದ ಶ್ರೀನಿವಾಸರು ಅಮ್ಟಾಡಿಯ ತನ್ನ ಮನೆಯ ಬಾಗಿಲಿಗೆ ಬಂದಾಗ ಮನೆಯವರೆಲ್ಲ ಬರಿಗೈಯಲ್ಲಿದ್ದ ಶ್ರೀನಿವಾಸರನ್ನು ಸ್ವಾಗತಿಸ ಬೇಕಾಯಿತು.
ಹೇಗಾದರಾಗಲಿ ಒಂದು ಪೋಲೀಸ್ ಕಂಪ್ಲೆಂಟ್ ಕೊಡುವುದೇ ಸರಿ ಎಂದು ಶ್ರೀನಿವಾಸರು ತನ್ನ ಅಣ್ಣನನ್ನೂ ಕರೆದುಕೊಂಡು ಮರುದಿನವೇ ಭಟ್ಕಳಕ್ಕೆ ಹೋದರು. ಆದರೆ “ಕಳವಾದದ್ದು ಭಟ್ಕಳದಲ್ಲಿಯೇ” ಎಂದು ದೂರಿನಲ್ಲಿ ನಮೂದಿಸಿದರೆ ಮಾತ್ರ ದೂರು ಸ್ವೀಕರಿಸಲು ಸಾಧ್ಯ ಎಂದು ಪೊಲೀಸ್ ಸ್ಟೇಷನ್ನಿನಲ್ಲಿ ಅವರಿಗೆ ತಿಳಿಸಲಾಯಿತು. ಮುಂಬಯಿಯಿಂದ ಹೊರಟ ಬಸ್ಸು ಹಲವು ಊರು ದಾಟಿ ಬಂದು ಭಟ್ಕಳದಲ್ಲಿ ನಿಂತಾಗಲೇ ಶ್ರೀನಿವಾಸರಿಗೆ ಸೂಟುಕೇಸು ಕದ್ದು ಹೋದ ವಿಷಯ ಗೊತ್ತಾದದ್ದು. ಹೀಗಾಗಿ “ಕಳುವು ಭಟ್ಕಳದಲ್ಲೇ ಅಯಿತು” ಎಂದು ಅವರು ಹೇಳುವುದು ಹೇಗೆ ಸಾಧ್ಯ? ಅಂತೂ ಪೊಲೀಸ್ ದೂರು ದಾಖಲಿಸಲಾಗಲಿಲ್ಲ.
ಜತೆಗಿದ್ದ ತನ್ನ ಅಣ್ಣನೊಂದಿಗೆ ಶ್ರೀನಿವಾಸರು ಬಸ್ರೂರು ಬಳಕೆದಾರರ ವೇದಿಕೆಯನ್ನು ಸಂಪರ್ಕಿಸಿದರು. ಶ್ರೀನಿವಾಸರು ಬಂಟ್ವಾಳ ತಾಲೂಕಿನವರೇ ಆಗಿದ್ದುದರಿಂದ ಅವರಿಗೆ ಅನುಕೂಲವಾಗುವಂತೆ ಬಂಟ್ವಾಳದ ಬಳಕೆದಾರರ ವೇದಿಕೆಯನ್ನು ಸಂಪರ್ಕಿಸುವಂತೆ ಬಸ್ರೂರು ಬಳಕೆದಾರರ ವೇದಿಕೆಯಿಂದ ಸೂಚನೆ ಪಡೆದು ಹಾಗೆಯೇ ಮಾಡಿದರು.
ವಕೀಲರ ಲಾ ಪಾಯಿಂಟ್
ತನ್ನ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿ ಶ್ರೀನಿವಾಸರು ಕೆನರಾ-ಪಿಂಟೊ ಟ್ರಾವೆಲ್ಸಿನ ಮಾಲೀಕರಿಗೆ ಬರೆದ ಪತ್ರಕ್ಕೆ ಅವರ ವಕೀಲರ ಮೂಲಕ ಉತ್ತರ ಬಂತು. ಶ್ರೀ ಜಿ.ಎಲ್.ಪುರಿ ಎಂಬ ಈ ವಕೀಲರು ಹೈಕೋರ್ಟ್ ವಕೀಲರಾಗಿದ್ದರಷ್ಟೇ ಅಲ್ಲದೆ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಕಾನೂನು ಸಲಹೆಗಾರರೂ ಆಗಿದ್ದರು. ಈ ವಕೀಲ ಮಹಾಶಯರು ತಮ್ಮಪತ್ರದಲ್ಲಿ, ತನ್ನ ಕಕ್ಷಿದಾರರಿಗೆ ಕದ್ದು ಹೋದ ಶ್ರೀನಿವಾಸರ ಸೂಟ್‌ಕೇಸುಗಳಿಗೆ ಪರಿಹಾರ ಕೊಡಬೇಕಾದ ಕಾನೂನಿನ ಬದ್ಧತೆ (Legal Liability) ಇಲ್ಲವೆಂದು ಹೇಳಿದ್ದು ಮಾತ್ರವಲ್ಲ, ಶ್ರೀನಿವಾಸರು ತಮ್ಮ ಪತ್ರದಲ್ಲಿ ಪಟ್ಟಿ ಮಾಡಿ ಹೇಳಿದ ವಸ್ತುಗಳನ್ನು ಬಸ್ಸಿನಲ್ಲಿ ಸಾಗಿಸಿದ್ದೇ ಇಲ್ಲವೆಂದು ಹೇಳಿದರು. ಮಾತ್ರವಲ್ಲ “ವಸ್ತುಗಳು ಕಳೆದುಹೋದ ಬಗ್ಗೆ ಬಸ್ಸಿನ ಸಿಬ್ಬಂದಿ ಪೊಲೀಸರಿಗೆ ದೂರು ಸಲ್ಲಿಸಲು ವಿನಂತಿಸಿದರೂ ನೀವು ದೂರು ಕೊಡಲು ಮುಂದಾಗಲಿಲ್ಲ. ಒಂದು ವೇಳೆ ನೀವು ದೂರು ಸಲ್ಲಿಸಿದಲ್ಲಿ ಕಳ್ಳತನವಾದ ವಸ್ತುಗಳನ್ನು ಪತ್ತೆ ಮಾಡುವುದು ಸಾಧ್ಯವಿತ್ತು” ಎಂಬುದು ಈ ವಕೀಲ ಮಹಾಶಯರ ಮತ್ತೊಂದು “ಲಾ ಪಾಯಿಂಟ್” ಆಗಿತ್ತು.
ವೇದಿಕೆಯ ಅನಿಸಿಕೆ
ಬಂಟ್ವಾಳ ತಾಲೂಕು ಬಳಕೆದಾರರ ವೇದಿಕೆಯ ಅನಿಸಿಕೆ ಹೀಗಿದೆ: ಕದ್ದು ಹೋದ ಸಮಯದಲ್ಲಿ ವಸ್ತುವು ಯಾರ ವಶದಲ್ಲಿತ್ತು ಎಂಬುದನ್ನು ಗಮನಿಸಬೇಕಾಗಿದೆ. ಬಸ್ಸಿನ ಸಿಬ್ಬಂದಿ ವಸ್ತುವನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಹಾಗೆ ತೆಗೆದುಕೊಂಡದ್ದಕ್ಕೆ ರಶೀದಿಯ ರೂಪದಲ್ಲಿ ಟ್ಯಾಗನ್ನು ಶ್ರೀನಿವಾಸರಿಗೆ ಕೊಟ್ಟಿದ್ದರು. ಹಾಗಾಗಿ ಪೊಲೀಸ್ ಕಂಪ್ಲೆಂಟ್ ಕೊಡಬೇಕಾದದ್ದು ಯಾರು? ಬಸ್ಸಿನ ಸಿಬ್ಬಂದಿಯೋ ಅಥವಾ ಶ್ರೀನಿವಾಸರೋ? ಬ್ಯಾಂಕಿನಲ್ಲಿ ಹಣ ಕಳುವಾದರೆ ದೂರು ಸಲ್ಲಿಸಬೇಕಾದದ್ದು ಬ್ಯಾಂಕಿನ ಮೆನೇಜರರೋ ಅಥವಾ ಠೇವಣಿದಾರರೇ? ಪೊಲೀಸ್ ದೂರು ನೀಡಬೇಕಾದದ್ದು ಬಸ್ಸಿನ ಸಿಬ್ಬಂದಿಯೇ ಹೊರತು ಶ್ರೀನಿವಾಸರಲ್ಲ ಎಂಬುದು ವೇದಿಕೆಯ ನಿಲುವು.
ವಕೀಲರ ಈ ಪತ್ರಕ್ಕೆ ಶ್ರೀನಿವಾಸರಿಂದ ಉತ್ತರ ಹೋಯಿತು. ಪತ್ರದ ಯಥಾಪ್ರತಿಯನ್ನು ಪಡೆದ ಬಂಟ್ವಾಳ ತಾಲೂಕು ಬಳಕೆದಾರರ ವೇದಿಕೆಯಿಂದಲೂ ಕೆನರಾ-ಪಿಂಟೊ ಟ್ರಾವೆಲ್ಸಿನ ಮಾಲೀಕರಿಗೆ ಪತ್ರ ಹೋಯಿತು.
ಪುನ: ವಕೀಲರ ಧಮಕಿ
ಶ್ರೀನಿವಾಸರ ಎರಡನೆಯ ಪತ್ರಕ್ಕೂ ವಕೀಲರ ಮೂಲಕವೇ ಉತ್ತರ ಬಂತು. ಈ ಉತ್ತರದಲ್ಲಿ ಶ್ರೀನಿವಾಸರು ಪೊಲೀಸ್ ಕಂಪ್ಲೇಂಟ್ ಕೊಡದ “ಲಾ ಪಾಯಿಂಟ"ನ್ನು ಪುನ: ಪ್ರಸ್ತಾಪಿಸಿ “— if you still bring any case against my clients they will recover the amount which will be very heavy” ಎಂಬ ಧಮಕಿಯನ್ನು ಹಾಕಲಾಗಿತ್ತು.
ಪರಿಹಾರಗೊಂಡ ಪ್ರಕರಣ
ಇಷ್ಟೆಲ್ಲ ಪತ್ರ ವ್ಯವಹಾರದ ನಂತರ, ದಿನಾಂಕ 15-12-2000ರಂದು ಶ್ರೀನಿವಾಸ ಭಂಡಾರಿಯವರು ಬಂಟ್ವಾಳ ತಾಲೂಕು ಬಳಕೆದಾರರ ವೇದಿಕೆಗೆ ಪತ್ರ ಬರೆದು ಕೆನರಾ-ಪಿಂಟೋ ಟ್ರವೆಲ್ಸ್ ನವರು ತನಗೆ ಸಾಕಷ್ಟು ಆರ್ಥಿಕ ಪರಿಹಾರ ನೀಡಿ ಸಮಸ್ಯೆಯನ್ನು ಪರಿಹರಿಸಿರುವುದಾಗಿ ತಿಳಿಸಿದ್ದಾರೆ. ಆರ್ಥಿಕ ಪರಿಹಾರದ ಮೊತ್ತವೆಷ್ಟು ಎಂಬುದನ್ನು ಬಳಕೆದಾರರು ತಿಳಿಸಿಲ್ಲ. ಪರಿಹಾರ ಎಷ್ಟೇ ಸಿಕ್ಕಿರಲಿ, ಬಳಕೆದಾರರಿಗೆ ಸಮಾಧಾನವಾಗಿದ್ದರೆ ವೇದಿಕೆಗೂ ಸಮಾಧಾನ.
ಸಂಗ್ರಹ: ಬಳಕೆದಾರರ ಶಿಕ್ಷಣ, 20-2-2001