ಹಕ್ಕು ಹೋರಾಟ 5: ಪಾಲಿಶಿಂಗ್ ಯಂತ್ರ ಬದಲಾಯಿಸಿಕೊಟ್ಟರು

ಪ್ರಕರಣದ ವಿವರ
ಮಂಗಳೂರಿನ ಶ್ರೀ. ದಿವಾಕರ ಆಚಾರ್ಯ ಎಂಬುವವರು ಚಿನ್ನದ ಕೆಲಸ ಮಾಡುವವರು, ಅವರು ತಮ್ಮ ವೃತ್ತಿ ಜೀವನದ ಅವಶ್ಯಕತೆಗಾಗಿ ವೈಬ್ರೇಟರ್ ಪಾಲಿಶಿಂಗ್ ಯಂತ್ರವೊಂದನ್ನು ಖರೀದಿಸಲು ಬಯಸಿ ಸ್ವತ: ಮಂಬೈಗೆ ಹೋಗಿ, “ಮಾಸ್ಟರ್”
ಕಂಪೆನಿಯ ಉತ್ತಮ ದರ್ಜೆಯ ಯಂತ್ರವನ್ನು ಆಯ್ಕೆ ಮಾಡಿದರು. ಊರಿಗೆ ಮರಳಿದ ಮೇಲೆ ಸಹಕಾರಿ ಬ್ಯಾಂಕೊಂದರ ಸಾಲ ಸೌಲಭ್ಯ ಪಡೆದು, ತಾ. 15-10-98ರಂದು ರೂ. 34,350/- ಮೌಲ್ಯದ ಡಿಡಿಯನ್ನು ಸದರಿ ಕಂಪೆನಿಗೆ ಕಳುಹಿಸಿದರು. ಇದಕ್ಕೆ ಪ್ರತಿಯಾಗಿ ಶ್ರೀ. ದಿವಾಕರ ಆಚಾರ್ಯರಿಗೆ ತಾ. 9-11-98ರಂದು ಪಾರ್ಸೆಲ್ ಮೂಲಕ ಪಾಲಿಶಿಂಗ್ ಯಂತ್ರ ಬಂತು.

ದಿಗ್ಭ್ರಮೆ
ಯಂತ್ರವನ್ನು ನೋಡಿದ ಶ್ರೀ. ದಿವಾಕರ ಆಚಾರ್ಯರು ದಿಗ್ಭ್ರಮೆ ಹೊಂದಿದರು. ಯಾಕೆಂದರೆ ಅವರು ಆಯ್ಕೆ ಮಾಡಿಖರೀದಿಸಿದ ಯಂತ್ರ ಅದಾಗಿರಲ್ಲಿಲ್ಲ. ಯಂತ್ರದ ಮೇಲೆ ತಯಾರಕರ ಹೆಸರು (Brand Name) ನಮೂನೆ ಸಂಖ್ಯೆ (Model No.), ಕ್ರಮ ಸಂಖ್ಯೆ (Serial No.) ಉತ್ಪಾದನೆಯ ದಿನಾಂಕ (Manufacturing Date) ಯಾವುದೂ ಇರಲಿಲ್ಲ! ಅಷ್ಟೇಕೆ? ಯಾವುದೇ ವಿದ್ಯುತ್-ಚಾಲಿತ ಯಂತ್ರದಲ್ಲಿ ಇರಬೇಕಾದ “ಆನ್-ಆಫ್” ಸ್ವಿಚ್ ಕೂಡಾ ಈ ಯಂತ್ರದಲ್ಲಿ ಇರಲಿಲ್ಲ!! ಅಷ್ಟೇ ಅಲ್ಲ, ಯಂತ್ರದ ಜೊತೆಗೆ ಗ್ಯಾರಂಟಿ ಕಾರ್ಡ್ ಹಾಗೂ ಉಪಯೋಗಿಸುವ ಕ್ರಮ, ವಿವರಿಸುವ ಕೈಪಿಡಿಯೂ (Instruction Manual) ಬಂದಿರಲಿಲ್ಲ.
ಆದರೂ ಯಂತ್ರದ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಶ್ರೀ ಆಚಾರ್ಯರುಯಂತ್ರವನ್ನು ತಮ್ಮ ಕೆಲಸಕ್ಕೆ ಉಪಯೋಗಿಸಲು ಪ್ರಾರಂಭಿಸಿದರು. ಆದರೆ ಸ್ವಲ್ಪ ಸಮಯದಲ್ಲೇ ಅವರಿಗೆ ಯಂತ್ರದ ಕಳಪೆ ಗುಣಮಟ್ಟದ ಅರಿವಾಯಿತು. “ಆನ್” ಮಾಡಿದ
ತಕ್ಷಣ ಯಂತ್ರ ನಿಂತಲ್ಲಿ ನಿಲ್ಲದೇ ಎರಡು ಅಡಿ ಆಚೆಗೂ ಈಚೆಗೂ ತೆವಳಲು ಪ್ರಾರಂಭಿಸುತ್ತಿತ್ತು!

ಪೂರೈಕೆದಾರರಿಗೆ ದೂರು
ತಾನು ಮೋಸ ಹೋದುದನ್ನು ಅರಿತ ಶ್ರೀ. ಆಚಾರ್ಯರು ದಿನಾಂಕ: 23-11-98ರಂದು ಪೂರೈಕೆದಾರರಿಗೆ ಪತ್ರ ಬರೆದು ಯಂತ್ರದಲ್ಲಿರುವ ದೋಷವನ್ನು ವಿವರಿಸಿದರು. ಯ:ಕಶ್ಚಿತ್ ಒಂದು ಪೆನ್ನಿನ ರಿಫೀಲ್ ಮೇಲೆಯೂ ಉತ್ಪಾದಕರ ಹೆಸರು
ಇರುವಾಗ ಸಾವಿರಾರು ರೂಪಾಯಿ ಬೆಲೆಬಾಳುವ ಈ ಪಾಲಿಶಿಂಗ್ ಯಂತ್ರದ ಮೇಲೆ ಉತ್ಪಾದಕರ ಹೆಸರಿಲ್ಲದೇ ಇರುವುದು ತನಗೆ ಆಶ್ಚರ್ಯ ಮತ್ತು ಸಂಶಯ ಉಂಟಾಗಿದೆ ಎಂದು ಶ್ರೀಯುತರು ಬರೆದರು. ತಾನು ಮುಂಬೈಗೆ ಬಂದು ಮೆಚ್ಚಿ,
ಆಯ್ಕೆ ಮಾಡಿದ ಯಂತ್ರ ಇದು ಅಲ್ಲವೇ ಅಲ್ಲ. ತನಗೆ ನಿಜವಾದ “ಮಾಸ್ಟರ್” ಪಾಲಿಶಿಂಗ್ ಯಂತ್ರವನ್ನೇ ಕಳಿಸಿಕೊಡಿ. ಇಲ್ಲದಿದ್ದರೆ ಹಣವನ್ನು ಹಿಂದುರುಗಿಸಿ ಯಂತ್ರವನ್ನು ವಾಪಾಸ್ ಪಡೆದುಕೊಳ್ಳಿ ಎಂದು ಮುಂಬೈನ “ಮೆಶಿನ್ ಟೂಲ್ ಟ್ರೇಡರ್ಸ್” ಕಂಪೆನಿಗೆ ಪತ್ರ ಬರೆದರು.

ಬಳಕೆದಾರರ ಮೇಲೆಯೇ ದೋಷಾರೋಪ
ಮೇಲಿನ ಪತ್ರಕ್ಕೆ ತಾ. 28-11-98ರಂದು ಉತ್ತರಿಸಿದ ಪೂರೈಕೆದಾರರು ಸದರಿ ಯಂತ್ರವು ಸರಿಯಾಗಿಯೇ ಇದೆ ಎಂದು ವಾದಿಸಿದರು. “ನಿಮಗೆ ಇಂತಹ ಯಂತ್ರಗಳನ್ನು ಉಪಯೋಗಿಸಿ ಅಭ್ಯಾಸವಿಲ್ಲವೆಂದು ತೋರುತ್ತದೆ. ಆದುದರಿಂದ
ಇಂತಹ ಯಂತ್ರಗಳ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವ ಒಬ್ಬ ನುರಿತ ಕುಶಲಕರ್ಮಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು” ಎಂಬ ಬಿಟ್ಟಿ ಸಲಹೆಯನ್ನು ಪೂರೈಕೆದಾರರು ನೀಡಿದರಲ್ಲದೆ” ಸದರಿ ಯಂತ್ರದ ಜೊತೆಗೆ ಗ್ಯಾರಂಟಿ ಕಾರ್ಡ್, ಕೈಪಿಡಿ ಮುಂತಾದವುಗಳನ್ನು ನೀಡುವ ಕ್ರಮವೇ ಇಲ್ಲ. ಸರಿಯಾದ ಕ್ರಮದಲ್ಲಿ ಯಂತ್ರವನ್ನು ಬಳಸಿದರೆ ಅದು ಅಚೀಚೆ ತೆವಳುವುದಿಲ್ಲ. ಆದುದರಿಂದ ಯಂತ್ರವನ್ನು ಹಿಂದಕ್ಕೆ ಪಡೆಯುವ ಅಥವಾ ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದುಪೂರೈಕೆದಾರರು ತಿಳಿಸಿದರು.
ಇದೇ ಯಂತ್ರವನ್ನು ಈಗಾಗಲೇ ಉಪಯೋಗಿಸಿ“ಸಂತುಷ್ಟ”ರಾಗಿಗುವ ತನ್ನ ಮೂವರು ಗ್ರಾಹಕರ ಹೆಸರು, ವಿಳಾಸ ಮತ್ತು ಫೋನ್ ನಂಬ್ರಗಳನ್ನು ಪೂರೈಕೆದಾರರು ಶ್ರೀ. ಆಚಾರ್ಯರಿಗೆ ಕೊಟ್ಟರು. ಮನಸ್ಸಿಲ್ಲದಿದ್ದರೂ ಶ್ರೀ ಆಚಾರ್ಯರು ಇವರಲ್ಲಿ ಇಬ್ಬರು ಗ್ರಾಹಕರನ್ನು ಫೋನ್ ಮೂಲಕ ಸಂಪರ್ಕಿಸಿದರು. ಆದರೆ ಈ ಇಬ್ಬರೂ ಸದರಿ ಯಂತ್ರದ ನಿರ್ವಹಣೆಯಿಂದ ಸಂತುಷ್ಟರಾಗಿಲ್ಲವೆಂದು ತಿಳಿದು ಬಂತು!

ಬಳಕೆದಾರರ ವೇದಿಕೆಗೆ ದೂರು
ಶ್ರೀ. ಆಚಾರ್ಯರು ಮಂಗಳೂರು ಬಳಕೆದಾರರ ವೇದಿಕೆಯ ಸಲಹೆ ಪಡೆದು ತಾ. 2-1-99ರಂದು ಪೂರೈಕೆದಾರರಿಗೆ ಇನ್ನೊಂದು ಪತ್ರವನ್ನು ಬರೆದು, ಯಂತ್ರದ ಜೊತೆಗೆ ಯಾವುದೇ ಕೈಪಿಡಿಯನ್ನು ನೀವು ಕೊಡದಿರುವುದರಿಂದ ಯಂತ್ರವನ್ನು ಉಪಯೋಗಿಸುವ ಕ್ರಮ ನನಗೆ ತಿಳಿದಿಲ್ಲ ಎಂದು ಹೇಳಲು ನಿಮಗೆ ಯಾವ ಅಧಿಕಾರವೂ ಇಲ್ಲ. ಆದುದರಿಂದ ಈ ಯಂತ್ರ ನನಗೆ ಬೇಡ. ಈ ಪತ್ರ ತಲುಪಿದ 15 ದಿನಗಳ ಒಳಗೆ ಹಣ ವಾಪಾಸು ಕಳಿಸಿ,ಯಂತ್ರವನ್ನು ಹಿಂದಕ್ಕೆ ಪಡೆಯಿರಿ” ಎಂದು ಶ್ರೀಯುತರು ತಮ್ಮ ಪತ್ರದಲ್ಲಿ ಬರೆದರು.

ಯಂತ್ರ ಬದಲಾಯಿಸುವ ಕೊಡುಗೆ
ಮೇಲಿನ ಪತ್ರಕ್ಕೆ ತಾ. 14-1-99 ರಂದು ಉತ್ತರಿಸಿದ ಪೂರೈಕೆದಾರರು, ತಾವು ಮಾರಾಟ ಮಾಡಿದ ಪಾಲಿಶಿಂಗ್ ಯಂತ್ರದಲ್ಲಿ ಯಾವ ದೋಷವೂ ಇಲ್ಲ, ಆದರೂ ನೀವು ಅದರ ನಿರ್ವಹಣೆಯಿಂದ ಸಂತುಷ್ಟರಾಗದಿದ್ದರೆ ಬದಲಾಯಿಸಿ
ಕೊಡಲಾಗುವುದು ಎಂದು ತಿಳಿಸಿದರು. ಆದರೆ ಮೊದಲಿನ ಯಂತ್ರವನ್ನು ಬಳಕೆದಾರರೇ ಸ್ವತ: ಮಂಬೈಗೆ ತಮ್ಮ ಕಚೇರಿಗೆ ತೆಗೆದುಕೊಂದು ಬಂದು ಬದಲಿ ಯಂತ್ರವನ್ನು ಪಡೆಯಬೇಕು ಎಂಬ ಷರತ್ತು ವಿಧಿಸಿದರು. ಶ್ರೀ ಆಚಾರ್ಯರು ಇದಕ್ಕುತ್ತರವಾಗಿ ಕೆಲಸದ ನಿಮಿತ್ತ ತನಗೆ ಸ್ವತ: ಮುಂಬೈಗೆ ಬರಲು ಸಾಧ್ಯವಿಲ್ಲ, ಪೂರೈಕೆದಾರರೇ ತಮ್ಮ ಜನವನ್ನು ಮಂಗಳೂರಿಗೆ ಕಳುಹಿಸಿ ಯಂತ್ರವನ್ನು ಬದಲಾಯಿಸಿಕೊಡಬೇಕೆಂದು ಪತ್ರ ಬರೆದರು. ಯಂತ್ರದ ಜೊತೆಗೆ ಗ್ಯಾರಂಟಿ ಕಾರ್ಡ್, ಕೈಪಿಡಿ ಮುಂತಾದವುಗಳು ತನಗೆ ಅಗತ್ಯವಾಗಿ ಸಿಗಬೇಕು ಎಂದೂ ಶ್ರೀಯುತರು ಒತ್ತಿ ಹೇಳಿದರು.

ವಕೀಲರ ನೋಟೀಸ್
ಈ ಪತ್ರ ಬರೆದು 2 ತಿಂಗಳು ಕಾದರೂ ಪೂರೈಕೆದಾರರಿಂದ ಯಾವ ಉತ್ತರವು ಬರಲಿಲ್ಲ. ವೇದಿಕೆಯ ಸಲಹೆಯಂತೆ ಬಳಕೆದಾರರು ಬೆಂಗಳೂರಿನ ಪ್ರಖ್ಯಾತ ವಕೀಲರಾದ ಶ್ರೀ ಜಿ.ಕೆ.ವಿ. ಮೂರ್ತಿಯವರನ್ನು ಸಂಪರ್ಕಿಸಿ, ಅವರ ಮೂಲಕ
ಪೂರೈಕೆದಾರರಿಗೆ ಎಚ್ಚರಿಕೆಯ ನೋಟೀಸ್ ಕಳುಹಿಸಿದರು. ಇದಕ್ಕೆ ತಕ್ಷಣ ಪ್ರತಿಕ್ರಯಿಸಿದ ಪೂರೈಕೆದಾರರು, ಶ್ರೀ ದಿವಾಕರ ಆಚಾರ್ಯರು ಮುಂಬೈಗೆ ಬಂದಲ್ಲಿ, ಹಳೇ ಯಂತ್ರವನ್ನು ಹಿಂದಕ್ಕೆ ಪಡೆದುಕೊಂಡು, ಹೊಸ ಯಂತ್ರವನ್ನು ಕೊಡಲಾಗುವುದು ಎಂದು ಆಶ್ವಾಸನೆಯಿತ್ತರು.


ಹೊಸ ಯಂತ್ರ ಸಿಕ್ಕಿತು
ವೇದಿಕೆಯ ಸಲಹೆಯಂತೆ ಶ್ರೀ ದಿವಾಕರ ಆಚಾರ್ಯರು ಜೂನ್ ತಿಂಗಳಲ್ಲಿ ಸ್ವತ: ಮುಂಬೈಗೆ ಹೋದರು. ಜೊತೆಯಲ್ಲಿ ಕೆಟ್ಟು ನಿಂತ ಪಾಲಿಶಿಂಗ್ ಯಂತ್ರವನ್ನು ಕೊಂಡೊಯ್ದರು. ಪೂರೈಕೆದಾರರು ಈ ಯಂತ್ರವನ್ನು ಹಿಂದಕ್ಕೆ ಪಡೆದು, ಹೊಸ ಯಂತ್ರವನ್ನು ಕೊಟ್ಟಿದ್ದಾರೆ, ಅಷ್ಟೇ ಅಲ್ಲದೆ, ಯಂತ್ರವನ್ನು ಹೇಗೆ ಬಳಸಬೇಕೆಂಬುದನ್ನು ವಿವರಿಸಿದ್ದಾರೆ. ಇದೀಗ ಹೊಸ ಯಂತ್ರದ ಕಾರ್ಯಕ್ಷಮತೆಯನ್ನು ಕಾದುನೋಡಬೇಕಷ್ಟೇ.
ಪ್ರಾತಿನಿಧಿಕ ಫೋಟೋ: ಚಿನ್ನದ ಪಾಲಿಶಿಂಗ್ ಯಂತ್ರ  

ಸಂಗ್ರಹ: ಬಳಕೆದಾರರ ಶಿಕ್ಷಣ, 5-10-1999