ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಪ್ರಕರಣ.
ರತ್ನಾಕರ ಬೈಂದೂರು ಎನ್ನುವವರ ವಾಸ ಸ್ಥಳ ಗಂಗೊಳ್ಳಿ. ಇವರು ಮಾಜಿ ಸೈನಿಕರು. ಗಂಗೊಳ್ಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಸೇವಿಂಗ್ಸ್ ಖಾತೆಗೆ ಇವರ ಪೆನ್ಶನ್ ಹಣ ಜಮೆಯಾಗುತ್ತಿತ್ತು.
ಭಾರತ ಸರಕಾರವು 98 ಜುಲೈಯಲ್ಲಿ ಹೊರಡಿಸಿದ ಆದೇಶದಂತೆ ತಾ. 1-1-96ರಿಂದ ಪೂರ್ವಾನ್ವಯವಾಗುವಂತೆ ಮಾಜಿ ಸೈನಿಕರ ತುಟ್ಟಿ ಭತ್ತೆಯಲ್ಲಿ ಹೆಚ್ಚಳವುಂಟಾಗಿತ್ತು. ಶ್ರೀ ರತ್ನಾಕರ ಇವರು ಹೆಚ್ಚಳದ ತುಟ್ಟಿ ಭತ್ತೆಯು ತನ್ನ ಖಾತೆಗೆ ಜಮಾ ಮಾಡಲಾಗಿದೆಯೇ ಎಂದು ಪ್ರತಿ ತಿಂಗಳಲ್ಲಿಯೂ ಬ್ಯಾಂಕಿನಲ್ಲಿ ವಿಚಾರಿಸುತ್ತಿದ್ದರು. ಹೀಗೆ ಐದಾರು ತಿಂಗಳ ತನಕ ವಿಚಾರಿಸಿದರೂ ಇವರ ಖಾತೆಗೆ ಹಣ ಜಮೆಯಾಗಿರಲೇ ಇಲ್ಲ.
1999 ರ ಮಾರ್ಚಿ ತಿಂಗಳಲ್ಲಿ ಮತ್ತು ಎಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಅಧಿಕಾರಿಗೆ ಪತ್ರ ಬರೆದರು. ಆದರೂ ಇವರ ಖಾತೆಗೆ ಜಮೆ ಮಾಡಲಿಲ್ಲ. ಆದ್ದರಿಂದ ತಾ.10-6-99ರಲ್ಲಿ ಬ್ಯಾಂಕ್ ಮೆನೇಜರರಿಗೆ ಇನ್ನೊಂದು ಪತ್ರ ಬರೆದು ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿದರು. ಈ ಪತ್ರವು ಮಾತ್ರ ಸರಿಯಾಗಿ ಕೆಲಸ ಮಾಡಿತು. ವೇದಿಕೆಯಿಂದ ಅನುಸರಣಾ ಪತ್ರ ಬರೆಯುವ ಮೊದಲೇ ಶ್ರೀ ರತ್ನಾಕರರು ವೇದಿಕೆಗೆ ಪತ್ರ ಬರೆದು ತನಗೆಬರಬೇಕಾಗಿರುವ ತುಟ್ಟಿ ಭತ್ತೆ ಬಾಕಿ ರೂ. 2,460/- ನಾಲ್ಕೇ ದಿನಗಳಲ್ಲಿ ತನ್ನ ಖಾತೆಗೆ ಜಮಾ ಮಾಡಿದ್ದಾರೆಂದು ತಿಳಿಸಿದ್ದಾರೆ.
ತನಗೆ ಬಹಳಷ್ಟು ಹಿಂದೆಯೇ ಕೊಡಬೇಕಾದ ಹಣವನ್ನು ತಡವಾಗಿ ಕೊಟ್ಟಿದ್ದರಿಂದ ವಿಳಂಬಿತ ಅವಧಿಗೆ ಬಡ್ಡಿ ಕೊಡಬೇಕೆಂದು ಕೇಳಿ ಶಾಖಾ ಮೆನೇಜರರಿಗೆ ಇದೀಗ ಇನ್ನೊಂದು ಪತ್ರ ಬರೆದು ಎರಡನೇ ಹೋರಾಟ ಪ್ರಾರಂಭಿಸಿದ್ದಾರೆ. ಸೈನಿಕನಾಗಿರುವಾಗ ವೈರಿಗಳ ವಿರುದ್ಧ ಹೋರಾಟ, ನಿವೃತ್ತನಾದ ಮೇಲೆ ನಮ್ಮವರ ವಿರುದ್ಧವೇ ಹೋರಾಟ!