ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಇನ್ನೊಂದು ಪ್ರಕರಣ.
ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶ್ರೀ. ಜಿ.ಎಸ್.ಅಬ್ದುಲ್ ಖಾದರ್ ಇವರು ತಾ. 30-5-98ರಂದು ವಯೋ ನಿವೃತ್ತಿ ಹೊಂದಿದರು. ತನ್ನ ಸಾಮಾನ್ಯ ಭವಿಷ್ಯ ನಿಧಿ (G.P.F.)ಯ ಹಣವನ್ನು ಹಿಂತಿರುಗಿಸಬೇಕೆಂದು ಕೋರಿ ನಿವೃತ್ತಿ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿಯೇ ಕರ್ನಾಟಕ ಸರಕಾರದ ವiಹಾಲೇಖಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹಣ ಬಂದದ್ದು ಮಾತ್ರ ಜೂನ್ ತಿಂಗಳಲ್ಲಿ.
ಹಣವಂತೂ ಬಂತು. ಆದರೆ ಪೂರ್ತಿ ಬರಲಿಲ್ಲ. ಭಾಗಶ: ಹಣ ಮಾತ್ರ ಕಳುಹಿಸಿದ್ದರು. ಮಹಾಲೇಖಪಾಲರ ಕಚೇರಿಯಿಂದಲೇ ಬಂದಿದ್ದ Account Statement ಪ್ರಕಾರ ಇವರಿಗೆ ಸಲ್ಲಬೇಕಾಗಿದ್ದ ಹಣ ರೂ. 1,02,614/-. ಆದರೆ ಕಳುಹಿಸಿದ್ದು
ರೂ. 76,489/- ಮಾತ್ರ. ರೂ. 26,125/- ಇನ್ನೂ ಬರಬೇಕಾಗಿತ್ತು. ಉಳಿದ ಹಣವನ್ನು ಕಳುಹಿಸಿಕೊಡಬೆಕೆಂದು ಇವರು ಮೂರು ಮನವಿ ಪತ್ರಗಳನ್ನು ಕಳುಹಿಸಿಕೊಟ್ಟರು. ಮಹಾಲೇಖಪಾಲರ ಮೇಲೆ ಏನೂ ಪರಿಣಾಮವಾಗಲಿಲ್ಲ. ನಾಲ್ಕನೇ ಮನವಿ ಪತ್ರದಲ್ಲಿ “ಯಥಾ ನಕಲನ್ನು ಸಂಚಾಲಕರು,ಬಳಕೆದಾರರ ವೇದಿಕೆ, ಬಸ್ರೂರು ಇವರಿಗೆ ಕಳುಹಿಸಲಾಗಿದೆ” ಎಂದು ಬರೆದರು.
ಕೂಡಲೇ ಎಚ್ಚರಗೊಂಡ ಮಹಾಲೇಖಪಾಲರು ಹಣ ಕಳುಹಿಸಿ ಕೊಟ್ಟಿದ್ದಾರೆಂದು ಶ್ರೀ ಅಬ್ದುಲ್ ಖಾದರ್‍ರವರು ವೇದಿಕೆಗೆ ಪತ್ರ ಬರೆದು ತಿಳಿಸಿದ್ದಾರೆ. ವೇದಿಕೆ ಒಂದೇ ಒಂದು ಪತ್ರವನ್ನೂ ಬರೆಯಲಿಲ್ಲವೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.
ಪ್ರಾತಿನಿಧಿಕ ಫೋಟೋ: ನಿವೃತ್ತಿ ನಂತರ ತನ್ನದೇ ಹಣಕ್ಕಾಗಿ ಕಾಯುವ ಪರಿಸ್ಥಿತಿ