ಹಕ್ಕು ಹೋರಾಟ 3. (ಅ) ಹಿಡಿದಿಟ್ಟುಕೊಂಡ ಪಾಸ್-ಪೋರ್ಟನ್ನು ಮರಳಿಸಿದರು

ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಪ್ರಕರಣ.

ಕುಂದಾಪುರ ತಾಲೂಕು ಗೋಪಾಡಿಯ ಶ್ರೀ ಯು.ಕಾಂತರಾಜ್ ಇವರು ಮಿಟಾ ಮ್ಯಾನ್ ಪವರ್ ಕನ್ಸಲ್ಟೆಂಟ್‌ಗೆ ತಾ. 13-6-98ರಂದೇ ಪಾಸ್-ಪೋರ್ಟ್ ಕೊಟ್ಟಿದ್ದರು. ಆ ಬಗ್ಗೆ

ಸ್ವೀಕೃತ ರಶೀದಿಯನ್ನೂ ಪಡೆದಿದ್ದರು. ಅಸೌಖ್ಯದ ಕಾರಣ ಅವರು ವಿದೇಶಕ್ಕೆ ಹೋಗುವ ಆಲೋಚನೆಯನ್ನು ಕೈಬಿಟ್ಟರು. ತನ್ನ ಸ್ನೇಹಿತರೊಬ್ಬರೊಡನೆ ಒಂದು ಅಧಿಕಾರ ಪತ್ರ (Authorisation Letter) ನೀಡಿ, ಸ್ನೇಹಿತರ ಕೈಯಲ್ಲಿ ಪಾಸ್-ಪೋರ್ಟ್ ಕೊಟ್ಟು ಕಳುಹಿಸುವಂತೆ ತಿಳಿಸಿದರು. ಆದರೆ ಮೂರು ನಾಲ್ಕು ಬಾರಿ ಮಂಗಳೂರಿಗೆ ಹೋದರೂ ಸದ್ರಿ ಸಂಸ್ಥೆಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೊಮ್ಮೆ ಅವರನ್ನು ಭೇಟಿ ಮಾಡಿದ ಸ್ನೇಹಿತರೊಡನೆ ಸಂಸ್ಥೆಯವರು ಹೇಳಿದ್ದೇನು ಗೊತ್ತೆ? “ಕಾಂತರಾಜ್ಅವರು ತನ್ನ ಅಸೌಖ್ಯದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸಿದರೆ ಅವರ ಪಾಸ್-ಪೋರ್ಟ್ ಹಿಂತಿರುಗಿಸಲಾಗುವುದು” ಎಂದು. ಇದು ಯಾವ ಕಾನೂನು ಎಂದು ಶ್ರೀ ಕಾಂತರಾಜರಿಗೆ ತಿಳಿದುಕೊಳ್ಳಲಾಗದಿದ್ದರೂ ಪಾಸ್-ಪೋರ್ಟ್ ಹಿಂದಕ್ಕೆ ಪಡೆಯಬೇಕಾದುದರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನೂ ಮಾಡಿಸಿ ಕಳುಹಿಸಿ ಕೊಟ್ಟರು.


ಇಷ್ಟೆಲ್ಲ ಮಾಡಿದರೂ ಪಾಸ್-ಪೋರ್ಟ್ ಮಾತ್ರ ಬರಲೇ ಇಲ್ಲ. ನಿರುಪಾಯರಾದ ಶ್ರೀ ಕಾಂತರಾಜರು ತಾ. 11-6-99ರಲ್ಲಿ ಅವರಿಗೊಂದು ಪತ್ರ ಬರೆದು ಕೆಳಗಡೆಯಲ್ಲಿ ವೇದಿಕೆಯ ಹೆಸರನ್ನು ಹಾಕಿದರು. ಈ ಪತ್ರ ತಲುಪಿ ಕೇವಲ ಹತ್ತೇ ದಿನಗಳಲ್ಲಿ ನೋಂದಣಿ ಅಂಚೆಯಲ್ಲಿ ಪಾಸ್-ಪೋರ್ಟ್ ಕಾಂತರಾಜರ ಕೈಸೇರಿತು. ಆ ಸಂಸ್ಥೆಯು ಒಂದೇ ಒಂದು ಪತ್ರ ಬರೆಯಲೂ ವೇದಿಕೆಗೆ ಅವಕಾಶ ನೀಡಲಿಲ್ಲ

ಫೋಟೋ: ಭಾರತೀಯ ಪಾಸ್-ಪೋರ್ಟ್