70 ವರುಷದ ವೃದ್ಧೆಗೆ ಪೆನ್-ಷನ್ ಪಾವತಿಸುವ ಸಂದರ್ಭದಲ್ಲಿ “ಮಾನವೀಯವಾಗಿ ವರ್ತಿಸಿ” ಎಂದು ಬ್ಯಾಂಕಿಗೆ ಕೇಂದ್ರ ವಿತ್ತ ಸಚಿವೆ ಸೂಚಿಸಬೇಕಾಗಿ ಬಂದ ಪ್ರಕರಣ ಇದು.
ಒಡಿಸ್ಸಾ ರಾಜ್ಯದ ನಬರಂಗಪುರ ಜಿಲ್ಲೆಯ ಝರಿಗಾವೊನ್ ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚಿನ "ಬ್ಯಾಂಕ್ ಮಿತ್ರ" 70 ವರುಷದ ವೃದ್ಧೆ ಸೂರ್ಯ ಹರಿಜನ ಎಂಬಾಕೆಗೆ ಮಾಸಿಕ ಪೆನ್-ಷನ್ ಪಾವತಿಸಲಿಲ್ಲ. ಪೆನ್-ಷನ್ ಪಡೆಯಲೇ ಬೇಕೆಂದು ನಿರ್ಧರಿಸಿದ ವೃದ್ಧೆ, ತನ್ನ ಮನೆಯಿಂದ ಕೆಲವು ಕಿಮೀ ದೂರದ ಬ್ಯಾಂಕಿನ ಬ್ರಾಂಚಿಗೆ ಒಂದು ಪ್ಲಾಸ್ಟಿಕ್ ಕುರ್ಚಿಯನ್ನು ಊರುಗೋಲಿನಂತೆ ಬಳಸಿ, ಉರಿಬಿಸಿಲಿನಲ್ಲಿ ನಡೆದೇ ಬಂದಳು.
ಅಷ್ಟರಲ್ಲಿ ಇದನ್ನು ಯಾರೋ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ಆ ವಿಡಿಯೋ ವೈರಲ್ ಆಯಿತು! ಅದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೂ ಬಂತು. ಅವರು ತಕ್ಷಣವೇ ಟ್ವಿಟ್ಟರಿನಲ್ಲಿ ಸಂದೇಶವೊಂದನ್ನು ದಾಖಲಿಸಿದರು. ಅದರ ಮುಖ್ಯಾಂಶ: "ಮೆನೇಜರ್ ರೆಸ್ಪೊಂಡ್ ಮಾಡಿದ್ದಾರೆ ಆದರೂ ಅವರು ಮಾನವೀಯವಾಗಿ ವರ್ತಿಸಬೇಕೆಂದು ಆಶಿಸುತ್ತೇನೆ. ಬ್ಯಾಂಕ್ ಮಿತ್ರ ಯಾರೂ ಇಲ್ಲವೇ?" ಅನಂತರ, ದೇಶದ ಹಲವು ಪತ್ರಿಕೆಗಳಲ್ಲಿ ಹಾಗೂ ಟಿವಿ ಚಾನೆಲುಗಳಲ್ಲಿ ಇದು ದೊಡ್ಡ ಸುದ್ದಿಯಾಯಿತು.
ಕೇಂದ್ರ ವಿತ್ತ ಸಚಿವೆಯ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ವಿವರವಾದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತು. ಅದರ ಮುಖ್ಯಾಂಶಗಳು: ಇತ್ತೀಚೆಗೆ ದುರದೃಷ್ಟದ ಘಟನೆಯೊಂದು ನಡೆದಿದೆ. ಒಡಿಸ್ಸಾದ ನಬರಂಗಪುರ ಜಿಲ್ಲೆಯ ಝರಿಗಾವೊನ್ ತಾಲೂಕಿನ ಕಾಮನ್ ಸರ್ವಿಸ್ ಪ್ರೊವೈಡರ್ (ಬ್ಯಾಂಕ್ ಮಿತ್ರ) ಮೂಲಕ ಪೆನ್-ಷನ್ ಹಣ ಪಡೆಯಲು ಹಿರಿಯ ನಾಗರಿಕಳೊಬ್ಬಳಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಅವಳ ಮಸಕಾಗುತ್ತಿರುವ ಹೆಬ್ಬೆಟ್ಟಿನ ರೇಖೆಗಳನ್ನು ಬ್ಯಾಂಕ್ ಮಿತ್ರನ ಬಯೋಮೆಟ್ರಿಕ್ ರೀಡರ್ ಗುರುತಿಸಲಿಲ್ಲ.
ಜ್ಯಾರಿಯಲ್ಲಿರುವ ಪ್ರೊಟೋಕೋಲ್‌ಗಳ ಅನುಸಾರ, ಅತಿ ಹತ್ತಿರದ ಲಿಂಕ್-ಬ್ರ್ಯಾಂಚ್ ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಝರಿಗಾವೊನ್ ತಕ್ಷಣವೇ ಪೆನ್-ಷನ್ ಹಣವನ್ನು ಡೆಬಿಟ್ ಮಾಡಿ ಅವಳ ಖಾತೆಗೆ ಪಾವತಿಸಿತು. ಇನ್ನು ಮುಂದೆ ಅವಳ ಮನೆಬಾಗಿಲಿನಲ್ಲೇ ಪೆನ್-ಷನ್ ಪಾವತಿಸುವ ವ್ಯವಸ್ಥೆ ಮಾಡಲಾಗುವುದೆಂದು ಅವಳಿಗೆ ಬ್ರ್ಯಾಂಚ್ ಮೆನೇಜರ್ ಆಶ್ವಾಸನೆ ನೀಡಿದ್ದಾರೆ.” ಆ ವೃದ್ಧೆ ನಡೆಯಲು ಕಷ್ಟ ಪಡುತ್ತಿರುವುದನ್ನು ಗಮನಿಸಿದ ಬ್ಯಾಂಕ್ ಅವಳಿಗೆ ಒಂದು ಗಾಲಿಕುರ್ಚಿಯನ್ನೂ ದಾನವಿತ್ತಿದೆ.
ಸೂರ್ಯ ಹರಿಜನ ಎಂಬ ಆ ವಯೋವೃದ್ಧೆ ತನ್ನ ಪೆನ್-ಷನ್ ಪಡೆಯಲು ಇಷ್ಟೆಲ್ಲ ಆಗಬೇಕಾಗಿತ್ತೇ? ಅವಳು ಇಬ್ಬರು ಗಂಡು ಮಕ್ಕಳ ತಾಯಿ; ಹಿರಿಯ ಮಗ ಬೇರೆ ರಾಜ್ಯದಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ಕಿರಿಯ ಮಗನ ಜೊತೆ ಗುಡಿಸಲಿನಲ್ಲಿ ಅವಳ ವಾಸ. ಆಕೆಯದು ಭೂರಹಿತ ಕುಟುಂಬ. ಹಾಗಾಗಿ ಜೀವನೋಪಾಯಕ್ಕಾಗಿ ಬೇರೆಯವರ ದನಗಳನ್ನು ಮೇಯಿಸುವ ಕೆಲಸ. ಇವನ್ನೆಲ್ಲ ತಿಳಿದಿದ್ದ ಬ್ಯಾಂಕ್ ಅಧಿಕಾರಿಗಳ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಬಳಿ ಆಕೆ ತನ್ನ ಪೆನ್-ಷನ್ ಪಾವತಿಗಾಗಿ ಏನಾದರೂ ಮಾಡಿ ಎಂದು ಹಲವು ಸಲ ನಿವೇದಿಸಿದ್ದಳು. ಆದರೆ ಎಲ್ಲರ ಉತ್ತರ ಒಂದೇ: "ನಾನೇನು ಮಾಡಲಿ?”
ಹಾಗಾದರೆ, ಕೇಂದ್ರ ವಿತ್ತ ಸಚಿವೆ ಟ್ವಿಟ್ಟರಿನಲ್ಲಿ ಎರಡು ಸಾಲಿನ ಸಂದೇಶ ದಾಖಲಿಸಿದ ನಂತರ ಆ ವಯೋವೃದ್ಧೆಗೆ ಅವಳ ಹಕ್ಕಿನ ಪೆನ್-ಷನ್ ಪಾವತಿಸಲು ಹೇಗೆ ಸಾಧ್ಯವಾಯಿತು?
ಇಂತಹದೇ ಇನ್ನೊಂದು ಪ್ರಕರಣ 2020ರಲ್ಲಿ ವರದಿಯಾಗಿತ್ತು. 60 ವರುಷದ ಮಹಿಳೆಯೊಬ್ಬಳು ತನ್ನ 100 ವರುಷ ವಯಸ್ಸಿನ ತಾಯಿಯನ್ನು ಮಂಚದಲ್ಲಿ ಎಳೆದುಕೊಂಡು ಬ್ಯಾಂಕಿನ ಬ್ರ್ಯಾಂಚಿಗೆ ಬರಬೇಕಾಯಿತು - ಅವಳ ಜನ್‌ಧನ್ ಖಾತೆಯಿಂದ ಹಣ ಪಡೆಯಲಿಕ್ಕಾಗಿ. ಯಾಕೆಂದರೆ, ಆ ವಯೋವೃದ್ಧೆ ಬ್ಯಾಂಕಿಗೆ ಸ್ವತಃ ಬರಬೇಕೆಂದು ಬ್ಯಾಂಕ್ ಮೆನೇಜರ್ ತಾಕೀತು ಮಾಡಿದ್ದರು. ಈ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾದ ನಂತರ ಜನರ ಆಕ್ರೋಶ ಸ್ಫೋಟವಾಗಿತ್ತು. ತದನಂತರ ಆ ಮೆನೇಜರನ್ನು ಅಮಾನತು ಮಾಡಲಾಯಿತು.
ಇಂತಹ ಪ್ರಕರಣಗಳಲ್ಲಿ ಸಮಸ್ಯಾ ಪರಿಹಾರದ ದಾರಿ
ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಕೋಟಿಗಟ್ಟಲೆ ಜನರ ಸಮಸ್ಯೆಗಳ ಪರಿಹಾರಕ್ಕೆ ಇದೊಂದು ಘಟನೆ ಹಲವು ಒಳನೋಟಗಳನ್ನು ಒದಗಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಸಮಸ್ಯಾ ಪರಿಹಾರದ ವಿಧಾನ ಏನೆಂಬುದು ಕೈಪಿಡಿ, ಸುತ್ತೋಲೆ, ಮಾರ್ಗದರ್ಶಿ ಸೂತ್ರಗಳು, ನಿಯಮಗಳು - ಇವೆಲ್ಲದರಲ್ಲಿ ನಮೂದಿಸಲ್ಪಟ್ಟಿರುತ್ತದೆ. “ಸಮಸ್ಯಾ ಪರಿಹಾರದ ವಿಧಾನ ತಿಳಿದಿಲ್ಲ" ಎಂದಾದರೆ ಸಮಸ್ಯೆ ಪರಿಹರಿಸಬೇಕಾದ ಸಿಬ್ಬಂದಿ ಅಥವಾ ಅಧಿಕಾರಿಗೆ ಅದನ್ನು ತಿಳಿಯಲು ಕೆಲವೇ ನಿಮಿಷಗಳು ಸಾಕು.
"ಆ ಮಾಹಿತಿ ಸಿಗುತ್ತಿಲ್ಲ” ಎಂದು ಈಗ ಯಾರೂ ನೆವನ ಹೇಳುವಂತಿಲ್ಲ. ಯಾಕೆಂದರೆ, ಅಂತಹ ಎಲ್ಲ ಮಾಹಿತಿಯೂ ಈಗ ಡಿಜಿಟಲ್ ಫೈಲುಗಳಲ್ಲಿ ಲಭ್ಯ. ಕಂಪ್ಯೂಟರಿನ ಕೆಲವೇ ಬಟನ್‌ಗಳನ್ನು ಒತ್ತಿದರೆ ಕೆಲವೇ ಕ್ಷಣಗಳಲ್ಲಿ ಅಗತ್ಯವಾದ ಮಾಹಿತಿ ಕಂಪ್ಯೂಟರಿನ ಪರದೆಯಲ್ಲಿ ಮೂಡುತ್ತದೆ.
ಸಿಬ್ಬಂದಿ ಅಥವಾ ಅಧಿಕಾರಿಗಳು ಅಷ್ಟು ಮಾಡಲಿಕ್ಕೂ ಯಾಕೆ ತಯಾರಿಲ್ಲ? ಇದು ಮನಃಸ್ಥಿತಿಯ ಪ್ರಶ್ನೆ. ಹಿರಿಯ ನಾಗರಿಕರು, ವೃದ್ಧರು, ದುರ್ಬಲ ವರ್ಗದವರ ಸಹಿತ ಎಲ್ಲ ಗ್ರಾಹಕರಿಗೂ ದಕ್ಷ ಸೇವೆ ಪಡೆಯುವ ಹಕ್ಕು ಇರುತ್ತದೆ ಎಂಬುದು ಇವರಿಗೆ ಯಾಕೆ ಅರ್ಥವಾಗುವುದಿಲ್ಲ? ಉದ್ಯೋಗಕ್ಕೆ ಸೇರುವ ಸಮಯದಲ್ಲಿ, ತದನಂತರ ಆಗಾಗ್ಗೆ ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ತರಬೇತಿಗಳಲ್ಲಿ “ಗ್ರಾಹಕ ಸೇವೆ” ಬಗ್ಗೆ ನೀಡುವ ಎಲ್ಲ ನಿರ್ದೇಶನಗಳೂ ವ್ಯರ್ಥವೇ?
ಅದೆಲ್ಲ ಒತ್ತಟ್ಟಗಿರಲಿ. ಇಂತಹ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ತಿಳಿದುಕೊಳ್ಳುವುದು ಮಂಗಳ ಗ್ರಹಕ್ಕೆ ಬಾಹ್ಯಾಕಾಶ ವಾಹನ ಕಳಿಸುವ ರಾಕೆಟ್ ವಿಜ್ನಾನ ಏನಲ್ಲ. ತನ್ನ ಅಮ್ಮ, ಚಿಕ್ಕಮ್ಮ, ಅಕ್ಕ ಅಥವಾ ಅತ್ತಿಗೆಗೆ ಇಂತಹದೇ ಸಮಸ್ಯೆ ಆಗಿದ್ದಿದ್ದರೆ ತಾನೇನು ಮಾಡುತ್ತಿದ್ದೆ? ಎಂದು ಆ ಸಿಬ್ಬಂದಿ ಅಥವಾ ಅಧಿಕಾರಿ ಯೋಚಿಸಿದರೆ ಸಾಕು. ಸಮಸ್ಯಾ ಪರಿಹಾರದ ದಾರಿ ಅವರಿಗೆ ಸುಲಭವಾಗಿ ಕಾಣಿಸುತ್ತದೆ.
ಆದರೆ, ಸಿಬ್ಬಂದಿ ಮತ್ತು/ ಅಥವಾ ಅಧಿಕಾರಿ ಹೀಗೆ ಯಾಕೆ ಯೋಚಿಸುವುದಿಲ್ಲ? ಯಾಕೆಂದರೆ, ಅವರು ದಕ್ಷ ಗ್ರಾಹಕ ಸೇವೆ ನೀಡದಿದ್ದರೆ, ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಮಾನವೀಯವಾಗಿ ವರ್ತಿಸದಿದ್ದರೆ:
-ಅವರು ಪ್ರತಿ ತಿಂಗಳು ಪಡೆಯುವ ವೇತನದಲ್ಲಿ ಕಡಿತ ಆಗುವುದಿಲ್ಲ.
-ಅವರ "ಸೇವಾ ದಾಖಲೆ”ಯಲ್ಲಿ ಇದೆಲ್ಲ ದಾಖಲಾಗುವುದಿಲ್ಲ.
-ಅವರ ಪಡೆಯುವ ವಿವಿಧ ಭತ್ತೆಗಳಿಗೆ ಮತ್ತು ಭಡ್ತಿಗೆ ತೊಂದರೆ ಆಗುವುದಿಲ್ಲ.
ಹಾಗಾದರೆ ಇದಕ್ಕೇನು ಪರಿಹಾರ? ಇಂತಹ “ಗ್ರಾಹಕ ಸೇವಾ ನ್ಯೂನತೆ"ಗಳನ್ನು ಸಿಬ್ಬಂದಿ/ ಅಧಿಕಾರಿಯ ಸೇವಾ ದಾಖಲೆಯಲ್ಲಿ ಚುಟುಕಾಗಿ ದಾಖಲಿಸಬೇಕು. ಮೊದಲ ಮೂರು ಪ್ರಕರಣಗಳಲ್ಲಿ “ಎಚ್ಚರಿಕೆ" ನೀಡಿ, ಅನಂತರದ ಪ್ರಕರಣಗಳಲ್ಲಿ ಹೆಚ್ಚೆಚ್ಚು "ಶಿಕ್ಷೆ" ನೀಡುವ ವ್ಯವಸ್ಥೆ ಜ್ಯಾರಿಗೆ ಬರಬೇಕು. ಆಗ ಮಾತ್ರ ಇಂತಹ ಪ್ರಕರಣಗಳು ಮರುಕಳಿಸುವುದು ಕಡಿಮೆ ಆದೀತು, ಅಲ್ಲವೇ?
ಫೋಟೋ: ವಯೋವೃದ್ಧೆ ಸೂರ್ಯ ಹರಿಜನ ಪ್ಲಾಸ್ಟಿಕ್ ಕುರ್ಚಿ ಆಧಾರದಿಂದ ನಡೆಯುತ್ತಾ ಬ್ಯಾಂಕಿಗೆ ಹೋಗುತ್ತಿರುವುದು.