ಹಕ್ಕು ಹೋರಾಟ 23: ತಪ್ಪು ವೈದ್ಯಕೀಯ ವರದಿಯ ಅಪಾಯ

ರೋಗ ಪರೀಕ್ಷಾ ಕೇಂದ್ರಗಳು ಅಥವಾ ಆಸ್ಪತ್ರೆಗಳು ತಪ್ಪು ವರದಿ ನೀಡಿದರೆ ........ ದೀಪ್ತಿ ಷಾ ಅವರು ಅನುಭವಿಸಿದ ವೇದನೆ ಇದಕ್ಕೊಂದು ಉದಾಹರಣೆ.


ತೀವ್ರ ಹೊಟ್ಟೆನೋವಿನಿಂದ ಸಂಕಟ ಪಡುತ್ತಿದ್ದರು ದೀಪ್ತಿ ಷಾ. ಅವರ ಹೊಟ್ಟೆಯ ಸೊನೊಗ್ರಾಮ್ ತೆಗೆಯಲಾಯಿತು. ಅದರಲ್ಲಿ ಒವೇರಿಯನ್ ಸಿಸ್ಟ್ ಕಾಣಿಸಿತು. ಅದನ್ನು ಪರಿಶೀಲಿಸಿದ ಗೈನಕಾಲಜಿಸ್ಟ್ ಸಿಎ - ೧೨೫ ಎಂಬ ರಕ್ತದ ಪರೀಕ್ಷೆ ಮಾಡಿಸಲು ಸಲಹೆಯಿತ್ತರು. ಶ್ರೀಮತಿ ಷಾ ರೋಗ ಪರೀಕ್ಷಾ ಕೇಂದ್ರ (ಪ್ಯಾಥೊಲೋಜಿಕಲ್ ಲ್ಯಾಬ್)ಕ್ಕೆ ತನ್ನ ರಕ್ತದ ಸ್ಯಾಂಪಲ್ ನೀಡಿ, ರೂಪಾಯಿ ೭೦೦ ಶುಲ್ಕವನ್ನೂ ಪಾವತಿಸಿದರು.



ಈ ರಕ್ತಪರೀಕ್ಷೆಯ ವರದಿ, ದೀಪ್ತಿ ಷಾ ಅವರಿಗೆ ಕ್ಯಾನ್ಸರ್ ತಗಲಿರುವ ಸಾಧ್ಯತೆಯನ್ನು ಸೂಚಿಸಿತು. ಆದರೆ, ಗೈನಕಾಲಜಿಸ್ಟ್ಗ್ ಅವರಿಗೆ ವರದಿಯ ಬಗ್ಗೆ ಅನುಮಾನ ಮೂಡಿತು. ಇನ್ನೊಂದು ಲ್ಯಾಬೊರೇಟರಿಯಲ್ಲಿ ಅದೇ ಪರೀಕ್ಷೆ ಪುನಃ ಮಾಡಿಸಲು ಸಲಹೆಯಿತ್ತರು. ಮರುದಿನವೇ, ದೀಪ್ತಿ ಷಾ ಪುನಃ ತನ್ನ ರಕ್ತ ಪರೀಕ್ಷೆ ಮಾಡಿಸಿದರು. ಇದರಿಂದಲೂ ಅವರಿಗೆ ಕ್ಯಾನ್ಸರ್ ತಗಲಿದೆಯೆಂಬುದು ಖಚಿತವಾಗಲಿಲ್ಲ. ಹಾಗಾಗಿ, ಮೂರನೆಯ ಸಲ ಅದೇ ರಕ್ತಪರೀಕ್ಷೆ ಮಾಡಿಸಿದರು. ಎರಡನೇ ಹಾಗೂ ಮೂರನೇ ರಕ್ತಪರೀಕ್ಷೆ ಪ್ರಕಾರ ಅವರ ಸಿಎ - ೧೨೫ ಮಟ್ಟ "ನಾರ್ಮಲ್" ಆಗಿತ್ತು.


ದೀಪ್ತಿ ಷಾ ಅವರಿಗೆ ಆತಂಕ ಆಗದಿದ್ದೀತೇ? ಅವರು ತಪ್ಪು ವರದಿ ನೀಡಿದ ರೋಗ ಪರೀಕ್ಷಾ ಕೇಂದ್ರಕ್ಕೆ ಪತ್ರ ಬರೆದರು: ರಕ್ತಪರೀಕ್ಷಾ ಶುಲ್ಕ ರೂ.೭೦೦ ಮರುಪಾವತಿಸಬೇಕೆಂದೂ, "ತೀವ್ರ ಮಾನಸಿಕ ಒತ್ತಡ ಹಾಗೂ ಸಂಕಟ" ನೀಡಿದ್ದಕ್ಕಾಗಿ ರೂ.೨೦,೦೦೦ ಪರಿಹಾರ ಪಾವತಿಸಬೇಕೆಂದೂ ವಿನಂತಿಸಿದರು. ಅನಂತರ ದೀಪ್ತಿ ಷಾ ಅಹ್ಮದಾಬಾದಿನ ಹೆಸರುವಾಸಿ ಬಳಕೆದಾರರ ಸಂಘಟನೆ "ಬಳಕೆದಾರರ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ"ಗೆ ದೂರು ಕೊಟ್ಟರು. ಸೊಸೈಟಿಯಿಂದಲೂ ಆ ರೋಗ ಪರೀಕ್ಷಾ ಕೇಂದ್ರಕ್ಕೆ ಪತ್ರ ಬರೆದು ಷಾ ಅವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಆದರೆ ರೋಗ ಪರೀಕ್ಷಾ ಕೇಂದ್ರವು ತನ್ನದೇನೂ ತಪ್ಪಿಲ್ಲವೆಂದು ವಾದಿಸಿತು. ಆದ್ದರಿಂದ ದೀಪ್ತಿ ಷಾ ಬಳಕೆದಾರರ ಕೋರ್ಟಿಗೆ ದೂರು ನೀಡಬೇಕಾಯಿತು.



ರೋಗ ಪರೀಕ್ಷಾ ಕೇಂದ್ರದ "ಗಂಭೀರ ನಿರ್ಲಕ್ಷ್ಯ" ಮತ್ತು "ಗಂಭೀರ ಸೇವಾನ್ಯೂನತೆ"ಯನ್ನು ಅಹ್ಮದಾಬಾದಿನ ಬಳಕೆದಾರರ ದೂರು ಪರಿಹಾರ ವೇದಿಕೆ (ಕೋರ್ಟ್) ಖಂಡಿಸಿತು. "ಈ ಪ್ರಕರಣದಲ್ಲಿ ಸೇವಾ ಪೂರೈಕೆದಾರ ಯಾವುದೇ ಉತ್ತರದಾಯಿತ್ವ ಇಲ್ಲದೆ, ತೀರ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಬಳಕೆದಾರರಾದ ದೀಪ್ತಿ ಷಾ ಕ್ಯಾನ್ಸರ್ ರೋಗಿ ಎಂದು ಅಪ್ರತ್ಯಕ್ಷವಾಗಿ ವರದಿ ಮಾಡುವ ಮೂಲಕ ಅವರಿಗೆ ತೀರಾ ಗಂಭೀರ ಮಾನಸಿಕ ನೋವು ಮತ್ತು ಒತ್ತಡ ಉಂಟು ಮಾಡಿದ್ದಾರೆ" ಎಂದು ಕೋರ್ಟ್ ತೀರ್ಮಾನಿಸಿತು.


ಅಂತಿಮವಾಗಿ, ದೀಪ್ತಿ ಷಾ ಅವರಿಗೆ ಜುಲಾಯಿ ೨೦೦೪ರಿಂದ ಪಾವತಿ ದಿನಾಂಕದ ತನಕ ಶೇಕಡಾ ೯ ವಾರ್ಷಿಕ ಬಡ್ಡಿ ಸಹಿತ ರೂ.೭೦೦ ಹಿಂತಿರುಗಿಸಬೇಕೆಂದೂ, ರೂ.೫೦,೦೦೦ ಮಾನಸಿಕ ನೋವಿಗಾಗಿ ಪರಿಹಾರ ಮತ್ತು ರೂ.೧೦,೦೦೦ ವೆಚ್ಚ ಪಾವತಿಸಬೇಕೆಂದೂ ರೋಗ ಪರೀಕ್ಷಾ ಕೇಂದ್ರಕ್ಕೆ ಬಳಕೆದಾರರ ಕೋರ್ಟ್ ಆದೇಶಿಸಿತು.



ಇಂತಹದೇ ಇನ್ನೊಂದು ಪ್ರಕರಣ ೭ ಮೇ ೨೦೧೯ರಲ್ಲಿ ವರದಿಯಾಗಿದೆ. ಹರಿದ್ವಾರದ ಆಲ್ ಇಂಡಿಯಾ ಇನ್-ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಒಬ್ಬ ವ್ಯಕ್ತಿ ಎಚ್‌ಐವಿ - ಪಾಸಿಟಿವ್ ಆಗಿದ್ದಾರೆಂದು ೨೦೧೪ರಲ್ಲಿ ವರದಿ ನೀಡಿತ್ತು. ಆದರೆ ಅದು ತಪ್ಪು ವರದಿಯಾಗಿತ್ತು! ಹರಿದ್ವಾರದ ಬಳಕೆದಾರರ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ, ಹೀಗೆಂದು ತೀರ್ಪು ನೀಡಿತು: "ಈ ವೈದ್ಯಕೀಯ ಸಂಸ್ಥೆ ಪರಿಪೂರ್ಣವಲ್ಲದ ಸೇವೆ ನೀಡುವ ಮೂಲಕ ದೂರುದಾರನಿಗೆ ಮಾನಸಿಕ ಆಘಾತ ನೀಡಿದೆ." ಆದ್ದರಿಂದ ವೈದ್ಯಕೀಯ ಸಂಸ್ಥೆಯು ದೂರುದಾರರಿಗೆ ಒಂದು ತಿಂಗಳೊಳಗೆ ರೂ.೬೦,೦೦೦ ಪರಿಹಾರ ಪಾವತಿಸಬೇಕೆಂದು ಕೋರ್ಟು ಆದೇಶಿಸಿತು. ಇಲ್ಲವಾದರೆ, ವಾರ್ಷಿಕ ಶೇ.೬ ದರದ ಬಡ್ಡಿ ಸಹಿತ ಪರಿಹಾರ ಪಾವತಿಸಬೇಕೆಂದು ಕೋರ್ಟ್ ನಿರ್ದೇಶಿಸಿತು.

ಈ ಪ್ರಕರಣಗಳಿಂದ ನಾವು ತಿಳಿಯಬೇಕಾದ್ದೇನು? ಹೊಸಹೊಸ ರೋಗಗಳು ವ್ಯಾಪಿಸುತ್ತಿರುವಂತೆ, ಹೊಸಹೊಸ ವೈದ್ಯಕೀಯ ಪರೀಕ್ಷೆಗಳೂ ಬಳಕೆಗೆ ಬರುತ್ತಿವೆ. ಕೆಲವು ವೈದ್ಯರಂತೂ ಹಲವಾರು ಪರೀಕ್ಷೆಗಳನ್ನು ಮಾಡಿಸಬೇಕೆಂದು ಆದೇಶಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ, ಈ ವೈದ್ಯಕೀಯ ಪರೀಕ್ಷೆಗಳು ಹೊಸ ಸಮಸ್ಯೆಗಳಿಗೆ ಕಾರಣ. ಉದಾಹರಣೆಗೆ ಎಕ್ಸರೇಯಿಂದಾಗಿ ಹಾನಿಕಾರಕ ವಿಕಿರಣಕ್ಕೆ ನಮ್ಮ ಶರೀರ ಒಳಗಾಗುತ್ತದೆ. ಎಂಆರ್ಐ ಅಂದರೆ ಮ್ಯಾಗ್ನಟಿಕ್ ರಿಸೊನೆನ್ಸ್ ಇಮೇಜಿಂಗಿನಲ್ಲಿಯೂ ಇಂತಹ ಅಪಾಯ ಇದೆ. ಬಳಸಿ-ಎಸೆಯುವ ಸೂಜಿ ಮತ್ತು ಸಿರಿಂಜನ್ನೇ ಉಪಯೋಗಿಸಬೇಕು; ಇಲ್ಲವಾದರೆ, ಸೂಜಿ ಅಥವಾ ಸಿರಿಂಜಿನಲ್ಲಿರಬಹುದಾದ ಹೆಪಾಟಿಟಿಸ್ ಅಥವಾ ಏಡ್ಸ್ ರೋಗದ ಸೋಂಕು ರಕ್ತದ ಸ್ಯಾಂಪಲ್ ತೆಗೆಯುವಾಗ ತಗಲೀತು.



ಆದ್ದರಿಂದ, ರೋಗ ಪರೀಕ್ಷಾ ಕೇಂದ್ರಗಳು ಮತ್ತು ಆಸ್ಪತ್ರೆಗಳು ವೈದ್ಯಕೀಯ ಪರೀಕ್ಷೆಗಳ ವಿಧಾನವನ್ನು ರೋಗಿಗಳಿಗೆ ವಿವರಿಸಿ, ಅವರ ಸಮ್ಮತಿ ಪಡೆಯಲೇ ಬೇಕು. ರಿಸ್ಕ್ ಇರುವ ಪರೀಕ್ಷೆ ನಡೆಸುವಾಗ, ಅಲ್ಲಿ ವೈದ್ಯರು ರೋಗಿಯ ಪಕ್ಕದಲ್ಲಿರಬೇಕು. ಅವು ಎಲ್ಲ ಎಚ್ಚರಿಕೆ ಮತ್ತು ಸುರಕ್ಷಾ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಮಾತ್ರವಲ್ಲ, ತರಬೇತಾದ ಹಾಗೂ ನುರಿತ ಟೆಕ್ನೀಷಿಯನ್ ಈ ಪರೀಕ್ಷೆಗಳನ್ನು ನಡೆಸಬೇಕು. ಪರೀಕ್ಷೆಯ ಫಲಿತಾಂಶದ ವರದಿ ಮತ್ತು ಶುಲ್ಕಕ್ಕೆ ರಶೀದಿ ನೀಡಲೇ ಬೇಕು.



ಇವೆಲ್ಲದರ ಬಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವವರೂ ಎಚ್ಚರದಿಂದ ಇರಬೇಕು. ಯಾಕೆಂದರೆ, ತಪ್ಪು ವೈದ್ಯಕೀಯ ವರದಿಯಿಂದಾಗಿ ತಪ್ಪು ಚಿಕಿತ್ಸೆ ನೀಡಿದರೆ, ನಮ್ಮ ಜೀವಕ್ಕೇ ಅಪಾಯ.
ಫೋಟೋ: ವೈದ್ಯಕೀಯ ಪರೀಕ್ಷಾ ಕೇಂದ್ರ