ಹಕ್ಕು ಹೋರಾಟ 22: ಮೂಗಿನ ಸರ್ಜರಿಯ ಅವಾಂತರ

ಮೈಸೂರಿನ ಎಂಇಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಆಶಾ (ಹೆಸರು ಬದಲಾಯಿಸಲಾಗಿದೆ) ತನ್ನ ಮೂಗಿನ ಸಮಸ್ಯೆ ಸರಿಪಡಿಸಲಿಕ್ಕಾಗಿ ಸರ್ಜರಿ ಮಾಡಿಸಿಕೊಂಡು ಪಟ್ಟ ಪಾಡು ಆಕೆಗೇ ಗೊತ್ತು.



ಆಶಾಳ "ಸೀಳುತುಟಿ" ಸರಿಪಡಿಸಲಿಕ್ಕಾಗಿ ಅವಳಿಗೆ ಬಾಲ್ಯದಲ್ಲಿ ಸರ್ಜರಿ ಮಾಡಿಸಲಾಗಿತ್ತು. ಆದರೂ ಅವಳ ಮೂಗಿನಲ್ಲೊಂದು ದೋಷ ಉಳಿದಿತ್ತು. ಇದನ್ನು ಹೋಗಲಾಡಿಸಲು ಬೆಂಗಳೂರಿನ "ಗಣೇಶ್ ನರ್ಸಿಂಗ್ ಹೋಂ"ನಲ್ಲಿ ಇನ್ನೊಂದು ಸರ್ಜರಿ ಮಾಡಿದರು - ಕಾಸ್ಮೆಟಿಕ್ ಸರ್ಜನ್ ಡಾಕ್ಟರ್ ಎಂ.



ಅನಂತರ ಆಶಾಗೆ ಹೊಸತೊಂದು ಸಮಸ್ಯೆ: ಅವಳ ಮೂಗಿನಿಂದ ದುರ್ವಾಸನೆ ಬರಲು ಆರಂಭ. ಪುನಃ ತನ್ನ ಮೂಗನ್ನು ಆಕೆ ಡಾಕ್ಟರಿಗೆ ತೋರಿಸಿದಳು. ಅವರು ಔಷಧಿಗಳನ್ನು ಬರೆದಿತ್ತು, ಮೂಗಿಗೆ ಒಂದು ಮುಲಾಮು ಹಚ್ಚಲು ಸೂಚಿಸಿದರು. ಆ ಚಿಕಿತ್ಸೆ ಮಾಡಿದರೂ ಆಶಾಳ ಮೂಗಿನ ದುರ್ನಾತ ನಿಲ್ಲಲಿಲ್ಲ. ಆ ಕೆಟ್ಟ ವಾಸನೆ ಎಷ್ಟು ತೀವ್ರವಾಗಿತ್ತೆಂದರೆ, ಅವಳು ಹಾಸ್ಟೆಲ್ ಬಿಟ್ಟು ಹೋಗಬೇಕೆಂದು ವಾರ್ಡನರಿಂದ ಆದೇಶ.

ಕ್ಲಾಸಿನಲ್ಲಿ ಅವಳ ಹತ್ತಿರ ಕುಳಿತುಕೊಳ್ಳಲು ಸಹಪಾಠಿಗಳಿಂದ ನಿರಾಕರಣೆ. ಮೂಗಿನ ದುರ್ವಾಸನೆ ಹೋಗಲಾಡಿಸಿದ ನಂತರವೇ ಕ್ಲಾಸಿಗೆ ಹಾಜರಾಗಬೇಕೆಂದು ಪ್ರಾಧ್ಯಾಪಕರಿಂದಲೂ ಆದೇಶ.

ವಿಧಿಯಿಲ್ಲದೆ ಡಾ. ಎಂ. ಅವರಲ್ಲಿ ಮತ್ತೊಮ್ಮೆ ತನ್ನ ಅವಸ್ಥೆ ಹೇಳಿಕೊಂಡಳು ಆಶಾ. ಅವರು ಮಾಡಿದ್ದೇನು? ಮತ್ತೊಂದು ಸರ್ಜರಿ ಮಾಡಿದರು. ಅನಂತರ ಆಶಾ ಪುನಃ ಕಾಲೇಜಿಗೆ ಹಾಜರಾದಳು. ಆದರೆ ಅವಳ ಮೂಗಿನ ದುರ್ನಾತ ಹಾಗೇ ಇತ್ತು. ಆದ್ದರಿಂದ, ಈ ಹಂತದಲ್ಲಿ ಅವಳನ್ನು ಹಾಸ್ಟೆಲಿನಿಂದ ಹೊರ ಹಾಕಲಾಯಿತು.



ಆಗ, ತನ್ನೂರಿಗೆ ಹಿಂತಿರುಗಿದಳು ಆಶಾ. ಹೆತ್ತವರೊಂದಿಗೆ ತನ್ನ ಸಂಕಟ ಹೇಳಿಕೊಂಡಳು. ಅವರು ಮಲೆನಾಡು ಆಸ್ಪತ್ರೆಯ ಡಾ. ರವಿಪ್ರಕಾಶರನ್ನು ಸಂಪರ್ಕಿಸಿದರು. ಈ ಡಾಕ್ಟರು ಸರ್ಜರಿ ಮಾಡಿದಾಗ ಕಂಡದ್ದೇನು? ಆಶಾಳ ಮೂಗಿನೊಳಗೊಂದು ಚಿಕಿತ್ಸಾ ಹತ್ತಿ (ಅಂದರೆ ಕಾಟನ್ ಗಾಜ್) ತುಂಡು. ಇದನ್ನು ಹೊರ ತೆಗೆದ ಡಾಕ್ಟರ್, ಈ ಸತ್ಯಾಂಶದ ಬಗ್ಗೆ ಸರ್ಟಿಫಿಕೇಟ್ ಬರೆದುಕೊಟ್ಟರು. ಅನಂತರ ಆಶಾಳ ಮೂಗಿನಿಂದ ದುರ್ವಾಸನೆ ಬರಲಿಲ್ಲ.



ತನ್ನ ಸಂಕಟ ಹಾಗೂ ಅವಮಾನಕ್ಕೆ, ಕಾಲೇಜಿನ ಹಾಸ್ಟೆಲಿನಿಂದ ತನ್ನನ್ನು ಹೊರಹಾಕುವುದಕ್ಕೆ ಕಾರಣರಾದ ವೈದ್ಯರ ಸೇವಾನ್ಯೂನತೆಗೆ ಪರಿಹಾರ ಕೇಳಿ, ಬೆಂಗಳೂರಿನ "ರಾಜ್ಯ ಬಳಕೆದಾರರ ದೂರು ಪರಿಹಾರ ಆಯೋಗ"ದಲ್ಲಿ ಆಶಾ ತನ್ನ ಹೆತ್ತವರ ಜೊತೆಗೂಡಿ ದಾವೆ ಹೂಡಿದಳು. ರೂಪಾಯಿ ಆರು ಲಕ್ಷ ಪರಿಹಾರ ಕೇಳಿದಳು.



ರಾಜ್ಯ ಆಯೋಗದಲ್ಲಿ ಡಾ.ಎಂ. ತನ್ನದೇನೂ ತಪ್ಪಿಲ್ಲವೆಂದು ವಾದಿಸಿದರು. "ಎರಡನೆಯ ಸರ್ಜರಿಯ ನಂತರ, ನನ್ನ ವೈದ್ಯಕೀಯ ಸಲಹೆಗೆ ಕಿವಿಗೊಡದೆ, ಆಶಾ ಆಸ್ಪತ್ರೆಯಿಂದ ಹೊರಟು ಹೋದಳು. ಆದ್ದರಿಂದ ಅವಳ ಮೂಗಿನೊಳಗಿದ್ದ ಚಿಕಿತ್ಸಾ ಹತ್ತಿ ತುಂಡು ತೆಗೆದಿರಲಿಲ್ಲ" ಎಂದು ಹೇಳಿಕೆಯಿತ್ತರು. ವಿಚಾರಣೆ ನಡೆಸಿದ ರಾಜ್ಯ ಆಯೋಗವು, ಕೊನೆಗೆ ಆಶಾಳ ದೂರನ್ನು ವಜಾ ಮಾಡಿತು. ಹಠ ಬಿಡದ ಆಶಾ ಮತ್ತು ಹೆತ್ತವರು ದೆಹಲಿಯ ರಾಷ್ಟ್ರೀಯ ಬಳಕೆದಾರರ ದೂರು ಪರಿಹಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು.



ಅಂತಿಮವಾಗಿ, ರಾಷ್ಟ್ರೀಯ ಆಯೋಗವು ಆಶಾಳ ಪರವಾಗಿ ತೀರ್ಪು ನೀಡಿತು. ಡಾ.ಎಂ. ಅವರ ಸೇವೆಯಲ್ಲಿ ನ್ಯೂನತೆ ಮತ್ತು ವೈದ್ಯಕೀಯ ನಿರ್ಲಕ್ಷ್ಯವಿತ್ತೆಂದು ಘೋಷಿಸಿತು. ಆಶಾ ಅವರಿಗೆ ರೂಪಾಯಿ ಒಂದು ಲಕ್ಷ ಪರಿಹಾರ ಮತ್ತು ರೂ.೧೦,೦೦೦ ದಾವೆಯ ವೆಚ್ಚವನ್ನು ವೈದ್ಯರು ಪಾವತಿಸಬೇಕೆಂದು ಆದೇಶಿಸಿತು.



ಈ ಪ್ರಕರಣದಿಂದ ನಾವು ಕಲಿಯಬೇಕಾದ್ದೇನು? ರೋಗಿಗಳ ಆರೋಗ್ಯ ಹಾಗೂ ಜೀವ ತಮ್ಮ ಕೈಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದ ಕೆಲವು ವೈದ್ಯರಿಂದ ತಪ್ಪುಗಳು ಆಗುತ್ತಿವೆ. ಇಂಥವರಿಂದಾಗಿ ಇಡೀ ವೈದ್ಯ ಸಮುದಾಯಕ್ಕೇ ಕೆಟ್ಟ ಹೆಸರು. ಆದ್ದರಿಂದ ರೋಗಿ-ಬಳಕೆದಾರರ ಪರವಾಗಿ ಕೋರ್ಟುಗಳು ನೀಡಿರುವ ತೀರ್ಪುಗಳನ್ನು ವೈದ್ಯರು ಮುಕ್ತಮನಸ್ಸಿನಿಂದ ಸ್ವೀಕರಿಸಬೇಕಾಗಿದೆ. ಬಳಕೆದಾರರು "ನಮ್ಮ ಹಣೆಬರಹ" ಅಥವಾ "ರೋಗಿಯ ಆಯುಸ್ಸು ಮುಗಿಯಿತು" ಎಂದು ಕೈಚೆಲ್ಲಿ ಕೂರಬಾರದು. ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಸೇವಾನ್ಯೂನತೆಯ ಪ್ರಕರಣಗಳನ್ನು ಬಳಕೆದಾರರ ಕೋರ್ಟಿಗೆ ಒಯ್ದು, ಹಕ್ಕು ಸಾಧನೆ ಮಾಡಿ, ವೈದ್ಯಕೀಯ ಸೇವೆಯ ಗುಣಮಟ್ಟ ಸುಧಾರಣೆಗೆ ಮುತುವರ್ಜಿ ವಹಿಸಬೇಕಾಗಿದೆ.