ಹಕ್ಕು ಹೋರಾಟ 21: ರಸ್ತೆ ಅಕ್ರಮಣವನ್ನು ತೆರವುಗೊಳಿಸಿ

ಇವರಿಂದ: ಹೆಚ್. ಚಂದ್ರನಾಯ್ಕ, ನಾಲ್ಕೂರು - 576 234

ಇವರಿಗೆ: ಕಾರ್ಯನಿರ್ವಹಣಾಧಿಕಾರಿಯವರು,

ತಾಲೂಕು ಪಂಚಾಯತ್, ಉಡುಪಿ- 576 101


ಮಾನ್ಯರೇ,
ವಿಷಯ: ಗಿರಿಯ ನಾಯ್ಕರ ಮನೆಯಿಂದ ಅಂಕ್ರಾಲುವರೆಗಿನ ಪಂಚಾಯತ್ ರಸ್ತೆಯನ್ನು ಮುಚ್ಚಿರುವ ಕುರಿತು.
ಉಲ್ಲೇಖ: 1. ಅಕ್ರಮಣದಿಂದ ತೊಂದರೆಗೊಳಗಾಗಿರುವ ನಾಗರಿಕರು ನಿಮಗೆ ಸಲ್ಲಿಸಿರುವ ದೂರು ಹಾಗೂ ನೆನಪಿನೋಲೆಗಳು
2. ಬಸ್ರೂರು ಬಳಕೆದಾರರ ವೇದಿಕೆಯು ನಿಮಗೆ ಬರೆದಿರುವ ಪತ್ರ (25-12-02).
3. ಉಡುಪಿ ಜಿಲ್ಲಧಿಕಾರಿಯವರು ನಿಮಗೆ ಬರೆದ ಪತ್ರ (30-11-02)
4. ಆಕ್ರಮಿತ ದಾರಿ ಪಂಚಾಯತ್ ರಸ್ತೆ ಎನ್ನುವ ದೃಢೀಕರಣ (ನಾಲ್ಕೂರು ಗ್ರಾಮ ಪಂಚಾಯತ್ 23-10-02).

ನಾಲ್ಕೂರು ಗ್ರಾಮದ ಗಿರಿಯ ನಾಯ್ಕರ ಮನೆಯಿಂದ ಅಂಕ್ರಾಲು ತನಕದ ಗ್ರಾಮ ಪಂಚಾಯತ್‍ಗೆ ಸೇರಿರುವ ರಸ್ತೆಯೊಂದನ್ನು ಸ್ಥಳೀಯರು ಅನೇಕರು ಸೇರಿ ರಾತ್ರೋ ರಾತ್ರಿ ಆಕ್ರಮಿಸಿರುತ್ತಾರೆ. ಅನಾದಿಯಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆಯನ್ನು ಆಕ್ರಮಣದಿಂದ ತೆರವುಗೊಳಿಸಿ ಸಂಚಾರ ಯೋಗ್ಯವಾಗಿಸುವಂತೆ ಕೋರಿ ನಿಮಗೆ ಉಲ್ಲೇಖದಂತೆ ಪತ್ರಗಳನ್ನು ಬರೆದಿರುತ್ತೇವೆ.


ನಮ್ಮ ಮನವಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಯವರು ನಿಮಗೆ ಆದೇಶ ನೀಡಿದ್ದಾರೆ. ಸಾಕಷ್ಟು ಪ್ರಯತ್ನಗಳನ್ನು ನಡೆಸಿದ ಹೊರತಾಗಿಯೂ ಸಮಸ್ಯೆ ಪರಿಹಾರಗೊಂಡಿಲ್ಲ. ಭೂದಾಹಿಗಳ ಪ್ರಭಾವ, ರಾಜಕೀಯ ಒತ್ತಡಗಳಿಗೆ ಮಣಿಯದೆ ಸದ್ರಿ ಆಕ್ರಮಣವನ್ನು ನೀವು ಇನ್ನಷ್ಟು ವಿಳಂಬವಿಲ್ಲದೆ ತೆರವುಗೊಳಿಸಬೇಕಾಗಿದೆ.


ವಿಶ್ವಾಸ ಪೂರ್ವಕ,
ಹೆಚ್. ಚಂದ್ರನಾಯ್ಕ ಮತ್ತು ಇತರರು
ದಿನಾಂಕ: 1-01-2003

ಯಥಾ ಪ್ರತಿ: ಬಳಕೆದಾರರ ವೇದಿಕೆ, ಬಸ್ರೂರು. 576 211

ಪ್ರಾತಿನಿಧಿಕ ಫೋಟೋ: ಹಳ್ಳಿ ರಸ್ತೆ

ಸಂಗ್ರಹ: ಬಳಕೆದಾರರ ಶಿಕ್ಷಣ, 20-01-2003