ಹಕ್ಕು ಹೋರಾಟ 20: ಅಂಕಪಟ್ಟಿಯ ಪ್ರತಿ ದೊರೆಯಲು ಇನ್ನೇನು ಮಾಡಬೇಕು ?

ರಾಮಮೂರ್ತಿ ಕೆ., S/o. ಜಯರಾಮ ಶಾಸ್ತ್ರಿ, ‘ಅನುಗ್ರಹ’, 80,
ಬಡಗಬೆಟ್ಟು, ಪರ್ಕಳ - 576 123- ಇವರಿಂದ

ನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ,
ಆರನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು -560003 - ಇವರಿಗೆ

ಮಾನ್ಯರೇ,
ವಿಷಯ: ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ದ್ವಿತೀಯ ಪ್ರತಿಯನ್ನು ಕೋರಿ.
ಉಲ್ಲೇಖ: 1. ಅಂಕಪಟ್ಟಿಯ ದ್ವಿತೀಯ ಪ್ರತಿ ಕೋರಿ ಕಾಲೇಜಿನ ಮೂಲಕ ಸಲ್ಲಿಸಿರುವ ಅರ್ಜಿ ಸಂಖ್ಯೆ 156/01-02/18.10.01.
2. ರೂ. 200ರ ಬ್ಯಾಂಕ್ ಹುಂಡಿ.
3. ನನ್ನ ನೆನಪಿನೋಲೆಗಳು ತಾ. 4-4-02, 3.7.02
4. ಕಾಲೇಜು ಪ್ರಾಂಶುಪಾಲರ ನೆನಪಿನೋಲೆ ತಾ. 8-5-02

ಎಸ್.ಎಸ್.ಎಲ್.ಸಿ.ಯ ನನ್ನ ಅಂಕಪಟ್ಟಿಯ ದ್ವಿತೀಯ ಪ್ರತಿಯನ್ನು ಕೋರಿ ನಿಮಗೆ ಅರ್ಜಿ ಸಲ್ಲಿಸಿ ಹದಿನೈದು
ತಿಂಗಳುಗಳೇ ಸಂದಿವೆ. ಉಲ್ಲೇಖದಂತೆ ನಾನು ಹರಸಾಹಸವನ್ನು ಮಾಡಿದ್ದರೂ ನೀವು ಅಂಕಪಟ್ಟಿಯನ್ನು ನೀಡದಿರುವುದರಿಂದ ಉದ್ಯೋಗಕ್ಕೆ ಸೇರಲು ನನಗೆ ತೊಡಕು ಉಂಟಾಗಿದೆ. ಅಂಕಪಟ್ಟಿಯ ದ್ವಿತೀಯ
ಪ್ರತಿಯನ್ನು ನೀಡದ ನೀವು ನನ್ನ ಪತ್ರಗಳಿಗೂ ಉತ್ತರಿಸದಿರುವುದರ ಹಿನ್ನೆಲೆಯನ್ನು ಏನೆಂದು ತಿಳಿದುಕೊಳ್ಳಬೇಕು? ನಿಮ್ಮ ನಿಷ್ಕ್ರಿಯತೆ ವಿದ್ಯಾರ್ಥಿಗಳ ಜೀವನದಲ್ಲಿ ಅದೆಂತಹ ಬಿರುಗಾಳಿಯನ್ನು ತಂದೊಡ್ಡುತ್ತದೆಂದು ನೀವು ಊಹಿಸಿದಂತಿಲ್ಲ.
ಅಂಕಪಟ್ಟಿಯ ದ್ವಿತೀಯ ಪ್ರತಿ ದೊರೆಯಲು ಇನ್ನೇನು ಮಾಡಬೇಕು?

ನಿಮ್ಮ ವಿಶ್ವಾಸಿ,
ರಾಮಮೂರ್ತಿ ಕೆ.
ದಿನಾಂಕ: 01-01-2003

ಯಥಾ ಪ್ರತಿ: ಬಳಕೆದಾರರ ವೇದಿಕೆ, ಬಸ್ರೂರು. 576 211.
ವೇದಿಕೆಯ ಬೆಂಬಲ: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಸ್ಪಂದಿಸದಿರುವುದರಿಂದ ಅಂಕಪಟ್ಟಿಯ ದ್ವಿತೀಯ ಪ್ರತಿಯನ್ನು ಗಳಿಸಲು ರಾಮಮೂರ್ತಿ ಹೋರಾಟವನ್ನೆ ನಡೆಸಬೇಕಾಗಿದೆ!
ನಿಗದಿತ ಅರ್ಜಿ, ಅಫಿದಾವಿತ್, ಬ್ಯಾಂಕ್ ಹುಂಡಿಗಳನ್ನು ನೀಡಿ ವರ್ಷಗಳು ಉರುಳಿದರೂ ಅಂಕಪಟ್ಟಿಯ ಪ್ರತಿ ದೊರೆತಿಲ್ಲ.
ಮಂಡಳಿಯ ನಿರ್ದೇಶಕರಿಗೆ ವೇದಿಕೆಯು ಪತ್ರವನ್ನು ಬರೆದಿದೆ. ಆದರೆ ಸಮಸ್ಯೆ ಪರಿಹಾರಗೊಂಡಿಲ್ಲ. ಶಿಕ್ಷಣ ಸಚಿವರಿಗೆ ದೂರು ಸಲ್ಲಿಸುವ ಮುನ್ನ ನಿರ್ದೇಶಕರು ಅರ್ಜಿದಾರ ರಾಮಮೂರ್ತಿಯವರಿಗೆ ಅವರ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದ್ವಿತೀಯ ಪ್ರತಿಯನ್ನು ಇನ್ನಷ್ಟು ವಿಳಂಬಿಸದೆ ಒದಗಿಸಬೇಕಾಗಿದೆ.

ಪ್ರಾತಿನಿಧಿಕ ಫೋಟೋ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ

ಸಂಗ್ರಹ: ಬಳಕೆದಾರರ ಶಿಕ್ಷಣ, 20-01-2003