ಹಕ್ಕು ಹೋರಾಟ 19: ಮಂಗಳೂರು ಕೆಜಿಐಡಿಯವರ ವಿಕ್ರಮ ಮುಂಗಡ ರಶೀದಿ ಪಡೆದು 3 ವರ್ಷವಾದರೂ ಹಣ ಪಾವತಿ ಮಾಡಲಿಲ್ಲ

ಪಾಲಿಸಿಗಳ ಮೇಲೆ ಸಾಲ ಮಂಜೂರು ಮಾಡುವಾಗ, ಫಲಪ್ರದ ಮೊಬಲಗು ನೀಡುವಾಗ, ಬೋನಸ್ ಹಣ ಪಾವತಿಸುವಾಗ ಕೆಜಿಐಡಿ ಕಚೇರಿಯು ಪಾಲಿಸಿದಾರರಿಗೆ ಕಿರುಕುಳ ನೀಡುವುದು ಮನೆಮಾತಾಗಿದೆ. ಆದರೆ ಕೆಲವು ಮಂದಿ ಪಾಲಿಸಿದಾರರಿಗೆ ಏನೂ ವಿಳಂಬವಿಲ್ಲದೆ ಮತ್ತು ಯಾವ ಆಕ್ಷೇಪಣೆಯನ್ನೂ ಹಾಕದೆ ತಕ್ಷಣ ಹಣ ಪಾವತಿ ಮಾಡುವುದೂ ಈ ಅಧಿಕಾರಿಗಳಿಗೆ ತಿಳಿದಿದೆ. ತಕ್ಷಣ ಹಣ ಪಡೆಯಲು ಏನು ಮಾಡಬೇಕೆಂದು ಆ ಪಾಲಿಸಿದಾರರಿಗೂ ತಿಳಿದಿದೆ. ಪಾಪ ಏನು ಮಾಡಬೇಕೆಂಬ ‘ಗುಟ್ಟು’ ತಿಳಿಯದ ಅಮಾಯಕರು ಕಿರುಕುಳಕ್ಕೆ ಒಳಗಾಗುತ್ತಾರೆ. ಹೀಗೆ ಶೋಷಣೆಗೊಳಗಾದ ನಿವೃತ್ತ ಶಿಕ್ಷಕರೊಬ್ಬರ ಕತೆ ಓದಿ.

ಬಿ. ಮಂಜಯ್ಯ ಇವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೈಂದೂರು ಇಲ್ಲಿ ಶಿಕ್ಷಕರಾಗಿದ್ದು ಈಗ ನಿವೃತ್ತರಾಗಿದ್ದಾರೆ. ವೃತ್ತಿಯಲ್ಲಿರುವಾಗಲೇ ಅಂದರೆ 1995 ನವೆಂಬರ್ ತಿಂಗಳಲ್ಲಿಯೇ ಇವರ ಕೆಜಿಐಡಿ ವಿಮಾ ಪಾಲಿಸಿ
ಫಲಪ್ರದಗೊಂಡಿತ್ತು. ಕ್ಲೇಮ್ ಸಲ್ಲಿಸಿ ಒಂದು ತಿಂಗಳ ನಂತರ ಫಲಪ್ರದ ಮೊಬಲಗು ಪಾವತಿಯಾಗಿತ್ತು. ಆದರೆ ಅದರೊಂದಿಗೆ ಬೋನಸ್ ಹಣ ಕೊಟ್ಟಿರಲಿಲ್ಲ. ಬೋನಸ್ ಹಣವನ್ನು ಹಿಂದಿನಿಂದ ಕಳುಹಿಸಲಾಗುವುದೆಂದು ವಿಮಾಧಿಕಾರಿಗಳು ತಿಳಿಸಿದ್ದರು.

ಮಂಜಯ್ಯ ಇವರು ಮಂಗಳೂರು ವಿಮಾಧಿಕಾರಿಯವರಿಗೆ ಪತ್ರ ಬರೆದು ಬೋನಸ್ ಹಣ ಕಳುಹಿಸಿಕೊಡುವಂತೆ ಕೇಳುತ್ತಲೇ ಇದ್ದರು. ಅಂತೂ 1997ರ ಮಧ್ಯ ಭಾಗದಲ್ಲಿ ಮಂಗಳೂರು

ವಿಮಾಧಿಕಾರಿಯವರು ಬೋನಸ್ ಹಣದ ಬಗ್ಗೆ ಪಾವತಿ ರಶೀದಿಯೊಂದನ್ನು ಕಳುಹಿಸಿಕೊಟ್ಟು ಇದಕ್ಕೆ ಸ್ಟಾಂಪ್ ಅಂಟಿಸಿ ದಸ್ಕತು ಮಾಡಿ ಕಳುಹಿಸುವಂತೆ ತಿಳಿಸಿದರು. ಮಂಜಯ್ಯನವರು ಹಣ ಬಂದಷ್ಟೇ ಸಂತೋಷದಿಂದ ಪಾವತಿ ರಶೀದಿಗೆ ದಸ್ಕತು ಹಾಕಿ ಕಳುಹಿಸಿ ಕೊಟ್ಟರು. ಆದರೆ ರಶೀದಿ ಕಳುಹಿಸಿಕೊಟ್ಟು 6 ತಿಂಗಳು ಕಾದರೂ ಬೋನಸ್ ಹಣದ ಸುದ್ದಿ ಇಲ್ಲ.

ತಾರೀಕು- 9-1-98ರಲ್ಲಿ ಅವರು ಮಂಗಳೂರು ವಿಮಾಧಿಕಾರಿಯವರಿಗೆ ಇನ್ನೊಂದು ಪತ್ರ ಬರೆದು ಅದರ ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿಕೊಟ್ಟರು. ಇವರಿಗೆ ಕೆಜಿಐಡಿಯಿಂದ ಉತ್ತರ ಬಾರದಿರುವುದರಿಂದ ವೇದಿಕೆಯು ಅನುಸರಣಾ ಪತ್ರವೊಂದನ್ನು ಬರೆದು ಕೇಳಿತು. ಇದಕ್ಕೂ ಉತ್ತರ ಸಿಗಲಿಲ್ಲ. ವೇದಿಕೆ ಇನ್ನೊಂದು ಜ್ಞಾಪನಾ ಪತ್ರ ಬರೆಯಿತು. ತಾ. 5-4-1998ರ ಬಳಕೆದಾರರ ಶಿಕ್ಷಣ ಪತ್ರಿಕೆಯಲ್ಲಿ “ಮಿತಿ ಮೀರುತ್ತಿರುವ ಕೆಜಿಐಡಿಯ ಕಿರುಕುಳ” ಎಂಬ
ಶಿರೋನಾಮೆಯಡಿಯಲ್ಲಿ ಮಂಜಯ್ಯನವರ ಬೋನಸ್ ಪ್ರಕರಣದ ಕುರಿತು ಲೇಖನ ಪ್ರಕಟಿಸಿತು. ಮಂಜಯ್ಯ ಇವರು ಈ ಸಲುವಾಗಿ ಅನೇಕ ಪತ್ರಗಳನ್ನು ಬರೆದಿದ್ದಾರೆ. ವೇದಿಕೆ 3 ಪತ್ರಗಳನ್ನು ಬರೆದಿದೆ. ಆದರೆ ಯಾರ ಪತ್ರಕ್ಕೂ ಉತ್ತರ ಕೊಡದೆ
ವಿಮಾಧಿಕಾರಿಗಳು ಮೌನ ತಾಳಿದ್ದಾರೆ. ಜಿಲ್ಲಾ ಪುನರ್ ವಿಂಗಡನೆಯಾದ ಮೇಲೆ ಇವರ ಕಡತವು ಉಡುಪಿ ಜಿಲ್ಲಾ ವಿಮಾಧಿಕಾರಿಯವರ ಕಚೇರಿಗೆ ವರ್ಗಾವಣೆಗೊಂಡಿರಬಹುದೆಂದು ಭಾವಿಸಿ ವೇದಿಕೆಯು 20-7-2000ದಂದು ಉಡುಪಿ ಜಿಲ್ಲಾಧಿಕಾರಿಯವರಿಗೆ ಒಂದು ಪತ್ರ ಬರೆದು ಕೇಳಿತು. ಆದರೆ ಇವರಿಂದಲೂ ಈ ತನಕ ಉತ್ತರ ಬಂದಿಲ್ಲ.

ತಾನು ಸ್ಟಾಂಪ್ ಹಚ್ಚಿದ ರಶೀದಿ ಕಳುಹಿಸಿಕೊಟ್ಟು ಇದೀಗ ಮೂರು ವರ್ಷ ದಾಟಿದೆ. ಹಲವಾರು ಪತ್ರ ಬರೆದು ಕೇಳಲಾಗಿದೆ. ಯಾರೂ ಮಾತನಾಡದಿರುವುದನ್ನು ನೋಡಿದರೆ ತನ್ನ ಹಣ ದುರುಪಯೋಗಗೊಂಡಿರುವ ಸಾಧ್ಯತೆ ಇದೆಯೇ ಎಂದು ಬಳಕೆದಾರರು ಅನುಮಾನ ಪಡುವಂತಾಗಿದೆ. ಇದೀಗ ವೇದಿಕೆಯು ತಾರೀಕು- 16-11-2000ದಂದು ಬೆಂಗಳೂರಿನಲ್ಲಿರುವ ಕೆಜಿಐಡಿ ನಿರ್ದೇಶಕರಿಗೊಂದು ಪತ್ರ ಬರೆದು, ಈ ಕುರಿತು ತನಿಖೆ ನಡೆಸಿ ಮಂಜಯ್ಯನವರಿಗೆ ನ್ಯಾಯ ದೊರಕಿಸಿಕೊಡುವಂತೆ ಕೇಳಿದೆ. ಉತ್ತರ ನಿರೀಕ್ಷಿಸಲಾಗಿದೆ.

ಪ್ರಾತಿನಿಧಿಕ ಫೋಟೋ: ಸರಕಾರಿ ಕಚೇರಿಯಲ್ಲಿ ರಾಶಿ ಬಿದ್ದಿರುವ ಕಡತಗಳು

ಸಂಗ್ರಹ: ಬಳಕೆದಾರರ ಶಿಕ್ಷಣ, 05-12-2000