ಕುಂದಾಪುರ ತಾಲೂಕು ಹಂಗ್ಲೂರಿನ ಶ್ರೀ ಹೆಚ್. ಸತ್ಯನಾರಾಯಣ ರಾವ್ ಎನ್ನುವವರ ಮನೆ ಮತ್ತು ಬಚ್ಚಲು ಮನೆಯ ಮೇಲೆ ನೆರೆಮನೆಯವರ ತೆಂಗಿನ ಮರವೊಂದು ಎರಗಿತ್ತು. ಆಗಾಗ ಅದರ ಕಾಯಿ ಮತ್ತು ಹೆಡೆಗಳು ಬಿದ್ದು ಹಂಚು ಒಡೆದು ಹೋಗಿ ಇವರಿಗೆ ಅಪಾರ ನಷ್ಟವುಂಟಾಗುತ್ತಿತ್ತು. ಇಂತಹ ಅಪಾಯಕಾರಿ ಮರವನ್ನು ಕಡಿಸಬೇಕೆಂಬ ಮನವಿಗೆ ನೆರೆಯವರು ಕಿವಿಗೊಡದಿದ್ದುದರಿಂದ 1983ರಲ್ಲಿ ಕುಂದಾಪುರ ಅಸಿಸ್ಟೆಂಟ್ ಕಮೀಷನರಿಗೆ ದೂರು ನೀಡಿದರು. ಆಸಿಸ್ಟೆಂಟ್ ಕಮೀಷನರು
ಸ್ಥಳೀಯ ಪಂಚಾೈತ್ ಕಾರ್ಯದರ್ಶಿಯವರಿಗೆ ಆದೇಶ ನೀಡಿ ಕೂಡಲೇ ಮರ ಕಡಿಸುವಂತೆ ತಿಳಿಸಿದರು. ಆದರೆ ನೆರೆಮನೆಯವರು ಆಸಿಸ್ಟೆಂಟ್ ಕಮೀಷನರಿಗೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದರು.
ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಆಸಿಸ್ಟೆಂಟ್ ಕಮೀಷನರು 1997ರಲ್ಲಿ ಅರ್ಜಿಯನ್ನು ತಿರಸ್ಕರಿಸಿ ಪಂಚಾೈತ್ ಕಾರ್ಯದರ್ಶಿಯವರಿಗೆ ಆದೇಶ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಎಂಟು ತಿಂಗಳ ತರುವಾಯ ಪಂಚಾೈತ್ ಸಭೆಯಲ್ಲಿ ನೆರೆಮನೆಯವರು ಸದ್ರಿ ಮರಕ್ಕೆ ಸರಿಗೆ ಹಾಕಿ ಎಳೆದು ಕಟ್ಟುವಂತೆ ತಿಳಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಆದರೆ ಪಂಚಾೈತ್ ನಿರ್ಣಯವೂ ಅನುಷ್ಠಾನಕ್ಕೆ ಬರಲಿಲ್ಲ. ನಿರುಪಾಯರಾದ ಹೆಚ್. ಸತ್ಯನಾರಾಯಣ ರಾಯರು ಉಡುಪಿ ಜಿಲ್ಲಾಧಿಕಾರಿಯವರಿಗೆ ಒಂದು ಪತ್ರ ಬರೆದು ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿಕೊಟ್ಟರು. ಮಾನ್ಯ ಜಿಲ್ಲಾಧಿಕಾರಿಯವರು ಕುಂದಾಪುರ ತಾಲೂಕು ಪಂಚಾೈತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ಪತ್ರ ಬರೆದು ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ತನಗೆ ವರದಿ ಕಳುಹಿಸಿಕೊಡಬೇಕೆಂದು ತಿಳಿಸಿದರು.
ಬಸ್ರೂರು ಬಳಕೆದಾರರ ವೇದಿಕೆಯು ತನ್ನ ಪತ್ರಿಕೆಯ 20-3-99ರ ಸಂಚಿಕೆಯಲ್ಲಿ ಈ ಪ್ರಕರಣದ ಕುರಿತು ಒಂದು ಲೇಖನ ಪ್ರಕಟಿಸಿ ಪಂಚಾೈತ್ ಅಧಿನಿಯಮ 1993ರ ಪ್ರಕರಣ 74 ಎಂದರೇನು ಎಂಬುದನ್ನೂ ಪ್ರಕಟಿಸಿತು. ಈ ಅಧಿನಿಯಮದಂತೆ ಅಪಾಯಕಾರಿ ಮರ ಅಥವಾ ಹಳೆಯ ಕಟ್ಟಡಗಳನ್ನು ಕೆಡವಿ ಜನರ ರಕ್ಷಣೆ ಮಾಡಬಹುದು ಎಂದು ಸ್ವಷ್ಟವಾಗಿ ತಿಳಿಸಿರುವುದರಿಂದ ಪಂಚಾೈತ್ ಹಿಂದೆ ಮುಂದೆ ನೋಡುವುದರ ಔಚಿತ್ಯವೇನು ಎಂದು ಕೇಳಿತು. ಪರಿಣಾಮವಾಗಿ ಸ್ಥಳೀಯ ಪಂಚಾೈತ್ ಕಾರ್ಯದರ್ಶಿಯವರು ಪೊಲೀಸ್ ರಕ್ಷಣೆ ಸಹಿತ 22-9-99ರಲ್ಲಿ ಸದ್ರಿ ಅಪಾಯಕಾರಿ ಮರವನ್ನು ಕಡಿಸಿ ತೆಗೆದಿದ್ದಾರೆ ಎಂದು ಹೆಚ್. ಸತ್ಯನಾರಾಯಣ ರಾಯರು ವೇದಿಕೆಗೆ ಪತ್ರ ಬರೆದು ತಿಳಿಸಿದ್ದಾರೆ. ಹೆಚ್. ಸತ್ಯನಾರಾಯಣ ರಾಯರ ಛಲ ಬಿಡದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಪ್ರಾತಿನಿಧಿಕ ಫೋಟೋ: ಅಪಾಯಕಾರಿ ತೆಂಗಿನ ಮರವನ್ನು ನೆಲಮಟ್ಟದಿಂದ ನಾಲ್ಕಡಿ ಎತ್ತರದಲ್ಲೇ ಕಡಿಸಿರುವುದು.
ಸಂಗ್ರಹ: ಬಳಕೆದಾರರ ಶಿಕ್ಷಣ, 20-11-1999