ಹಕ್ಕು ಹೋರಾಟ 18: ಹದಿನಾರು ವರ್ಷ ನಿರಂತರ ಹೋರಾಟ (ಅ) ಮಾಡಿನ ಮೇಲೆ ಎರಗಿದ್ದ ತೆಂಗಿನ ಮರ ಕಡಿಸಲಿಲ್ಲ

ಕುಂದಾಪುರ ತಾಲೂಕು ಹಂಗ್ಲೂರಿನ ಹೆಚ್. ಸತ್ಯನಾರಾಯಣ ರಾವ್ ಎನ್ನುವವರು ಇಂದಿಗೆ ಸುಮಾರು 16 ವರ್ಷಗಳ ಹಿಂದೆ ಒಂದು ನ್ಯಾಯಬದ್ಧ ಹೋರಾಟ ಪ್ರಾರಂಭಿಸಿದರು. ನೆರೆಮನೆಯವರ ತೆಂಗಿನ ಮರವೊಂದು ಇವರ ಮನೆ ಮತ್ತು ಬಚ್ಚಲು ಮನೆಯ ಮಾಡಿನ ಮೇಲೆ ವಾಲಿಕೊಂಡಿತ್ತು. ತೆಂಗಿನಕಾಯಿ ಹಾಗೂ ಹೆಡೆಗಳು ಆಗಾಗ ಮಾಡಿನ ಮೇಲೆ ಬಿದ್ದು ಹಂಚು ಮತ್ತು ಪಕ್ಕಾಸುಗಳು ತುಂಡಾಗಿ ವಾರ್ಷಿಕ ಸುಮಾರು 200- 300ರೂ.ಗಳ ನಷ್ಟವುಂಟಾಗುತ್ತಿತ್ತು. ನೆರೆಮನೆಯವರು ಇವರ ಬಾಯ್ದೆರೆ ಮಾತಿಗೆ ಕಿವಿಗೊಡದಿದ್ದಾಗ 1983 ಜನವರಿಯಲ್ಲಿ ಕುಂದಾಪುರ ಆಸಿಸ್ಟೆಂಟ್ ಕಮೀಷನರಿಗೆ ಒಂದು ಪತ್ರ ಬರೆದು ತನಗಾಗುವ ನಷ್ಟವನ್ನು ವಿವರಿಸಿದ್ದಲ್ಲದೆ, ಮನೆಯಲ್ಲಿರುವ ಜನ, ಜಾನುವಾರುಗಳಿಗೆ ಪ್ರಾಣ ಹಾನಿಯಾಗುವ ಸಂಭವವನ್ನೂ ತಿಳಿಸಿದ್ದರು, ಸ್ವತ: ತನಿಖೆ ನಡೆಸಿ ತನಗೆ ನ್ಯಾಯವೊದಗಿಸಬೇಕೆಂದು ಕೇಳಿಕೊಂಡಿದ್ದರು.

ಕೋರ್ಟಿನ ಮೆಟ್ಟಿಲು ಹತ್ತಿದ ಪ್ರಕರಣ
ಆಗಿನ ಆಸಿಸ್ಟೆಂಟ್ ಕಮೀಷನರರ ಆದೇಶದ ಮೇರೆಗೆ ಹಂಗ್ಲೂರು ಪಂಚಾಯತು ಕಾರ್ಯದರ್ಶಿಯವರು ಸ್ಥಳ ಪರಿಶೀಲನೆ ನಡೆಸಿ ಮರವನ್ನು ಕೂಡಲೇ ಕಡಿಸಬೇಕೆಂದು ಎಚ್ಚರಿಕೆ ಕೊಟ್ಟು ಹೋದರು. ಆದರೆ ನೆರೆಮನೆಯವರು ಆ ಎಚ್ಚರಿಕೆಯ ವಿರುದ್ಧ ಕುಂದಾಪುರ ಆಸಿಸ್ಟೆಂಟ್ ಕಮೀಷನರ ಕೋರ್ಟಿನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದರು.
ಇದು ತಾತ್ಕಾಲಿಕ ತಡೆಯಾಜ್ಞೆಯಾಗಿತ್ತು. ಮೇಲ್ಮನವಿ ಅರ್ಜಿಯ ವಿಚಾರಣೆ ಮುಗಿಸಿ ಮಾನ್ಯ ಆಸಿಸ್ಟೆಂಟ್ ಕಮೀಷನರ್ ಕುಂದಾಪುರ ಇವರು ತಾ. 20-10-97ರಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಿ ಆದೇಶ ನೀಡಿದರು. ಅವರು ತಮ್ಮ ತೀರ್ಪಿನಲ್ಲಿ ಹಂಗ್ಲೂರು ಗ್ರಾಮ ಪಂಚಾೈತ್ ಈ ವಿಷಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ಪಂಚಾೈತ್ ತೀರ್ಮಾನ
ಮೇಲಿನ ತೀರ್ಪು ಹೊರಬಿದ್ದು ಸುಮಾರು 8 ತಿಂಗಳ ತರುವಾಯ ಹಂಗ್ಲೂರು ಪಂಚಾೈತ್ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವೊಂದನ್ನು ಕೈಗೊಳ್ಳಲಾಯಿತು. ಅದರ ಪ್ರಕಾರ ನೆರೆಮನೆಯವರು ವಿವಾದಿತ ತೆಂಗಿನಮರಕ್ಕೆ ಸರಿಗೆ ಹಾಕಿ ಎಳೆದು ಕಟ್ಟಬೇಕಂತ ತೀರ್ಮಾನಿಸಿ ಅವರಿಗೆ ತಿಳಿಸಲಾಯ್ತು. ಆದರೆ ಪಂಚಾೈತ್ ನಿರ್ಣಯವೂ ಅನುಷ್ಠಾನಕ್ಕೆ ಬರಲಿಲ್ಲ. ತಾ. 4-8-98ರಲ್ಲಿ ಪಂಚಾಯತು ಒಂದು ನೋಟೀಸು ನೀಡಿ ನೀವು ಈ ತನಕ ಸರಿಗೆ ಹಾಕಿ ಎಳೆದು ಕಟ್ಟಿರುವುದಿಲ್ಲವೆಂದು ತಿಳಿದು
ಬಂದಿರುವುದರಿಂದ ಪಂಚಾೈತ್ ಅಧಿನಿಯಮ 1993 ಪ್ರಕರಣ 74ರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. (74ನೇ ಪ್ರಕರಣ ಎಂದರೇನು? ವಿವರಣೆ ಲೇಖನದ ಕೊನೆಯಲ್ಲಿದೆ, ನೋಡಿರಿ)

ಪಂಚಾೈತ್ ನೋಟಿಸಿನಿಂದಾಗಲೀ, ಆಸಿಸ್ಟೆಂಟ್ ಕಮೀಷನರರ ತೀರ್ಪಿನಿಂದಾಗಲೀ ಏನೂ ಫಲಿತಾಂಶ ಸಿಗದಿದ್ದಾಗ  ಸತ್ಯನಾರಾಯಣ ರಾಯರು ಉಡುಪಿ ಜಿಲ್ಲಾಧಿಕಾರಿಯವರ ಮೊರೆ ಹೋದರು. ಜಿಲ್ಲಾಧಿಕಾರಿಯವರಿಗೆ ತಾ-16-12-98ರಂದು ಒಂದು ಪತ್ರ ಬರೆದು ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿದ್ದಾರೆ. ಇದೀಗ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಕುಂದಾಪುರ ತಾಲೂಕು ಪಂಚಾೈತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ಈ ಸಂಬಂಧ ಒಂದು ಪತ್ರ ಬರೆದಿದ್ದಾರೆ. ಸದ್ರಿ ಮನವಿಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ವರದಿಯನ್ನು ತಮ್ಮ ಕಚೇರಿಗೆ ಒಪ್ಪಿಸಬೇಕೆಂದೂ, ಅರ್ಜಿದಾರರಿಗೆ ಹಿಂಬರಹ ನೀಡಬೇಕೆಂದೂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ ಹದಿನಾರು ವರ್ಷಗಳಿಂದ ನಷ್ಟ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಾ ಬಂದ ಸತ್ಯನಾರಾಯಣ ರಾಯರು ಇನ್ನಾದರೂ ತನ್ನ ಸಮಸ್ಯೆ ಪರಿಹಾರವಾದೀತೆಂಬ ನಿರೀಕ್ಷೆಯಲ್ಲಿದ್ದಾರೆ. ತಾಲೂಕು ಪಂಚಾೈತ್ ಕಾರ್ಯ ನಿರ್ವಹಣಾ ಅಧಿಕಾರಿಯವರು ಕೈಗೊಳ್ಳುವ ಕ್ರಮವೇನೆಂದು ಕಾದು ನೋಡಬೇಕಾಗಿದೆ.

74ನೇ ಪ್ರಕರಣ ಎಂದರೇನು?

1. ಮಂಡಲ ಪಂಚಾೈತಿಗೆ ಯಾವುದೇ ಸಮಯದಲ್ಲಾದರೂ ಯಾವುದೇ ಕಟ್ಟಡ ಅಥವಾ ಅದರ ಒಂದು ಭಾಗ ಅಥವಾ
ಯಾವುದೇ ಮರ ಅಥವಾ ಮರದ ಕೊಂಬೆ ಹಾಳಾದ ಸ್ಥಿತಿಯಲ್ಲಿದೆಯೆಂದು ಅಥವಾ ಬೀಳಬಹುದೆಂದು ಕಂಡು
ಬಂದರೆ ಅಥವಾ ಅಂತಹ ಕಟ್ಟಡ ಅಥವಾ ಅದರ ಭಾಗ ಅಥವಾ ಮರ ಅಥವಾ ಅಂತಹ ಮರದ ಕೊಂಬೆ - ಇವುಗಳಡಿ
ವಾಸಮಾಡುತ್ತಿರುವ, ಆಶ್ರಯಿಸಿರುವ ಅಥವಾ ಹಾದು ಹೋಗುವ ಯಾವುದೇ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಅಪಾಯಕರವೆಂದು ಕಂಡು ಬಂದರೆ ಅಂತಹ ಕಟ್ಟಡದ ಅಥವಾ ಮರದ ಮಾಲೀಕನಿಗೆ ಮಂಡಲ ಪಂಚಾೈತಿಯು ಲಿಖಿತ
ನೋಟೀಸನ್ನು ನೀಡಿ ಅಂತಹ ಕಟ್ಟಡ ಅಥವಾ ಅದರ ಒಂದು ಭಾಗ ಅಥವಾ ಅಂತಹ ಮರ ಅಥವಾ ಆ ಮರದ ಕೊಂಬೆಯನ್ನು -
(ಅ) ಕೆಡವಲು, ಬಗ್ಗಿಸಲು ಅಥವಾ ಕತ್ತರಿಸಲು ಅಥವಾ
(ಆ) ಭದ್ರಪಡಿಸಲು ; ಅಥವಾ
(ಇ) ತೆಗೆದು ಹಾಕಲು ; ಅಥವಾ
(ಈ) ದುರಸ್ತು ಮಾಡಲು ಹಾಗೂ ಅದರಿಂದ ಉಂಟಾಗಬಹುದಾದ ಎಲ್ಲ ರೀತಿಯ ಅಪಾಯವನ್ನು ನಿವಾರಿಸಲು ಅಗತ್ಯಪಡಿಸಬಹುದು.
2. ಮಂಡಲ ಪಂಚಾೈತಿಗೆ ಹಾಳಾಗುತ್ತಿರುವ ಅಥವಾ ಬೀಳುವಂತಿರುವ ಒಂದು ಕಟ್ಟದ ಅಥವಾ ಮರದಿಂದ ಅಪಾಯವು ಖಚಿತವೆಂದು ಕಂಡು ಬಂದರೆ ಅದು ನೋಟಿಸಿನ ಅವಧಿ ಮುಗಿಯುವ ಮೊದಲೇ ಸಂದರ್ಭಾನುಸಾರವಾಗಿ ಅಂತಹ ಕಟ್ಟಡ ಅಥವಾ ಮರದ ಸುತ್ತ ಬೇಲಿಯನ್ನು ಹಾಕಲು, ಕೆಡವಲು, ಬಗ್ಗಿಸಲು, ಕತ್ತರಿಸಲು, ಭದ್ರಪಡಿಸಲು ಅಥವಾ ದುರಸ್ತು ಮಾಡಲು ಕ್ರಮವನ್ನು ಕೈಗೊಳ್ಳಬಹುದು ಇಲ್ಲವೇ ಅಪಾಯವನ್ನು ತಡೆಗಟ್ಟಲು ಅಗತ್ಯವಾದಂತಹ ಇನ್ನಾವುದೇ ಕ್ರಮಗಳನ್ನು ಕೈಗೊಳ್ಳಬಹುದು.
3. ಈ ಸಂಬಂಧವಾಗಿ ಪಂಚಾೈತಿಯು ವಹಿಸಬೇಕಾದ ಯಾವುದೇ ವೆಚ್ಚಗಳನ್ನು ಸಂದರ್ಭಾನುಸಾರವಾಗಿ ಕಟ್ಟಡದ ಅಥವಾ ಸ್ವಾಧೀನದಾರನಿಂದ 16ನೇ ಪ್ರಕರಣದ ಮೇರೆಗೆ ವಿಧಿಸಬಹುದಾದ ತೆರಿಗೆಯಾಗಿ ವಸೂಲು ಮಾಡಬಹುದು.
4. ಪಂಚಾೈತಿಯು ಸಂದರ್ಭಾನುಸಾರವಾಗಿ ಮಾಲೀಕನಿಗೆ ಅಥವಾ ಸ್ವಾಧೀನದಾರನಿಗೆ ಯಾವುದೇ ಆಕ್ಷೇಪಣೆ ಸಿಂಧುವಲ್ಲವೆಂದು ಅಥವಾ ಗಣನೀಯವಲ್ಲವೆಂದು ಮನಗಂಡು ಅನಂತರ ಉಪಪ್ರಕರಣ (1) ರ ಮೇರೆಗೆ ನೋಟೀಸನ್ನು ಜ್ಯಾರಿಗೊಳಿಸತಕ್ಕದ್ದು.
ಟಿಪ್ಪಣಿ
ಪಂಚಾೈತಿ ವ್ಯಾಪ್ತಿಯಲ್ಲಿರುವ ಪ್ರದೇಶದ ಸ್ಥಳೀಯ ಕಲ್ಯಾಣ ಸಂಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತದೆ.. ಅಂದ ಮೇಲೆ ಅಲ್ಲಿನ ಜನರ ಜೀವ, ಆಸ್ತಿಯನ್ನು ಕಾಯ್ದುಕೊಂಡು ಬರುವುದು ಮತ್ತು ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಪಂಚಾೈತಿಯ ಹೊಣೆ. ಆದ್ದರಿಂದ ಯಾವುದೇ ವ್ಯಕ್ತಿಯ ಪ್ರಾಣಕ್ಕೆ ಅಥವಾ ಆಸ್ತಿಗೆ, ಹಾಳಾಗುತ್ತಿರುವ ಕಟ್ಟಡ, ಮರ ಇತ್ಯಾದಿಗಳಿಂದ ಅಪಾಯ ಎಂದು ಮನಗಂಡರೆ ಅಂತಹ ಅಪಾಯವನ್ನು ನಿವಾರಿಸಲು ಅದು ಈ ಪ್ರಕರಣದ ಮೇರೆಗೆ ನೋಟೀಸು ನೀಡಿ
ಕ್ರಮ ಕೈಗೊಳ್ಳಬಹುದು.

ಪ್ರಾತಿನಿಧಿಕ ಫೋಟೋ: ಮನೆಯ ಮೇಲೆ ಯಾವುದೇ ಕ್ಷಣದಲ್ಲಿ ಬೀಳಬಹುದಾದ ತೆಂಗಿನ ಮರ
ಸಂಗ್ರಹ: ಬಳಕೆದಾರರ ಶಿಕ್ಷಣ, 20-03-1999