ಗಡ್ಡ ಬೋಳಿಸಲು ನೀವು ಕ್ಷೌರಿಕನನ್ನು ಕೇಳಿದಾಗ ಆತ “ತಲೆ ಬೋಳಿಸಿಕೊಂಡರೆ ಮಾತ್ರ ನಾನು ನಿಮ್ಮ ಗಡ್ಡ ಬೋಳಿಸುವುದು” ಎನ್ನುವ ಶರತ್ತು ವಿಧಿಸಿದರೆ ಏನು ಮಾಡುತ್ತೀರಿ? ಚಿಮಿಣಿ ಎಣ್ಣೆ ಬೇಕಾದರೆ ಅಕ್ಕಿಯನ್ನು ಖರೀದಿಸಲೇಬೇಕು ಎನ್ನುವ ಶರತ್ತು ವಿಧಿಸಿ ಬಳಕೆದಾರನಿಗೆ ಹೊರೆಯಾಗಿದ್ದ ಮುಲ್ಕಿ ಸಹಕಾರಿ ಬ್ಯಾಂಕ್‍ನ ನ್ಯಾಯ ಬೆಲೆ ಅಂಗಡಿಯ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಂಗಳೂರು ಇಲ್ಲಿನ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯನ್ನೇ ನೀಡಬೇಕಾಯಿತು.
ಮೂಲ್ಕಿ ಸಹಕಾರಿ ಬ್ಯಾಂಕ್ ನ್ಯಾಯ ಬೆಲೆ ಅಂಗಡಿಯು ಪಡಿತರ ಚೀಟಿದಾರರ ಮೇಲೆ ಹೇರುತ್ತಿದ್ದ ಶರತ್ತು ವಿರುದ್ಧ ಸ್ಥಳೀಯರು ಬಸ್ರೂರು ಬಳಕೆದಾರರ ವೇದಿಕೆಗೆ ತಮ್ಮ ಆತಂಕವನ್ನು ಹೀಗೆ ವಿವರಿಸಿದ್ದರು.
ದಯಾವತಿ, D/o. ಸುಶೀಲ,
ಕಮಲ ಸದನ, ಕಂಬಳ ಗ್ರಾಮ, ಮುಲ್ಕಿ - ಇವರಿಂದ
ಬಳಕೆದಾರರ ವೇದಿಕೆ, ಬಸ್ರೂರು- ಇವರಿಗೆ
ಮಾನ್ಯರೇ,
ಮೂಲ್ಕಿ ನಿವಾಸಿಗಳಾಗಿರುವ ನಮಗೆ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ, ಗೋಧಿ, ಚಿಮಣಿ ಎಣ್ಣೆ, ಸಕ್ಕರೆ ಇತ್ಯಾದಿ ಆಹಾರವಸ್ತುಗಳನ್ನು ಮೂಲ್ಕಿ ಸಹಕಾರಿ ಬ್ಯಾಂಕ್‍ನ ನ್ಯಾಯ ಬೆಲೆ ಅಂಗಡಿ ವಿತರಿಸುತ್ತಿದೆ. ಈ ನ್ಯಾಯ ಬೆಲೆ ಅಂಗಡಿಯಲ್ಲಿ
ವಿತರಿಸಲಾಗುತ್ತಿರುವ ಅಕ್ಕಿ, ಗೋಧಿ ಹಾಗೂ ಸಕ್ಕರೆಗಳು ತೀರಾ ಕೀಳು ಮಟ್ಟದಲ್ಲಿದ್ದು ಅವುಗಳನ್ನು ಸೇವಿಸುವವರು ತಮ್ಮ ಆರೋಗ್ಯವನ್ನು ಕಳೆದುಕೊಳ್ಳುವ ಅಪಾಯವಿದೆ.
ಈ ಕಳಪೆ ಸಾಮಗ್ರಿಗಳನ್ನು ನಾವು ಖರೀದಿಸಲು ನಿರಾಕರಿಸಿ ಚಿಮಿಣಿ ಎಣ್ಣೆ, ಸಕ್ಕರೆ (ಒಳ್ಳೆಯದಿರುವಾಗ) ಖರೀದಿಸಲು ಹೋದಾಗ ಅಕ್ಕಿ ಹಾಗೂ ಗೋಧಿ ಖರೀದಿಸಿದರೆ ಮಾತ್ರ ಚಿಮಿಣಿ ಎಣ್ಣೆ ನೀಡುವುದಾಗಿ “ನ್ಯಾಯ ಬೆಲೆ ಅಂಗಡಿಯವರು ಕಾನೂನು ವಿಧಿಸುತ್ತಾರೆ!
ಘನ ಸರಕಾರ ವಿತರಿಸುವ ಕಳಪೆ ಪಡಿತರವನ್ನು ಕಡ್ಡಾಯವಾಗಿ ಖರೀದಿಸಬೇಕಾಗಿರುವ ಪಾಪಿಗಳಾಗಿರುವ ಬಡ ಜನರಿಗೆ ನೀವಾದರೂ ನ್ಯಾಯವೊದಗಿಸಬಲ್ಲಿರಾ?
ಇತೀ, ದಯಾವತಿ ಹಾಗೂ ಇತರ ಮೂಲ್ಕಿ ನಿವಾಸಿಗಳು
10-9-2002
ಪಡಿತರ ಅವ್ಯವಸ್ಥೆಯ ವಿರುದ್ಧ ಬಳಕೆದಾರರು ಸಲ್ಲಿಸಿರುವ ಈ ದೂರಿನ ಪ್ರತಿಗಳನ್ನು ಬಸ್ರೂರು ಬಳಕೆದಾರರ ವೇದಿಕೆಯು ಮಂಗಳೂರು ಜಿಲ್ಲಾಧಿಕಾರಿಯವರಿಗೆ, ತಹಶೀಲ್ದಾರರಿಗೆ, ಆಹಾರ ಮತ್ತು ನಾಗರಿಕ ಪೂರೈಕೆಯ ಸಹಾಯಕ ನಿರ್ದೇಶಕರು,
(ದ.ಕ.) ಇವರಿಗೆಲ್ಲ ಕಳುಹಿಸಿ ಈ ಪ್ರಕರಣದ ಕುರಿತು ಪ್ರತಿಕ್ರಯಿಸುವಂತೆ ಕೋರಿತು. ಬಳಕೆದಾರರ ವೇದಿಕೆಯ ಪತ್ರಕ್ಕೆ ಸ್ಪಂದಿಸುತ್ತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಎಲ್ಲ ತಹಶೀಲ್ದಾರರುಗಳಿಗೆ ಈ ಬಗ್ಗೆ ಸುತ್ತೋಲೆಯನ್ನು ಕಳುಹಿಸಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿ ನೀಡುತ್ತಿರುವ ಕಿರುಕುಳ ವಿರುದ್ಧ ಕಾನೂನುಕ್ರಮವನ್ನು ಜರುಗಿಸಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಈ ಕುರಿತು ಸದ್ರಿ ಅಧಿಕಾರಿ ನೀಡಿರುವ ಪತ್ರಿಕಾ ಪ್ರಕಟಣೆಯೊಂದು
ಹೀಗಿದೆ:
ಪತ್ರಿಕಾ ಪ್ರಕಟಣೆ
ಮಂಗಳೂರು ತಾಲೂಕು ವ್ಯಾಪ್ತಿಯ ಕೆಲವೊಂದು ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ಖರೀದಿಸಿದರೆ ಮಾತ್ರ ಸಕ್ಕರೆ ಮತ್ತು ಸೀಮೆ ಎಣ್ಣೆಯನ್ನು ವಿತರಿಸುವುದಾಗಿ ಪಡಿತರ ಚೀಟಿದಾರರನ್ನು ಒತ್ತಾಯಿಸುತ್ತಿರುವ ಪ್ರಕರಣಗಳು
ಬೆಳಕಿಗೆ ಬಂದಿದ್ದು ಇಂತಹ ಕ್ರಮವನ್ನು ಅನುಸರಿಸುತ್ತಿರುವ ನ್ಯಾಯಬೆಲೆ ಅಂಗಡಿದಾರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತು ಗೋಧಿ ಖರೀದಿಸಿದಲ್ಲಿ ಮಾತ್ರ ಸಕ್ಕರೆ ಮತ್ತು ಸೀಮೆ ಎಣ್ಣೆ ವಿತರಿಸುವುದಾಗಿ ನ್ಯಾಯ ಬೆಲೆ ಅಂಗಡಿದಾರರು ನಿರ್ಬಂಧ ಹೇರಿದಲ್ಲಿ ಅಂತಹ ನ್ಯಾಯಬೆಲೆ ಅಂಗಡಿದಾರರ ವಿಳಾಸದೊಂದಿಗೆ ದೂರನ್ನು ಸಂಬಂಧಪಟ್ಟ ತಹಶೀಲ್ದಾರರು, ಸಹಾಯಕ ನಿರ್ದೇಶಕರು, ಮಂಗಳೂರು ಇವರಲ್ಲಿ ದಾಖಲಿಸಬೇಕೆಂದು ಪಡಿತರ ಚೀಟಿದಾರರನ್ನು ವಿನಂತಿಸಲಾಗಿದೆ.
-ಉಪನಿರ್ದೇಶಕರು
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ದ.ಕ. ಜಿಲ್ಲೆ, ಮಂಗಳೂರು
ಪ್ರಾತಿನಿಧಿಕ ಫೋಟೋ: ಪಡಿತರ ಧಾನ್ಯ ವಿತರಿಸುತ್ತಿರುವುದು
ಸಂಗ್ರಹ: ಬಳಕೆದಾರರ ಶಿಕ್ಷಣ, 20-11-2002