ಗಣಪತಿ ಮ. ಚಿತ್ರಿಗೆ ಮಠ ಇವರು ಉತ್ತರ ಕನ್ನಡ ಜಿಲ್ಲೆಯ ಹೆಗಡೆ ಎಂಬ ಊರಿನವರು. ಇವರು ಶ್ರೀ ಕಾತ್ಯಾಯಿನಿ ಪ್ರೌಢಶಾಲೆ ಆವರ್ಸಾದಲ್ಲಿ ಸಹಾಯಕ ಶಿಕ್ಷಕರಾಗಿ ತಾ. 21-6-1955ರಲ್ಲಿ ಕೆಲಸಕ್ಕೆ ಸೇರಿ 30-6-56ರ ವರೆಗೆ ಸೇವೆ ಸಲ್ಲಿಸಿದ್ದರು. ಇದರ ನಂತರ ಇವರು ಕುಮಟಾದ ಕಮಲಾ ಬಾಳಿಗಾ ಶಿಕ್ಷಕ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸ ತೊಡಗಿ ತಾ. 31-7-91ರಲ್ಲಿ ಸೇವಾ ನಿವೃತ್ತಿ ಹೊಂದಿದರು. ಅವರ ಪಿಂಚಣಿ ನಿಗದಿಗೊಳಿಸುವಾಗ ಕಾತ್ಯಾಯಿನಿ ಪ್ರೌಢಶಾಲೆಯಲ್ಲಿ ಸಲ್ಲಿಸಿದ ಒಂದು ವರ್ಷದ ಸೇವೆಯನ್ನು ಕೈಬಿಡಲಾಗಿತ್ತು. ಅದನ್ನೂ ಕೂಡಿಸಿ ಹಾಕುತ್ತಿದ್ದರೆ ಅವರಿಗೆ ಪಿಂಚಣಿಯಲ್ಲಿಯೂ, ನಿವೃತ್ತಿ ಉಪಾದಾನ (ಡಿ.ಎಸ್.ಆರ್.ಜಿ.) ಮುಂತಾದ ಸೌಲಭ್ಯಗಳಲ್ಲಿ ಹೆಚ್ಚಳವುಂಟಾಗುತ್ತಿತ್ತು.
ನಿಯಮ ಹೇಗೆ?
ಖಾಸಗಿ ಆಡಳಿತದ ಶಿಕ್ಷಣ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆಯು ಇನ್ನೊಂದು ಆಡಳಿತದಲ್ಲಿ ಸಲ್ಲಿಸಿದ ಸೇವೆಗೆ ಕೂಡಿಸಲ್ಪಡಬೇಕಾದರೆ ಸರಕಾರವು 1985ರಲ್ಲಿ ರಚಿಸಿದ ನಿಯಮವನ್ನು ಅನುಸರಿಸಬೇಕಾಗಿತ್ತು. ಮೊದಲ ಸೇವೆ
ಸಲ್ಲಿಸಿದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಒಂದು ಪ್ರಮಾಣ ಪತ್ರ ನೀಡಿ ಅವರು ಸಲ್ಲಿಸಿದ ಸೇವೆಯನ್ನು ದೃಢೀಕರಿಸಬೇಕಾಗಿತ್ತು. ಹೀಗೊಂದು ನಿಯಮವಿದೆಯೆಂದು ಚಿತ್ರಿಗೆಮಠ ಇವರಿಗೆ ತಿಳಿದಿರಲಿಲ್ಲ. ಪಿಂಚಣಿ ಅರ್ಜಿಯಲ್ಲಿ ಅಂತಹ
ಪ್ರಮಾಣ ಪತ್ರವನ್ನು ಲಗ್ತೀಕರಿಸದೆ ಇರುವುದರಿಂದ ಮಹಾಲೇಖಪಾಲರು ಕಮಲಾ ಬಾಳಿಗಾ ಕಾಲೇಜಿನಲ್ಲಿ ಸಲ್ಲಿಸಿದ ಸೇವೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ನಿವೃತ್ತಿ ವೇತನ ಇತ್ಯಾದಿಗಳನ್ನು ನಿಗದಿಪಡಿಸಿದ್ದರು. ತಾನು ಒಂದು ವರ್ಷದ ಸೇವಾ ಸೌಲಭ್ಯದಿಂದ ವಂಚಿತನಾಗಿದ್ದೇನೆಂದು ಮಹಾಲೇಖಪಾಲರಿಗೆ ಪತ್ರ ಬರೆದು ತಿಳಿಸಿದಾಗಲೇ ತಾನೆಲ್ಲಿ ತಪ್ಪಿದ್ದೇನೆ ಎಂದು ತಿಳಿದು ಬಂತು. ಮಹಾಲೇಖಪಾಲರು ತಾ. 15-9-92ರಲ್ಲಿ ಇವರಿಗೆ ಬರೆದ ಪತ್ರದಲ್ಲಿ ಇದನ್ನು ವಿವರಿಸಿದ್ದರು. ಕೂಡಲೇ ಇವರು ಕಾತ್ಯಾಯಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಿಂದ ಒಂದು ಪ್ರಮಾಣ ಪತ್ರವನ್ನು ಪಡೆದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕ ತರಬೇತಿ ವಿಭಾಗದ ನಿರ್ದೇಶಕರಿಗೆ ಒಂದು ಪತ್ರ ಬರೆದು ಅದರೊಂದಿಗೆ ಪ್ರಮಾಣ ಪತ್ರವನ್ನು ಲಗ್ತೀಕರಿಸಿ ಬಿಟ್ಟು ಹೋಗಿರುವ ತನ್ನ ಒಂದು ವರ್ಷದ ಸೇವೆಯನ್ನುಪರಿಗಣಿಸುವಂತೆ ಶಿಫಾರಸು ಮಾಡಬೇಕೆಂದು ಕೇಳಿಕೊಂಡರು.
ಹೋರಾಟ ಪ್ರಾರಂಭ
ನಿರ್ದೇಶಕರಿಗೆ ಪತ್ರ ಬರೆದು ಒಂದು ವರ್ಷದವರೆಗೂ ಅವರಿಂದ ಏನೊಂದೂ ಉತ್ತರ ಬರಲಿಲ್ಲ. ಈ ತನ್ಮಧ್ಯೆ ನಾಲ್ಕಾರು ಬಾರಿ ನಿರ್ದೇಶಕರ ಕಚೇರಿಗೆ ಹೋಗಿ ಸಂಬಂಧಪಟ್ಟ ಕ್ಲಾರ್ಕನ್ನು ಕಂಡು ಮಾತನಾಡಿದ್ದರು. ಇವರು ಹೋದಾಗಲೆಲ್ಲ ಏನಾದರೊಂದು ನೆಪ ಹೇಳಿ ಹಿಂದಕ್ಕೆ ಕಳುಹಿಸುತ್ತಿದ್ದರು. ತಿರುತಿರುಗಿ ಬೇಸತ್ತು ಹೋದ ಚಿತ್ರಿಗೆಮಠ ಇವರು ಆಗ ಕರ್ನಾಟಕದಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವೇಗೌಡರಿಗೆ ತಾ. 24-2-95ರಲ್ಲಿ ಒಂದು ಪತ್ರ ಬರೆದು ತನ್ನ ಆಳಲನ್ನು ತೋಡಿಕೊಂಡರು. ಈ ಪತ್ರದ ಪರಿಣಾಮ ಏನಾಯಿತೋ ಏನೋ ಅಂತೂ ನಾಲ್ಕೈದು ತಿಂಗಳ ತರುವಾಯ ನಿರ್ದೇಶಕರು, ಕಾತ್ಯಾಯಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಿಗೆ ಒಂದು ಪತ್ರ ಬರೆದು ಕೆಲವು ದಾಖಲೆಗಳನ್ನೊದಗಿಸುವಂತೆ ಕೇಳಿದರು. ಆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಸೇವಾ ಪುಸ್ತಕ, ಮುಖ್ಯೋಪಾಧ್ಯಾಯರ ಅಭಿಪ್ರಾಯ ಪತ್ರ, ಸೇವೆ ಸಲ್ಲಿಸಿದ ಬಗ್ಗೆ ಉಪನಿರ್ದೇಶಕರ ದೃಢೀಕೃತ ದಾಖಲೆ ಪತ್ರ ಇವುಗಳನ್ನೆಲ್ಲ ಕಳುಹಿಸಬೇಕೆಂದು ತಿಳಿಸಿದರು. ಚಿತ್ರಿಗೆಮಠ ಇವರು ಕಾತ್ಯಾಯಿನಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಸೇವಾ ಪುಸ್ತಕವನ್ನು ತೆರೆದಿರಲಿಲ್ಲ. ಆದುದರಿಂದ ಹೊಸತಾಗಿ ಸೇವಾ ಪುಸ್ತಕ ತಯಾರು ಮಾಡಿ ಉಳಿದೆಲ್ಲ ದಾಖಲೆಗಳೊಂದಿಗೆ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರವಾರ ಇವರಿಗೆ ಕಳುಹಿಸಿಕೊಟ್ಟರು. ಈಗ ವಿಳಂಬಿಸುವ ಸರದಿ ಉಪನಿರ್ದೇಶಕರದ್ದಾಯಿತು. ಅವರು ಒಂದು ವರ್ಷದ ತನಕವೂ ನಿರ್ದೇಶಕರ ಕಚೇರಿಗೆ ಸದ್ರಿ ಮಾಹಿತಿಗಳನ್ನು ಕಳುಹಿಸಿಕೊಡಲಿಲ್ಲ. ಆಗ ನಿರ್ದೇಶಕರೇ ಅವರಿಗೊಂದು ಪತ್ರ ಬರೆದು ಎಚ್ಚರಿಸಬೇಕಾಯಿತು. ಗಾಢ ನಿದ್ರೆಯಲ್ಲಿದ್ದ ಉಪನಿರ್ದೇಶಕರು ನಿರ್ದೇಶಕರ ಪತ್ರದಿಂದಲೂ ಎಚ್ಚರಗೊಳ್ಳಲಿಲ್ಲ. ಒಮ್ಮೆ ಚಿತ್ರಿಗೆಮಠ ಇವರು ಉಪನಿರ್ದೇಶಕರ ಕಚೇರಿಗೂ ಹೋಗಿ ಬಂದರು. ಅದರಿಂದಲೂ ಏನೂ ಪ್ರಯೋಜನವಾಗಲಿಲ್ಲ.
ಚಿತ್ರಿಗೆಮಠ ಇವರ ದಿಟ್ಟತನ
ಆಗ ಸಾರ್ವಜನಿಕ ಕುಂದುಕೊರತೆ ವಿಭಾಗದ ಮಂತ್ರಿಗಳಾಗಿದ್ದ ಶ್ರೀ ವಿ. ಸೋಮಣ್ಣನವರಿಗೆ ತಾರೀಕು. 24-7-97ರಲ್ಲಿ ಕಟುವಾದ ಭಾಷೆಯಲ್ಲಿ ಒಂದು ಪತ್ರ ಬರೆದು ನೀವಾದರೂ ನನಗಾದ ಅನ್ಯಾಯವನ್ನು ಸರಿಪಡಿಸಿ ಕೊಡಿರಿ ಎಂದು ತಿಳಿಸಿ ಆ ಪತ್ರದ ಯಥಾಪ್ರತಿಗಳನ್ನು ಮುಖ್ಯ ಮಂತ್ರಿಗಳಿಗೂ, ಶಿಕ್ಷಣ ಮಂತ್ರಿಗಳಿಗೂ, ಶಿಕ್ಷಣ ಇಲಾಖೆಯ ಆಯುಕ್ತರಿಗೂ ಕಳುಹಿಸಿಕೊಟ್ಟರು. ಅವರು ಬರೆದ ಪತ್ರ ಹೀಗಿತ್ತು:
ಗಣಪತಿ ಮ. ಚಿತ್ರಿಗೆಮಠ
ನಿವೃತ್ತ ಪ್ರಾಧ್ಯಾಪಕರು,
ಮೇಲಿನಕೆರೆ, ಅಂಚೆ: ಹೆಗಡೆ - 581 330 (ಉತ್ತರ ಕನ್ನಡ) ಇವರಿಂದ
ಶ್ರೀ. ವಿ. ಸೋಮಣ್ಣ
ಸನ್ಮಾನ್ಯ ಸಚಿವರು
ಸಾರ್ವಜನಿಕ ಕುಂದುಕೊರತೆ ವಿಭಾಗ
ಕರ್ನಾಟಕ ರಾಜ್ಯ, ವಿಧಾನಸೌಧ
ಬೆಂಗಳೂರು- 560 001 ಇವರಿಗೆ
ವಿಷಯ: ನನ್ನ ನಿವೃತ್ತಿ ವೇತನದ ಕುರಿತು.
ಉಲ್ಲೇಖ: 1. ಶಿಕ್ಷಣ ಸಂ. ಮತ್ತು ತ. ಇಲಾಖೆ ನಿರ್ದೇಶಕರಿಗೆ ನಾನು ಬರೆದ ಪತ್ರ ದಿನಾಂಕ 29-3-94, 24-2-95 ಮತ್ತು 18-9-96.
2. ಅವರ ಪತ್ರ ಸಂ. ಶಿತ-3-ಇತರೆ-5/95-96, ದಿನಾಂಕ: 8-7-96.
ಮಾನ್ಯರೇ,
ನಾನೋರ್ವ ನಿವೃತ್ತ ಪ್ರಾಧ್ಯಾಪಕ. ದಿನಾಂಕ: 31-7-1991ರಂದು ಸೇವೆಯಿಂದ ನಿವೃತ್ತನಾಗಿದ್ದೇನೆ. ನನ್ನ ನಿವೃತ್ತಿ ವೇತನವನ್ನು ನಿಗದಿಪಡಿಸುವಾಗ, ಕಾರಣಾಂತರಗಳಿಂದ, 1995-56ರಲ್ಲಿ ಶ್ರೀ ಕಾತ್ಯಾಯನಿ ಹೈಸ್ಕೂಲ್ ಆವರ್ಸಾ (ಅಂಕೋಲಾ, ಉ.ಕ.) ದಲ್ಲಿ ಸಹಾಯಕ ಶಿಕ್ಷಕನಾಗಿ ಕೆಲಸ ಮಾಡಿದ ಒಂದು ವರ್ಷದ ಸೇವಾ ಅವಧಿಯನ್ನು ಪರಿಗಣಿಸಿರಲಿಲ್ಲ. ಆ ಅವಧಿಯನ್ನೂ ಪರಿಗಣಿಸಿ ನನ್ನ ನಿವೃತ್ತಿ ವೇತನವನ್ನು ಪುನ: ಪರಿಶೀಲಿಸುವಂತೆ ಹಲವಾರು ಬಾರಿ ನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ (ಸಂಶೋಧನೆ ಮತ್ತು ತರಬೇತಿ), ಬೆಂಗಳೂರು ಇವರನ್ನು ವಿನಂತಿಸಿಕೊಂಡೆ. ಮಾತ್ರವಲ್ಲ. ಏನಿಲ್ಲೆಂದರೂ ಕನಿಷ್ಟ ಹದಿನೈದು ಬಾರಿಯಾದರೂ ಅವರ ಕಛೇರಿಗೆ ಹೋಗಿ ಕೈಮುಗಿದು ಬೇಡಿಕೊಂಡೆ. ಏನೂ ಪ್ರಯೋಜನವಾಗಲಿಲ್ಲ.
ದಿನಾಂಕ 24-2-1995ರಂದು ಅಂದಿನ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದೆ. ಸತ್ತುಹೋದ ಈ ಸಮಸ್ಯೆಗೆ (ವಿಷಯಕ್ಕೆ) ಮತ್ತೆ ಜೀವ ಬಂತು. ಆದರೆ ಈಗ ಮತ್ತೆ ಸತ್ತಿದೆ. ಅದಕ್ಕಾಗಿ ಈ ವಿನಂತಿ ಅರ್ಜಿ. “ಏನು ಬೇಕಾದ್ದು ಆಗಲಿ ಲಂಚವನ್ನು ಮಾತ್ರ ಕೊಡಬೇಡಿರಿ. ತುಸು ಸಮಯ ಹಿಡಿದೀತು. ತಾಳ್ಮೆ, ಸಂಯಮದಿಂದ ಇರಿ” ಎಂದೆಲ್ಲ ನಮ್ಮ ದೇಶದ ಪ್ರಧಾನಿಗಳು ಮೊನ್ನೆ ಮೊನ್ನೆಯಷ್ಟೇ ನುಡಿದಿದ್ದಾರೆ. ನಾನು ಸುಮಾರು ಮೂರುವರೆ ವರ್ಷಗಳಷ್ಟು ದೀರ್ಘಕಾಲ ಕಾದಿದ್ದೇನೆ. ಇನ್ನೂ ಎಷ್ಟು ಕಾಲ ತಾಳ್ಮೆಯಿಂದ ಇರಬೇಕೋ ತಿಳಿಯದು!
ಸನ್ಮಾನ್ಯ ಪ್ರಧಾನಿ ಶ್ರೀ ಗುಜ್ರಾಲರ ಹಿತವಚನವನ್ನು ಪಾಲಿಸುತ್ತಿರುವವರನ್ನು ಪೀಡಿಸುವವರಿಗೇನೂ ಶಿಕ್ಷೆ ಇಲ್ಲವೆನ್ನುವುದಕ್ಕಾಗಿಯೇ ಲಂಚವನ್ನು ಸಂಕೋಚವಿಲ್ಲದೇಯೇ ಸ್ವೀಕರಿಸುತ್ತಿರುವುದು ಅಬಾಧಿತವಾಗಿ ನಡೆದಿದೆ. ಸನ್ಮಾನ್ಯ ಪ್ರಧಾನಿಗಳ ಮಾತಿನ (ಭರವಸೆಯ) ಬಗೆಗೆ ನಿಮಗೆ ಕಿಂಚಿತ್ತಾದರೂ ಗೌರವವಿದ್ದರೆ ನನ್ನ ಈ ಸಮಸ್ಯೆಗೆ ಏನಾದರೂ ಪರಿಹಾರ ಸಿಗಬಹುದೆಂಬ ನಂಬುಗೆಯಿಂದ ಈ ಪತ್ರವನ್ನು ಬರೆದಿದ್ದೇನೆ. ಸಹೃದಯಿಗಳಾದ ತಾವು ಮುಂದಿನ ಕ್ರಮಕ್ಕೆ ಆದೇಶ
ನೀಡುವಿರಾಗಿ ನಂಬಿದ್ದೇನೆ. ಕೊಡುತ್ತಿರುವ ತೊಂದರೆಗಾಗಿ ಕ್ಷಮೆ ಇರಲಿ.
ಕೃತಜ್ಞತೆಗಳೊಂದಿಗೆ,
ತಮ್ಮ ವಿಶ್ವಾಸದ,
(ಸಹಿ) ಗಣಪತಿ ಮ. ಚಿತ್ರಿಗೆಮಠ
24-7-1997
ಯಥಾಪ್ರತಿ:
1. ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ, ಬೆಂಗಳೂರು
2. ಶಿಕ್ಷಣ ಮಂತ್ರಿಗಳು (ಪ್ರೌಢ ಶಿಕ್ಷಣ), ಬೆಂಗಳೂರು
3. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು.
ಕೊನೆಯ ಪ್ರಯತ್ನ
ಅವರೆಷ್ಟು ಪತ್ರ ಬರೆದರೂ, ಎಷ್ಟು ಸಲ ಕಚೇರಿಗೆ ಅಲೆದಾಡಿದರೂ ಜಡ್ಡು ಕಟ್ಟಿದ ಶಿಕ್ಷಣ ಇಲಾಕೆಯಿಂದ ಏನೂ ಪ್ರಯೋಜನವಾಗದಿದ್ದಾಗ ಚಿತ್ರಿಗೆಮಠ ಇವರು ಬೇಸರ ಮತ್ತು ನಿರಾಶೆ ಹೊಂದಿ ಸುಮ್ಮನೆ ಕುಳಿತುಬಿಟ್ಟರು.
ಆದರೆ ಕೊನೆಯ ಪ್ರಯತ್ನ ಮಾಡಿ ನೋಡುವ ಆಸೆಯಿಂದ ಬಸ್ರೂರು ಬಳಕೆದಾರರ ವೇದಿಕೆಯನ್ನು ಸಂಪರ್ಕಿಸಿದರು.
ವೇದಿಕೆ ನೀಡಿದ ಸಲಹೆಯಂತೆ ನಿರ್ದೇಶಕರಿಗೆ 20-8-99ರಲ್ಲಿ ಇನ್ನೊಂದು ಜ್ಞಾಪನ ಪತ್ರ ಬರೆದು ಯಥಾಪ್ರತಿಯನ್ನು ವೇದಿಕೆಗೆ ಕಳುಹಿಸಿ ಕೊಟ್ಟರು. ಇವರ ಪತ್ರವನ್ನು ಅನುಸರಿಸಿ ವೇದಿಕೆಯೂ ನಿರ್ದೇಶಕರಿಗೆ ಪತ್ರ ಬರೆದು ಈ ಕುರಿತು ನೀವು ಕೈಗೊಳ್ಳುವ ಕ್ರಮವೇನೆಂದು ಕೇಳಿತು.
ಅದೇನಾಯಿತೋ ಏನೋ ಮಾನ್ಯ ನಿರ್ದೇಶಕರು ಕೂಡಲೇ ಮಹಾಲೇಖಪಾಲರಿಗೆ ಒಂದು ಪತ್ರ ಬರೆದು ಅದರೊಂದಿಗೆ ಅಪೇಕ್ಷಿತ ದಾಖಲೆಗಳನ್ನೆಲ್ಲ ಕಳುಹಿಸಿ ನಿವೃತ್ತಿ ವೇತನವನ್ನು ಪುನರ್ ನಿಗದಿಗೊಳಿಸುವಂತೆ ಕೇಳಿಕೊಂಡರು. ಮಹಾಲೇಖಪಾಲರಿಗೆ ಬರೆದ ಪತ್ರದ ಒಂದು ಪ್ರತಿಯನ್ನು ವೇದಿಕೆಗೂ ಕಳುಹಿಸಿಕೊಟ್ಟರು. ಇದೀಗ ಚಿತ್ರಿಗೆಮಠ ಇವರು ಸಮಾಧಾನದ ಉಸಿರು ಬಿಡುವಂತಾಯಿತು. ತನ್ನ ನಿವೃತ್ತಿ ವೇತನದ ವ್ಯತ್ಯಾಸದ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆಯೆಂದು ಚಿತ್ರಿಗೆಮಠ ಇವರು ವೇದಿಕೆಗೆ ಪತ್ರ ಬರೆದು ತನ್ನ ಕೃತಜ್ಞತೆ ಸೂಚಿಸಿದ್ದಾರೆ.
ಫೋಟೋ: ಬಳಕೆದಾರರನ್ನು ಹೈರಾಣಾಗಿಸುವ ಸರಕಾರಿ ಕಚೇರಿಯ ಕೆಂಪುಪಟ್ಟಿಯ ಉರುಳುಗಳ ಸಾಂಕೇತಿಕ ಚಿತ್ರ
ಫೋಟೋ ಕೃಪೆ: ಇಂಡಿಯಾ ಟುಡೇ
ಸಂಗ್ರಹ: ಬಳಕೆದಾರರ ಶಿಕ್ಷಣ, 05-03-2001