ಹಕ್ಕು ಹೋರಾಟ 15: ಖಾಸಗಿ ಕೊರಿಯರ್/ ಪಾರ್ಸೆಲ್ ಸಂಸ್ಥೆಗಳ ಸೇವಾ ನ್ಯೂನತೆಗಳು (ಭಾಗ 2)

(ಈ)ಎರಡು ಕೊರಿಯರ್ ಕಂಪೆನಿಗಳು ಜಂಟಿಯಾಗಿ ರೂ. 5 ಲಕ್ಷ ಪರಿಹಾರ ಪಾವತಿಸಲು ರಾಜ್ಯ ಗ್ರಾಹಕ ವೇದಿಕೆ ಆದೇಶ

ವಿಷ್ಣು ಕೆಮಿಕಲ್ಸ್ ಎಂಬ ಕಂಪೆನಿ ನಿರವಯವ ರಾಸಾಯನಿಕ ವಸ್ತುಗಳ ಬಗ್ಗೆ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ಮಾರಾಟ ನಿರ್ವಹಿಸುತ್ತದೆ. ಅವನ್ನು ವಿದೇಶಗಳಿಗೂ ರಫ್ತು ಮಾಡುತ್ತದೆ.

ಈ ಕಂಪೆನಿಯ ಅಧಿಕೃತ ಪ್ರತಿನಿಧಿ ಜಿ.ವಿ. ಸುಬ್ಬರಾವ್ ಜಿಲ್ಲಾ ಗ್ರಾಹಕ ದೂರು ಪರಿಹಾರ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಹೀಗೆಂದು ನಿವೇದಿಸಿದರು: ನಮ್ಮ ಕಂಪೆನಿಯು ರಷ್ಯಾದ ಕಂಪೆನಿಯೊಂದರಿಂದ ಆರ್ಡರ್ ಪಡೆಯಿತು. ಅದರಂತೆ ರೂ. 2.84 ಲಕ್ಷ ಮೌಲ್ಯದ ರಾಸಾಯನಿಕಗಳನ್ನು ನೆದರ್-ಲ್ಯಾಂಡಿಗೆ ಕಳಿಸಬೇಕಾಗಿತ್ತು.

ಈ ಸಾಗಾಟಕ್ಕಾಗಿ ನಮ್ಮ ಕಂಪೆನಿ ಡಿ.ಎಚ್.ಎಲ್. (ಇಂಡಿಯಾ) ಎಕ್ಸ್‌ಪ್ರೆಸ್ ಪ್ರೈ. ಲಿ. ಕಂಪೆನಿಯನ್ನು ನಿಯೋಜಿಸಿತು. ಕನ್-ಸೈನ್-ಮೆಂಟನ್ನು ರವಾನಿಸಲು ಎಸ್.ಎಸ್.ಎಸ್. ಎಕ್ಸ್‌ಪ್ರೆಸ್ ಎಂಬ ಇನ್ನೊಂದು ಕಂಪೆನಿಯೊಂದಿಗೆ ಡಿ.ಎಚ್.ಎಲ್. ಒಪ್ಪಂದ ಮಾಡಿಕೊಂಡಿತು. ಎಸ್.ಎಸ್.ಎಸ್. ಎಕ್ಸ್‌ಪ್ರೆಸ್‌ನ ಏಜೆಂಟರಾದ “ಅರ್ಲಿ ಬರ್ಡ್” ಎಂಬ ಕಂಪೆನಿಯು ನಮ್ಮ ಕಂಪೆನಿಯಿಂದ ಕೊರಿಯರ್ ಪ್ಯಾಕ್ ಪಡೆದುಕೊಂಡಿತು; ಅದನ್ನು 18 ಜನವರಿ 2009ರೊಳಗೆ ನೆದರ್-ಲ್ಯಾಂಡಿಗೆ ತಲಪಿಸಬೇಕಾಗಿತ್ತು.

ಅರ್ಲಿ ಬರ್ಡ್ ಕಂಪೆನಿಗೆ ರಾಸಾಯನಿಕಗಳ ಕೊರಿಯರ್ ಪ್ಯಾಕ್ ಕೊಟ್ಟಾಗಿನಿಂದ ತಾನು ಡಿ.ಎಚ್.ಎಲ್. ಮತ್ತು ಎಸ್.ಎಸ್.ಎಸ್. ಎಕ್ಸ್‌ಪ್ರೆಸ್ ಕಂಪೆನಿಗಳ ಜೊತೆ ನಿರಂತರವಾಗಿ ಫಾಲೋ-ಅಪ್ ಮಾಡಿದರೂ ಅದನ್ನು ತಲಪಿಸಿದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಲಿಲ್ಲ. ನಿಗದಿತ ಸಮಯದೊಳಗೆ ಅದು ತಲಪದ ಕಾರಣ ನಮ್ಮ ಕಂಪೆನಿಗೆ ರೂಪಾಯಿ ಒಂದು ಕೋಟಿ ವ್ಯವಹಾರ ನಷ್ಟ ಉಂಟಾಯಿತೆಂದು ಸುಬ್ಬರಾವ್ ನಿವೇದಿಸಿದರು.

ಎಸ್.ಎಸ್.ಎಸ್. ಎಕ್ಸ್‌ಪ್ರೆಸ್ ಮತ್ತು ಅರ್ಲಿ ಬರ್ಡ್ ಕಂಪೆನಿಗಳು ಜಿಲ್ಲಾ ಗ್ರಾಹಕ ನ್ಯಾಯಾಲಯದ ನೋಟಿಸಿಗೆ ಉತ್ತರ ನೀಡಲಿಲ್ಲ; ತಮ್ಮ ಮೇಲಿನ ದೂರನ್ನು ನಿರಾಕರಿಸಲೂ ಇಲ್ಲ. ಡಿ.ಎಚ್.ಎಲ್. ಕಂಪೆನಿ ತನ್ನ ಲಿಖಿತ ಉತ್ತರದಲ್ಲಿ ತನಗೆ ದೂರುದಾರರ ಮತ್ತು ಎಸ್.ಎಸ್.ಎಸ್. ಎಕ್ಸ್‌ಪ್ರೆಸ್ ಕಂಪೆನಿ ಜೊತೆ ನಷ್ಟ-ಬಾಧ್ಯತೆ ಬಗ್ಗೆ ಯಾವುದೇ ಒಪ್ಪಂದ ಇಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿತು. ಅದೇನಿದ್ದರೂ, ಈ ಅಂತರರಾಷ್ಟ್ರಿಯ ಸಾಗಾಟ ಬಗ್ಗೆ ಡಿ.ಎಚ್.ಎಲ್. ಕಂಪೆನಿಯ ಷರತ್ತುಗಳ ಅನುಸಾರ ಕನ್-ಸೈನ್-ಮೆಂಟಿನ ನಷ್ಟದ ಬಾಬ್ತು ಅದರ ಬಾಧ್ಯತೆಯು ನಿಜವಾದ ನಗದು ಮೌಲ್ಯ ಅಥವಾ ಯು.ಎಸ್. ಡಾಲರ್ 100ರ ಗರಿಷ್ಠ ಮಿತಿಗೆ ಒಳಪಟ್ಟಿರುತ್ತದೆ.

ಅಂತಿಮವಾಗಿ ದೂರುದಾರ ಗ್ರಾಹಕ ಕಂಪೆನಿಗೆ, ಪೂರೈಕೆದಾರರಾದ ಡಿ.ಎಚ್.ಎಲ್. ಕಂಪೆನಿ ಮತ್ತು ಎಸ್.ಎಸ್.ಎಸ್. ಎಕ್ಸ್‌ಪ್ರೆಸ್ ಜಂಟಿಯಾಗಿ ರೂ. 5 ಲಕ್ಷ ಪರಿಹಾರ ಪಾವತಿಸಬೇಕೆಂದು 14 ಆಗಸ್ಟ್ 2018ರಂದು ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿತು.
ಫೋಟೋ: ಡಿ.ಎಚ್.ಎಲ್. ಎಕ್ಸ್‌ಪ್ರೆಸ್ ಕಂಪೆನಿಯ ಲಾಂಛನ