ಹಕ್ಕು ಹೋರಾಟ 15: ಖಾಸಗಿ ಕೊರಿಯರ್/ ಪಾರ್ಸೆಲ್ ಸಂಸ್ಥೆಗಳ ಸೇವಾ ನ್ಯೂನತೆಗಳು (ಭಾಗ 1)

ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆ ನೀಡುವ ಉದ್ದೇಶದಿಂದ ಖಾಸಗಿ ಕೊರಿಯರ್ ಸಂಸ್ಥೆಗಳು ಹುಟ್ಟಿಕೊಂಡಿವೆ. ತಮ್ಮ ಅಮೂಲ್ಯವಾದ ಸೊತ್ತುಗಳನ್ನು ನಿರ್ದಿಷ್ಟ ಅವಧಿಯೊಳಗೆ ಸುರಕ್ಷಿತವಾಗಿ ತಲುಪಿಸುತ್ತಾರೆಂಬ ಭರವಸೆಯಿಂದ ಬಳಕೆದಾರರೂ ಇಂತಹ ಖಾಸಗಿ ಕೊರಿಯರ್ ಸೇವೆಯನ್ನು ಅಪೇಕ್ಷಿಸುತ್ತಾರೆ. ಆದರೆ ಇಂತಹ ಕೊರಿಯರ್ ಸಂಸ್ಥೆಗಳಲ್ಲಿ ಕೆಲವು ಸಂಸ್ಥೆಗಳು ತಾವು ನೀಡಬೇಕಾದ ಸೇವೆಯಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವುದು ವರದಿಯಾಗುತ್ತಿದೆ. ಅವರ ನಿರ್ಲಕ್ಷ್ಯಕ್ಕೆ ಸಂಬಂಧಿಸಿರುವ ಕೆಲವು ಪ್ರಕರಣಗಳನ್ನು ಈ ಕೆಳಗೆ ಕೊಡಲಾಗಿದೆ.

(ಅ) ಅನುಪಮ ಎಂಬವರು ಮದರಾಸಿನಿಂದ ಸ್ಕೈಪ್ಯಾಕ್ ಕೊರಿಯರ್ ಸಂಸ್ಥೆಯ ಮುಖಾಂತರ ಮುಂಬೈಗೆ ತಾನು ಮಾಡಿದ ಕೆಲಸದ ಚಿತ್ರಣವನ್ನು ಕ್ಯಾಸೆಟ್ಟುಗಳ ಮುಖಾಂತರ ಕಳುಹಿಸಿದರು. ಅದು ಸರಿಯಾದ ಸಮಯದಲ್ಲಿ ತಲುಪದ ಕಾರಣ ಅವರಿಗೆ ಸೋಫಿಯಾ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಕೊನೆಗೆ ಗ್ರಾಹಕ ನ್ಯಾಯಾಲಯವು ಪೂರೈಕೆದಾರ ಕೊರಿಯರ್ ಸಂಸ್ಥೆಯಿಂದಾದ ವಿಳಂಬಕ್ಕೆ ರೂ. 10,000/- ಪರಿಹಾರ ಕೊಡಬೇಕೆಂದು ತೀರ್ಪು ನೀಡಿತು.

(ಆ)ಕೊರಿಯರ್ ಕಂಪೆನಿ ಕಳೆದು ಹಾಕಿದ ಮೊಬೈಲ್ ಫೋನಿಗೆ ಪರಿಹಾರ
ಇನ್ನೊಂದು ಪ್ರಕರಣದಲ್ಲಿ, ಬಳಕೆದಾರರೊಬ್ಬರು ಪ್ರೊಫೆಷನಲ್ ಕೊರಿಯರ್ ಕಂಪೆನಿಗೆ ಕೊಟ್ಟಿದ್ದ ಮೊಬೈಲ್ ಫೋನನ್ನು ಅದು ಕಳೆದು ಹಾಕಿತು. ತನಗೆ ಪರಿಹಾರ ಕೊಡಬೇಕೆಂಬ ಬಳಕೆದಾರರ ವಿನಂತಿಗೆ ಕೊರಿಯರ್ ಕಂಪೆನಿ ಸ್ಪಂದಿಸಲಿಲ್ಲ. ಆದ್ದರಿಂದ ಅವರು ಜಿಲ್ಲಾ ಗ್ರಾಹಕ ದೂರು ಪರಿಹಾರ ನ್ಯಾಯಾಲಯಕ್ಕೆ ದೂರು ನೀಡಿದರು. ಜಿಲ್ಲಾ ಗ್ರಾಹಕ ನ್ಯಾಯಾಲಯವು ಬಳಕೆದಾರರ ಪರವಾಗಿ ತೀರ್ಪು ನೀಡಿ, ರೂ. 37,156/- ಪರಿಹಾರ ಪಾವತಿಸಬೇಕೆಂದು ಆದೇಶಿಸಿತು. ಇದರ ವಿರುದ್ಧ ಪ್ರೊಫೆಷನಲ್ ಕೊರಿಯರ್ ಕಂಪೆನಿಯು ಆಂಧ್ರಪ್ರದೇಶ ರಾಜ್ಯ ಗ್ರಾಹಕ ದೂರು ಪರಿಹಾರ ವೇದಿಕೆಯಲ್ಲಿ ಮೇಲ್ಮನವಿ ಸಲ್ಲಿಸಿತು. ಇದನ್ನು ಪರಿಶೀಲಿಸಿದ ಆ ವೇದಿಕೆಯು, ಬಳಕೆದಾರ ಮತ್ತು ಪೂರೈಕೆದಾರರ ವಾದಗಳನ್ನು ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ನಂತರ ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು, 26-10-2014ರಂದು ಹೀಗೆಂದು ತೀರ್ಪು ನೀಡಿತು: ಗ್ರಾಹಕನಿಗೆ ಪೂರೈಕೆದಾರರು ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದ ಪರಿಹಾರವನ್ನು ಪಾವತಿಸತಕ್ಕದ್ದು; ಜೊತೆಗೆ ಗ್ರಾಹಕರಿಗೆ ಉಂಟುಮಾಡಿದ ಮಾನಸಿಕ ವೇದನೆಗೆ ರೂ. 3,000/- ಪರಿಹಾರ ನೀಡತಕ್ಕದ್ದು.

(ಇ)ನಮಕ್ಕಲ್ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪು: ಗ್ರಾಹಕರಿಗೆ ರೂ. ಒಂದು ಲಕ್ಷ ಪರಿಹಾರ

ತಮಿಳ್ನಾಡಿನ ಕೊಯಂಬತ್ತೂರಿನ ನಂಜಪ್ಪ ರಸ್ತೆಯ ನಿವಾಸಿ ವೆಂಕಟೇಶ ವೆಲ್ಡಿಂಗ್ ಯಂತ್ರಗಳ ಉತ್ಪಾದನಾ ಘಟಕದ ಮಾಲೀಕರು. ಜನವರಿ 2017ರಲ್ಲಿ ಅವರು ವೆಲ್ಡಿಂಗ್ ಯಂತ್ರವೊಂದನ್ನು ಪಾರ್ಸೆಲ್ ಕಂಪೆನಿಯೊಂದರ ಮೂಲಕ ಗುಜರಾತಿಗೆ ಕಳಿಸಿದರು. ಗುಜರಾತಿನ ಗ್ರಾಹಕರು ಪಾರ್ಸೆಲನ್ನು ತೆರೆದು ನೋಡಿದಾಗ ಆ ಯಂತ್ರಕ್ಕೆ ಹಾನಿಯಾಗಿತ್ತು.

ನಂಜಪ್ಪ ಅವರು ಪಾರ್ಸೆಲ್ ಕಂಪೆನಿಗೆ ಸೇವಾ ನ್ಯೂನತೆಯ ಬಗ್ಗೆ ತಿಳಿಸಿದಾಗ, ಈ ಬಾಬ್ತು ಪರಿಹಾರ ಪಾವತಿಸಲು ಅವರು ಒಪ್ಪಿದರು. ಆದರೆ ಒಂದು ವರುಷ ಕಳೆದರೂ ಪಾರ್ಸೆಲ್ ಕಂಪೆನಿ ಯಾವುದೇ ಪರಿಹಾರ ಪಾವತಿಸಲಿಲ್ಲ. ಕೊನೆಗೆ ಕೊಯಂಬತ್ತೂರು ಜಿಲ್ಲಾ ಗ್ರಾಹಕ ದೂರು ಪರಿಹಾರ ನ್ಯಾಯಾಲಯಕ್ಕೆ ನಂಜಪ್ಪ ದೂರು ನೀಡಿದರು. ಮುಂದೆ ಈ ದೂರನ್ನು ಜುಲಾಯಿ 2022ರಲ್ಲಿ ನಮಕ್ಕಲ್ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.

ಅಂತಿಮವಾಗಿ, 12 ಸಪ್ಟಂಬರ್ 2023ರಂದು ನಮಕ್ಕಲ್ ಜಿಲ್ಲಾ ಗ್ರಾಹಕ ನ್ಯಾಯಾಲಯವು ನಂಜಪ್ಪ ಅವರ ಪರವಾಗಿ ತೀರ್ಪು ನೀಡಿ, ಹೀಗೆಂದು ಆದೇಶಿಸಿತು: ವೆಲ್ಡಿಂಗ್ ಯಂತ್ರಕ್ಕಾದ ಹಾನಿಯ ಬಾಬ್ತು ರೂ. 30,450/- ಪರಿಹಾರ, ವ್ಯಾಜ್ಯದ ವೆಚ್ಚಕ್ಕಾಗಿ ರೂ. 5,000/- ಮತ್ತು ಸೇವಾ ನ್ಯೂನತೆಗೆ ಪರಿಹಾರ ರೂಪಾಯಿ ಒಂದು ಲಕ್ಷ ನಂಜಪ್ಪರಿಗೆ ಪಾವತಿಸತಕ್ಕದ್ದು.

ಪ್ರಾತಿನಿಧಿಕ ಫೋಟೋ: ವೆಲ್ಡಿಂಗ್ ಯಂತ್ರ