ಇವರಿಂದ-
ಯು. ರಮೇಶ್ ರಾವ್,
ರಾಮನಗರ, ಮರಕಡ,
ಮಂಗಳೂರು
ಇವರಿಗೆ-
ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು
ಸರಬರಾಜು ಮತ್ತು ಚರಂಡಿ ಮಂಡಳಿ, ಕೆ. ಹೆಚ್.ಬಿ. ಸಂಕೀರ್ಣ, ಕೆ.ಜಿ. ರಸ್ತೆ,
ಬೆಂಗಳೂರು - 560009.
ಮಾನ್ಯರೇ,
ವಿಷಯ: ಸಲ್ಲಿಸಿರುವ ಸೇವಾವಧಿಗೆ ಅನುಗುಣವಾಗಿ ನಿವೃತ್ತಿ ಸೇವಾ ಪಿಂಚಣಿ, ಅನುದಾನ ಮತ್ತು ಪರಿವರ್ತಿತ ಪಿಂಚಣಿಯನ್ನು ಮಂಜೂರು ಮಾಡುವ ಕುರಿತು.
ಉಲ್ಲೇಖ: 1. ನಿಮ್ಮ ಅಧಿಕೃತ ಜ್ಞಾಪನಾ ಸಂಖ್ಯೆ 1392:2002-03 ತಾ. 27-6-02
2. ನನ್ನ ನೆನಪಿನೋಲೆಗಳು ತಾ. 22-7-02 ಮತ್ತು 27-8-02
3. 20-5-02 ರ ನನ್ನ ಟೆಲಿಗ್ರಾಂ ಮನವಿ
4. ಮಂಗಳೂರಿನ ಬಳಕೆದಾರರ ವೇದಿಕೆ ನಿಮಗೆ ಬರೆದಿರುವ ಪತ್ರಗಳು 9-6-02, 24-8-02 ಹಾಗೂ 21-9-02
ನಾನು ಲೋಕೋಪಯೋಗಿ ಇಲಾಖೆಯ P.H.E. No. 2, ಉಪವಿಭಾಗ, ಮಂಗಳೂರು ಇಲ್ಲಿ ಕಾರ್ಯಭೃತ ಸಿಬ್ಬಂದಿಯಾಗಿ
ಮೆಕ್ಯಾನಿಕ್ ಹುದ್ದೆಯಲ್ಲಿ ನೇಮಕಗೊಂಡು 34 ವರ್ಷ 2 ತಿಂಗಳು 12 ದಿನಗಳ ಸೇವೆ ಸಲ್ಲಿಸಿ ತಾ. 31-7-01ರಂದು
ವಯೋಮಿತಿ ಮೇರೆಗೆ ನಿವೃತ್ತನಾಗಿರುತ್ತೇನೆ. ಉಲ್ಲೇಖ 1ರ ನಿಮ್ಮ ಕಚೇರಿಯ ಜ್ಞಾಪನಾ ಪತ್ರದಲ್ಲಿ ನನಗೆ ನಿವೃತ್ತಿ
ಸೌಲಭ್ಯಗಳು ಮಂಜೂರಾಗಿವೆ. ಆದರೆ ಮಂಜೂರಾಗಿರುವ ಸೌಲಭ್ಯವು ಕರ್ನಾಟಕ ನಾಗರಿಕ ಸೇವ ನಿಯಮದಂತೆ
ಮಂಜೂರಾಗಿಲ್ಲ. ಸೇವಾವಧಿಯಲ್ಲಿ 5 ವರ್ಷ ಕಾರ್ಯಭೃತ ಸೇವಾವಧಿಯನ್ನು ಕಳೆದು 29 ವರ್ಷಗಳು 12 ದಿವಸಗಳ
ಸೇವಾವಧಿಯ ಸೌಲಭ್ಯದ ಬದಲಾಗಿ 21 ವರ್ಷದ ಸೇವಾವಧಿಯ ನಿವೃತ್ತಿ ಸೌಲಭ್ಯ ಮಂಜೂರು ಮಾಡಲಾಗಿದೆ. ಈ
ಮಂಜೂರಾತಿಯಿಂದ ದೊರೆಯಬೇಕಾಗಿರುವ ಒಟ್ಟು ನಿವೃತ್ತಿ ಸೇವಾ ಸೌಲಭ್ಯಗಳಲ್ಲಿ 8 ವರ್ಷಗಳ ಸೌಲಭ್ಯ ನಷ್ಟವಾಗಿದೆ. ಈ
ಬಗ್ಗೆ ನನ್ನ ಮನವಿಯನ್ನು, ನೆನಪಿನೋಲೆಗಳನ್ನು ನಿಮಗೆ ಬರೆದಿರುತ್ತೇನೆ. ನನಗೆ ನ್ಯಾಯ ಒದಗಿಸುವಂತೆ
ಮಂಗಳೂರು ಬಳಕೆದಾರರ ವೇದಿಕೆಯು ಸಹ ನಿಮಗೆ ಪತ್ರಗಳನ್ನು ಬರೆದಿದೆ.
ನನ್ನ ಮನವಿಗಳಿಗೆ ಸ್ಪಂದಿಸುವ ಅನುಕಂಪವನ್ನು ನೀವು ತೋರಿಲ್ಲ. ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿರುವ ನನಗೆ 87ರ
ಹರೆಯದ ತಾಯಿ ಹಾಗೂ ಕುಟುಂಬದ ನಿರ್ವಹಣೆಯು ಕಷ್ಟಕರವಾಗಿದೆ. ನನಗೆ ನ್ಯಾಯೋಚಿತವಾಗಿ ಹಾಗೂ
ಕಾನೂನುಬದ್ಧವಾಗಿ ದೊರೆಯಬೇಕಾಗಿರುವ ಸಂಪೂರ್ಣ ನಿವೃತ್ತಿ ವೇತನವನ್ನು ಮಂಜೂರುಗೊಳಿಸುವಂತೆ ನಿಮ್ಮನ್ನು ಆಗ್ರಹಿಸುತ್ತಿದ್ದೇನೆ.
ನಿಮ್ಮ ವಿಶ್ವಾಸಿ
ರಮೇಶ್ ರಾವ್ ಯು
ದಿನಾಂಕ: 22-9-2002
ಯಥಾ ಪ್ರತಿ: ಬಳಕೆದಾರರ ವೇದಿಕೆ, ಶ್ರೀ ರಾಧಾಕೃಷ್ಣ ದೇವಸ್ಥಾನ ಕಟ್ಟಡ, ಶರವು ಗಣಪತಿ ದೇವಸ್ಥಾನದ ಬಳಿ, ಮಂಗಳೂರು - 575 001
ರಮೇಶರಾಯರಿಗೆ ಸಂಪೂರ್ಣ ನಿವೃತ್ತಿ ಸೌಲಭ್ಯಗಳು ಪಾವತಿಯಾಯಿತು
ನಿವೃತ್ತರ ನಿರಂತರ ಹೋರಾಟ, ವೇದಿಕೆಯ ಬೆಂಬಲ ಮಾರ್ಗದರ್ಶನಗಳು ವಿಫಲವಾಗಲಿಲ್ಲ. ಕ.ನ.ನೀ.ಸ ಮತ್ತು ಒ.ಚ. ಮಂಡಳಿಯ ಕಾರ್ಯದರ್ಶಿಯವರು ತಾ. 31-10-2002ರಂದು ರಮೇಶರಾಯರಿಗೆ ಸಲ್ಲಬೇಕಾಗಿರುವ ಸಂಪೂರ್ಣ
ನಿವೃತ್ತಿ ಸೌಲಭ್ಯಗಳನ್ನು ಮಂಜೂರುಗೊಳಿಸಿದ್ದಾರೆ. ತಮ್ಮ ಕಚೇರಿಯ ತಾ. 27-6-2002ರ ಅಧಿಕೃತ ಜ್ಞಾಪನಾ ಪತ್ರ (ಸಂಖ್ಯೆ 1392) ನ್ನು ಮುಂದುವರಿಸಿರುವ ಕಾರ್ಯದರ್ಶಿಯವರು ರಮೇಶರಾಯರಿಗೆ ನ್ಯಾಯ ಒದಗಿಸಿರುತ್ತಾರೆ. ಇದರಿಂದಾಗಿ ನಿವೃತ್ತ ರಮೇಶರಾಯರಿಗೆ ದೊರೆಯಬೇಕಾಗಿರುವ ವ್ಯತ್ಯಾಸದ ಉಪದಾನ, ಪರಿವರ್ತಿತ ಪಿಂಚಣಿ, ನಿವೃತ್ತಿ ಸೇವಾ ಪಿಂಚಣಿಗಳ ಬಾಬ್ತು ಪೂರ್ತಿಯಾಗಿ ದೊರೆತಂತಾಗಿದೆ. ಮುಂದುವರಿಕೆಯ ಜ್ಞಾಪನಾ ಪತ್ರದ ಪ್ರತಿಯನ್ನು ಮಾನ್ಯ ಕಾರ್ಯದರ್ಶಿಯವರು ವೇದಿಕೆಗೆ ಒದಗಿಸಿದ್ದಾರೆ. ಕಾರ್ಯದರ್ಶಿಯವರಿಗೆ ಅಭಿನಂದನೆಗಳು. ರಮೇಶರಾಯರು ವೇದಿಕೆಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಪ್ರಾತಿನಿಧಿಕ ಫೋಟೋ: ಸರಕಾರಿ ಕಚೇರಿಯಲ್ಲಿ ಕಡತಗಳ ರಾಶಿ
ಸಂಗ್ರಹ: ಬಳಕೆದಾರರ ಶಿಕ್ಷಣ, 05-02-2003